ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಸರ್ವ ಕ್ರಮ: ಸರ್ವಪಕ್ಷ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ
ಹೊಸದಿಲ್ಲಿ, ಜೂ. 24: ಪ್ರಧಾನಿ ನರೇಂದ್ರ ಮೋದಿಯ ಸೂಚನೆಯ ಮೇರೆಗೆ ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚಿಸುವುದಕ್ಕಾಗಿ ಶನಿವಾರ ಇಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಮಣಿಪುರದಲ್ಲಿ ಹಿಂಸಾಚಾರ ಆರಂಭವಾದಾಗಿನಿಂದ ‘‘ಅಲ್ಲಿಯ ಪರಿಸ್ಥಿತಿಯ ಬಗ್ಗೆ ನಾನು ಪ್ರಧಾನಿಯೊಂದಿಗೆ ಮಾತನಾಡದ ಅಥವಾ ಪ್ರಧಾನಿ ಸೂಚನೆಗಳನ್ನು ನೀಡದ ದಿನವಿಲ್ಲ ಎಂದು ಶಾ ಸಭೆಯಲ್ಲಿ ಹೇಳಿದರು ಎಂದು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ಮಣಿಪುರ ಉಸ್ತುವಾರಿ ಸಂಬೀತ್ ಪಾತ್ರ ಹೇಳಿದರು.
ಮಣಿಪುರ ಪರಿಸ್ಥಿತಿಯನ್ನು ಕೇಂದ್ರ ಸರಕಾರ ನಿಭಾಯಿಸಿದ ರೀತಿಯನ್ನು ಪ್ರತಿಪಕ್ಷಗಳು ಟೀಕಿಸಿವೆ ಹಾಗೂ ಈ ವಿಷಯದಲ್ಲಿ ಪ್ರಧಾನಿಯ ‘‘ವೌನ’’ವನ್ನು ಅವು ಪ್ರಶ್ನಿಸಿವೆ.
ಮಣಿಪುರದ ಹಿಂಸಾಚಾರದಲ್ಲಿ ಸುಮಾರು 120 ಮಂದಿ ಜೀವ ಕಳೆದುಕೊಂಡಿದ್ದಾರೆ ಮತ್ತು 3,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
‘‘ಪ್ರಧಾನಿಯ ಸೂಚನೆಯಂತೆ, ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಯಾಗುವಂತೆ ಮಾಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ’’ ಎಂದು ಪಾತ್ರ ಹೇಳಿದರು.
ಬಿಜೆಪಿ, ಕಾಂಗ್ರೆಸ್, ಉದ್ಧವ್ ಠಾಕ್ರೆಯ ಶಿವಸೇನೆ, ತೃಣಮೂಲ ಕಾಂಗ್ರೆಸ್, ಮಿರೆ ನ್ಯಾಶನಲ್ ಫ್ರಂಟ್, ಬಿಜೆಡಿ, ಎಡಿಎಮ್ಕೆ, ಡಿಎಮ್ಕೆ, ಆರ್ಜೆಡಿ, ಸಮಾಜವಾದಿ ಪಾರ್ಟಿ ಮತ್ತು ಆಪ್ ಸೇರಿದಂತೆ ಹಲವು ಪಕ್ಷಗಳು ಸಭೆಯಲ್ಲಿ ಭಾಗವಹಿಸಿದವು.