ರಾಹುಲ್ ಗಾಂಧಿ 50 ವರ್ಷದ ಮಹಿಳೆಗೆ ‘ಫ್ಲೈಯಿಂಗ್ ಕಿಸ್’ ಯಾಕೆ ಕೊಡುತ್ತಾರೆ: ಸ್ಮೃತಿ ಇರಾನಿಗೆ ಬಿಹಾರದ ಶಾಸಕಿ ನೀತು ಪ್ರಶ್ನೆ

Update: 2023-08-11 12:26 GMT

ಹೊಸದಿಲ್ಲಿ/ಪಾಟ್ನಾ: ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರ 'ಫ್ಲೈಯಿಂಗ್ ಕಿಸ್' ಕುರಿತು ಗದ್ದಲದ ನಡುವೆ ಬಿಹಾರದ ಕಾಂಗ್ರೆಸ್ ಶಾಸಕಿಯೊಬ್ಬರು ವಿವಾದಾತ್ಮಕ ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ತರಾಟೆಗೆ ತೆಗೆದುಕೊಂಡ ನೀತು ಸಿಂಗ್, "ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಇಷ್ಟಪಡುವ ಯುವತಿಯರಿಗೆ ಕೊರತೆ ಇಲ್ಲ. ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಲು ಬಯಸಿದ್ದರೆ ಅವರು ಯುವತಿಯರಿಗೆ ನೀಡುತ್ತಿದ್ದರು. 50 ವರ್ಷದ ಮಹಿಳೆಗೆ ಏಕೆ ಫ್ಲೈಯಿಂಗ್ ಕಿಸ್ ಕೊಡುತ್ತಾರೆ?" ಎಂದು ನೀತು ಸಿಂಗ್ ಪ್ರಶ್ನಿಸಿರುವ ವೀಡಿಯೊ ವ್ಯಾಪಕ ಪ್ರಚಾರದಲ್ಲಿದೆ.

"ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ" ಎಂದು ನೀತು ಸಿಂಗ್ ಪ್ರತಿಪಾದಿಸಿದರು.

ಈ ವೀಡಿಯೊವನ್ನು ಬಿಜೆಪಿ ವಕ್ತಾರ ಶೆಹಝಾದ್ ಪೂನಾವಾಲಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. "ಮಹಿಳಾ ವಿರೋಧಿ ಕಾಂಗ್ರೆಸ್ ಸದನದ ಒಳಗೆ ರಾಹುಲ್ ಅವರ ದುರ್ವರ್ತನೆಗಳನ್ನು ಹೀಗೂ  ಸಮರ್ಥಿಸಬಹುದು" ಎಂದು ಪೂನಾವಾಲಾ ಹೇಳಿದರು.

ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆ ಭಾಷಣ ಮುಗಿಸಿ ಸದನದಿಂದ  ಹೊರಹೋಗುವ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ‘ಫ್ಲೈಯಿಂಗ್ ಕಿಸ್’ ನೀಡಿದ್ದಾರೆ ಎಂದು ಸ್ಮೃತಿ ಇರಾನಿ ಆರೋಪಿಸಿದ್ದರು.

ತನ್ನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಆಡಳಿತಾರೂಢ ಬಿಜೆಪಿಯ ಸಂಸದರ ಕಡೆಗೆ ರಾಹುಲ್ ಗಾಂಧಿ ಸನ್ನೆ ಮಾಡಿದ್ದಾರೆ ಎಂದಿರುವ ಕಾಂಗ್ರೆಸ್ ಪಕ್ಷ ಇರಾನಿಯ ಆರೋಪವನ್ನುನಿರಾಕರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News