ಅನ್ನಾ ಸೆಬಾಸ್ಟಿಯನ್ ಸಾವಿನ ಕ್ರೌರ್ಯಕ್ಕೆ ಹೊಣೆ ಯಾರು?

Update: 2024-09-25 05:39 GMT

ಅನ್ನಾ ಸಾವಿನ ವಿಷಯದಲ್ಲಿ ಕಾರ್ಪೊರೇಟ್ ವಲಯ ಮಾತ್ರ ನಿಷ್ಕರುಣಿಯೇ ಎಂದು ಕೇಳಿಕೊಂಡರೆ, ಕಾರ್ಪೊರೇಟ್ ವಲಯದ ಜೊತೆಗೆ ಸರಕಾರದ ಹೊಣೆಗೇಡಿತನವೂ ಕಾರಣ ಎನ್ನಲೇಬೇಕಾಗಿದೆ.

ನಿರ್ಮಲಾ ಸೀತಾರಾಮನ್ ಅವರು, ಆಕೆಯ ಸಾವನ್ನು ಒತ್ತಡ ನಿಭಾಯಿಸಲಾರದ್ದರ ಪರಿಣಾಮ ಎನ್ನುವಲ್ಲಿಗೆ ತಂದು ನಿಲ್ಲಿಸಿದರೇ ಹೊರತು, ಆಕೆ ಅನುಭವಿಸಿದ ಒತ್ತಡ, ಅದಕ್ಕೆ ಕಾರಣವಾದ ಕಂಪೆನಿಯ ಕೆಲಸದ ಸಂಸ್ಕೃತಿ ಎಷ್ಟು ಕಠೋರವಾದದ್ದು ಎಂಬುದನ್ನು ಯೋಚಿಸಲೇ ಇಲ್ಲ.

ಅಂದರೆ ಸರಕಾರ ಯಾವ ರೀತಿ ಯೋಚಿಸುತ್ತದೆ ಮತ್ತು ಕೆಲಸದೊತ್ತಡದ ವೈಪರೀತ್ಯಗಳನ್ನು ಕೂಡ ಉದ್ಯೋಗಿಯ ತಲೆಗೇ ಕಟ್ಟಿ, ಹೊಣೆಯಾಗಿಸಲಾಗುತ್ತದೆ ಎಂಬುದಕ್ಕೆ ನಿರ್ಮಲಾ ಸೀತಾರಾಮನ್ ಮಾತು ಒಂದು ಉದಾಹರಣೆ.

ಪುಣೆಯ ಆರ್ನ್ಸ್ಟ್ ಆ್ಯಂಡ್ ಯಂಗ್ (ಇವೈ) ಕಂಪೆನಿಯಲ್ಲಿ ಲೆಕ್ಕ ಪರಿಶೋಧಕಿಯಾಗಿದ್ದ ಕೊಚ್ಚಿ ಯುವತಿ, 26 ವರ್ಷದ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಸಾವು ಕಾರ್ಪೊರೇಟ್ ಜಗತ್ತಿನ ಅಮಾನುಷ ಮತ್ತು ಶೋಷಕ ಮುಖವನ್ನು ಮತ್ತೊಮ್ಮೆ ಬಯಲಿಗೆಳೆದಿದೆ.

ತನ್ನ ಮಗಳ ಸಾವಿಗೆ ಅತಿಯಾದ ಕೆಲಸದ ಒತ್ತಡವೇ ಕಾರಣ ಎಂದು ಆಕೆಯ ತಾಯಿ ಅನಿತಾ ಅಗಸ್ಟೈನ್ ಅವರು ಕಂಪೆನಿ ಮುಖ್ಯಸ್ಥರಿಗೆ ಬರೆದಿದ್ದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಂಡ ಬಳಿಕ ಇಡೀ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ ಮತ್ತು ಯೋಚನೆಗೆ ಹಚ್ಚಿದೆ. ಅನ್ನಾ ಸಾವು ಆಕೆಗಿದ್ದ ಅತೀವ ಕೆಲಸದ ಒತ್ತಡದಿಂದ ಆಯಿತೆಂದು ಪತ್ರದಲ್ಲಿ ಬರೆದಿದ್ದ ಆಕೆಯ ತಾಯಿ ಅನಿತಾ, ಇನ್ನಾದರೂ ಉದ್ಯೋಗಿಗಳ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದ್ದರು.

