ಇಂಗ್ಲಿಷ್ ರಂಗನಾಯಕ ಟಿಪ್ಪು

Update: 2024-07-04 04:52 GMT

ತಮಗೆ ದುಃಸ್ವಪ್ನವಾಗಿ ಮೆರೆಯುತ್ತಿದ್ದ ಟಿಪ್ಪುವಿನ ಪತನವನ್ನು ಸಂಭ್ರಮಿಸಲು ನೋಡುವವರೊಂದಿಗೆ, ಛಲ ಬಿಡದ ಒಬ್ಬ ಶೂರನ ಕಡೆಯವರೆಗಿನ ಹೋರಾಟವನ್ನು ಪ್ರಶಂಸಿಸುವವರೂ ಇಂಗ್ಲಿಷರಲ್ಲಿ ಬಹುಸಂಖ್ಯಾತರಾಗಿದ್ದರು. ಮಹಾಭಾರತದಲ್ಲಿ ಭೀಮ ನಾಯಕನಾಗಿ ಪ್ರೋಟೋಗಾನಿಸ್ಟ್ ಆದರೆ, ದುರ್ಯೋಧನ ಅಂಟಾಗನಿಸ್ಟ್ ಅಥವಾ ಪ್ರತಿನಾಯಕನಾಗಿದ್ದರೂ ಅವನ ಅಚಲವಾದ ಛಲ ಮತ್ತು ಆತ್ಮಾಭಿಮಾನದ ಕಾರಣಕ್ಕಾಗಿ ಭೀಮನಿಗಿಂತ ಒಂದು ಕೈ ಮೇಲಾಗಿ ಜನಪ್ರಿಯನಾಗುವಂತೆ ಟಿಪ್ಪು ಇಂಗ್ಲಿಷ್ ಸಾಮಾನ್ಯ ಜನರ ರಂಗನಾಯಕನಾಗಿದ್ದ.

ಟಿಪ್ಪುವಿನ ಹೊರತಾಗಿ ಭಾರತದ ಬೇರಾವ ರಾಜರೂ ಇಂಗ್ಲಿಷ್ ಜನರ ಐತಿಹ್ಯವಾಗಿ ಮೆರೆದಿದ್ದಿಲ್ಲ. ‘‘ಮೈಸೂರಿನ ಹುಲಿ ಟೀಪೂ ಸಾಯೇಬಾ’’ ಎಂದೇ ಇಂಗ್ಲೆಂಡಿನ ಸಾಮಾನ್ಯ ಜನರ ನಾಲಿಗೆಯ ಮೇಲೆ ಸುಳಿದಾಡುತ್ತಿದ್ದ ಟಿಪ್ಪು. ಅವನ ಶೌರ್ಯ, ಪರಾಕ್ರಮದ ಕಾಳಗಗಳು, ದಿಟ್ಟತನದ ಪ್ರತ್ಯುತ್ತರಗಳು, ಕಠೋರವಾಗಿ ತನ್ನ ಇಂಗ್ಲಿಷ್ ಕೈದಿಗಳಿಗೆ ಹಿಂಸೆ ನೀಡುತ್ತಲಿದ್ದದ್ದೆಲ್ಲವೂ ಇಂಗ್ಲಿಷ್ ಜನರಲ್ಲಿ ಐತಿಹ್ಯದ ರೂಪಗಳನ್ನು ಪಡೆದಿದ್ದವು. ಅಳುತ್ತಿದ್ದ ಮಕ್ಕಳನ್ನು ಬ್ರಿಟಿಷ್ ತಾಯಂದಿರು ‘‘ನೋಡು ಟೀಪೂ ಸಾಯೇಬಾ ಬರ್ತಾನೆ’’ ಎಂದು ಹೆದರಿಸಿ ಸುಮ್ಮನಿರಿಸುವಷ್ಟರ ಮಟ್ಟಿಗೆ ಟಿಪ್ಪುವಿನ ಗುಮ್ಮ ಆಂಗ್ಲರಲ್ಲಿ ಆವರಿಸಿತ್ತು.

