ದೇವದಾರಿ ಯೋಜನೆ-ಮನುಷ್ಯಕುಲದ ಆತ್ಮವಿನಾಶದ ದಾರಿಯ ಆರಂಭ

Update: 2024-06-15 08:46 GMT

ದೇವದಾರಿ!

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದಕ್ಷಿಣ ಭಾಗದ ಗಣಿ ಪ್ರದೇಶ. ಗಣಿಭಾಷೆಯಲ್ಲಿ ಸಂಡೂರು ಸೌತ್ ಒ ಬ್ಲಾಕ್ ಎಂದೇ ಕರೆಯಲ್ಪಡುವ ಈ ಏರಿಯಾದಲ್ಲಿ ಹುಲಿಕುಂಟೆ, ಲಕ್ಷ್ಮೀಪುರ ಮತ್ತು ಭುಜಂಗ ನಗರ ಎಂಬ ಜನವಸತಿ ಹಳ್ಳಿಗಳಿವೆ. ಪ್ರಸಕ್ತ ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತಿದೆ ಎನ್ನುವ ಈ ಪ್ರದೇಶವೊಂದರಲ್ಲಿಯೇ ಅರವತ್ತು ಸೆಂಟಿಮೀಟರಿಗೂ ಕಡಿಮೆ ಸುತ್ತಳತೆಯನ್ನು ಹೊಂದಿರುವ ಸುಮಾರು 58,324 ಮರಗಳಿವೆ.ಅರವತ್ತು ಸೆಂಟಿಮೀಟರಿಗೂ ಹೆಚ್ಚಿನ ಪ್ರಮಾಣದ ಸುತ್ತಳತೆಯುಳ್ಳ ಬೃಹತ್ ಗಾತ್ರದ ಮರಗಳು ಸಂಖ್ಯೆ 12,566. ಇತರ ಮರಗಳೂ ಸೇರಿದಂತೆ ಒಟ್ಟು 90,000ಕ್ಕೂ ಹೆಚ್ಚು ವಿಶಿಷ್ಟ ಪ್ರಭೇದಗಳ ಮರಗಳ ಮಾರಣಹೋಮವೇ ನಡೆಯಲಿದೆ.

ಇದರಿಂದ ಏನಾಗುತ್ತದೆ? ಎಂದರೆ, ಮಣ್ಣಿನ ಸವಕಳಿ, ನೀರಿನ ಆಕರಗಳ ಮೇಲೆ ಪರಿಣಾಮ ಮತ್ತು ಯಾರೂ ಸರಿಪಡಿಸಲಾಗ ದಂತಹ ಪರಿಸರದ ನಷ್ಟವುಂಟಾಗುತ್ತದೆ ಎಂದು ವೈಜ್ಞಾನಿಕವಾದ ಶುಷ್ಕ ಅಂಕಿ ಅಂಶಗಳನ್ನು ನೀಡಬಹುದು. ಆದರೆ ಅದರಾಚೆಗೂ ಈ ಊರುಗಳ ಸಂತ್ರಸ್ತಗೊಳ್ಳಲಿರುವ ಜನ ಮಾಡಿರುವ ಪಾಪವಾದರೂ ಏನು? ಆಧುನಿಕ ವಿಜ್ಞಾನದ ಮೂಲಕ ಅಭಿವೃದ್ಧಿಯೆಂಬ ಭಯೋತ್ಪಾದಕ ಚಟುವಟಿಕೆಗಳಿಗೆ ತುತ್ತಾದವರ ಗೋಳನ್ನು ಕೇಳುವವರಾದರೂ ಯಾರು?

