ನೀವು ಪ್ರಧಾನಿಯನ್ನು ತುಂಬಾ ಸಮರ್ಥಿಸಿಕೊಳ್ಳುತ್ತೀರಿ: ರಾಜ್ಯಸಭಾ ಸಭಾಪತಿಗೆ ತಿಳಿಸಿದ ಮಲ್ಲಿಕಾರ್ಜುನ ಖರ್ಗೆ

Update: 2023-08-03 08:00 GMT

ಹೊಸದಿಲ್ಲಿ: ಮಣಿಪುರದ ಹಿಂಸಾಚಾರ ಕುರಿತ ಚರ್ಚೆಗೆ ಸದನಕ್ಕೆ ಬರುವಂತೆ ಪ್ರಧಾನಿಗೆ ನಿರ್ದೇಶನ ನೀಡಲು ನಿರಾಕರಿಸಿದ್ದಕ್ಕೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಭಾಪತಿ ಜಗದೀಪ್ ಧನಖರ್ ಗುರುವಾರ ಪರಸ್ಪರ ಮಾತಿನ ಚಕಮಕಿ ನಡೆಸಿದರು.

ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲು ಪ್ರತಿಪಕ್ಷಗಳು ಹಾಗೂ ಸರಕಾರ ಒಪ್ಪಿಕೊಂಡಿವೆ. ಮಧ್ಯಾಹ್ನ 1 ಗಂಟೆಗೆ ಪಕ್ಷಗಳ ನಾಯಕರನ್ನು ತನ್ನ ಚೇಂಬರ್ ಗೆ ಕರೆಸುತ್ತೇನೆ ಮತ್ತು "ಸಮಯದ ಮಿತಿಯನ್ನು ಲೆಕ್ಕಿಸದೆ ಮತ್ತು ಇತರ ನಿರ್ಬಂಧಗಳನ್ನು ಲೆಕ್ಕಿಸದೆ ಮಣಿಪುರದ ಚರ್ಚೆಗೆ ಅವಕಾಶ ಕಲ್ಪಿಸುತ್ತೇನೆ" ಎಂದು ಧಂಖರ್ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸದನವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡುವಂತೆ ಖರ್ಗೆ ಸೂಚಿಸಿದರು.

“ಸರ್, ನೀವು ಇಂತಹ ಸಣ್ಣ ವಿನಂತಿಗಳನ್ನು ಒಪ್ಪುವುದಿಲ್ಲ. ಪ್ರಧಾನಿ ಬರುವಂತೆ ನಾವು ಕೇಳಿದ್ದೆವು, ಅದಕ್ಕೂ ನೀವು ಒಪ್ಪಲಿಲ್ಲ. ನೀವು ಪ್ರಧಾನಿಯನ್ನು ತುಂಬಾ ಸಮರ್ಥಿಸುತ್ತಿದ್ದೀರಿ...  ನನಗೆ ಅರ್ಥವಾಗುತ್ತಿಲ್ಲ'' ಎಂದು ಖರ್ಗೆ ಹೇಳಿದರು.

ಖರ್ಗೆಯವರಿಗೆ ಪ್ರತಿಕ್ರಿಯಿಸಿದ ಧನಖರ್, “ನಮ್ಮ ಪ್ರಧಾನಿಯನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ.ಅವರು ಅಮೆರಿಕದ ಸೆನೆಟ್ ಹಾಗೂ ಕಾಂಗ್ರೆಸ್ ನಂತಹ ಜಾಗತಿಕ ವೇದಿಕೆಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ... ಪ್ರತಿಯೊಬ್ಬ ಭಾರತೀಯನು ಅವರ ಬಗ್ಗೆ ಹೆಮ್ಮೆಪಡಬೇಕು ... ನೀವು ಕಠಿಣ ವಾಸ್ತವದಿಂದ ಏಕೆ ನುಣುಚಿಕೊಳ್ಳುತ್ತಿದ್ದೀರಿ, ಭಾರತವು ಹಿಂದೆಂದಿಗಿಂತಲೂ ಮೇಲಕ್ಕೆ ಏರುತ್ತಿದೆ? ಏರಿಕೆ ತಡೆಯಲಾಗದು... ಎಲ್ಲರೂ ಅದಕ್ಕೆ ಕೊಡುಗೆ ನೀಡಿದ್ದಾರೆ. ನಾನು ಯಾರನ್ನೂ ರಕ್ಷಿಸುವ ಅಗತ್ಯವಿಲ್ಲ. ನಾನು ಸಂವಿಧಾನವನ್ನು ರಕ್ಷಿಸುವ ಅಗತ್ಯವಿದೆ. ನಾನು ನಿಮ್ಮ ಹಕ್ಕುಗಳನ್ನು ರಕ್ಷಿಸುವ ಅಗತ್ಯವಿದೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News