ಆಗ ಬ್ರಿಟಿಷ್ ಚಿತ್ರಕಲಾವಿದರಿಗೆ ಟಿಪ್ಪು ಜೀವನದ ಪ್ರಮುಖ ಸಂಗತಿಗಳನ್ನು ಚಿತ್ರಿಸುವುದು ಸಮಕಾಲೀನ ಬಲು ಮೆಚ್ಚಿನ ಅಭಿರುಚಿಯಾಗಿತ್ತು. ಅದರಲ್ಲೂ 1792ರಲ್ಲಿ ನಡೆದ ಮೂರನೇ ಬ್ರಿಟಿಷ್ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ ಪ್ರಸಂಗದಿಂದ ಹಿಡಿದು 1799ರ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಮರಣಿಸುವವರೆಗೂ ಚಿತ್ರಿಸಿದ್ದ ವರ್ಣಚಿತ್ರಗಳು ಲಂಡನ್‌ನ ವಿವಿಧ ಚಿತ್ರ ಪ್ರದರ್ಶನ ಗ್ಯಾಲರಿಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದವು. ಅವುಗಳಲ್ಲಿ ಪ್ರಮುಖವಾಗಿದ್ದವು ಕಾರ್ನ್‌ವಾಲೀಸ್ ಟಿಪ್ಪುವಿನ ಆಸ್ಥಾನದಲ್ಲಿ ಎದುರುಗೊಳ್ಳುವುದು, ಅವನ ಮಕ್ಕಳನ್ನು ಒತ್ತೆಗೆ ಪಡೆದುಕೊಳ್ಳುವುದು, ಟಿಪ್ಪುವಿನ ಮಕ್ಕಳು ತಮ್ಮ ತಾಯಿಯಿಂದ ಅಗಲುವುದು, ಮುಂದೆ ಆ ಮಕ್ಕಳನ್ನು ತಾಯಿಗೆ ಮರಳಿಸುವುದು, ಶ್ರೀರಂಗ ಪಟ್ಟಣದ ಮೇಲಿನ ಭೀಕರ ದಾಳಿ, ಟಿಪ್ಪುವಿನ ಕೊನೆಯ ಪ್ರಯತ್ನ ಮತ್ತು ಅವನ ಪತನ, ಸರ್ ಡೇವಿಡ್ ಬೇರ್ಡ್ ಟಿಪ್ಪುವಿನ ದೇಹವನ್ನು ಪತ್ತೆ ಹಚ್ಚುವುದು, ಟಿಪ್ಪುವಿನ ದೇಹವನ್ನು ಅವನ ಕುಟುಂಬಸ್ಥರು ಗುರುತಿಸುವುದು; ಈ ಎಲ್ಲಾ ವರ್ಣ ಚಿತ್ರಗಳು ಬಹಳ ಗಾಢವಾದ ಪರಿಣಾಮವನ್ನು ಬೀರುವಂತಹ ಚಿತ್ರಣಗಳಾಗಿದ್ದವು.

 

ಸರ್ ರಾಬರ್ಟ್ ಕೆರ್ ಪೋರ್ಟರ್ ರಚಿಸಿದ ‘ಸ್ಟಾರ್ಮಿಂಗ್ ಆಫ್ ಶ್ರೀರಂಗಪಟ್ಟಣಂ’, ಅಂದರೆ ಶ್ರೀರಂಗಪಟ್ಟಣದ ಮೇಲಿನ ದಾಳಿಯ ವರ್ಣಚಿತ್ರವು ನೂರಾ ಇಪ್ಪತ್ತು ಅಡಿ ಉದ್ದವಿದ್ದು 2,550 ಚದರ ಅಡಿಗಳ ಕ್ಯಾನ್ವಾಸನ್ನು ಆವರಿಸಿತ್ತು. ತಮಗೆ ದುಃಸ್ವಪ್ನವಾಗಿ ಮೆರೆಯುತ್ತಿದ್ದ ಟಿಪ್ಪುವಿನ ಪತನವನ್ನು ಸಂಭ್ರಮಿಸಲು ನೋಡುವವರೊಂದಿಗೆ, ಛಲ ಬಿಡದ ಒಬ್ಬ ಶೂರನ ಕಡೆಯವರೆಗಿನ ಹೋರಾಟವನ್ನು ಪ್ರಶಂಸಿಸುವವರೂ ಅವರಲ್ಲಿ ಬಹುಸಂಖ್ಯಾತರಾಗಿದ್ದರು. ಮಹಾಭಾರತದಲ್ಲಿ ಭೀಮ ನಾಯಕನಾಗಿ ಪ್ರೋಟೋಗಾನಿಸ್ಟ್ ಆದರೆ, ದುರ್ಯೋಧನ ಅಂಟಾಗನಿಸ್ಟ್ ಅಥವಾ ಪ್ರತಿನಾಯಕನಾಗಿದ್ದರೂ ಅವನ ಅಚಲವಾದ ಛಲ ಮತ್ತು ಆತ್ಮಾಭಿಮಾನದ ಕಾರಣಕ್ಕಾಗಿ ಭೀಮನಿಗಿಂತ ಒಂದು ಕೈ ಮೇಲಾಗಿ ಜನಪ್ರಿಯನಾಗುವಂತೆ ಟಿಪ್ಪು ಇಂಗ್ಲಿಷ್ ಸಾಮಾನ್ಯ ಜನರ ರಂಗನಾಯಕನಾಗಿದ್ದ.