ಸಂಡೂರಿನ ಪರಿಸರ ಉಳಿಸಲು ನಿರಂತರ ಹೋರಾಟ ರೂಪಿಸುತ್ತಿರುವ ಮಿತ್ರ ಶ್ರೀಶೈಲ ಆಲದಹಳ್ಳಿ ಮೊನ್ನೆ ಮಾತನಾಡುವಾಗ ಹಿಂದಿನ ಕಾಲವನ್ನು ನೆನಪಿಸಿಕೊಂಡರು. ‘‘ಕಾಡು ಎಂಬುದು ತನ್ನಜ್ಜನಿಗೆ, ತನ್ನಪ್ಪನಿಗೆ ಅದೊಂದು ಪಾವಿತ್ರ್ಯದ ಸ್ಥಳವಾಗಿತ್ತು. ತನ್ನ ಹಿರಿಯರು ಎಂದಿಗೂ ಕಾಡಿನ ಒಳಗೆ ಹೋಗುವಾಗ ಕಾಲಿಗೆ ಚಪ್ಪಲಿ ಕೂಡ ಹಾಕುತ್ತಿರಲಿಲ್ಲ. ದುರ್ಗಮ ಹಾದಿಗಳಗುಂಟ ದೂರದವರೆಗೆ ಕಾಡಿನ ನಟ್ಟನಡುವೆ ನಡೆದುಕೊಂಡು ಹೋಗಿ ಬರಲು ಅಲ್ಲಿ ಉದ್ದೇಶಪೂರ್ವಕವಾಗಿಯೇ ದೇವರನ್ನು ಪ್ರತಿಷ್ಠಾಪಿಸುತ್ತಿದ್ದರೆಂದು, ಆ ಮೂಲಕವಾದರೂ ಹಬ್ಬ, ಜಾತ್ರೆ, ಪರಿಷೆಗಳ ನೆಪದಲ್ಲಿ ಉತ್ತಮ ಗಾಳಿ, ವಾತಾವರಣದಲ್ಲಿ ಕೆಲಕಾಲವಾದರೂ ಬದುಕುತ್ತಿದ್ದರು. ಈಗ ನಮಗೆ ಅದೂ ಕೂಡ ಇಲ್ಲ. ಹೋಗಲಿ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿರೋ ಎಂದರೂ ಬಿಡದೀ ಪ್ರಭುತ್ವದ ಅಭಿವೃದ್ಧಿ ಎಂಬ ಭೂತ. ಪಶ್ಚಿಮಘಟ್ಟಗಳ ಕಾಡು ಮರಗಳನ್ನು ಹೊರತುಪಡಿಸಿದರೆ ಸಂಡೂರಿನ ಪರಿಸರವು ನಾಡಿಗೆ ಆಮ್ಲಜನಕದ ಗಣಿಯೇ ಆಗಿದೆ. ಕಳೆದ ಮೇ ತಿಂಗಳಿನ ತಾಪಮಾನದಿಂದ ಬಸವಳಿದ ಜನರಿಗಾದರೂ ಬುದ್ಧಿ ಬೇಡವೇ? ಈಗ ಜನರೇ ಚಳವಳಿಗಳನ್ನು ರೂಪಿಸಬೇಕಿದೆ’’ ಎಂದು ಸಂಡೂರಿನ ಬಜಾರಿನಲ್ಲಿ ಪುಟ್ಟದೊಂದು ಇಲೆಕ್ಟ್ರಾನಿಕ್ಸ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುವ ಪರಿಸರ ಹೋರಾಟಗಾರ ಮಿತ್ರ, ಶ್ರೀಶೈಲ ಆಲದಹಳ್ಳಿ ಎದೆಯ ಸಂಕಟವನ್ನು ಹೊರಹಾಕಿದ್ದು ಹೀಗೆ.

