ನೇಪಾಳದಲ್ಲೇಕೆ ಹೆಚ್ಚು ವಿಮಾನ ದುರಂತಗಳು ಸಂಭವಿಸುತ್ತವೆ?

Update: 2024-07-24 17:31 GMT

PC : PTI 

ಹೊಸದಿಲ್ಲಿ : ಭೌಗೋಳಿಕವಾಗಿ ನೇಪಾಳವನ್ನು ಗಮನಿಸಿದರೆ, ನೇಪಾಳವು ವಿಮಾನವನ್ನು ಹಾರಿಸಲು ವಿಶ್ವದ ಅತ್ಯಂತ ಸವಾಲಿನ ಸ್ಥಳಗಳಲ್ಲಿ ಒಂದಾಗಿದೆ. ನೇಪಾಳದಲ್ಲಿ ಪರ್ವತ ಭೂಪ್ರದೇಶಗಳೇ ಹೆಚ್ಚಿವೆ. ಮೌಂಟ್ ಎವರೆಸ್ಟ್ ಸೇರಿದಂತೆ ವಿಶ್ವದ ಎತ್ತರದ ಶಿಖರಗಳನ್ನು ನೇಪಾಳದಲ್ಲಿದೆ. ಇದು ವಿಮಾನಯಾನಕ್ಕೆ ಸವಾಲೊಡ್ಡುತ್ತಿದೆ. ನೇಪಾಳದಲ್ಲಿ ವಿಮಾನ ಇಳಿಸುವುದು, ಅಲ್ಲಿಂದ ಟೇಕ್ ಆಫ್ ಮಾಡುವಾಗ ಪೈಲಟ್‌ಗಳಿಗೆ ಜೀವ ಕೈಯ್ಯಲ್ಲಿ ಹಿಡಿದ ಅನುಭವವಾಗುವುದೇ ಹೆಚ್ಚು.

ದುರದೃಷ್ಟವಶಾತ್, ಹಲವಾರು ವರ್ಷಗಳಿಂದ ದೇಶದಲ್ಲಿ ಹಲವಾರು ವಿಮಾನ ಅಪಘಾತಗಳು ಸಂಭವಿಸಿವೆ. ಜನವರಿ 2023 ರಲ್ಲಿ, ಯೇತಿ ಏರ್‌ಲೈನ್ಸ್ ಫ್ಲೈಟ್ YT691 ಪೋಖರಾದಲ್ಲಿ ಇಳಿಯಲು ಪ್ರಯತ್ನಿಸುವಾಗ ಅಪಘಾತಕ್ಕೀಡಾಯಿತು. ವಿಮಾನವು ಕಠ್ಮಂಡುವಿನಿಂದ ಪೋಖರಾ ಗೆ ಹೊರಟಿತ್ತು. ನಾಲ್ವರು ಸಿಬ್ಬಂದಿ ಸೇರಿದಂತೆ 72 ಜನರು ವಿಮಾನದಲ್ಲಿದ್ದರು. ಅವರೆಲ್ಲರೂ ದುರಂತದಲ್ಲಿ ಮೃತಪಟ್ಟರು.

ನೇಪಾಳದ ಅಧಿಕೃತ ವರದಿಯ ಪ್ರಕಾರ, ಅಪಘಾತಕ್ಕೆ ಮಾನವ ಹಸ್ತಕ್ಷೇಪವೇ ಕಾರಣ ಎಂದು ದೂಷಿಸಲಾಗಿದೆ. ವಿಮಾನವು ಕಡಿದಾದ ಪ್ರದೇಶದಲ್ಲಿರುವ ಪೋಖರಾ ವಿಮಾನ ನಿಲ್ದಾಣದಲ್ಲಿ ಇನ್ನೇನು ಇಳಿಯುವುದರಲ್ಲಿತ್ತು. ಕೋ ಪೈಲೆಟ್, ಪೈಲಟ್‌ಗೆ ಪೋಖರಾದಲ್ಲಿ ಇಳಿಯುವ ಮಾರ್ಗದ ಬಗ್ಗೆ ಸೂಚನೆ ನೀಡಲು ಪ್ರಯತ್ನಿಸುತ್ತಿದ್ದಾಗ ವಿಮಾನವು ಅನಿರೀಕ್ಷಿತ ತಿರುವು ಪಡೆಯಿತು. ಆಗ ಸಂಭವಿಸಿದ ಅಪಘಾತದಲ್ಲಿ ವಿಮಾನದಲ್ಲಿದ್ದವರೆಲ್ಲ ಮೃತರಾಗಿದ್ದರು.