ಟಿಪ್ಪುವಿನ ಜೀವನ, ಶೌರ್ಯ ಮತ್ತು ಪತನವನ್ನು ಕುರಿತಂತೆ ಲಂಡನ್‌ನ ರಂಗಮಂದಿರಗಳಲ್ಲಿ 1791ರಿಂದ 1829ರವರೆಗೆ ಬೇಕಾದಷ್ಟು ರಂಗಪ್ರಯೋಗಗಳಾದ ದಾಖಲೆಗಳಿವೆ. ಅವುಗಳಲ್ಲಿ ಮೊದಲಿಗೆ ಟಿಪ್ಪು ಸಾಯಿಬ್ ಅಥವಾ ಭಾರತದಲ್ಲಿ ಬ್ರಿಟಿಷ್ ವೀರ (1791). ಆಗಷ್ಟೇ ಮೂರನೇ ಮೈಸೂರು ಯುದ್ಧ ಪ್ರಾರಂಭವಾಗುವ ಅಲ್ಪ ಪ್ರಮಾಣದ ಸುದ್ದಿ ಲಂಡನ್‌ನಲ್ಲಿ ಹರಡುತ್ತಿತ್ತು. ಕೋವೆಂಟ್ ಗಾರ್ಡನ್‌ನಲ್ಲಿರುವ ಥಿಯೇಟರ್ ರಾಯಲ್ ರಂಗಮಂದಿರದಲ್ಲಿ ಮಾರ್ಕ್ ಲಾಂನ್ಸಡೇಲ್ಸ್ ಪ್ಯಾಂಟೋಮೈಮ್ ಬ್ಯಾಲೆಟ್ ಜೂನ್ ಒಂದರಂದು 1791ರಲ್ಲಿ ಈ ರಂಗಪ್ರಯೋಗವನ್ನು ಯಶಸ್ವಿಯಾಗಿ ಪ್ರದರ್ಶಿಸಿತ್ತು. ಈ ಪ್ರಯೋಗದಲ್ಲಿ ಅತ್ಯಂತ ಪ್ರಮುಖವಾಗಿದದ್ದು ‘ಯುದ್ಧ ನೃತ್ಯ’. ಆಂಗ್ಲರು ಮತ್ತು ಭಾರತದ ಮಹಾಯುದ್ಧ ತಂತ್ರದ ಸಮರ ಕಲೆಯನ್ನು ಎದುರಾಗುವ ನೃತ್ಯ ಸಂಯೋಜನೆ ಅದಾಗಿತ್ತು.

ಇದೇ ರಂಗಪ್ರಯೋಗವು ಜೂನ್ ಏಳನೇ ತಾರೀಕು ಎರಡನೆಯ ಬಾರಿಗೆ ಪ್ರದರ್ಶನಗೊಂಡಿತ್ತು. ಅದರಲ್ಲಿ ಆಗಿನ ಪ್ರಖ್ಯಾತ ರಂಗಕರ್ಮಿ ಫಾಲೆಟ್ ಟಿಪ್ಪು ಸಾಹೇಬನಾಗಿ, ಬೈರ್ನ್ ಆಂಗ್ಲ ವಸಾಹತು ಅಧಿಕಾರಿಯಾಗಿ, ಮಿಸ್ ಫ್ರಾನ್ಸಿಸ್ ಅಧಿಕಾರಿಯ ಹೆಂಡತಿಯಾಗಿ ಅಭಿನಯಿಸಿದ್ದರು. ಬ್ಯಾನಿಸ್ಟರ್ ಭಾರತೀಯ ಸಮರ ಗೀತೆಯನ್ನು ಸಂಯೋಜಿಸಿದ್ದರು.