ಅನ್ನಾ ಸ್ನೇಹಿತರು ಹೇಳಿರುವ ಪ್ರಕಾರ, ಆಕೆ ದಿನದಲ್ಲಿ ಸುಮಾರು 16 ತಾಸುಗಳ ಕಾಲ ಕೆಲಸ ಮಾಡುತ್ತಿದ್ದರು.

ಆಕೆಯ ತಾಯಿ ಹೇಳಿರುವ ಪ್ರಕಾರ, ಕೆಲಸದ ಸಮಯದ ನಂತರವೂ ಅನ್ನಾ ಕೆಲಸ ಮುಂದುವರಿಸಿರುತ್ತಿದ್ದರು. ಬೆಳಗ್ಗೆಯೊಳಗೆ ಮುಗಿಸಿರಬೇಕು ಎಂಬ ಒತ್ತಡ ಇರುತ್ತಿತ್ತು. ರಾತ್ರಿಯೆಲ್ಲ ನಿದ್ದೆಗೆಟ್ಟು ಕೆಲಸ ಮಾಡಬೇಕಿತ್ತು. ಶನಿವಾರ, ರವಿವಾರಗಳಲ್ಲೂ ಕೆಲಸ ತಪ್ಪುತ್ತಿರಲಿಲ್ಲ.

ಆಕೆಯ ತಾಯಿಯ ಪತ್ರದ ಹಿನ್ನೆಲೆಯಲ್ಲಿ ಕಂಪೆನಿ ಈಗ ತನಿಖೆ ಆರಂಭಿಸಿದೆ. ಅನ್ನಾ ಅವರನ್ನು ನಿರಂತರ ದುಡಿಸುತ್ತಿದ್ದ ಆರೋಪವಿರುವ ಮ್ಯಾನೇಜರ್ ಅನ್ನು ರಜೆಯ ಮೇಲೆ ಕಳಿಸಿದೆ.ಕಂಪೆನಿಯ ಇತರ ಉದ್ಯೋಗಿಗಳ ಕೆಲಸದೊತ್ತಡ ಕಡಿಮೆ ಮಾಡುವ ಮತ್ತು ಅವರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅನುಕೂಲಕರ ವಾತಾವರಣ ಕಲ್ಪಿಸುವ ಭರವಸೆಯನ್ನು ಕಂಪೆನಿ ಈಗ ನೀಡಿದೆ.

ಸಿಎ ಮುಗಿಸಿದ್ದ ಅನ್ನಾ, ಇವೈ ಸೇರಿದ್ದನ್ನು ಬಹಳ ಸಂಭ್ರಮಿಸಿದ್ದಳು. ಅದು ಆಕೆಯ ಮೊದಲ ಕೆಲಸ.

ನನ್ನ ಮಗಳು ಒಬ್ಬ ಹೋರಾಟಗಾರ್ತಿ. ಕಂಪೆನಿಯಲ್ಲಿ ತನ್ನ ಮೇಲಿರುವ ಕೆಲಸದ ಹೊರೆ ನಿಭಾಯಿಸಲು ಇಡೀ ಸಮಯ ಮೀಸಲಿಟ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಳು ಎಂದು ವಿವರಿಸಿದ್ದರು ಆಕೆಯ ತಾಯಿ ಅನಿತಾ.

ಆದರೆ ಕೆಲಸದ ಹೊರೆ, ಹೊಸ ಪರಿಸರ ಮತ್ತು ಸುದೀರ್ಘ ಕೆಲಸದ ಅವಧಿ ಆಕೆಯನ್ನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ತೀವ್ರವಾಗಿ ಕುಗ್ಗಿಸಿದ್ದವು.

