ಏರ್ ಇಂಡಿಯಾದೊಂದಿಗಿನ ʼಕೆಟ್ಟ ಅನುಭವʼ ಹಂಚಿಕೊಂಡ ಯೋಗೇಂದ್ರ ಯಾದವ್

Update: 2024-11-11 09:46 GMT

ಯೋಗೇಂದ್ರ ಯಾದವ್ (X/YogendraYadav)

ಹೊಸದಿಲ್ಲಿ: ಕಾಠ್ಮಂಡುಗೆ ಪ್ರಯಾಣಿಸುವಾಗ ನಡೆದ ತಪಾಸಣೆಯ ಸಂದರ್ಭದಲ್ಲಿ ತಮಗಾದ ಕೆಟ್ಟ ಅನುಭವದ ಕುರಿತು ರಾಜಕೀಯ ವಿಶ್ಲೇಷಕ, ಸ್ವರಾಜ್ ಇಂಡಿಯಾದ ನಾಯಕ ಯೋಗೇಂದ್ರ ಯಾದವ್ ದೂರಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ತಮ್ಮ ಅನುಭವವನ್ನು ಅವರು ವಿವರಿಸಿದ್ದು, ಅದಕ್ಕೆ ಪ್ರತಿಯಾಗಿ ವಿಮಾನ ಯಾನ ಸಂಸ್ಥೆಯು ಅವರು ಕ್ಷಮಾಪಣೆ ಕೋರಿದೆ.

“ಸಾರ್ವಜನಿಕ ವೇದಿಕೆಯಲ್ಲಿ ನನ್ನ ವೈಯಕ್ತಿಕ ಗೋಳಾಟಗಳನ್ನು ಹಾಕುವುದನ್ನು ನಾವು ದ್ವೇಷಿಸುತ್ತೇನೆ. ಆದರೆ, ಇಂದಿನ ಏರ್ ಇಂಡಿಯಾದೊಂದಿಗಿನ ಅನುಭವವನ್ನು ದಾಖಲಿಸಲು ಯೋಗ್ಯವಾಗಿದೆ. ಇದರಿಂದ ಇತರರಿಗೆ ಅನುಕೂಲವಾಗಬಹುದು. ಇತ್ತೀಚೆಗೆ ಏರ್ ಇಂಡಿಯಾದೊಂದಿಗೆ ಇತರರಿಗೂ ಇಂತಹ ಅನುಭವವಾಗಿದೆಯೆ?” ಎಂದು ಅವರು ಪ್ರಶ್ನಿಸಿದ್ದಾರೆ.

“ನಾನು ಹಾಗೂ ನನ್ನ ಪತ್ನಿ ವಿಮಾನ ಸಂಖ್ಯೆ ಎಐ 213ಯಲ್ಲಿ ಪ್ರಯಾಣಿಸಲು ಹೊರಟಾಗ ಈ ಸಮಸ್ಯೆಗಳನ್ನು ಎದುರಿಸಬೇಕಾಯಿತು. ವಿಮಾನದ ಸಮಯದಲ್ಲಿ ನಾಲ್ಕು ಗಂಟೆಗಳ ಕಾಲ ಬದಲಾವಣೆ (ನಾಲ್ಕು ದಿನಗಳ ಮುಂಚಿತವಾಗಿ ಸೂಚನೆ ನೀಡಲಾಗಿತ್ತು). ನಮ್ಮ ಪ್ರಯಾಣ ದರ್ಜೆಯನ್ನು ತಗ್ಗಿಸಲಾಗಿತ್ತು. (ಯಾವುದೇ ಮಾಹಿತಿಯಿಲ್ಲ; ಮರುಪಾವತಿಯ ಭರವಸೆ ಇಲ್ಲ). ಪದೇ ಪದೇ ಪ್ರಯತ್ನಿಸಿದರೂ ಅಂತರ್ಜಾಲ ಪರಿಶೀಲನೆಗೆ ಅವಕಾಶವಿಲ್ಲ. (ನಿಮ್ಮ ಕಾಯ್ದಿರಿಸುವಿಕೆ ಅನರ್ಹಗೊಂಡಿರುವುದರಿಂದ ಅಂತರ್ಜಾಲ ಪರಿಶೀಲನೆ ಸಾಧ್ಯವಿಲ್ಲ). ವಿಮಾನ ನಿಲ್ದಾಣ ತಪಾಸಣೆ: ನಮ್ಮದಲ್ಲದ ತಪ್ಪಿಗೆ ಮೂರು ವಿಭಿನ್ನ ಕೌಂಟರ್ ಗಳಿಗೆ ಅಲೆಯುವಂತೆ ಮಾಡಲಾಯಿತು” ಎಂದೂ ಬರೆದುಕೊಂಡಿದ್ದಾರೆ.

ಇದಲ್ಲದೆ, ಒರಟು ಗ್ರಾಹಕ ಸೇವಾ ಸಿಬ್ಬಂದಿಗಳಿಂದ ನಾನು ವಿಮಾನ ನಿಲ್ದಾಣ ಪೂರ್ತಿ ಅಲೆಯುವಂತಾಯಿತು. ಹಾಗೂ ಕೌಂಟರ್ ಮೇಲ್ವಿಚಾರಕರು ಮಧ್ಯಪ್ರವೇಶಿಸುವವರೆಗೂ ನನಗೆ ನನ್ನ ಆಸನವನ್ನು ಮಂಜೂರು ಮಾಡಲು ನಿರಾಕರಿಸಲಾಯಿತು ಎಂದೂ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಮಾಡಿದ ಸುಮಾರು ಒಂದೂವರೆ ಗಂಟೆಯ ನಂತರ, ತಮ್ಮ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಿರುವ ಏರ್ ಇಂಡಿಯಾ, “ಮಾನ್ಯ ಯಾದವ್ ಅವರೆ, ನಿಮಗಾಗಿರುವ ತೊಂದರೆಗೆ ನಾವು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇವೆ. ನಾವು ಈ ಸಮಸ್ಯೆ ಕುರಿತು ಆದ್ಯತೆಯ ಮೇರೆಗೆ ಪರಿಶೀಲಿಸುತ್ತಿದ್ದೇವೆ ಹಾಗೂ ಆದಷ್ಟೂ ಶೀಘ್ರ ನಿಮಗೆ ಮಾಹಿತಿ ನೀಡುತ್ತೇವೆ” ಎಂದು ಪ್ರತಿಕ್ರಿಯಿಸಿದೆ.

ಇದಕ್ಕೂ ಮುನ್ನ, ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಹಾಗೂ ನಟಿ ತಿಲೋತ್ತಮ ಶೋಮ್ ಕೂಡಾ ಏರ್ ಇಂಡಿಯಾದ ಕಳಪೆ ಪ್ರಯಾಣಾನುಭವದ ಕುರಿತು ಪ್ರತಿಕ್ರಿಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News