ಅವಿವಾಹಿತ ಜೋಡಿಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ : ನಿಯಮ ಪರಿಷ್ಕರಿಸಿದ OYO
ಹೊಸದಿಲ್ಲಿ: ಪ್ರಮುಖ ಪ್ರಯಾಣ ಮತ್ತು ಹೋಟೆಲ್ ಬುಕಿಂಗ್ ಪ್ಲಾಟ್ ಫಾರ್ಮ್ OYO ಇತ್ತೀಚೆಗೆ ತನ್ನ ಪಾಲುದಾರ ಹೋಟೆಲ್ ಗಳಿಗೆ ಹೊಸ ಚೆಕ್-ಇನ್ ನಿಯಮವನ್ನು ಪರಿಚಯಿಸಿದ್ದು, ಪರಿಷ್ಕೃತ ನಿಯಮ ಉತ್ತರ ಪ್ರದೇಶದ ಮೀರತ್ ನಲ್ಲಿ ಮೊದಲು ಜಾರಿಗೆ ಬರಲಿದೆ.
ನವೀಕರಿಸಿದ ಮಾರ್ಗಸೂಚಿಗಳ ಪ್ರಕಾರ, ಅವಿವಾಹಿತ ಜೋಡಿಗಳಿಗೆ ಹೋಟೆಲ್ ಕೊಠಡಿಯನ್ನು ನೀಡುವುದಿಲ್ಲ ಎಂದು OYO ಸಂಸ್ಥೆ ತಿಳಿಸಿದೆ. ಆನ್ ಲೈನ್ ಮೂಲಕ ಕೊಠಡಿಯನ್ನು ಕಾಯ್ದಿರಿಸುವವರು ವಿವಾಹದ ಕುರಿತು ಪುರಾವೆಗಳನ್ನು ನೀಡುವುದು ಅವಶ್ಯಕವಾಗಿದೆ.
ಹೊಸ OYO ನೀತಿಯನ್ನು ಮೊದಲು ಉತ್ತರಪ್ರದೇಶದ ಮೀರತ್ ನಲ್ಲಿ ಕಾರ್ಯರೂಪಕ್ಕೆ ತರಲಾಗುವುದು. ಹೊಸ ನೀತಿಯನ್ನು ತಕ್ಷಣವೇ ಜಾರಿಗೆ ತರುವಂತೆ OYO ಈಗಾಗಲೇ ನಗರದ ಪಾಲುದಾರ ಹೋಟೆಲ್ ಗಳಿಗೆ ಸೂಚನೆ ನೀಡಿದೆ.
ಈ ಹಿಂದೆ ʼOYOʼಗೆ ಹೊಟೇಲ್ ರೂಮ್ ಗಳಲ್ಲಿ ಮದುವೆಯಾಗದ ಜೋಡಿಗಳನ್ನು ಚೆಕ್ ಇನ್ ಮಾಡಲು ಅವಕಾಶ ನೀಡಬಾರದೆನ್ನುವ ಅರ್ಜಿಗಳು ಬಂದಿದ್ದವು. ಮೀರತ್ ನಲ್ಲಿ ಮದುವೆಯಾಗದ ಕೆಲ ಜೋಡಿಗಳು ಹೊಟೇಲ್ ರೂಮ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ʼOYOʼ ಚೆಕ್ ಇನ್ ಮಾಡಲು ಹೊಟೇಲ್ ನಲ್ಲಿ ಅವಕಾಶ ನೀಡಬಾರದೆಂದು ಕೆಲ ನಾಗರಿಕ ಸಮಾಜದ ಗುಂಪುಗಳು ಕಂಪೆನಿಗೆ ಮನವಿ ಮಾಡಿಕೊಂಡಿತ್ತು. ಈ ಅರ್ಜಿ ಬಂದ ಬಳಿಕ ಎಚ್ಚೆತ್ತುಕೊಂಡ ʼOYOʼ ತನ್ನ ನೀತಿಯಲ್ಲಿ ಪರಿಷ್ಕರಣೆ ಮಾಡಲು ಮುಂದಾಗಿದೆ.
OYO ಉತ್ತರ ಭಾರತದ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ಈ ಕುರಿತು ಮಾಹಿತಿಯನ್ನು ನೀಡಿದ್ದು, OYO ಹಳೆಯ ನಿಯಮಗಳನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ. ನಾವು ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ನಾಗರಿಕ ಸಮಾಜದ ಅಭಿಪ್ರಾಯವನ್ನು ಕೂಡ ಆಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ಈ ನೀತಿ ಮತ್ತು ಅದರ ಪರಿಣಾಮವನ್ನು ಪರಿಶೀಲಿಸುವುದನ್ನು ಮುಂದುವರಿಸುತ್ತೇವೆ. ಅನೈತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಹೋಟೆಲ್ ಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು, OYO ಬ್ರ್ಯಾಂಡಿಂಗ್ ಬಳಸುವ ಅನಧಿಕೃತ ಹೋಟೆಲ್ ಗಳ ವಿರುದ್ಧ ಕ್ರಮವನ್ನು ಕೂಡ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.