ಕುಸ್ತಿ ಒಕ್ಕೂಟ ಅಮಾನತುಗೊಂಡಿಲ್ಲ, ಗೊಂದಲ ಹಬ್ಬಿಸಲು ಚಟುವಟಿಕೆ ಸ್ಥಗಿತಗೊಳಿಸಲಾಗಿದೆ: ಪ್ರಿಯಾಂಕಾ ಗಾಂಧಿ ಆರೋಪ

Update: 2023-12-25 17:42 GMT

ಪ್ರಿಯಾಂಕಾ ಗಾಂಧಿ | Photo: PTI 

ಹೊಸದಿಲ್ಲಿ: ಭಾರತದ ಕುಸ್ತಿ ಒಕ್ಕೂಟ (WFI) ಅಮಾನತಿನ ಬಗ್ಗೆ ಕೇಂದ್ರ ಸರಕಾರ ಸುಳ್ಳು ಸುದ್ದಿ ಹರಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಆರೋಪಿಸಿದ್ದಾರೆ.

ಗೊಂದಲವನ್ನು ಹರಡಲು ಅದರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಹಾಗೂ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಒಳಗಾಗಿರುವ ಬಿಜೆಪಿ ಸಂಸದನಿಗೆ ರಕ್ಷಣೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ಯಾವಾಗಲೂ ಆರೋಪಿಗಳನ್ನು ರಕ್ಷಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳು ಬೆಳಕಿಗೆ ಬಂದಾಗ ಸಂತ್ರಸ್ತರಿಗೆ ಕಿರುಕುಳ ನೀಡುತ್ತದೆ ಎಂದು ಅವರು ಆರೋಪಿಸಿದ್ದಾರೆ.

‘‘ಕುಸ್ತಿ ಒಕ್ಕೂಟವನ್ನುಅಮಾನತು ಗೊಳಿಸಿರುವ ಕುರಿತು ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ. ಆದರೆ, ಒಕ್ಕೂಟವನ್ನು ಅಮಾನತುಗೊಳಿಸಿಲ್ಲಿ. ಅದರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಗೊಂದಲ ಹರಡಿ ಆರೋಪಿಯನ್ನು ರಕ್ಷಿಸಬಹುದು. ನೊಂದ ಮಹಿಳೆಯರ ಧ್ವನಿಯನ್ನು ಹತ್ತಿಕ್ಕಲು ಅವರು ಈ ಮಟ್ಟಕ್ಕೆ ಇಳಿಯಬೇಕೇ?’’ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

‘‘ದೇಶ ಹೆಮ್ಮೆಪಟ್ಟುಕೊಳ್ಳುವಂತೆ ಸಾಧನೆ ಮಾಡಿದ ಜನಪ್ರಿಯ ಕುಸ್ತಿಪಟುಗಳು ಬಿಜೆಪಿ ಸಂಸದನ ಲೈಂಗಿಕ ಕಿರುಕುಳದ ಬಗ್ಗೆ ಆರೋಪಿಸಿದ್ದಾರೆ. ಆದರೆ, ಕೇಂದ್ರ ಸರಕಾರ ಆರೋಪಿಯ ಪರ ನಿಂತಿತು. ಸಂತ್ರಸ್ತರಿಗೆ ಕಿರುಕುಳ ನೀಡಿತು. ಆರೋಪಿಗೆ ಕೊಡುಗೆ ನೀಡಿತು. ಪ್ರಧಾನಿ ಹಾಗೂ ಗೃಹ ಸಚಿವರು ಕೂಡ ಈ ವಿಷಯಕ್ಕೆ ಗಮನ ನೀಡಲಿಲ್ಲ’’ ಎಂದು ಅವರು ಹೇಳಿದರು.

ಪ್ರತಿಭಟನೆ ಹಿಂದೆ ಪಡೆಯುವ ಸಂದರ್ಭ ಮಹಿಳೆಯರಿಗೆ ನೀಡಲಾದ ಭರವಸೆಯನ್ನು ಗೃಹ ಸಚಿವರು ಮರೆತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News