ಹೇಳಿಕೆಗಳಿಗೆ ಕಡಿವಾಣವಿರಲಿ
ಮಾನ್ಯರೇ,
ಇತ್ತೀಚೆಗೆ ‘ಈಗಾಗಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಅನುಭವಿಸಿದ್ದು, ಇನ್ನು ಮುಂದೆ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕು’ ಎಂದು ಜಾತಿಯ ಹೆಸರಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಆಗ್ರಹಿಸಿದ್ದು ಮುಜುಗರವನ್ನು, ಆಶ್ಚರ್ಯವನ್ನು ಉಂಟು ಮಾಡುವಂತಹುದಾಗಿದೆ.
ಸುಸಂಸ್ಕೃತಿ, ನಾಗರಿಕತೆಗಳಿಗೆ ಹೆಸರಾದ ಕನ್ನಡ ನಾಡಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂತಹ ದುರ್ದೆಸೆ ಬಂತಲ್ಲ ಎಂದೆನಿಸಿ ಖೇದವೂ ಆಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ರವರುಗಳ ಮುಂದಾಳತ್ವದಲ್ಲಿ ಕಾಂಗ್ರೆಸ್ ಪಕ್ಷ ಶ್ರಮವಹಿಸಿ ಕೋಮುವಾದಿ ಪಕ್ಷದ ಆಡಳಿತವನ್ನು ಸೋಲಿಸಿ ಸಂವಿಧಾನದ ಆಶಯದ ಪ್ರಜಾಪ್ರಭುತ್ವ ಮಾದರಿ ಸರಕಾರವನ್ನು ನೆಲೆಗೊಳಿಸಿದ್ದು ಭಾರತದ ಇತರ ರಾಜ್ಯಗಳಿಗೆ ಆದರ್ಶಪ್ರಾಯವಾಗಿದೆ. ಅವರು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಎಂಬ ಪ್ರಜ್ಞೆ ಇಟ್ಟುಕೊಂಡು ಆ ಸಾಧಿತ ಬಲವನ್ನು ಮುರಿಯದಂತೆ ಎಚ್ಚರವಹಿಸುವುದು ನಾಡಿನ ಹಿತಬಯಸುವ ಎಲ್ಲರ ಜವಾಬ್ದಾರಿಯಾಗಿದೆ.
- ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು