ದೆಹಲಿಯಲ್ಲಿ ವ್ಯಾಪಕ ಮಳೆ, ಜನಜೀವನ ಅಸ್ತವ್ಯಸ್ತ; ಇಬ್ಬರು ಮೃತ್ಯು
ಹೊಸದಿಲ್ಲಿ: ದಕ್ಷಿಣದ ಕೇರಳದಲ್ಲಿ ಮಳೆ ವ್ಯಾಪಕವಾಗಿ ಹಾನಿ ಮಾಡಿರುವ ನಡುವೆಯೇ ರಾಷ್ಟ್ರ ರಾಜಧಾನಿಯಲ್ಲಿ ಕೂಡಾ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಮಳೆ ಸಂಬಂಧಿ ದುರಂತಗಳಲ್ಲಿ ರಾಜಧಾನಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದೆಹಲಿ ಮತ್ತು ಸುತ್ತಮುತ್ತಲ ಎನ್ ಸಿಆರ್ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ 24 ಗಂಟೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ. ಆಗಸ್ಟ್ 5ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ದುಬೈನಿಂದ ಆಗಮಿಸಬೇಕಾದ ಎಐ918, ಪುಣೆಯಿಂದ ಆಗಮಿಸುವ ಯುಕೆ 998, ಮುಂಬೈನಿಂದ ಆಗಮಿಸುವ 6ಇ882 ಸೇರಿದಂತೆ ಹಲವು ವಿಮಾನಗಳನ್ನು ಪ್ರತಿಕೂಲ ಹವಾಮಾನದ ಕಾರಣ ಮತ್ತು ವಾಯುಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಲಕ್ನೋಗೆ ವಿಮುಖಗೊಳಿಸಲಾಗಿದೆ.
ಜನತೆ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಮನೆಯಲ್ಲೇ ಉಳಿಯುವಂತೆ ಹವಾಮಾನ ಇಲಾಖೆ ಸಲಹೆ ಮಾಡಿದೆ. ಅನಗತ್ಯ ಪ್ರಯಾಣವನ್ನು ಮಾಡದಂತೆ ಸೂಚಿಸಿದ್ದು, ಜಲಾವೃತ ಪ್ರದೇಶಗಳಲ್ಲಿ ತಕ್ಷಣ ಪರಿಹಾರ ಕಾರ್ಯಾಚರಣೆ ಕೈಗೊಳ್ಳುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಿರಾಗ್ ದೆಹಲಿ, ಅನುವ್ರತ ಮಾರ್ಗ ಮತ್ತು ಹೊರವರ್ತುಲ ರಸ್ತೆಯ ಸಾವಿತ್ರಿ ಫ್ಲೈಓವರ್ ನಂತಹ ಪ್ರದೇಶಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿದ್ದು, ಸಂಚಾರ ಸುಗಮಗೊಳಿಸುವಂತೆ ಸೂಚಿಸಿದ್ದಾರೆ. ದೆಹಲಿಯ ಪ್ರಗತಿ ಮೈದಾನದ ವೀಕ್ಷಣಾಲಯದಲ್ಲಿ ಕೇವಲ ಒಂದು ಗಂಟೆ ಅವಧಿಯಲ್ಲಿ 112.5 ಮಿಲಿಮೀಟರ್ ಮಳೆ ಬಿದ್ದಿದೆ.
ನೀರು ನಿಂತಿರುವ ರಸ್ತೆಗಳಲ್ಲಿ ಚಲಿಸದಂತೆ ಮತ್ತು ಪರ್ಯಾಯ ಮಾರ್ಗವನ್ನು ಅನುಸರಿಸುವಂತೆ ಸಂಚಾರಿ ಪೊಲೀಸರು ಸಲಹೆ ಮಾಡಿದ್ದಾರೆ. ಶ್ಯಾಮ್ ಪ್ರಸಾದ್ ಮುಖರ್ಜಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಹಾತ್ಮಗಾಂಧಿ ಮಾರ್ಗದಲ್ಲೂ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಗಾಝಿಪುರ ಸಮೀಪದ ಖೋಡಾ ಕಾಲೋನಿಯಲ್ಲಿ ಮಳೆ ನೀರಿನ ಚರಂಡಿಗೆ ಬಿದ್ದು 22 ವರ್ಷದ ಮಹಿಳೆ ತನುಜಾ ಮತ್ತು ಆಕೆಯ ಮೂರು ವರ್ಷದ ಮಗ ಪ್ರಿಯಾಂಶ್ ಮೃತಪಟ್ಟಿದ್ದಾರೆ. ಸಬ್ಜಿ ಮಸೀದಿ ಪ್ರದೇಶದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಮನೆ ಕುಸಿದು ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ವಸಂತ್ ಕುಂಜ್ ಪ್ರದೇಶದಲ್ಲೂ ಮನೆ ಕುಸಿದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ದರಿಯಾಗಂಜ್ ನಲ್ಲಿ ಗೋಡೆ ಕುಸಿತದಿಂದ ಹಲವು ಕಾರುಗಳು ಜಖಂಗೊಂಡಿವೆ. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.