2022 ರಲ್ಲಿ, ತಾರಾ ಏರ್ ಟ್ವಿನ್ ಓಟರ್ ಟರ್ಬೊಪ್ರೊಪ್ ವಿಮಾನವು ಪೋಖರಾದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ನೇಪಾಳದ ಪರ್ವತ ಮುಸ್ತಾಂಗ್ ಪ್ರದೇಶದಲ್ಲಿ ಪತನಗೊಂಡಿತು. ವಿಮಾನವು 22 ಜನರನ್ನು ಹೊತ್ತೊಯ್ಯುತ್ತಿತ್ತು. ಮಧ್ಯ ನೇಪಾಳದ ಜನಪ್ರಿಯ ಪ್ರವಾಸಿ ಪಟ್ಟಣವಾದ ಜೋಮ್ಸಮ್‌ಗೆ ತೆರಳುತ್ತಿತ್ತು.

ಕಳೆದ ಮೂರು ದಶಕಗಳಲ್ಲಿ ನೇಪಾಳವು 25 ಕ್ಕೂ ಹೆಚ್ಚು ವಿಮಾನ ಅಪಘಾತಗಳನ್ನು ಕಂಡಿದೆ. ಇದು ಅದರ ವಿಮಾನಯಾನ ಸಂಸ್ಥೆಗಳ ವಿಶ್ವಾಸಾರ್ಹತೆಯ ಮೇಲೂ ಪರಿಣಾಮ ಬೀರಿದೆ. 2013 ರಲ್ಲಿ, ಯುರೋಪಿಯನ್ ಯೂನಿಯನ್ ನೇಪಾಳದ ಎಲ್ಲಾ ವಿಮಾನಯಾನ ಸಂಸ್ಥೆಗಳನ್ನು ಯುರೋಪಿಯನ್ ವಾಯುಪ್ರದೇಶದಲ್ಲಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಿತು. ಆ ನಿಷೇಧಾಜ್ಞೆ ಈಗಲೂ ಮುಂದುವರಿದಿದೆ.

ತಾರಾ ಏರ್ಲೈನ್ಸ್ ಪ್ರವಾಸಿಗರು ತಳ್ಳಿಕೊಂಡು ಹೋಗುವ ವೀಡಿಯಪ

ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದಲ್ಲಿನ ಭೃಷ್ಟಾಚಾರವೇ ನೇಪಾಳದಲ್ಲಿನ ವಿಮಾನ ಅಪಘಾತಗಳಿಗೆ ಕಾರಣ ಎನ್ನಲಾಗಿದೆ. ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಒತ್ತು ಕೊಡಲು, ಕಡಿಮೆ ಬಜೆಟ್ ವಿಮಾನಯಾನಕ್ಕೆ ಉತ್ತೇಜನ ನೀಡಿರುವುದರಿಂದ ಸಣ್ಣ ಸಣ್ಣ ಪ್ರವಾಸಿ ಸ್ಥಳಗಳಿಗೆ ವಿಮಾನ ಹಾರಟ ಕಲ್ಪಿಸಲಾಗಿದೆ. ಇದರಿಂದ ಟ್ರೆಕ್ಕಿಂಗ್ ಗೆ ನೇಪಾಳಕ್ಕೆ ಬರುವ ವಿದೇಶಿಗರ ಸಂಖ್ಯೆಯಲ್ಲೂ ಹೆಚ್ಚಳ ವಾಗಿದೆ.