ಎಪ್ರಿಲ್ 9, 1792ರಲ್ಲಿ ಆಸ್ಟ್ಲೇ ಬಯಲು ರಂಗಮಂದಿರದಲ್ಲಿ ಟಿಪ್ಪೂ ಸುಲ್ತಾನ್ ಅಥವಾ ಬೆಂಗಳೂರು ಆಕ್ರಮಣ ಎಂಬ ರಂಗಪ್ರಯೋಗವನ್ನು ಮಾಡಿದ್ದರು. ಅದರಲ್ಲಿ 1791ರ ಫೆಬ್ರವರಿ ಮತ್ತು ಮಾರ್ಚ್‌ನ ಅವಧಿಯಲ್ಲಿ ಕಾರ್ನ್‌ವಾಲೀಸ್ ಬೆಂಗಳೂರಿನ ಮೇಲೆ ಮಾಡಿದ ದಾಳಿಯನ್ನು ನಿರೂಪಿಸಿದ್ದರು. ಈ ನಾಟಕದ ಪ್ರಚಾರಕ್ಕೆ ಸಮಗ್ರವಾದ, ವಿಶಿಷ್ಟವಾದ, ಪೌರಾತ್ಯ, ಶೋಕಭರಿತ, ಹಾಸ್ಯಭರಿತ, ಪ್ರಾಸಗೀತಾ ಶೈಲಿಯ ನಿರೂಪಣೆ ಎಂದು ಬಣ್ಣಿಸುತ್ತಿದ್ದರು. ನಾಟಕದ ಬಗೆಗಿನ ಪ್ರಚಾರವನ್ನು ಗಮನಿಸಿದರೆ, ಟಿಪ್ಪುವಿನ ಬಗ್ಗೆ ಅವರಿಗೆ ಪ್ರಶಂಸೆಯಾಗಲಿ ಅಥವಾ ಶತ್ರುತ್ವದ ಭಾವಕ್ಕಿಂತ ಮಿಗಿಲಾಗಿ ಅವನು ದಂತಕತೆಯಾಗಿ ಜನ ಸಾಮಾನ್ಯರಲ್ಲಿ ಹರಿದಾಡುತ್ತಿದ್ದು, ಆ ಖ್ಯಾತಿಯನ್ನು ತಮ್ಮ ನಾಟಕಕ್ಕೆ ಬಳಸಿಕೊಂಡಿರುವಂತೆ ತೋರುತ್ತದೆ.

‘ದ ಮದ್ರಾಸ್ ಕೊರಿಯರ್’ ಎಂಬ ವಾರ್ತಾ ಪತ್ರಿಕೆಯು 13ನೇ ಡಿಸೆಂಬರ್ 1792ರ ಸಂಚಿಕೆಯಲ್ಲಿ ಆ ರಂಗಪ್ರಯೋಗದ ಬಗ್ಗೆ ವಿಮರ್ಶೆಯನ್ನು ಪ್ರಕಟಿಸುತ್ತದೆ. ‘‘ನಿರ್ದೇಶಕ ಆಸ್ಟ್ಲಿಯು ತನ್ನ ಜೀವಮಾನವನ್ನೆಲ್ಲಾ ಮೈಸೂರು ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದಿದ್ದರೂ, (ಅವರೇ ಹೇಳಿಕೊಂಡಿರುವಂತೆ) ಅವನು ತನ್ನ ನಾಟಕದಲ್ಲಿ ಟಿಪ್ಪು ಸಾಹೇಬ, ಅವನ ಆಸ್ಥಾನ ಮತ್ತು ಅವನ ಆಸ್ಥಾನಿಕರನ್ನು, ಅವರ ನಡವಳಿಕೆ ಮತ್ತು ರೀತಿ ನೀತಿಗಳನ್ನು ಪರಿಗಣಿಸುವುದಕ್ಕಿಂತ ಬೇರೆ ಮಾಹಿತಿ ದೊರಕಿರುತ್ತಿರಲಿಲ್ಲ.

