ಚುನಾವಣೆ ಬಳಿಕವೇ ಸೇತುವೆಗಳು ಸರಣಿಯಾಗಿ ಏಕೆ ಕುಸಿಯಬೇಕು? ಇದರ ಹಿಂದೆ ದೊಡ್ಡ ಪಿತೂರಿ ಅಡಗಿರಬೇಕು ಎಂಬ ಸಂದೇಹ ವ್ಯಕ್ತಪಡಿಸಿದ ಕೇಂದ್ರ ಸಚಿವ

Update: 2024-06-30 04:58 GMT

PC: PTI

ಪಾಟ್ನಾ: ಬಿಹಾರದಲ್ಲಿ ಕಳೆದ ಒಂಬತ್ತು ದಿನಗಳಲ್ಲಿ ಐದು ಸೇತುವೆಗಳು ಕುಸಿದಿವೆ. ಇದರ ಹಿಂದೆ ದೊಡ್ಡ ಪಿತೂರಿ ಅಡಗಿರಬೇಕು ಎಂಬ ಸಂದೇಹವನ್ನು ಕೇಂದ್ರ ಸಚಿವ ಜಿತನ್ ರಾಂ ಮಾಂಝಿ ವ್ಯಕ್ತಪಡಿಸಿದ್ದಾರೆ.

ಗಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಲೋಕಸಭಾ ಚುನಾವಣೆ ಬಳಿಕ ಬೆನ್ನು ಬೆನ್ನಿಗೇ ಸೇತುವೆಗಳು ಕುಸಿಯಲು ಆರಂಭಿಸಿದ್ದು ಹೇಗೆ" ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. 

"15 ರಿಂದ 30 ದಿನ ಮೊದಲು ಏಕೆ ಇಂಥ ಘಟನೆಗಳು ನಡೆಯಲಿಲ್ಲ? ಲೋಕಸಭಾ ಚುನಾವಣೆ ಬಳಿಕವಷ್ಟೇ ಏಕೆ ಸೇತುವೆಗಳು ಕುಸಿಯಲಾರಂಭಿಸಿದವು? ರಾಜ್ಯ ಸರ್ಕಾರವನ್ನು ಅವಮಾನಿಸುವ ಯಾವುದಾದರೂ ಪಿತೂರಿ ನಡೆದಿದೆಯೇ? ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮಾಂಝಿ ಪ್ರಶ್ನಿಸಿದರು.

ರಾಜ್ಯದಲ್ಲಿ ಕಳೆದ ಒಂಬತ್ತು ದಿನಗಳಲ್ಲಿ ಅರಾರಿಯಾ, ಪೂರ್ವ ಚಂಪಾರಣ್ಯ, ಕಿಶನ್ ಗಂಜ್ ಮತ್ತು ಮಧುಬಾನಿ ಜಿಲ್ಲೆಗಳಲ್ಲಿ ಐದು ಸೇತುವೆಗಳು ಕುಸಿದಿವೆ. ಶುಕ್ರವಾರ ಮಧುಬಾನಿ ಪ್ರದೇಶದಲ್ಲಿ ನಿರ್ಮಾಣಹಂತದಲ್ಲಿದ್ದ ಸೇತುವೆ ಕುಸಿದಿದೆ. ಗ್ರಾಮೀಣ ಕಾಮಗಾರಿ ಇಲಾಖೆ 2021ರಿಂದ ಈ ಸೇತುವೆಯನ್ನು ನಿರ್ಮಿಸುತ್ತಿತ್ತು.

ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆ ನೀಡಲಾಗುವುದು. ಇಂಥ ಘಟನೆಗಳ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ತೀವ್ರ ನಿಗಾ ವಹಿಸಿದೆ. ಇಂಥ ತಪ್ಪು ಮಾಡಿರುವ ಎಂಜಿನಿಯರ್ ಗಳು ಮತ್ತು ಗುತ್ತಿಗೆದಾರರನ್ನು ಕಠಿಣವಾಗಿ ಶಿಕ್ಷಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಳಪೆ ಗುಣಮಟ್ಟದ ಸಲಕರಣೆಗಳನ್ನು ಬಳಸಿರುವುದೇ ಇಂಥ ಘಟನೆಗಳಿಗೆ ಪ್ರಮುಖ ಕಾರಣ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News