ಉದ್ಯೋಗಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆಕೆಯಲ್ಲಿ ಆತಂಕ, ನಿದ್ರಾಹೀನತೆ ಮತ್ತು ಒತ್ತಡದ ಸಮಸ್ಯೆಗಳು ಕಂಡುಬಂದಿದ್ದವು. ಇಷ್ಟಾದರೂ ಆಕೆ ಸೋತಿರಲಿಲ್ಲ. ಕಠಿಣ ಪರಿಶ್ರಮ ಹಾಗೂ ದೃಢ ಯತ್ನ ಯಶಸ್ಸಿನ ಕೀಲಿಕೈ ಎಂಬ ಭಾವನೆಯಲ್ಲಿ ಅವಳು ಹೆಚ್ಚುಹೆಚ್ಚು ಕೆಲಸದಲ್ಲಿ ತೊಡಗಿಕೊಂಡಿದ್ದಳು ಎಂದು ಪತ್ರದಲ್ಲಿ ಅನ್ನಾ ತಾಯಿ ಅನಿತಾ ನೆನಪಿಸಿಕೊಂಡಿದ್ದರು.

ಅನಿತಾ ಅವರ ಪತ್ರ ಕಾರ್ಪೊರೇಟ್ ವಲಯದ ಕಠೋರ ಮುಖವನ್ನು ಬಯಲು ಮಾಡಿದೆ.

ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುವ ಅನೇಕರು ಎದುರಿಸುತ್ತಿರುವ ಕಷ್ಟ ಎಂಥದು ಎಂಬುದನ್ನು ಬಯಲು ಮಾಡಿದೆ.

ಖಾಸಗಿ ಕಂಪೆನಿಗಳಲ್ಲಿ ಕೆಲಸದಲ್ಲಿರುವವರ ಶೋಷಣೆ ಗಂಭೀರ ಮಟ್ಟದಲ್ಲಿದೆ ಎಂಬ ದೂರುಗಳು ಕೇಳಿಬರುತ್ತಲೇ ಇದ್ದವು.ಕೆಲಸದ ಅವಧಿಯಂತೂ ಮಿತಿ ದಾಟಿದೆ. ವರ್ಕ್ ಫ್ರಮ್ ಹೋಂ ಎಂಬುದಂತೂ ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಎನ್ನುವ ಸ್ಥಿತಿಯನ್ನು ತಂದಿಟ್ಟಿದೆ.

ಹೆಚ್ಚುತ್ತಿರುವ ಪೈಪೋಟಿಯ ಸನ್ನಿವೇಶ ಉದ್ಯೋಗಿಗಳನ್ನು ಆರೋಗ್ಯ ಕಡೆಗಣಿಸಿ, ಉಸಿರು ಬಿಗಿಹಿಡಿದುಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆಗೆ ತಳ್ಳಿದೆ. ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಬೇಕಾದ ಒತ್ತಡ ಅವರನ್ನು ಹತಾಶ ಯತ್ನಗಳ ತಪ್ಪಿಸಿಕೊಳ್ಳಲಿಕ್ಕಾಗದ ಹಿಡಿತಗಳಲ್ಲಿ ಸಿಕ್ಕಿಸಿ ಹಾಕಿದೆ.

ಯಾವುದೇ ಸಂಸ್ಥೆಯ ಲಾಭಕ್ಕೆ ಬಹಳ ದೊಡ್ಡ ಮಟ್ಟದ ಕೊಡುಗೆ ನೀಡುವ ಕೆಳಹಂತದ ಉದ್ಯೋಗಿಗಳು ಸಿಕ್ಕಾಪಟ್ಟೆ ಕೆಲಸ ಮತ್ತು ಒತ್ತಡದಲ್ಲಿ ಹೈರಾಣಾಗುತ್ತಿದ್ದಾರೆ.