ಪ್ರಸ್ತಾವಿತ ದೇವದಾರಿ ಗಣಿಪ್ರದೇಶವು 4,605 ಹೆಕ್ಟೇರ್ ಸಂಪದ್ಭರಿತ ಐರನ್ ಮತ್ತು ಅಪರೂಪ ಗುಣಮಟ್ಟದ ಮ್ಯಾಂಗನೀಸ್ ಅದಿರಿನ ಭೂ ಪ್ರದೇಶವನ್ನು ಹೊಂದಿದೆ. ಜೊತೆಗೆ ಯಾರ ಹಂಗಿಲ್ಲದೆಯೂ ಬೆಳೆದ ದಟ್ಟ ಕಾಡಿನ ಮರಗಳು, ಇಲ್ಲಿ ವಾಸಮಾಡುವ ವಿಶಿಷ್ಟ ಜೀವಸಂಕುಲಗಳು. ಇದರಲ್ಲಿ 3,203 ಹೆಕ್ಟೇರ್ ಭೂಮಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದರೆ, 1,220 ಹೆಕ್ಟೇರ್ ಭೂಮಿ ರೆವಿನ್ಯೂ ಇಲಾಖೆಯ ವ್ಯಾಪ್ತಿಯಲ್ಲಿದೆ. ಉಳಿದಂತೆ 67 ಹೆಕ್ಟೇರ್ ಭೂ ಪ್ರದೇಶವು ಸರಕಾರಕ್ಕೆ ಸೇರಿದ್ದೆಂದು ಮತ್ತು ಸುಮಾರು 114ರಿಂದ 115 ಹೆಕ್ಟೇರ್‌ಗಳ ಪ್ರದೇಶವು ಈಗಾಗಲೇ ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ ಲಿಮಿಟೆಡ್ (ಕೆಐಒಸಿಎಲ್)ವಶದಲ್ಲಿದೆ. ಹೀಗಾಗಿ ಈ ಜಾಗದಲ್ಲಿ ಗಣಿಗಾರಿಕೆಯನ್ನು ಆರಂಭಿಸುವುದು ಪ್ರಭುತ್ವಕ್ಕೆ ದೊಡ್ಡ ಸವಾಲೇನಲ್ಲ. ಎಲ್ಲವೂ ರಾಜ್ಯ ಮತ್ತು ಕೇಂದ್ರ ಸರಕಾರಗಳ ಆಣತಿ, ನಿರ್ದೇಶನದ ಮೇಲೆಯೇ ನಡೆಯುವಂಥವು. ಹಾಗಂತ ಈಗ ಈ ಏರಿಯಾದಲ್ಲಿ ಗಣಿಗಾರಿಕೆ ಇಲ್ಲವೇ ಇಲ್ಲ ಅಂತೇನಿಲ್ಲ. ಈಗಾಗಲೇ ಎ ಮತ್ತು ಬಿ ವರ್ಗದ 59, ಸಿ ವರ್ಗದ 26 ಹಾಗೂ ರಿ ಸೆಟಲ್ಮೆಂಟ್, ರಿ ಹ್ಯಾಬಿಟೇಶನ್ ಪ್ಲ್ಯಾನ್ ಅನುಮೋದನೆಯಾಗದ ಸುಮಾರು 14 ಮೈನ್ಸ್ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವುಗಳ ವಾರ್ಷಿಕ ಅದಿರು ಉತ್ಪಾದನೆಯೇ 53,599 ಮೆಟ್ರಿಕ್ ಟನ್‌ಗಳಾಗುತ್ತವೆ!

ಬಳ್ಳಾರಿ ಜಿಲ್ಲೆಯ ಗರ್ಭದಲ್ಲಿ ಅಡಗಿರುವ ಅದಿರು ತೆಗೆಯಲು ಇರುವ ವಾರ್ಷಿಕ ಸರಾಸರಿಯ ಮಿತಿಯೇ 28 ಮಿಲಿಯನ್ ಟನ್ ಮಾತ್ರ. (ಸುಪ್ರೀಂ ಕೋರ್ಟು ವರದಿ ದಿ.14-12-2017)

ಅಂದರೆ ಜಿಲ್ಲೆಯ ಅದಿರು ಉತ್ಪಾದನೆಯ ಮಿತಿ ಯಾವಾಗಲೋ ಮಿತಿ ಮೀರಿ ಹೋಗಿರುವುದು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ.

ಆಧುನಿಕ ವಿಜ್ಞಾನಕ್ಕೆ ‘ತಂತ್ರಜ್ಞಾನದ ಅಹಂ’ ಸೇರಿಕೊಂಡಾದ ಮೇಲೆ ಪರಿಸರವನ್ನು ಕುರಿತು ವಿಜ್ಞಾನವು ಒಂದು ರೀತಿಯ ಉಪೇಕ್ಷೆಯನ್ನು ತೋರಿದ್ದರಿಂದಲೇ ಇಂದು ಅರಣ್ಯ, ಸೂಕ್ಷ್ಮ ಜೀವಿ ಪರಿಸರಗಳ ಕುರಿತಂತೆ ತುಂಬಾ ಮೆಕ್ಯಾನಿಕಲ್ ಆದಂತಹ ರೀತಿಯಲ್ಲಿ ಪ್ರಭುತ್ವಗಳು ಯೋಚಿಸತೊಡಗಿವೆ. ಅದೆಷ್ಟರಮಟ್ಟಿಗೆ ಎಂದರೆ ಈಗ ಚರ್ಚೆಯಾಗುತ್ತಿರುವ ಉದ್ದೇಶಿತ ದೇವದಾರಿ ಗಣಿ ಪ್ರದೇಶದ ಸುತ್ತಲೂ ಅಪರೂಪದ ಕೊಂಡುಕುರಿ, ಕರಡಿ, ಚಿರತೆ ಮತ್ತು ಮುಳ್ಳುಹಂದಿ, ಮೊಲಗಳಂತಹ ಪ್ರಾಣಿಗಳ ಆವಾಸಸ್ಥಾನ ಇದಾಗಿದೆ. ಯಾಂತ್ರಿಕ, ಸಂವೇದನೆಗಳೇ ಇಲ್ಲದ ಆಧುನಿಕ ವಿಜ್ಞಾನವು ಅವುಗಳನ್ನು ಬೇರೆಡೆಗೆ ಶಿಫ್ಟ್ ಮಾಡುವ ಮತ್ತು ಬೇರೆ ಕಡೆಗಳಲ್ಲಿ ಪರ್ಯಾಯ ವನ್ಯಧಾಮಗಳ ವನ್ಯಜೀವಿ ಕಾರಿಡಾರ್‌ಗಳನ್ನು ರೂಪಿಸುವ ಆಭಾಸದ ಮಾತುಗಳನ್ನಾಡುತ್ತಿದೆ. ಅದಕ್ಕಾಗಿ ಕಂಪೆನಿಯಿಂದಲೇ ಕೋಟಿಗಟ್ಟಲೆ ಹಣವನ್ನು ತೆಗೆದಿರಿಸಿರುವುದಾಗಿಯೂ ಹೇಳುತ್ತಿದೆ.ಇಂಥ ಆಧುನಿಕತೆ, ನಾಗರಿಕತೆ ಬಗ್ಗೆ ಏನೆಂದು ಹೇಳುವುದು?

ಹೀಗೆ ಸಾಗುತ್ತಲೇ ಕಳೆದ ಎರಡು ದಶಕಗಳಿಂದ ಗಣಿ ಕಂಪೆನಿಗಳ ಆಗರವೇ ಆಗಿಹೋಗುವ ಈ ಪ್ರದೇಶಗಳ ಜನ ಕೂಡ ಎಲ್ಲಿ ಯಂತ್ರಗಳಂತೆ ಆಗಿಬಿಡುವರೋ ಏನೋ? ಜನ ಕೂಡ ಹೊಸದಾದ ವಾತಾವರಣವೊಂದಕ್ಕೆ ಹೊಂದಿಕೊಂಡುಬಿಡುತ್ತಾರೆ.ಮಾನವನ ಬದುಕುವ ರೀತಿಯನ್ನೇ ಬದಲಿಸಬಹುದಾದ ಹೊಸ ಹೊಸ ಗಣಿಗಾರಿಕೆಯಿಂದಾಗಿ ಪ್ರದೇಶಗಳಲ್ಲಿ ಜನವಸತಿಗಾಗಿ ಕಂಪೆನಿಗಳು ಮನೆಗಳನ್ನು ನಿರ್ಮಿಸಬಹುದು. ಅವನ ಶಕ್ತಿ ಕುಗ್ಗಿ ಹೋದ ಮೇಲೆ ಅಥವಾ ವಯೋಸಹಜ ನಿವೃತ್ತರಾದರೆ ಆ ಮನೆಯನ್ನು ತೆರವುಗೊಳಿಸಿ ಹೊಸಬರಿಗೆ ನೀಡಬೇಕೆಂದು ವಯಸ್ಸಾದ ಮನುಷ್ಯರನ್ನೇ ತ್ಯಾಜ್ಯ ವಸ್ತುಗಳಂತೆ ನೋಡುವ ಕಾಲವೂ ದೂರವೇನಿಲ್ಲ. ಹಿಟ್ಲರನ ಜರ್ಮನಿಯಲ್ಲಿ ಇಂತಹವರಿಗೆ ‘ನಿಷ್ಪ್ರಯೋಜಕ ಕೂಳಿನವರು’ ಎಂಬ ಹೆಸರಿತ್ತಂತೆ. ಈ ಭಾಗದ ಜನಪ್ರಭುತ್ವ ಕೂಡ ನಿರ್ಭಾವುಕತೆಯನ್ನು ಹೊಂದಿದರೆ ಆಶ್ಚರ್ಯವೇನಿಲ್ಲ. ತನ್ನ ಊರಿನಲ್ಲಿ, ತಾನು ಹುಟ್ಟಿ, ಆಡಿ ಬೆಳೆದ ಊರಿನಲ್ಲಿಯೇ ಹೀಗೆ ಅಪರಿಚಿತನಾಗುವ ಅಥವಾ ಕೆಲಸಕ್ಕೆ ಬಾರದ ‘ವಸ್ತು’ವಾಗುವ ಬೇರು ಕಿತ್ತ ವರ್ಗವಾಗುವ ರೈತರ ಭೀಕರತೆಯನ್ನೀಗಲೇ ನಾವು ಊಹಿಸಬಹುದು.

