ಭಾರತೀಯ ಮುಸ್ಲಿಮರ ಸಂಪತ್ತೆಷ್ಟು? ಅಧ್ಯಯನ ವರದಿ ಏನು ಹೇಳುತ್ತದೆ?

Update: 2024-04-24 17:00 GMT

ಸಾಂದರ್ಭಿಕ ಚಿತ್ರ | PC : NDTV 

 

ಹೊಸದಿಲ್ಲಿ : ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಎ.21ರಂದು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ “ತಾಯಂದಿರು ಮತ್ತು ಸಹೋದರಿಯರ” ಮಂಗಳಸೂತ್ರ ಸಹಿತ ಚಿನ್ನವನ್ನು ಲೆಕ್ಕ ಹಾಕಿ ನಂತರ ಅದನ್ನು ಮುಸ್ಲಿಮರಿಗೆ ಹಂಚುವುದಾಗಿ ಹೇಳಿದೆ ಎಂದು ಹೇಳಿದ್ದರು.

ಕಾಂಗ್ರೆಸ್ ಪಕ್ಷವು ಪ್ರಧಾನಿಯವರ ಹೇಳಿಕೆಗಳನ್ನು "ಸುಳ್ಳು" ಮತ್ತು "ದ್ವೇಷ" ಭರಿತ ಎಂದು ಬಣ್ಣಿಸಿತ್ತು.

ದೇಶದಲ್ಲಿನ ವಿವಿಧ ಧಾರ್ಮಿಕ ಪಂಗಡಗಳ ಒಡೆತನದಲ್ಲಿರುವ ಚಿನ್ನವೂ ಸೇರಿದಂತೆ ಸಂಪತ್ತು ಮತ್ತು ಆಸ್ತಿಗಳ ಕುರಿತು ಯಾವುದೇ ಇತ್ತೀಚಿನ ವಿವರವಾದ ಅಥವಾ ನಿರ್ದಿಷ್ಟ ಮಾಹಿತಿ ಲಭ್ಯವಿಲ್ಲ. ICSSR-ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ದಲಿತ್ ಸ್ಟಡೀಸ್‌ನಿಂದ 2020 ರಲ್ಲಿ ಪ್ರಕಟವಾದ 'ಭಾರತದಲ್ಲಿ ಸಂಪತ್ತಿನ ಮಾಲೀಕತ್ವದಲ್ಲಿ ಸಮುದಾಯಗಳ ನಡುವಿನ ಅಸಮಾನತೆಯ ಅಧ್ಯಯನ ವರದಿ'ಯಲ್ಲಿ ಕೆಲವು ಈ ಕುರಿತ ಮಾಹಿತಿ ಲಭ್ಯವಿದೆ.

ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್‌ಎಸ್‌ಎಸ್‌ಒ) ನಡೆಸಿದ ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯ (ಎಐಡಿಐಎಸ್) ಮತ್ತು ಭಾರತೀಯ ಆರ್ಥಿಕ ಜನಗಣತಿಯ ಅಂಕಿ ಅಂಶಗಳನ್ನು ಬಳಸಿದ ಈ ವರದಿಯು, ಪರಿಶಿಷ್ಟ ಪಂಗಡಗಳು, ಪರಿಶಿಷ್ಟ ಜಾತಿಗಳು ಮತ್ತು ಮುಸ್ಲಿಮರಲ್ಲಿ ಸಂಪತ್ತಿನ ಮಾಲೀಕತ್ವವು ಅತ್ಯಂತ ಕಡಿಮೆ ಎಂದು ಕಂಡುಕೊಂಡಿದೆ.

ವಿವಿಧ ಸಮುದಾಯಗಳು ಭಾರತದಲ್ಲಿ ಎಷ್ಟು ಸಂಪತ್ತನ್ನು ಹೊಂದಿವೆ?

ವರದಿಯಲ್ಲಿನ ಅಂಕಿಅಂಶಗಳ ಪ್ರಕಾರ, ಹಿಂದೂ ಮೇಲ್ಜಾತಿಗಳು ದೇಶದ ಒಟ್ಟು ಸಂಪತ್ತಿನ ಸುಮಾರು ಶೇ.41 ಭಾಗವನ್ನು ಹೊಂದಿದ್ದಾರೆ. ಆ ಬಳಿಕದ ಸ್ಥಾನವು ಹಿಂದೂ ಧರ್ಮದ ಹಿಂದುಳಿದ ಜಾತಿಗಳದ್ದು. ಅವರಲ್ಲಿರುವ ಸಂಪತ್ತಿನ ಭಾಗ ಶೇ.31. ಮುಸ್ಲಿಮರು, ಎಸ್‌ಸಿಗಳು ಮತ್ತು ಎಸ್‌ಟಿ ಗಳು ಕ್ರಮವಾಗಿ ಸುಮಾರು ಶೇ. 8, ಶೇ.7.3 ಮತ್ತು ಶೇ.3.7 ಸಂಪತ್ತನ್ನು ಹೊಂದಿದ್ದಾರೆ.

ದೇಶದ ಒಟ್ಟು ಮನೆಮಠಗಳಲ್ಲಿ ಹಿಂದೂ ಮೇಲ್ಜಾತಿಗಳ ಪಾಲಿಗೆ (ಶೇ.22) ಹೋಲಿಸಿದರೆ ಅವರ ಸಂಪತ್ತಿನ ಪಾಲು ವಿಪರೀತ ಹೆಚ್ಚಿದೆ. ಈ ಶೇಕಡವಾರು ಪ್ರಮಾಣವು ಹಿಂದುಳಿದ ಜಾತಿಗಳಲ್ಲಿ ಶೇ.35.8 ಇದ್ದರೆ, ಮುಸ್ಲಿಮರಲ್ಲಿ ಶೇ.12.1, ಎಸ್ಸಿಗಳಲ್ಲಿ ಶೇ.17.9 ಮತ್ತು ಎಸ್‌ಟಿ ಗಳಲ್ಲಿ ಶೇ.9.1 ಇದೆ.

ವರದಿಯು ಹಿಂದೂ ಮೇಲ್ಜಾತಿಗಳ ಒಡೆತನದ ಸಂಪತ್ತಿನ ಒಟ್ಟು ಮೌಲ್ಯವನ್ನು 1,46,394 ಶತಕೋಟಿ ರೂ. ಎಂದು ಅಂದಾಜಿಸಿದೆ. ಇದು ಎಸ್‌ಟಿಗಳ ಒಡೆತನದ ಸಂಪತ್ತಿನ ಮೌಲ್ಯಕ್ಕಿಂತ ಸುಮಾರು 11 ಪಟ್ಟು ಹೆಚ್ಚು. ಎಸ್‌ಟಿಗಳ ಬಳಿ ಇರುವ ಸಂಪತ್ತಿನ ಮೌಲ್ಯ 13,268 ಶತಕೋಟಿ ರೂಪಾಯಿಯಾದರೆ, 28,707 ಶತಕೋಟಿ ಮೌಲ್ಯದ ಆಸ್ತಿಯನ್ನು ಮುಸ್ಲಿಮರು ಹೊಂದಿದ್ದಾರೆ.

(Source: AIDIS 2013; in Study Report on Inter Group Inequality in Wealth Ownership in India, 2020)

ಪ್ರತಿ ಮನೆಯ ಸಂಪತ್ತಿನ ಮಾಲೀಕತ್ವದ ಚಿತ್ರಣವೇನು?

ಪ್ರತಿ ಮನೆಯ ಸಂಪತ್ತಿನ ಮಾಲೀಕತ್ವವು 15.04 ಲಕ್ಷ ರೂ.ಗಳಷ್ಟಿತ್ತು. ಆದರೆ ಸಮುದಾಯಗಳ ನಡುವೆ ಗಮನಾರ್ಹ ವ್ಯತ್ಯಾಸಗಳಿವೆ.

ಹಿಂದೂ ಮೇಲ್ಜಾತಿಗಳಲ್ಲಿ ಸರಾಸರಿ ಮನೆಯ ಸಂಪತ್ತು 27.73 ಲಕ್ಷ ರೂ. ಇದು ದೇಶದಲ್ಲೇ ಅತ್ಯಧಿಕ. ನಂತರದ ಸ್ಥಾನ ಪಡೆದಿರುವ ಹಿಂದೂ ಹಿಂದುಳಿದ ಜಾತಿಗಳಲ್ಲಿ ಸಂಪತ್ತಿನ ಮೌಲ್ಯ ಸರಾಸರಿ 12.96 ಲಕ್ಷ ರೂ. ಮುಸ್ಲಿಂ ಕುಟುಂಬಗಳ ಸರಾಸರಿ ಸಂಪತ್ತಿನ ಮೌಲ್ಯ 9.95 ಲಕ್ಷ ರೂ. ಇದು ಎಸ್‌ಟಿ, ಎಸ್ಸಿಗಳಿಗಿಂತ ಹೆಚ್ಚಿದೆ. ಎಸ್‌ಟಿ ಗಳ ಸಂಪತ್ತಿನ ಮೌಲ್ಯ 6.13 ಲಕ್ಷ ರೂ ಇದ್ದರೆ, ಎಸ್‌ಸಿ ಗಳ ಸಂಪತ್ತಿನ ಮೌಲ್ಯ 6.12 ಲಕ್ಷ ರೂ. ಇದೆ ಎಂದು ಎಂದು ಈ ವರದಿ ತಿಳಿಸಿದೆ.

 (Source: AIDIS 2013; in Study Report on Inter Group Inequality in Wealth Ownership in India, 2020)

ಯಾವ ಸಮುದಾಯ ಹೆಚ್ಚು ಚಿನ್ನವನ್ನು ಹೊಂದಿದೆ?

ಅಧ್ಯಯನದ ಪ್ರಕಾರ, ಹಿಂದೂ ಹಿಂದುಳಿದ ಜಾತಿಗಳು ಹೆಚ್ಚಿನ ಚಿನ್ನದ ಪಾಲನ್ನು ಹೊಂದಿದ್ದಾರೆ. ಅವರ ಬಳಿ ಶೇ.39.1 ಚಿನ್ನವಿದೆ. ಹಿಂದೂ ಮೇಲ್ಜಾತಿಗಳ ಬಳಿ ಶೇ.31.3 ಚಿನ್ನವಿದೆ. ಮುಸ್ಲಿಮರು ಶೇ. 9.2 ಪಾಲನ್ನು ಹೊಂದಿದ್ದಾರೆ. ಎಸ್‌ಟಿಗಳ ಬಳಿ ಕೇವಲ ಶೇ.3.4 ಸರಾಸರಿ ಚಿನ್ನವಿದೆ.

 (Source: AIDIS, 2013; in Study Report on Inter Group Inequality in Wealth Ownership in India, 2020)

ಸೌಜನ್ಯ : indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News