ಇಸ್ರೋದ ಚಂದ್ರಯಾನ-3 ಅಭಿಯಾನದ ಹಿಂದಿರುವ ಮಹಿಳೆ ರಿತು ಕರಿಧಾಲ್ ಯಾರು?: ಇಲ್ಲಿದೆ ಮಾಹಿತಿ
ಹೊಸದಿಲ್ಲಿ,: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಶುಕ್ರವಾರ ಅಪರಾಹ್ನ 2:35ಕ್ಕೆ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಸೇರಿದೆ. ಚಂದ್ರನ ದಕ್ಷಿಣ ಧ್ರುವದ ಅನ್ವೇಷಣೆ ಈ ಅಭಿಯಾನದ ಗುರಿಯಾಗಿದೆ.
ಇಸ್ರೋದ ಹಿರಿಯ ವಿಜ್ಞಾನಿಗಳಲೋರ್ವರಾಗಿರುವ ಡಾ.ರಿತು ಕರಿಧಾಲ್ ಶ್ರೀವಾಸ್ತವ ಅವರು ಚಂದ್ರಯಾನ-3 ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ.
ಚಂದ್ರಯಾನ-2ರ ಮಿಷನ್ ನಿರ್ದೇಶಕಿ ಮತ್ತು ಮಂಗಳಯಾನದ ಉಪ ಕಾರ್ಯಾಚರಣೆ ನಿರ್ದೇಶಕಿಯಾಗಿದ್ದ ಕರಿಧಾಲ್ ಭಾರತದ ‘ರಾಕೆಟ್ ವುಮನ್ ’ಎಂದೇ ಖ್ಯಾತರಾಗಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಹುಟ್ಟಿ ಬೆಳೆದಿರುವ ಕರಿಧಾಲ್, ಲಕ್ನೋ ವಿವಿಯಿಂದ ಭೌತಶಾಸ್ತ್ರದಲ್ಲಿ ಬಿ.ಎಸ್ಸಿ.ಪದವಿಯನ್ನು ಗಳಿಸಿದ್ದಾರೆ. ಐಐಎಸ್ಸಿಯಿಂದ ಏರೋಸ್ಪೇಸ್ ಇಂಜಿನಿಯರಿಂಗ್ನಲ್ಲಿ ಎಂ.ಇ.ಪದವಿ ಪಡೆದಿರುವ ಅವರು 1997ರಲ್ಲಿ ಇಸ್ರೋ ಸೇರಿದ್ದರು.
ಕರಿಧಾಲ್ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರಿಂದ ‘ಇಸ್ರೋ ಯುವ ವಿಜ್ಞಾನಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಗಳಯಾನ ಅಭಿಯಾನಕ್ಕಾಗಿ 2015ರಲ್ಲಿ ‘ಇಸ್ರೋ ಟೀಮ್ ಲೀಡರ್’ ಪ್ರಶಸ್ತಿಯನ್ನು ಪಡೆದಿರುವ ಅವರು, ಎಎಸ್ಐ ಟೀಮ್ ಪ್ರಶಸ್ತಿ, ಸೊಸೈಟಿ ಆಫ್ ಇಂಡಿಯನ್ ಎರೋಸ್ಪೇಸ್ ಟೆಕ್ನಾಲಜೀಸ್ ಆ್ಯಂಡ್ ಇಂಡಸ್ಟ್ರೀಸ್ ನಿಂದ ‘ಎರೋಸ್ಪೇಸ್ನಲ್ಲಿ ಮಹಿಳಾ ಸಾಧಕರು,2015’ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ವಿಶ್ವ ಇಕನಾಮಿಕ್ ಫೋರಮ್ ನ ಪ್ರಕಾರ ಕರಿಧಾಲ್ ಯಾವಾಗಲೂ ಬಾಹ್ಯಾಕಾಶದಿಂದ ಆಕರ್ಷಿತರಾಗಿದ್ದು,ಏನಾದರೂ ವಿಭಿನ್ನವಾದುದನ್ನು ಮಾಡಲು ಬಯಸಿದ್ದಾರೆ. ಇಸ್ರೋ ಮತ್ತು ನಾಸಾ ಸುದ್ದಿ ವರದಿಗಳ ಪೇಪರ್ ಕಟಿಂಗ್ಗಳನ್ನು ಸಂಗ್ರಹಿಸುವುದು ಅವರ ಹವ್ಯಾಸವಾಗಿತ್ತು.
ಕರಿಧಾಲ್ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲ್ಗಳಲ್ಲಿ 20ಕ್ಕೂ ಹೆಚ್ಚಿನ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.