ಅಂತೂ ಇಂತೂ 2006ರಲ್ಲಿ ಸುಪ್ರೀಂ ಕೋರ್ಟ್ ನಿರ್ಬಂಧಿಸಿದ್ದ ಅರಣ್ಯ ಭೂಮಿಯಲ್ಲಿನ ಗಣಿಗಾರಿಕೆಯು ಮತ್ತೆ ಸಕ್ರಮಗೊಂಡ ಸುದ್ದಿ ಮೊನ್ನೆಯ ಪತ್ರಿಕೆಗಳಲ್ಲಿ ಸುದ್ದಿಯಾಗಿದೆ.ಗಣಿ ಮತ್ತೆ-ಅರಣ್ಯ ಭೂಮಿಯನ್ನು ಪ್ರವೇಶಿಸಿ ಆರ್ಭಟಿಸಲು ಉದ್ದೇಶಿಸಿದೆ. ಪ್ರಕ್ರಿಯೆಗಳನ್ನು ಸರಳಗೊಳಿಸಲು ಕೇಂದ್ರದ ಉಕ್ಕು ಸಚಿವಾಲಯ ಎಲ್ಲಿಲ್ಲದ ಉತ್ಸಾಹ ತೋರುತ್ತಿದೆ. ಮೊನ್ನೆ ರವಿವಾರ ಪ್ರಮಾಣವಚನ ಸ್ವೀಕರಿಸಿದ ನೂತನ ಕೇಂದ್ರ ಸಚಿವರು ಬರೋಬ್ಬರಿ ಮುನ್ನೂರ ಎಂಭತ್ತೆಂಟು ಹೆಕ್ಟೇರ್ ಅರಣ್ಯ ಪ್ರದೇಶದ ಗಣಿಗಾರಿಕೆಯನ್ನು ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಗೆ ಐವತ್ತು ವರುಷಗಳ ಅವಧಿಗೆ ಲೀಸ್‌ಗೆ ನೀಡಿ ಸಹಿ ಹಾಕಿದ್ದಾರೆ. ಆದರೆ ಈ ಪ್ರಕ್ರಿಯೆಗಳೆಲ್ಲ ಸುಮಾರು ಆರು ವರ್ಷಗಳಿಂದಲೂ ಚಾಲ್ತಿಯಲ್ಲಿವೆ. ಮಾರ್ಚ್ 2018 ರಲ್ಲಿಯೇ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಮೂಲಕ ಗಣಿಗಾರಿಕೆಯ ವಿಸ್ತೃತ ಯೋಜನೆಯನ್ನು ರೂಪಿಸಲಾಗಿತ್ತು. ಆಗಸ್ಟ್ ತಿಂಗಳು 2021 ಮತ್ತು ಡಿಸೆಂಬರ್ 2022ರಷ್ಟೊತ್ತಿಗೆ ಪರಿಸರ ಮತ್ತು ಅರಣ್ಯ ಇಲಾಖೆಗಳ ಅನುಮತಿಗಳನ್ನು ಪಡೆಯಲಾಗಿತ್ತು. ಇನ್ನು ಕಳೆದ ವರ್ಷ ಜನವರಿ 2023ರಲ್ಲಿ ರಾಜ್ಯ ಸರಕಾರವೇ 388 ಹೆಕ್ಟೇರ್ ಭೂಮಿಯ ಗಣಿಗಾರಿಕೆಗೆ ಅನುಮತಿಯನ್ನು ಕೆಐಒಸಿಎಲ್ ಕಂಪೆನಿಗೆ ಐವತ್ತು ವರ್ಷಗಳ ಅವಧಿಗೆ ಲೀಸ್‌ನೀಡಲಾಗಿತ್ತು. ಇವೆಲ್ಲವೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಪರಸ್ಪರ ಸಮನ್ವಯತೆಯಿಂದಲೇ ನಡೆದಿದ್ದವು ಎನ್ನುವುದನ್ನು ಗಮನಿಸಬೇಕು.