ವಿಮಾನಯಾನ ಕ್ಷೇತ್ರದಲ್ಲಿ ಪೈಪೋಟಿ ಏರ್ಪಟ್ಟಿರುವುದರಿಂದ ಹೊಸ ವಿಮಾನ ಖರೀದಿಗೆ ವಿಮಾನಯಾನ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ. ಸಣ್ಣ ಸಂಸ್ಥೆಗಳು ಹಳೆಯ ಸಣ್ಣ ವಿಮಾನಗಳನ್ನೇ ಖರೀದಿ ಮಾಡಿ ದುರ್ಗಮ ಪ್ರದೇಶದ ವಿಮಾನ ನಿಲ್ದಾಣಗಳಿಗೆ ಸೇವೆ ನೀಡುತ್ತಿವೆ ಎನ್ನಲಾಗಿದೆ. ಈ ವಿಮಾನಗಳು ಹಲವು ಬಾರಿ ವಿಮಾನ ನಿಲ್ದಾಣದಲ್ಲೇ ಕೈಕೊಡುವುದಿದೆ. ತಾರಾ ಏರ್ ಲೈನ್ ವಿಮಾನವು ವಿಮಾನ ನಿಲ್ದಾಣದಲ್ಲೇ ಚಲಿಸಲಾಗದೇ ರನ್ ವೇನಲ್ಲಿ ಬಾಕಿಯಾದಾಗ, ಪ್ರಯಾಣಿಕರು ವಿಮಾನವನ್ನು ತಳ್ಳಿಕೊಂಡು ಹೋದ ವೀಡಿಯೊವೊಂದು ವೈರಲಾಗಿದ್ದೇ ಇದಕ್ಕೆ ಸಾಕ್ಷಿ.

ವಿಮಾನಯಾನ ಕ್ಷೇತ್ರದ ಪೈಪೋಟಿಯ ಮಧ್ಯೆ ಸುರಕ್ಷೆತೆಗೆ ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರ ಸುರಕ್ಷತೆಗೆ ಕಡಿಮೆ ಮಹತ್ವ ನೀಡುತ್ತಿರುವುದು ವಿಮಾನ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬುಧವಾರ ಸಂಭವಿಸಿದ ವಿಮಾನ ಅಪಘಾತದ ಮೊದಲು, 2000 ರಿಂದ ದೇಶದಲ್ಲಿ 19 ವಿಮಾನ ಅಪಘಾತಗಳಲ್ಲಿ ಸುಮಾರು 360 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ನೇಪಾಳದಲ್ಲಿ ಸಂಭವಿಸಿದ ವಿಮಾನ ದುರಂತಗಳು :

► ಜುಲೈ 24, 2024

ಬಾಂಬಾರ್ಡಿಯರ್ ಸಿಆರ್‌ಜೆ 200 ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಟೇಕಾಫ್ ಆಗುತ್ತಿದ್ದಾಗ ಪತನಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ.

► ಜುಲೈ 11, 2023

ಮಧ್ಯ ನೇಪಾಳದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದರು. ಮೌಂಟ್ ಎವರೆಸ್ಟ್ ಮತ್ತು ಇತರ ಎತ್ತರದ ಪರ್ವತ ಶಿಖರಗಳ ನೆಲೆಯಾದ ಸೊಲುಖುನ್ವು ಜಿಲ್ಲೆಯಿಂದ ಹೊರಟ ಹೆಲಿಕಾಪ್ಟರ್‌ನಲ್ಲಿ ಐವರು ಮೆಕ್ಸಿಕನ್ ಪ್ರಜೆಗಳು ಮತ್ತು ಒಬ್ಬ ನೇಪಾಳಿ ಪೈಲಟ್ ಇದ್ದರು.

► ಜನವರಿ 15, 2023

ನೇಪಾಳದ ಯೇತಿ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ 72 ಜನರನ್ನು ಹೊತ್ತೊಯ್ಯುತ್ತಿದ್ದ ಅವಳಿ ಇಂಜಿನ್ ಎಟಿಆರ್ 72 ವಿಮಾನವು ಪೊಖರಾದಲ್ಲಿ ಪತನಗೊಂಡಿತು, ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದರು.