ಸಾಫ್ಟ್‌ವೇರ್ ವಲಯದಲ್ಲಿ ಕೆಲಸ ಮಾಡುವವರಲ್ಲಿ ಶೇ.40ರಷ್ಟು ಮಂದಿ ಕೆಲಸದ ಒತ್ತಡದ ಬಗ್ಗೆ ಹೇಳಿಕೊಂಡಿರುವುದಿದೆ. ಸರಕಾರಿ ವಲಯದ ಬ್ಯಾಂಕ್‌ಗಳಲ್ಲೂ ಸರಕಾರ ಹೊರ ನೇಮಕದ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲವಾದ್ದರಿಂದ ಇರುವ ಉದ್ಯೋಗಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಬ್ಯಾಂಕಿಂಗ್ ವಲಯದಲ್ಲಿನ ಕಾರ್ಮಿಕರ ಒಕ್ಕೂಟಗಳು ಈ ಸಮಸ್ಯೆಯ ಕಡೆ ಗಮನ ಸೆಳೆದಿವೆ.

ಪೊಲೀಸ್ ಇಲಾಖೆಯಂಲ್ಲೂ ಆತ್ಮಹತ್ಯೆ, ಕೆಲಸಕ್ಕೆ ರಾಜೀನಾಮೆ ನೀಡುವುದೆಲ್ಲ ಕೆಲಸದ ಒತ್ತಡದ ಪರಿಣಾಮಗಳೇ ಆಗಿವೆ ಎನ್ನಲಾಗುತ್ತಿದ್ದು, ಗಂಭೀರವಾಗಿ ಯೋಚಿಸಬೇಕಿರುವ ಸಂಗತಿಯಾಗಿದೆ.

ದೀರ್ಘಾವಧಿಯ ಕೆಲಸದ ಸಮಯ ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಕ್ರಮಕ್ಕೆ ಕಾರಣವಾಗುತ್ತಿರುವುದು ಇತ್ತೀಚಿನ ಮತ್ತೊಂದು ಅಪಾಯಕಾರಿ ಬೆಳವಣಿಗೆ ಎನ್ನಲಾಗುತ್ತಿದೆ.

ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಿದ್ದಾಗಿ ಹೇಳಿಕೊಳ್ಳುವ ನಾರಾಯಣಮೂರ್ತಿಯಂಥವರು ಹೀರೊಗಳಾಗಿರುವುದು, ಅಂಥವರನ್ನು ಅನುಸರಿಸಬೇಕು ಎನ್ನಲಾಗುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲಿದೆ.

ಮಿತಿಮೀರಿದ ಕೆಲಸದ ಅವಧಿ, ಉಸ್ತುವಾರಿ ವಹಿಸಿಕೊಂಡವರ ಅಮಾನವೀಯ ನಡೆ, ಕೆಲಸ ಇಲ್ಲವಾಗುವ ಭಯ, ಇದರ ಬಗ್ಗೆಲ್ಲ ಬಹಿರಂಗವಾಗಿ ಹೇಳಿಕೊಂಡರೆ ಅನುಭವಿಸಬೇಕಾದ ಮಾನಸಿಕ ಕಿರಿಕಿರಿ, ಕೆಲಸ ಕಂಡುಕೊಳ್ಳುವಲ್ಲಿನ ಕಷ್ಟ ಇವೆಲ್ಲವೂ ಇವತ್ತಿನವರ, ವಿಶೇಷವಾಗಿ ಯುವಜನರ ಎದುರಿನ ಬಹಳ ದೊಡ್ಡ ಸವಾಲುಗಳಾಗಿವೆ.

ಈ ಸವಾಲುಗಳನ್ನು ದಾಟಿ ಮುಂದೆ ಹೋಗುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಅಂಥ ಒತ್ತಡಕ್ಕೆ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅನ್ನಾ ಬಲಿಯಾಗಿ ಹೋಗಿದ್ದಾರೆ. ಅವರ ಸಾವು ಕಾರ್ಪೊರೇಟ್ ವಲಯದಲ್ಲಿನ ಉದ್ಯೋಗಿಗಳ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಒಂದು ಎಚ್ಚರಿಕೆಯಾಗಬೇಕಿದೆ.

ಕಾರ್ಪೊರೇಟ್ ವಲಯ ಮಾತ್ರ ನಿಷ್ಕರುಣಿಯೇ ಎಂದು ಕೇಳಿಕೊಂಡರೆ, ಕಾರ್ಪೊರೇಟ್ ವಲಯದ ಜೊತೆಗೆ ಸರಕಾರದ ಹೊಣೆಗೇಡಿತನವೂ ಕಾರಣ ಎನ್ನಲೇಬೇಕಾಗಿದೆ.

ಸರಕಾರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಬೇಜವಾಬ್ದಾರಿತನದ ಮಾತು, ನಡೆ ನೋಡಿದರೆ, ಅದೆಷ್ಟು ಅಪಾಯಕಾರಿ ಎಂದೂ ಅನ್ನಿಸುತ್ತದೆ. ಇದಕ್ಕೆ ಉದಾಹರಣೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತು.

ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ಪಾಠಗಳನ್ನು ಬೋಧಿಸಬೇಕಾಗಿದೆ ಎಂದು ಅವರು ಕಾಲೇಜುಗಳು ಮತ್ತು ವಿವಿಗಳಿಗೆ ಕರೆ ನೀಡಿದ್ದಾರೆ. ಏನೇ ಕಲಿಯುತ್ತಿದ್ದರೂ, ಏನೇ ಉದ್ಯೋಗ ಮಾಡುತ್ತಿದ್ದರೂ ಒತ್ತಡವನ್ನು ನಿಭಾಯಿಸಲು ಆಂತರಿಕ ಬಲ ಬೇಕು ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅನ್ನಾ ಸಾವಿನ ವಿಚಾರವನ್ನು ಆಕೆಯ ಅಥವಾ ಕಂಪೆನಿಯ ಹೆಸರು ಉಲ್ಲೇಖಿಸದೆ ಪ್ರಸ್ತಾಪಿಸಿದ್ದಾರೆ ನಿರ್ಮಲಾ ಸೀತಾರಾಮನ್.

ಆದರೆ ನಿರ್ಮಲಾ ಅವರು, ಆಕೆಯ ಸಾವನ್ನು ಒತ್ತಡ ನಿಭಾಯಿಸಲಾರದ್ದರ ಪರಿಣಾಮ ಎನ್ನುವಲ್ಲಿಗೆ ತಂದು ನಿಲ್ಲಿಸಿದರೇ ಹೊರತು, ಆಕೆ ಅನುಭವಿಸಿದ ಒತ್ತಡ, ಅದಕ್ಕೆ ಕಾರಣವಾದ ಕಂಪೆನಿಯ ಕೆಲಸದ ಸಂಸ್ಕೃತಿ ಎಷ್ಟು ಕಠೋರವಾದದ್ದು ಎಂಬುದನ್ನು ಯೋಚಿಸಲೇ ಇಲ್ಲ.

ಅಂದರೆ ಸರಕಾರ ಯಾವ ರೀತಿ ಯೋಚಿಸುತ್ತದೆ ಮತ್ತು ಕೆಲಸದೊತ್ತಡದ ವೈಪರೀತ್ಯಗಳನ್ನು ಕೂಡ ಉದ್ಯೋಗಿಯ ತಲೆಗೇ ಕಟ್ಟಿ, ಹೊಣೆಯಾಗಿಸಲಾಗುತ್ತದೆ ಎಂಬುದಕ್ಕೆ ನಿರ್ಮಲಾ ಸೀತಾರಾಮನ್ ಮಾತು ಒಂದು ಉದಾಹರಣೆ.

ಸೀತಾರಾಮನ್ ಹೇಳಿಕೆಗೆ ಕಾಂಗ್ರೆಸ್ ಕಟುವಾಗಿಯೇ ಪ್ರತಿಕ್ರಿಯೆ ಕೊಟ್ಟಿದೆ. ಅವರ ಹೇಳಿಕೆಗಳು ಅತಿ ಕ್ರೂರ ಎಂದಿರುವ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಸಾವಿಗೀಡಾದವಳನ್ನೇ ಸಚಿವೆ ದೂಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸರಕಾರ ಮತ್ತು ಸೀತಾರಾಮನ್, ಅದಾನಿ ಮತ್ತು ಅಂಬಾನಿಯಂತಹ ದೈತ್ಯ ಉದ್ಯಮಿಗಳ ನೋವನ್ನು ಮಾತ್ರ ನೋಡಬಲ್ಲರು ಎಂದಿರುವ ವೇಣುಗೋಪಾಲ್, ಕಠಿಣವಾಗಿ ಶ್ರಮಿಸುತ್ತಿರುವ ಯುವಜನರ ನೋವನ್ನು ನೋಡುವಲ್ಲಿ ಸರಕಾರ ಅಸಮರ್ಥವಾಗಿದೆ ಎಂದಿದ್ದಾರೆ.