ಮೊದಲನೆಯ ದೃಶ್ಯದಲ್ಲಿ, ತನ್ನ ಆಸ್ಥಾನಿಕರಿಂದ ಸುತ್ತುವರಿದಿರುವ ಟಿಪ್ಪು ತುರ್ಕಿ ಪೋಷಾಕಿನಲ್ಲಿ ಮೇಜಿನ ಬಳಿ ಕುಳಿತಿರುತ್ತಾನೆ. ಅವನ ಭಟರು ತಲೆಗೆ ಪೇಟಗಳನ್ನು ಧರಿಸಿರುವ ಬದಲು ಕುಚ್ಚು ಮತ್ತು ಪುಕ್ಕಗಳಿರುವ ಅರ್ಮೇನಿಯಾದ ಟೋಪಿಗಳನ್ನು ಧರಿಸಿರುತ್ತಾರೆ. ದೂರದಲ್ಲಿರುವ ಟಿಪ್ಪುವಿನ ಕಾವಲು ಭಟರು ಹುಲಿ ಚರ್ಮದ ಪೋಷಾಕುಗಳನ್ನು ಧರಿಸಿದ್ದು, ಕೋಟೆಯಲ್ಲಿ ಸಿಕ್ಕಾಪಟ್ಟೆ ದನದ ಮಾಂಸ ತಿಂದವರಂತೆ ಕಾಣುತ್ತಿದ್ದು, ಎರಡು ಅಲುಗಿನ ಕೊಡಲಿಯ ಭರ್ಜಿಗಳನ್ನು (ಹಾಲ್ಬರ್ಡ್) ಹಿಡಿದು ನಿಂತಿರುತ್ತಾರೆ.

ಇನ್ನು ಎರಡನೆಯ ಅಂಕದಲ್ಲಿ ಆಸ್ಥಾನಿಕರ ನಡವಳಿಕೆಗಳನ್ನು ಮತ್ತು ಶಿಷ್ಟಾಚಾರಗಳನ್ನು ಪರಿಚಯಿಸುವರು. ಸೂರ್ಯ ವಂದನೆ ಮಾಡುವ ಪ್ರಧಾನ ಪುರೋಹಿತನು ಮುಂದೆ ಬರುತ್ತಾನೆ. ಅವನೊಂದಿಗೆ ಬರುವ ಇತರ ಬೇರೆ ಬೇರೆ ಬಗೆಯ ಪುರೋಹಿತರು ವಿಧ ವಿಧವಾದ ಪೂಜಾ ವಿಧಿಗಳನ್ನು ನೆರವೇರಿಸುತ್ತಾ, ಮಂತ್ರಗಳನ್ನು ಪಠಿಸುತ್ತಾ ಮೊಲ, ಆಡು ಮತ್ತು ಹಂದಿಗಳ ಕುತ್ತಿಗೆಗಳಿಗೆ ಹೂವಿನ ಹಾರಗಳನ್ನು ಹಾಕಿದ್ದು, ಅವುಗಳನ್ನು ಬಲಿಕೊಟ್ಟು ಪೂಜೆ ಮಾಡುವ ಮೂಲಕ ದಿನದ ಕಲಾಪವನ್ನು ಪ್ರಾರಂಭಿಸುತ್ತಾರೆ.

ವೇದಿಕೆಯ ಹಿಂಬದಿಯಿಂದ ಮೊದಲ ಭಾಗದಲ್ಲಿ ಗರಡಿ ಮಲ್ಲರು ಅವರ ಪಾಡಿಗೆ ಅವರು ಕುಸ್ತಿ ಆಡುತ್ತಿರುತ್ತಾರೆ, ಇನ್ಯಾರೋ ಓಟದ ಸ್ಪರ್ಧೆಯಲ್ಲಿ ತೊಡಗಿರುತ್ತಾರೆ, ಸುಂದರವಾದ ಕನ್ಯೆಯರು ಟಿಪ್ಪುವಿನ ವಿಜಯವನ್ನು ಬಣ್ಣಿಸುತ್ತಾ ಪಾನಗೋಷ್ಠಿಯಲ್ಲಿ ತಮ್ಮ ಬಹುಮಾನಕ್ಕಾಗಿ ಹಾತೊರೆಯುತ್ತಿರುತ್ತಾರೆ! ಅಲ್ಯಾರೋ ಎಗರುತ್ತಿರುತ್ತಾರೆ, ಇಲ್ಯಾರೋ ಸ್ಕೇಟ್ ಮಾಡುತ್ತಿರುತ್ತಾರೆ!’’