ಹೊಸ ಯೋಜನೆಯಿಂದಾಗಿ ಮತ್ತಷ್ಟು ಕಾಡು ನಶಿಸಿ ಹೋಗುತ್ತಿದೆ. ವಿಶಿಷ್ಟ ಪ್ರಭೇದದ ಬೃಹತ್ ಮರಗಳನ್ನು ಕಡಿದು, ನರ್ಸರಿಯಿಂದ ತರಿಸಿದ ಸಸಿಗಳನ್ನು ಕಂಪೆನ್ಸೇಟರಿ ಫಾರೆಸ್ಟೇಷನ್ ಹೆಸರಿನಲ್ಲಿ ಗಿಡಗಳನ್ನೇನೋ ನೆಡಬಹುದು. ಅವುಗಳು ಬೆಳೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಗಣಿ ಪ್ರದೇಶವಷ್ಟೇ ಅಲ್ಲ, ಮೈನಿಂಗ್ ನಿಂದಾಗಿ ಐವತ್ತನಾಲ್ಕು ಹೆಕ್ಟೇರ್‌ನಷ್ಟು ಭೂ ಪ್ರದೇಶ ಸ್ಲರಿ ಪೈಪ್ ಲೈನ್ ಹಾಕಲು, ಮತ್ತೆ ನೀರಿಗಾಗಿ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಕಾಡು ಮತ್ತು ಕಾಡು ಪ್ರಾಣಿಗಳ, ಮನುಷ್ಯರ ಆವಾಸಸ್ಥಾನಗಳ ಮೇಲೆ, ಏಳನೇ ಶತಮಾನಕ್ಕೂ ಹಿಂದೆ ನಿರ್ಮಾಣವಾದ ಇಲ್ಲಿನ ಜನರ ಆರಾಧ್ಯದೈವ ಕುಮಾರಸ್ವಾಮಿ ಮತ್ತು ಪ್ರಸ್ತುತ ದೇವದಾರಿ ಯೋಜನಾ ಪ್ರದೇಶದ ದೈವವಾದ ಹುಲಿಕುಂಟೆರಾಯ ಕೂಡ ಬಾಧಿತರಾಗುವ ಧಾರ್ಮಿಕ ದಾಳಿಗಳು, ರಿಲಿಜಿಯಸ್, ಕಲ್ಚರಲ್ ಶಾಕ್‌ಗಳನ್ನು ಜನತೆಗೆ ಆಧುನಿಕ ಜಗತ್ತು ನೀಡುತ್ತಲೇ ಇರುತ್ತದೆ.

ಮರ, ಗಿಡ, ಹೊಲ, ಗದ್ದೆ, ಹಸು,ಬೆಟ್ಟ ಗುಡ್ಡಗಳು ಮನುಷ್ಯನ ಬದುಕಿನ ರೂಪಕಗಳು ಆಗಬೇಕಿತ್ತು. ಆದರೆ ಅವುಗಳ ಅರಿವಿಲ್ಲದರಿಂದಲೇ ನಮ್ಮ ಬದುಕಿನ ಕೊಂಡಿಗಳು ಸಡಿಲಗೊಳ್ಳುತ್ತಿರುವುದು ಮತ್ತು ದೇವದಾರಿಯಂತಹ ಯೋಜನೆಗಳು ಮನುಷ್ಯ ಕುಲದ ಆತ್ಮವಿನಾಶದ ದಾರಿಗಳಂತೆ ತೋರುವುದು ಅತಿಶಯೋಕ್ತಿಯೇನಲ್ಲ.