ನಿರುದ್ಯೋಗದ ಈ ಕಾಲದಲ್ಲಿ ಉದ್ಯೋಗ ಪಡೆಯಲು ಯಶಸ್ವಿಯಾದರೂ ದುರಾಸೆಯಿಂದ ತುಂಬಿದ ಕಾರ್ಪೊರೇಟ್ ವ್ಯವಸ್ಥೆಯಿಂದ ಅನ್ನಾರಂತಹ ಹೊಸಬರು ಶೋಷಣೆಗೆ ಒಳಗಾಗುತ್ತಿದ್ದಾರೆ. ಆದರೆ ಅನ್ನಾ ತನ್ನ ಮನೆಯಲ್ಲಿ ಒತ್ತಡ ನಿರ್ವಹಣೆ ಕಲಿತುಕೊಳ್ಳಬೇಕಿತ್ತು ಎಂದು ಆಕೆಯನ್ನೂ ಆಕೆಯ ಕುಟುಂಬವನ್ನೂ ನಿರ್ಮಲಾ ಸೀತಾರಾಮನ್ ದೂಷಿಸಿರುವುದು ಅತ್ಯಂತ ಕ್ರೂರ ಎಂದಿದ್ದಾರೆ

‘‘ಸರಕಾರ ಇಷ್ಟೊಂದು ಹೃದಯಹೀನ ವಾಗಿರಲು ಹೇಗೆ ಸಾಧ್ಯ? ಅವರು ಅನುಕಂಪದ ಭಾವನೆಯನ್ನೇ ಕಳೆದುಕೊಂಡಿದ್ದಾರೆಯೇ?’’ ಎಂದು ವೇಣುಗೋಪಾಲ್ ಪ್ರಶ್ನಿಸಿದ್ದಾರೆ.

ಇದೇ ವೇಳೆ, ನೋವಿನಲ್ಲಿರುವ ಅನ್ನಾ ಪೋಷಕರ ಜೊತೆ ರಾಹುಲ್ ಗಾಂಧಿ ಮಾತನಾಡಿದ್ದಾರೆ. ‘‘ಊಹಿಸಲಾಗದ ದುಃಖದ ನಡುವೆಯೂ ಅನ್ನಾ ಅವರ ತಾಯಿ ಧೈರ್ಯ ಮತ್ತು ನಿಸ್ವಾರ್ಥ ತೋರಿಸಿದ್ದಾರೆ. ತನ್ನ ಮಗಳ ಸಾವು, ಇತರರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವುದಕ್ಕಾದರೂ ಪ್ರೇರೇಪಿಸಲಿ ಮತ್ತು ಕೆಲಸದ ಸ್ಥಳವನ್ನು ಸುರಕ್ಷಿತ ಮತ್ತು ನ್ಯಾಯಯುತ ಕೆಲಸದ ವಾತಾವರಣಕ್ಕೆ ಕ್ರಮ ಕೈಗೊಳ್ಳಬೇಕೆಂಬ ಅನಿತಾ ಅವರ ಮನವಿ ಬಹಳ ಮಹತ್ವದ್ದು’’ ಎಂದು ರಾಹುಲ್ ಹೇಳಿದ್ದಾರೆ.

ಕಾರ್ಪೊರೇಟ್ ವಲಯ ಸ್ವಭಾವತಃ ಕಠೋರ. ಅದನ್ನು ಪೋಷಿಸುತ್ತಿರುವ ಸರಕಾರ ಕೂಡ ಅದರ ಪರವಾಗಿರುತ್ತದೆಯೇ ಹೊರತು ಕಾರ್ಪೊರೇಟ್ ಕಂಪೆನಿಯಲ್ಲಿ ಕಷ್ಟಪಡುತ್ತಿರುವ ಉದ್ಯೋಗಿಯ ಬಗ್ಗೆಯಲ್ಲ.

