ಮಹಿಳಾ ದಿನಾಚರಣೆ: ಪ್ರಧಾನಿ ಮೋದಿಯ 'ಎಕ್ಸ್' ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡ 6 ಮಹಿಳಾ ಸಾಧಕರು ಯಾರ್ಯಾರು?

Update: 2025-03-08 16:50 IST
PM Modi celebrated Women

PC : (Narendra Modi/X)

  • whatsapp icon

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಹಿಳಾ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆ ʼಎಕ್ಸ್ʼನಲ್ಲಿ ಆರು ಮಹಿಳಾ ಸಾಧಕರಿಗೆ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟರು.

ಚೆನ್ನೈನ ವೈಶಾಲಿ ರಮೇಶ್‌ಬಾಬು, ದಿಲ್ಲಿಯ ಡಾ. ಅಂಜಲೀ ಅಗರ್‌ವಾಲ್‌, ನಳಂದದ ಅನಿತಾ ದೇವಿ, ಭುವನೇಶ್ವರದ ಎಲಿನಾ ಮಿಶ್ರಾ, ರಾಜಸ್ಥಾನದ ಅಜೈತಾ ಶಾ ಮತ್ತು ಸಾಗರದ ಶಿಲ್ಪಿ ಸೋನಿ ಅವರು ಪ್ರಧಾನಿಯ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಮಹಿಳಾ ದಿನದಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಎಲಿನಾ ಮಿಶ್ರಾ ಮತ್ತು ಶಿಲ್ಪಿ ಸೋನಿ :

ಎಲಿನಾ ಮಿಶ್ರಾ ಮತ್ತು ಶಿಲ್ಪಿ ಸೋನಿ ಅವರು ವಿಜ್ಞಾನಿಗಳಾಗಿದ್ದಾರೆ. ಎಲಿನಾ ಮಿಶ್ರಾ ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ (BARC) ಪರಮಾಣು ವಿಜ್ಞಾನಿಯಾಗಿದ್ದಾರೆ. ಶಿಲ್ಪಿ ಸೋನಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ಬಾಹ್ಯಾಕಾಶ ವಿಜ್ಞಾನಿಯಾಗಿದ್ದಾರೆ. ಇವರು ಮಹಿಳಾ ದಿನಾಚರಣೆಯಂದು ಪ್ರಧಾನಿ ಮೋದಿಯವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ʼಮಹಿಳಾ ದಿನದಂದು ಪ್ರಧಾನ ಮಂತ್ರಿಯವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ನಮಗೆ ಸಂತೋಷವಾಗಿದೆʼ ಎಂದು ಅವರು ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.

ಅಜೈತಾ ಶಾ:

ಫ್ರಾಂಟಿಯರ್ ಮಾರ್ಕೆಟ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಅಜೈತಾ ಶಾ ಅವರು 35,000ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಮೂಲಕ ಗ್ರಾಮೀಣ ಉದ್ಯಮಶೀಲತೆಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಇದರಿಂದಾಗಿ ಅವರಿಗೆ ಪ್ರಧಾನಿಯ ಎಕ್ಸ್ ಖಾತೆಯಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ವೈಶಾಲಿ ರಮೇಶಬಾಬು:

ಆರನೇ ವಯಸ್ಸಿನಿಂದ ಚೆಸ್ ಆಡುತ್ತಿರುವ ವೈಶಾಲಿ ʼಗ್ರ್ಯಾಂಡ್ ಮಾಸ್ಟರ್’ ಪಟ್ಟ ಪಡೆದ ಭಾರತದ ಮೂರನೇ ಆಟಗಾರ್ತಿ. ಇವರು ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರ ಸಹೋದರಿಯಾಗಿದ್ದಾರೆ. ಗ್ರ್ಯಾಂಡ್ ಮಾಸ್ಟರ್ ಆದ ವಿಶ್ವದ ಮೊದಲ ಸೋದರ–ಸೋದರಿ ಜೋಡಿ ಎಂಬ ಖ್ಯಾತಿಯನ್ನು ಪಡೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಹಿಳೆಯರಿಗೆ ತಮ್ಮ ಕನಸುಗಳನ್ನು ಮುಂದುವರಿಸಲು ಪ್ರೋತ್ಸಾಹಿಸುವ ಸಲುವಾಗಿ ಅವರು ಪ್ರಬಲ ಸಂದೇಶವನ್ನು ರವಾನಿಸಿದರು.

ಅನಿತಾ ದೇವಿ:

ʼಬಿಹಾರದ ಮಶ್ರೂಮ್ ಲೇಡಿʼ ಎಂದು ಕರೆಯಲ್ಪಡುವ ಅನಿತಾ ದೇವಿ ಅವರು 2016ರಲ್ಲಿ ಮಾಧೋಪುರ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪೆನಿಯನ್ನು ಸ್ಥಾಪಿಸಿದರು. ಅಣಬೆ ಕೃಷಿ ಮೂಲಕ ಅವರು ನೂರಾರು ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದಾರೆ, ಆರ್ಥಿಕ ಸ್ವಾತಂತ್ರ್ಯ ಮತ್ತು ಆರ್ಥಿಕ ಸಬಲೀಕರಣಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

ʼಇಂದು ನಾನು ಅಣಬೆ ಉತ್ಪಾದನೆಯ ಮೂಲಕ ನಾನು ನನ್ನ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸುತ್ತಿದ್ದೇನೆ. ಇದಲ್ಲದೆ ನೂರಾರು ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಿದ್ದೇನೆ. ಈಗ ನನ್ನ ಕಂಪೆನಿಯು ರಸಗೊಬ್ಬರ, ಬೀಜಗಳು ಮತ್ತು ಕೀಟನಾಶಕಗಳಂತಹ ಅಗತ್ಯ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ರೈತರಿಗೆ ಒದಗಿಸುತ್ತದೆ. ಇಂದು ಈ ಸಂಸ್ಥೆಯಲ್ಲಿ ದುಡಿಯುತ್ತಿರುವ ನೂರಾರು ಮಹಿಳೆಯರು ಜೀವನೋಪಾಯದ ಜೊತೆಗೆ ಸ್ವಾಭಿಮಾನದ ಬದುಕನ್ನು ನಡೆಸುತ್ತಿದ್ದಾರೆ ಎಂದು ಅವರು ಪ್ರಧಾನಿಯ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಡಾ. ಅಂಜಲೀ ಅಗರ್‌ವಾಲ್‌:

ಡಾ. ಅಂಜಲೀ ಅಗರ್‌ವಾಲ್‌ ಅವರು ಸಮರ್ಥಮ್ ಸೆಂಟರ್ ಫಾರ್ ಯೂನಿವರ್ಸಲ್ ಆಕ್ಸೆಸಿಬಿಲಿಟಿಯ ಸಂಸ್ಥಾಪಕರಾಗಿದ್ದಾರೆ. ಇವರ ಸಾಧನೆಯನ್ನು ಪರಿಗಣಿಸಿ ಪ್ರಧಾನಿಯ ಎಕ್ಸ್ ಖಾತೆಯಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News