ಇದು 1992 ರ ನಂತರ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರವಾದ ವಿಮಾನ ಅಪಘಾತ. ಈ ಹಿಂದೆ 1992ರಲ್ಲಿ ಪಾಕಿಸ್ತಾನದ ಇಂಟರ್ನ್ಯಾಷನಲ್ ಏರ್ಲೈನ್ಸ್ ವಿಮಾನವು ಕಠ್ಮಂಡುವಿನಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಬೆಟ್ಟಕ್ಕೆ ಢಿಕ್ಕಿ ಹೊಡೆದು ಅದರಲ್ಲಿದ್ದ ಎಲ್ಲಾ 167 ಪ್ರಯಾಣಿಕರು ಸಾವನ್ನಪ್ಪಿದ್ದರು.

► ಮೇ 29, 2022

ಕಠ್ಮಂಡುವಿನಿಂದ ಪಶ್ಚಿಮಕ್ಕೆ 125 ಕಿಮೀ (80 ಮೈಲುಗಳು) ಪೋಖರಾದಿಂದ ಟೇಕ್ ಆಫ್ ಆದ 15 ನಿಮಿಷಗಳ ನಂತರ ಡಿ ಹ್ಯಾವಿಲ್ಯಾಂಡ್ ಕೆನಡಾ DHC-6-300 ಟ್ವಿನ್ ಓಟರ್ ವಿಮಾನ ಪತನಗೊಂಡಿತು. 16 ನೇಪಾಳಿಗಳು, ನಾಲ್ವರು ಭಾರತೀಯರು ಸೇರಿದಂತೆ ಇಬ್ಬರು ಜರ್ಮನ್ನರು ಸಾವನ್ನಪ್ಪಿದ್ದರು.

► ಫೆಬ್ರುವರಿ 27, 2019

ಪೂರ್ವ ನೇಪಾಳದಲ್ಲಿ ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್ ಪತನಗೊಂಡಿತು. ಪ್ರವಾಸೋದ್ಯಮ ಸಚಿವರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಏಳು ಜನರು ಸಾವನ್ನಪ್ಪಿದ್ದರು.

► ಮಾರ್ಚ್ 12, 2018

ಯುಎಸ್-ಬಾಂಗ್ಲಾ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಬಾಂಗ್ಲಾದೇಶದ ವಿಮಾನವು ನೇಪಾಳದ ರಾಜಧಾನಿಯ ಗುಡ್ಡಗಾಡು ವಿಮಾನ ನಿಲ್ದಾಣದಲ್ಲಿ ಇಳಿಯಲು ಬಂದಾಗ ಮೋಡ ಕವಿದ ವಾತಾವರಣದಲ್ಲಿ ಅಪಘಾತಕ್ಕೀಡಾಗಿ 71 ಜನರಲ್ಲಿ 51 ಜನರು ಸಾವನ್ನಪ್ಪಿದ್ದರು.

► ಫೆಬ್ರುವರಿ 26, 2016

ಪಶ್ಚಿಮ ನೇಪಾಳದ ಕಲಿಕೋಟ್ ಜಿಲ್ಲೆಯಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿತು. ಈ ವಿಮಾನದಲ್ಲಿ ಇಬ್ಬರು ಸಾವನ್ನಪ್ಪಿದ್ದರು ಎಂದು ಶಂಕಿಸಲಾಗಿದೆ. ಇದನ್ನು ಕಾಸ್ತಮಂಡಪ ಏರ್‌ಲೈನ್ಸ್ ನಿರ್ವಹಿಸುತ್ತಿತ್ತು.

► ಫೆಬ್ರುವರಿ 24, 2016

ಪ್ರತಿಕೂಲ ಹವಾಮಾನದಿಂದ ಸಣ್ಣ ವಿಮಾನವೊಂದು ಪತನಗೊಂಡಿತು. ಅದರಲ್ಲಿದ್ದ 23 ಮಂದಿ ಸಾವನ್ನಪ್ಪಿದ್ದರು. ತಾರಾ ಏರ್ ನಿರ್ವಹಿಸುತ್ತಿದ್ದ ಟ್ವಿನ್ ಓಟರ್ ವಿಮಾನವು ಪೋಖರಾದಿಂದ ಪಶ್ಚಿಮ ನೇಪಾಳದ ಜೋಮ್ಸೋಮ್‌ಗೆ ತೆರಳುತ್ತಿತ್ತು.

