'ಪ್ರಶಸ್ತಿ ಹಿಂದಿರುಗಿಸುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳಿ': ಪ್ರಶಸ್ತಿ ವಾಪಸ್ ತಡೆಯಲು ಸಂಸದೀಯ ಸ್ಥಾಯಿ ಸಮಿತಿಯಿಂದ ಶಿಫಾರಸು!
ಹೊಸದಿಲ್ಲಿ: ತಾವು ಪ್ರತಿಭಟನೆಯ ರೂಪದಲ್ಲಿ ಯಾವುದೇ ಹಂತದಲ್ಲಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ ಎಂದು ಹೇಳುವ ಮುಚ್ಚಳಿಕೆಗೆ ಸರಕಾರವು ಪ್ರಶಸ್ತಿ ವಿಜೇತರಿಂದ ಸಹಿ ಹಾಕಿಸಿಕೊಳ್ಳಬೇಕು ಎಂದು ಸಂಸದೀಯ ಸಮಿತಿಯೊಂದು ಸೋಮವಾರ ಶಿಫಾರಸು ಮಾಡಿದೆ.
2015ರಲ್ಲಿ, ಖ್ಯಾತ ಸಾಹಿತಿ ನಯನತಾರಾ ಸಹಗಲ್ ಸೇರಿದಂತೆ 39 ಕಲಾವಿದರು ತಮ್ಮ ಪ್ರಶಸ್ತಿಗಳನ್ನು ಸಾಹಿತ್ಯ ಅಕಾಡೆಮಿಗೆ ಹಿಂದಿರುಗಿಸಿದ್ದರು ಎಂದು ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಮೇಲಿನ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.
ಕೇಂದ್ರ ಸರಕಾರವು ಭಿನ್ನಮತವನ್ನು ಹತ್ತಿಕ್ಕುತ್ತಿದೆ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿದೆ ಮತ್ತು ಧಾರ್ಮಿಕ ಉದ್ವಿಗ್ನತೆಗೆ ತುಪ್ಪ ಸುರಿಯುತ್ತಿದೆ ಎಂದು ಆರೋಪಿಸಿ ಕಲಾವಿದರು ತಮ್ಮ ಪ್ರಶಸ್ತಿಗಳನ್ನು ಅಂದು ಹಿಂದಿರುಗಿಸಿದ್ದರು. 2015 ಆಗಸ್ಟ್ 30ರಂದು ನಡೆದ ವಿಚಾರವಾದಿ ಎಮ್.ಎಮ್. ಕಲಬುರ್ಗಿಯ ಹತ್ಯೆಯ ವಿರುದ್ಧವೂ ಅವರು ಪ್ರತಿಭಟಿಸಿದ್ದರು.
ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡಿದ ಬಳಿಕವೂ ಅಕಾಡೆಮಿಯೊಂದಿಗಿನ ಸಂಬಂಧವನ್ನು ಮುಂದುವರಿಸಿರುವ ಪ್ರಶಸ್ತಿ ವಿಜೇತರನ್ನು ತನ್ನ ಸೋಮವಾರದ ವರದಿಯಲ್ಲಿ ಸಂಸದೀಯ ಸ್ಥಾಯಿ ಸಮಿತಿಯು ಪ್ರಶ್ನಿಸಿದೆ.
‘‘ಪ್ರಶಸ್ತಿ ವಾಪಸ್ ಮುಂತಾದ ಅನುಚಿತ ಘಟನೆಗಳು ಇತರ ಪ್ರಶಸ್ತಿ ವಿಜೇತರ ಸಾಧನೆಗಳನ್ನು ಕಡೆಗಣಿಸುತ್ತವೆ ಹಾಗೂ ಪ್ರಶಸ್ತಿಗಳ ಒಟ್ಟಾರೆ ಘನತೆ ಮತ್ತು ಪ್ರತಿಷ್ಠೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ’’ ಎಂದು ವೈಎಸ್ಆರ್ ಕಾಂಗ್ರೆಸ್ನ ವಿ. ವಿಜಯ್ಸಾಯಿ ರೆಡ್ಡಿ ನೇತೃತ್ವದ ಸ್ಥಾಯಿ ಸಮಿತಿ ಹೇಳಿದೆ. ಈ ಸಮಿತಿಯಲ್ಲಿ 10 ರಾಜ್ಯಸಭಾ ಸದಸ್ಯರು ಮತ್ತು 31 ಲೋಕಸಭಾ ಸದಸ್ಯರು ಸದಸ್ಯರಾಗಿದ್ದಾರೆ.
‘‘ರಾಜಕೀಯಕ್ಕೆ ಅವಕಾಶವಿಲ್ಲ. ಹಾಗಾಗಿ, ಪ್ರಶಸ್ತಿಯೊಂದನ್ನು ನೀಡುವಾಗಲೆಲ್ಲ ಪ್ರಶಸ್ತಿ ವಿಜೇತನ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು. ಯಾಕೆಂದರೆ ಅವರು ಮುಂದೆ ರಾಜಕೀಯ ಕಾರಣಗಳಿಗಾಗಿ ಅದನ್ನು ವಾಪಸ್ ಮಾಡಬಾರದು. ಹಾಗೆ ಮಾಡುವುದು ದೇಶಕ್ಕೆ ಅವಮಾನ ಮಾಡಿದಂತೆ. ಪ್ರಶಸ್ತಿ ವಿಜೇತರ ಪಟ್ಟಿಯನ್ನು ಅಂತಿಮಗೊಳಿಸುವ ಮೊದಲು, ಕಿರುಪಟ್ಟಿಯಲ್ಲಿ ಹೆಸರು ಇರುವ ವ್ಯಕ್ತಿಗಳಿಂದ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡುತ್ತದೆ’’ ಎಂದು ವರದಿ ಹೇಳಿದೆ.
ಶಿಫಾರಸಿಗೆ ಓರ್ವ ಸದಸ್ಯರಿಂದ ಆಕ್ಷೇಪ
ಆದರೆ, ಪ್ರಶಸ್ತಿ ಸ್ವೀಕರಿಸುವ ಮೊದಲು ಪ್ರಶಸ್ತಿ ವಿಜೇತರಿಂದ ಮುಚ್ಚಳಿಕೆ ಬರೆಸಿಕೊಳ್ಳಬೇಕು ಎಂಬ ಶಿಫಾರಸಿಗೆ ಸ್ಥಾಯಿ ಸಮಿತಿಯ ಸದಸ್ಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬದಲಿಗೆ, ಇಂಥ ಪ್ರತಿಭಟನೆಗಳಿಗೆ ಕಾರಣವಾಗುವ ವಿಷಯಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸಮಿತಿಯು ಸರಕಾರವನ್ನು ಒತ್ತಾಯಿಸಬೇಕು ಎಂದು ಅವರು ಹೇಳಿದ್ದಾರೆ.
‘‘ಭಾರತ ಪ್ರಜಾಸತ್ತಾತ್ಮಕ ದೇಶ. ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೂ ವಾಕ್ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ನೀಡಿದೆ. ಯಾವುದೇ ವಿಧದಲ್ಲಿ ಪ್ರತಿಭಟಿಸುವ ಸ್ವಾತಂತ್ರವನ್ನೂ ನೀಡಿದೆ. ಪ್ರಶಸ್ತಿಗಳನ್ನು ವಾಪಸ್ ಕೊಡುವುದು ಪ್ರತಿಭಟನೆಯ ಒಂದು ವಿಧವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.