ಯುದ್ಧ, AI ಅಪಾಯದಿಂದಾಗಿ ವಿಶ್ವ ವ್ಯವಸ್ಥೆ ಕುಸಿತದ ಅಂಚಿನಲ್ಲಿ: ಆಮ್ನೆಸ್ಟಿ ಕಳವಳ

Update: 2024-04-24 17:12 GMT

ಲಂಡನ್: ಅನೇಕ ರಂಗಗಳಲ್ಲಿ ಉಲ್ಬಣಿಸಿರುವ ಸಂಘರ್ಷ ಮತ್ತು ಕೃತಕ ಬುದ್ಧಿಮತ್ತೆ(ಎಐ)ಯ ತ್ವರಿತ ಮತ್ತು ಅನಿಯಂತ್ರಿತ ಏರಿಕೆಯಿಂದ ಎರಡನೆಯ ವಿಶ್ವಯುದ್ಧದ ನಂತರದ ಜಾಗತಿಕ ವ್ಯವಸ್ಥೆ ಪತನದ ಅಂಚಿನಲ್ಲಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಬುಧವಾರ ಕಳವಳ ವ್ಯಕ್ತಪಡಿಸಿದೆ.

ಕಳೆದ 12 ತಿಂಗಳಲ್ಲಿ ನಾವು ನೋಡುತ್ತಿರುವ ಘಟನೆಗಳು ಅಂತರಾಷ್ಟ್ರೀಯ ಜಾಗತಿಕ ವ್ಯವಸ್ಥೆಯು ಕುಸಿತದ ಅಂಚಿನಲ್ಲಿರುವುದನ್ನು ಸೂಚಿಸುತ್ತಿವೆ ಎಂದು ಆಮ್ನೆಸ್ಟಿಯ ಪ್ರಧಾನ ಕಾರ್ಯದರ್ಶಿ ಆ್ಯಗ್ನೆಸ್ ಕ್ಯಾಲಮರ್ಡ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಆಮ್ನೆಸ್ಟಿ ಇಂಟರ್‍ನ್ಯಾಷನಲ್‍ನ `ಜಾಗತಿಕ ಮಾನವ ಹಕ್ಕುಗಳ ಪರಿಸ್ಥಿತಿ' ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ` ನಿರ್ದಿಷ್ಟವಾಗಿ ಕಳೆದ 6 ತಿಂಗಳಲ್ಲಿ ಗಾಝಾದಲ್ಲಿ ನಡೆಸಿದ ಹಲವು ಉಲ್ಲಂಘನೆಗಳ ವಿರುದ್ಧ ಇಸ್ರೇಲ್ ಅಧಿಕಾರಿಗಳನ್ನು ಅಮೆರಿಕ ರಕ್ಷಿಸುತ್ತಿದೆ. ಈಗಿನ ತುರ್ತು ಅಗತ್ಯವಾಗಿರುವ ಕದನ ವಿರಾಮದ ವಿರುದ್ಧ ತನ್ನ ವೀಟೊ ಅಧಿಕಾರ ಬಳಸುವ ಮೂಲಕ ಅಮೆರಿಕವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಒಮ್ಮತದ ನಿಲುವನ್ನು ತಡೆಹಿಡಿಯುತ್ತಿದೆ' ಎಂದರು.

ಗಾಝಾದ ಗಡಿಗೆ ಹೊಂದಿಕೊಂಡಿರುವ ಇಸ್ರೇಲ್ ಸಮುದಾಯದವರ ಮೇಲೆ ಹಮಾಸ್ ಭಯಾನಕ ಅಪರಾಧಗಳನ್ನು ಎಸಗಿದೆ. ಆದರೆ ಇದಕ್ಕೆ ಇಸ್ರೇಲ್ `ಸಾಮೂಹಿಕ ಶಿಕ್ಷೆಯ' ಕಾರ್ಯಾಚರಣೆಯೊಂದಿಗೆ ಪ್ರತಿಕ್ರಿಯಿಸಿದೆ. ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿದ ಉದ್ದೇಶಪೂರ್ವಕ, ವಿವೇಚನೆಯಿಲ್ಲದ ಬಾಂಬ್ ದಾಳಿಯ, ಮಾನವೀಯ ನೆರವಿನ ನಿರಾಕರಣೆಯ ಕಾರ್ಯಾಚರಣೆ ಇದಾಗಿದೆ ಎಂದು ವರದಿ ಹೇಳಿದೆ.

ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಗಾಝಾವು ಈಗ ಎರಡನೇ ಮಹಾಯುದ್ಧದ ಬಳಿಕದ ಜಾಗತಿಕ ವ್ಯವಸ್ಥೆಯನ್ನು ರೂಪಿಸಿದ ಹಲವರ ನೈತಿಕ ವೈಫಲ್ಯದ ಸಂಕೇತವಾಗಿದೆ. ಈ ಅಪರಾಧದಲ್ಲಿ ಇಸ್ರೇಲ್‍ನ ಮಿತ್ರರು, ಅವರಿಗೆ ಶಸ್ತ್ರಾಸ್ತ್ರ ಒದಗಿಸುವವರು ಸಹಭಾಗಿಗಳಾಗಿದ್ದಾರೆ. ಅಂತರಾಷ್ಟ್ರೀಯ ಸಮುದಾಯವೂ ಸೂಕ್ತ ನಿರ್ಧಾರ ಕೈಗೊಳ್ಳದೆ ನಿಷ್ಕ್ರಿಯವಾಗಿದೆ. ರಶ್ಯ ಮತ್ತು ಚೀನಾ ಸೇರಿದಂತೆ ಇತರ ಪ್ರಬಲ ಶಕ್ತಿಗಳು ಕೂಡಾ 1948ರ ನಿಯಮಾಧಾರಿತ ಜಾಗತಿಕ ವ್ಯವಸ್ಥೆಯನ್ನು ಅಪಾಯಕ್ಕೆ ಒಡ್ಡುವ ಇಚ್ಛೆಯನ್ನು ಪ್ರದರ್ಶಿಸುತ್ತಿವೆ ಎಂದು ಆ್ಯಗ್ನೆಸ್ ಕ್ಯಾಲಮರ್ಡ್ ಹೇಳಿದ್ದಾರೆ.

ಉಕ್ರೇನ್‍ನಲ್ಲಿ ರಶ್ಯ ಮುಂದುವರಿಸಿರುವ ಪೂರ್ಣ ಪ್ರಮಾಣದ ಆಕ್ರಮಣ, ಯುದ್ಧಕೈದಿಗಳ ವಿರುದ್ಧ ಚಿತ್ರಹಿಂಸೆ, ದೌರ್ಜನ್ಯದ ಪ್ರಕರಣಗಳನ್ನು ವರದಿ ಉಲ್ಲೇಖಿಸಿದ್ದು ಮ್ಯಾನ್ಮಾರ್‍ನ ಮಿಲಿಟರಿಯನ್ನು ರಕ್ಷಿಸುವ ಮೂಲಕ ಚೀನಾವು ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ಹೇಳಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆಯಾಗಬೇಕು. ಭಾರೀ ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುವ ಪ್ರಕರಣಗಳಲ್ಲಿ ವೀಟೊ ಅಧಿಕಾರ ನಿರಾಕರಿಸಬೇಕು ಎಂದು ಆಮ್ನೆಸ್ಟಿ ಆಗ್ರಹಿಸಿದೆ.

AI ತಂತ್ರಜ್ಞಾನ ನಿಯಂತ್ರಣ ಅಗತ್ಯ

AI(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಬೆಳವಣಿಗೆಯೂ ಕಳವಳಕ್ಕೆ ಕಾರಣವಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸಕ್ರಿಯಗೊಳಿಸಲು, ತಪ್ಪು ಮಾಹಿತಿಯನ್ನು ಹರಡಲು ಎಐ ದುರ್ಬಳಕೆಯಾಗುತ್ತಿದೆ. ಸಶಸ್ತ್ರ ಸಂಘರ್ಷದ ಸಮಯದಲ್ಲೂ ಈ ಬೆದರಿಕೆಯನ್ನು ಕನಿಷ್ಟಗೊಳಿಸುವಲ್ಲಿ ಬೃಹತ್ ತಂತ್ರಜ್ಞಾನ ಸಂಸ್ಥೆಗಳು ನಿರ್ಲಕ್ಷ್ಯ ವಹಿಸಿವೆ ಎಂದು ಆಮ್ನೆಸ್ಟಿ ಆರೋಪಿಸಿದೆ.

2024ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸೇರಿದಂತೆ ಹಲವು ಪ್ರಮುಖ ಚುನಾವಣೆಗಳು ಇರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಬಹುದು ಎಂದು ವರದಿ ಎಚ್ಚರಿಸಿದ್ದು, ಎಐ ತಂತ್ರಜ್ಞಾನದಿಂದ ಉಂಟಾಗುವ ಅಪಾಯಗಳು ಮತ್ತು ಹಾನಿಗಳನ್ನು ಪರಿಹರಿಸಲು ಮತ್ತು ನಿಯಂತ್ರಿಸಲು ದೃಢವಾದ ಶಾಸಕಾಂಗ ಮತ್ತು ನಿಯಂತ್ರಕ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಕ್ಕೆ ಕರೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News