ಈಗ ಶುರುವಾಗಿರುವ ಖಾಸಗಿ ಕಂಪೆನಿಗಳ ಕೃಪಾಪೋಷಿತ ಪ್ರಭುತ್ವವು ಮೈನಿಂಗ್ ಪಾಲಿಟಿಕ್ಸ್‌ಗೆ ಇಳಿದಿದೆ. ಬಡ ಕೂಲಿಕಾರರು, ಕಾರ್ಮಿಕರು, ಆದಿವಾಸಿಗಳು ಮತ್ತು ಅಲೆಮಾರಿಗಳ ಹಾಗೂ ಗ್ರಾಮೀಣ ರೈತರ ಸಣ್ಣ ಸಣ್ಣ ಸಂಭ್ರಮ, ಶಿಳ್ಳೆ, ಕೇಕೆ, ಮದುವೆ ದಿಬ್ಬಣಗಳ ಸದ್ದನ್ನು ಕಸಿದು, ಆಧುನಿಕತೆಯೆಂಬ ಬಯಲನ್ನು ನಿರ್ಮಿಸುತ್ತ ಸಾಗಿದೆ. ಆ ಬಟಾಬಯಲಿನ ಮೌನ..,ನಿರ್ಜನ ಪ್ರದೇಶದ ದೃಶ್ಯವನ್ನು ನೆನಪಿಸಿಕೊಂಡರೆ ಈಗಲೇ ಭಯ ಆವರಿಸಿಕೊಳ್ಳುತ್ತಿದೆ.

ಇಲ್ಲಿ ಹೋರಾಟಗಳೇನೂ ಇಲ್ಲವೆಂದಲ್ಲ. ಇವೆ. ಆಧುನಿಕ ವಿಜ್ಞಾನದ ರಕ್ಕಸ ಶಕ್ತಿ ಮತ್ತು ರಾಜಕಾರಣದ ಅಸಾಧಾರಣ ಶಕ್ತಿಯ ಮುಂದೆ ಇವುಗಳು ನಿಶ್ಯಕ್ತರಾಗಿ ಸೋತಂತೆ ಕಾಣಿಸುತ್ತವೆ. ಅಷ್ಟೇ ಅಲ್ಲ, ಚಳವಳಿಗಳ ಮುಂಚೂಣಿ ನಾಯಕರಿಗೂ ರಾಜಕಾರಣ ಮತ್ತು ಆಧುನಿಕ ವಿಜ್ಞಾನ ಎಂಬವುಗಳು ಕೂಡ ಸ್ವತಃ ರೋಗಿಗಳಂತೆ ಕಂಡುಬರುವುದರಿಂದಾಗಿ ಅವುಗಳೆಂದಿಗೂ ಡಾಕ್ಟರ್ ಆಗಲಾರವು ಎಂಬ ಕಟು ವಾಸ್ತವದ ಸತ್ಯವೂ ತಿಳಿದಿದೆ.

ಕೊನೆಯದಾಗಿ, ಗೆಳೆಯ ಶ್ರೀಶೈಲ ಆಲದಹಳ್ಳಿಯವರು ಹೇಳಿದ ‘‘ಇದರ ವಿರುದ್ಧ ಹೋರಾಡಲು, ನಾವು ರೊಟ್ಟಿ ಬುತ್ತಿ ಕಟಗೊಂಡು ಹೇಗೋ ಓಡಾಡಬಹುದು. ಆದರೆ ಹೈಕೋರ್ಟ್ ನಲ್ಲಿ ಇಂತಹ ಕೇಸುಗಳ ರಿಟ್ ಹಾಕಲು ಕನಿಷ್ಠ ಹತ್ತು ಲಕ್ಷ ರೂಪಾಯಿಗಳನ್ನಾದರೂ ಅಲ್ಲಿನ ವಕೀಲರು ಕೇಳುತ್ತಾರೆ’’ಎಂದ ಮಾತು ಎದೆಯಲ್ಲಿ ರಿಂಗಣಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಬಿ.ಶ್ರೀನಿವಾಸ

contributor

Similar News