► ಫೆಬ್ರುವರಿ 16, 2014

ಪ್ರತಿಕೂಲ ಹವಾಮಾನದಿಂದ ಸಣ್ಣ ವಿಮಾನ ಪತನಗೊಂಡಿತು. ವಿಮಾನದಲ್ಲಿದ್ದ ಎಲ್ಲಾ 18 ಜನರು ಸಾವನ್ನಪ್ಪಿದ್ದರು. ಟ್ವಿನ್ ಓಟರ್ ವಿಮಾನವನ್ನು ಸರ್ಕಾರಿ ನೇಪಾಳ ಏರ್‌ಲೈನ್ಸ್ ಕಾರ್ಪೊರೇಷನ್ ನಿರ್ವಹಿಸುತ್ತಿತ್ತು.

► ಸೆಪ್ಟೆಂಬರ್ 28, 2012

ಸಣ್ಣ ಪ್ರೊಪೆಲ್ಲರ್ ಚಾಲಿತ ಡೋರ್ನಿಯರ್ ವಿಮಾನವು ಕಠ್ಮಂಡುವಿನಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಹಕ್ಕಿಗೆ ಬಡಿಯಿತು. ವಿಮಾನದಲಿದ್ದ ಏಳು ಬ್ರಿಟಿಷ್ ಮತ್ತು ಐದು ಚೀನಾದ ಪ್ರಯಾಣಿಕರು ಸೇರಿದಂತೆ 19 ಜನರು ಸಾವನ್ನಪ್ಪಿದರು.

►ಸೆಪ್ಟೆಂಬರ್ 25, 2011

ಮೌಂಟ್ ಎವರೆಸ್ಟ್ ವೀಕ್ಷಿಸಲು ವಿದೇಶಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸಣ್ಣ ವಿಮಾನವು ಕಠ್ಮಂಡು ಬಳಿ ಪ್ರತಿಕೂಲ ಹವಾಮಾನದಿಂದ ಪತನಗೊಂಡಿತು. ಅದರಲ್ಲಿದ್ದ ಎಲ್ಲಾ 19 ಜನರು ಸಾವನ್ನಪ್ಪಿದ್ದರು. ಈ ವಿಮಾನವನ್ನು ಖಾಸಗಿ ವಿಮಾನಯಾನ ಸಂಸ್ಥೆ ಬುದ್ಧ ಏರ್ ನಿರ್ವಹಿಸುತ್ತಿತ್ತು.

► ಡಿಸೆಂಬರ್ 16, 2010

ಪೂರ್ವ ನೇಪಾಳದ ಹಿಮಾಲಯದ ತಪ್ಪಲಿನಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿತು. ಅದರಲ್ಲಿದ್ದ ಎಲ್ಲಾ 22 ಜನರು ಸಾವನ್ನಪ್ಪಿದ್ದರು. ಟ್ವಿನ್ ಓಟರ್ ವಿಮಾನವನ್ನು ತಾರಾ ಏರ್ ನಿರ್ವಹಿಸುತ್ತಿತ್ತು.

► ಆಗಸ್ಟ್ 24, 2010

ಪ್ರತಿಕೂಲ ಹವಾಮಾನದಿಂದ ಖಾಸಗಿ ಸ್ವಾಮ್ಯದ ಅಗ್ನಿ ಏರ್ ನಿರ್ವಹಿಸುತ್ತಿದ್ದ ಸಣ್ಣ ವಿಮಾನ ಪತನಗೊಂಡಿತು. ನಾಲ್ವರು ಅಮೆರಿಕನ್ನರು, ಜಪಾನ್ ಮತ್ತು ಬ್ರಿಟಿಷ್ ಪ್ರಜೆಗಳು ಸೇರಿದಂತೆ ಹದಿನಾಲ್ಕು ಜನರು ಸಾವನ್ನಪ್ಪಿದ್ದರು.

