26 ದಿನಗಳ ಕಾಲ ಏನು ಮಾಡುತ್ತಿದ್ದಿರಿ?: ಎಸ್‌ಬಿಐಗೆ ಸುಪ್ರೀಂ ಕೋರ್ಟ್ ತರಾಟೆ
ಹೊಸದಿಲ್ಲಿ: ನೀವು 26 ದಿನಗಳ ಕಾಲ ಏನು ಮಾಡುತ್ತಿದ್ದಿರಿ?” ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದೆ. ಸೀಲ್ ಮಾಡಿದ ಕವರ್ ಅನ್ನು ನೀವೇಕೆ ತೆರೆಯಬಾರದು ಎಂದೂ ಎಸ್‌ಬಿಐ ಅನ್ನು ಸುಪ್ರೀಂ ಕೋರ್ಟ್ ಕೇಳಿದೆ.
ಚುನಾವಣಾ ಬಾಂಡ್‌ಗಳ ಕುರಿತಾದ ಮಾಹಿತಿ ಸಲ್ಲಿಸಲು ಜೂನ್ 30ರ ತನಕ ಸಮಾಯವಕಾಶ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರ ಪೀಠ ಮೇಲಿನಂತೆ ಪ್ರಶ್ನಿಸಿದೆ.
“ಇದು ಇಷ್ಟೊಂದು ಗಂಭೀರ ವಿಚಾರವಾಗಿದೆ ಮತ್ತು ನೀವು ಈ ರೀತಿ ಸಮಯಾವಕಾಶ ಕೇಳುತ್ತಿದ್ದೀರಿ. ಕಳೆದ 26 ದಿನಗಳಲ್ಲಿ ನೀವೇನು ಕ್ರಮ ಕೈಗೊಂಡಿದ್ದೀರಿ? ನಿಮ್ಮ ಅರ್ಜಿ ಆ ವಿಚಾರದಲ್ಲಿ ಮೌನವಾಗಿದೆ,” ಎಂದು ಹೇಳಿದೆ.
ದಾನಿಗಳ ವಿವರಗಳನ್ನು ಸೀಲ್ ಮಾಡಿದ ಕವರ್‌ಗಳಲ್ಲಿ ನಿಯೋಜಿತ ಬ್ಯಾಂಕ್‌ಗಳಲ್ಲಿ ಗೌಪ್ಯತೆ ಉದ್ದೇಶದಿಂದ ಇರಿಸಲಾಗಿದೆ, ಎಂದು ಎಸ್‌ಬಿಐ ಪರ ವಕೀಲ ಹರೀಶ್ ಸಾಳ್ವೆ ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ಸೀಲ್ ಮಾಡಿದ ಕವರ್‌ಗಳಲ್ಲಿ ಇರಿಸಿದೆ ಎನ್ನುತ್ತೀರಿ ನಮ್ಮ ಸೂಚನೆ ದೇಣಿಗೆ ನೀಡಿದವರು ಹಾಗೂ ಅವುಗಳನ್ನು ಪಡೆದವರನ್ನು ಮ್ಯಾಚ್ ಮಾಡುವುದು ಅಲ್ಲ. ದೇಣಿಗೆ ನೀಡಿದವರ ವಿವರಗಳನ್ನು ನೀಡುವಂತೆ ಸೂಚಿಸಿದ್ದೆವು. ನೀವೇಕೆ ತೀರ್ಪನ್ನು ಪಾಲಿಸುತ್ತಿಲ್ಲ?” ಎಂದು ಅವರು ಪ್ರಶ್ನಿಸಿದರು.
ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರು ಹಾಗೂ ಅವುಗಳನ್ನು ಯಾವ ಪಕ್ಷಗಳಿಗೆ ದೇಣಿಗೆ ನೀಡಲಾಗಿದೆ ಎಂಬುದನ್ನು ಮ್ಯಾಚ್ ಮಾಡಲು ಸಮಯ ಬೇಕಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಫೆಬ್ರವರಿ 15ರಂದು ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿತ್ತಲ್ಲದೆ ಎಪ್ರಿಲ್ 12, 2019ರಿಂದ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಮಾರ್ಚ್ 6ರೊಳಗೆ ಸಲ್ಲಿಸುವಂತೆ ಎಸ್ಬಿಐಗೆ ಸೂಚಿಸಿತ್ತು.
ಆದರೆ ಈ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ನೀಡಲು ವಿಫಲವಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವಾರ ಸುಪ್ರಿಂ ಕೋರ್ಟ್ ಕದ ತಟ್ಟಿ ಜೂನ್ 30ರವರೆಗೆ ಕಾಲಾವಕಾಶ ಕೋರಿತ್ತು.
ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿ ಸಲ್ಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂ ಕೋರ್ಟ್ ನೀಡಿದ್ದ ಗಡುವು ಮುಕ್ತಾಯಗೊಂಡ ಮರುದಿನ ಎನ್‌ಜಿಒ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸುಪ್ರೀಂ ಕೋರ್ಟ್ ಕದ ತಟ್ಟಿ ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ವಿಚಾರಣೆಗೆ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.