ಕಾರ್ಪೊರೇಟ್ ವಲಯಕ್ಕೆ ಸರಕಾರದಿಂದ ಎಕರೆಗಟ್ಟಲೆ ಭೂಮಿ ಉಚಿತವಾಗಿ ಬೇಕು, ತೆರಿಗೆಯಲ್ಲಿ ವಿನಾಯಿತಿ ಅಥವಾ ರಿಯಾಯಿತಿ ಬೇಕು, ಸರಕಾರದ ನೀತಿಯಲ್ಲೂ ಅವರಿಗೆ ಬೇಕಾದ ಬದಲಾವಣೆ ಬೇಕು.

ಇಷ್ಟೆಲ್ಲಾ ಸವಲತ್ತು ಬಾಚಿಕೊಳ್ಳುವ ಕಾರ್ಪೊರೇಟ್ ವಲಯ ತನ್ನ ಸಿಬ್ಬಂದಿಯನ್ನು ಮಾತ್ರ ಪಕ್ಕಾ ಗುಲಾಮರಂತೆ ನಡೆಸಿಕೊಳ್ಳುತ್ತದೆ. ಅಲ್ಲಿ ರಿಯಾಯಿತಿ, ವಿನಾಯಿತಿ ಯಾವುದೂ ಇಲ್ಲ. ದುಡಿಯಿರಿ, ಮತ್ತಷ್ಟು ದುಡಿಯಿರಿ ಎನ್ನುವ ಧೋರಣೆ.

ಅಂತಹ ದುಡಿಸುವ ನೀತಿಯೇ ಯಶಸ್ಸಿಗೆ ದಾರಿ ಎಂದು ಹೇಳುವ ನಾರಾಯಣ ಮೂರ್ತಿಯಂತಹವರನ್ನು ಇಲ್ಲಿನ ಮೀಡಿಯಾಗಳು, ಸರಕಾರಗಳು ವೈಭವೀಕರಿಸುತ್ತವೆ. ಕೆಲವೇ ಕೆಲವರು ಸಾವಿರಾರು ಕೋಟಿ ಲಾಭ ಬಾಚಿಕೊಳ್ಳುತ್ತಿರುವಾಗ ನಾರಾಯಣಮೂರ್ತಿಯಂತಹವರು ದುಡಿಮೆಯ ಬಗ್ಗೆ, ಪರಿಶ್ರಮದ ಬಗ್ಗೆ, ಶಿಸ್ತಿನ ಬಗ್ಗೆ ಇತರರಿಗೆ ಪಾಠ ಮಾಡುತ್ತಾರೆ.

ಈ ದೇಶದ ರೈತರು, ಹತ್ತಾರು ಕ್ಷೇತ್ರಗಳಲ್ಲಿನ ಕಾರ್ಮಿಕರು, ಡೆಲಿವರಿ ಬಾಯ್‌ಗಳು, ಚಾಲಕರು, ಕೆಳ ಹಂತದಲ್ಲಿ ಬೇರೆ ಬೇರೆ ಕೆಲಸ ಮಾಡುವವರು ದಿನಕ್ಕೆ ಅದೆಷ್ಟು ಗಂಟೆ ದುಡಿಯುತ್ತಾರೆ... ಅವರೆಲ್ಲರೂ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆಯೇ? ಅವರಿಗೆ ಸರಕಾರ ಎಕರೆಗಟ್ಟಲೆ ಭೂಮಿ ಉಚಿತವಾಗಿ ಕೊಡುತ್ತದೆಯೇ?

ಇಂಥ ಸ್ಥಿತಿಯಲ್ಲಿ ಅನ್ನಾ ಸಾವು ಕಾರ್ಪೊರೇಟ್ ಕ್ರೌರ್ಯವನ್ನು ಕೊಂಚವಾದರೂ ಕಾಡುವುದು ಸಾಧ್ಯವೆ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಹರೀಶ್ ಎಚ್.ಕೆ.

contributor

Similar News