► ಅಕ್ಟೋಬರ್ 8, 2008

ಸಣ್ಣ ಅವಳಿ ಓಟರ್ ವಿಮಾನವು ಈಶಾನ್ಯ ನೇಪಾಳದ ಪರ್ವತವೊಂದರಲ್ಲಿ ಪತನಗೊಂಡಿತು. ಕನಿಷ್ಠ 18 ಜನರು ಸಾವನ್ನಪ್ಪಿದ್ದರು.

► ಮಾರ್ಚ್ 4, 2008

ಹೆಲಿಕಾಪ್ಟರ್ ಅಪಘಾತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದರು. ಇದರಲ್ಲಿ ನಾಲ್ವರು ಯುಎನ್ ಶಸ್ತ್ರಾಸ್ತ್ರ ಮಾನಿಟರ್‌ಗಳು ಪ್ರಯಾಣಿಸುತ್ತಿದ್ದರು.

► ಜೂನ್ 21, 2006

ಯೇತಿ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಟ್ವಿನ್ ಓಟರ್ ಪ್ರಯಾಣಿಕ ವಿಮಾನವು ಲ್ಯಾಂಡಿಂಗ್ ಗೆ ಕೆಲವೇ ನಿಮಿಷಗಳ ಮೊದಲು ಪತನಗೊಂಡಿತು. ಅದರಲ್ಲಿದ್ದ ಎಲ್ಲಾ ಒಂಬತ್ತು ಜನರು ಸಾವನ್ನಪ್ಪಿದ್ದರು.

► ಮೇ 25, 2004

ಮೌಂಟ್ ಎವರೆಸ್ಟ್ ಪ್ರದೇಶದಲ್ಲಿ ಟ್ವಿನ್ ಓಟರ್ ಕಾರ್ಗೋ ವಿಮಾನ ಪತನಗೊಂಡಿತು. ಅದರ ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಇದನ್ನು ಯೇತಿ ಏರ್‌ಲೈನ್ಸ್ ನಿರ್ವಹಿಸುತ್ತಿತ್ತು.

► ಆಗಸ್ಟ್ 22, 2002

ವಿದೇಶಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಮತ್ತೊಂದು ಟ್ವಿನ್ ಓಟರ್ ವಿಮಾನವು ನೇಪಾಳದಲ್ಲಿ ಪ್ರತಿಕೂಲ ಹವಾಮಾನದಿಂದ ಪರ್ವತಕ್ಕೆ ಡಿಕ್ಕಿ ಹೊಡೆದು ಪತನವಾಯಿತು. ಅದರಲ್ಲಿದ್ದ ಎಲ್ಲಾ 18 ಪ್ರಯಾಣಿಕರು ಸಾವನ್ನಪ್ಪಿದ್ದರು. ಇದನ್ನು ಶಾಂಗ್ರಿಲಾ ಏರ್ ನಿರ್ವಹಿಸುತ್ತಿತ್ತು.

► ಜುಲೈ 17, 2002

ಅವಳಿ ಇಂಜಿನ್‌ಗಳ ವಿಮಾನವೊಂದು ಪಶ್ಚಿಮ ನೇಪಾಳದಲ್ಲಿ ಪರ್ವತಕ್ಕೆ ಅಪ್ಪಳಿಸಿದ ನಂತರ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

► ಜುಲೈ 27, 2000

ಕೆನಡಾ ನಿರ್ಮಿತ ಟ್ವಿನ್ ಓಟರ್ ಪ್ರಯಾಣಿಕ ವಿಮಾನವು ಪಶ್ಚಿಮ ನೇಪಾಳದಲ್ಲಿ ಪತನಗೊಂಡಿತು. ಅದರಲ್ಲಿದ್ದ ಎಲ್ಲಾ 25 ಜನರು ಸಾವನ್ನಪ್ಪಿದ್ದರು. ಇದನ್ನು ಸರ್ಕಾರಿ ಸ್ವಾಮ್ಯದ ರಾಯಲ್ ನೇಪಾಳ ಏರ್‌ಲೈನ್ಸ್ ನಿರ್ವಹಿಸುತ್ತಿತ್ತು.

ಪೂರಕ ಮಾಹಿತಿ : simpleflying.com, economictimes.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News