 

 

ನಾಟಕದ ಬಗ್ಗೆ ‘ದಿ ಮದ್ರಾಸ್ ಕೊರಿಯರ್’ ಪತ್ರಿಕೆಯ ವಿಡಂಬನಾತ್ಮಕ ವಿಮರ್ಶೆಯನ್ನು ನೋಡಿದರೆ ಟಿಪ್ಪುವಿನ ಬಗ್ಗೆ ವಿವರವಾದ ಮತ್ತು ನಿಖರವಾದ ಮಾಹಿತಿಯನ್ನು ಹೊಂದಿರದೆ ಬರುತ್ತಿದ್ದ ಸುದ್ದಿಯನ್ನು ಆಧರಿಸಿ, ಜೊತೆಗೆ ಭಾರತೀಯ ಕಂದಾಚಾರಗಳ ಸ್ಥೂಲ ತಿಳುವಳಿಕೆಗಳನ್ನೆಲ್ಲಾ ಬಳಸುವ ಸ್ವಾತಂತ್ರ್ಯವನ್ನು ನಿರ್ದೇಶಕರು ತಾವೇ ತೆಗೆದುಕೊಂಡಂತೆ ಕಾಣುತ್ತದೆ. ಮನ್ನಿಸಿ ಪ್ರಶಂಸಿಸಲೂ ಆಗದ ಅಸಹನೆ ಮತ್ತು ತಿರಸ್ಕರಿಸಿ ನಿರ್ಲಕ್ಷಿಸಲೂ ಆಗದ ಗಣನೀಯ ಮತ್ತು ಶೌರ್ಯದ ವ್ಯಕ್ತಿತ್ವವನ್ನು ಸ್ಥೂಲ ಕತೆಯಲ್ಲಿ ಅಳವಡಿಸಿ, ಟಿಪ್ಪುವಿನ ಖ್ಯಾತಿಯನ್ನು ತಮ್ಮ ಆರಂಭದ ರಂಗಪ್ರಯೋಗಗಳಿಗೆ ಸರಕನ್ನಾಗಿ ಮಾಡಿಕೊಂಡಿರುವಂತೆ ಕಾಣುತ್ತದೆ.

ಆದರೆ ಜನ ಸಾಮಾನ್ಯರಲ್ಲಿ ಟಿಪ್ಪುವಿನ ಸುದ್ದಿಯ ಗಾಢತೆ ಮತ್ತು ಜನಪ್ರಿಯತೆ ಹೆಚ್ಚಿದಂತೆ ನಾಟಕ ತಂಡಗಳು ಟಿಪ್ಪುವಿನ ಜೀವನ ಮತ್ತು ಹೋರಾಟವನ್ನು ಹಗುರವಾಗಿಯೇ ಮುಂದುವರಿಸಲು ಆಗಲಿಲ್ಲ. ಮುಂದೆ ರಂಗ ಪ್ರಯೋಗಗಳು ಗಂಭೀರ ಸ್ವರೂಪವನ್ನು ಪಡೆಯತೊಡಗಿದ್ದವು.

1792ರಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ವೇದಿಕೆ ಕಂಡ ಟಿಪ್ಪು ಸಾಹೇಬ ಅಥವಾ ಈಸ್ಟ್ ಇಂಡಿಯಾ ಕಂಪೈನಿಂಗ್ ನಾಟಕವು ಮಾರ್ಕ್ ಲಾನ್ಸಡೇಲ್ ಅವರ ಸಂಗೀತ ಸಂಯೋಜನೆಯನ್ನು ಒಳಗೊಂಡಿತ್ತು. ಬಹಳಷ್ಟು ಹಾಡುಗಳು, ನೃತ್ಯಗಳು, ಸಾಹಸಗಳನ್ನೆಲ್ಲಾ ಒಳಗೊಂಡು ಮತ್ತಷ್ಟು ಆಕರ್ಷಣೀಯವಾಗಿದ್ದವು. ಟಿಪ್ಪು ಜೀವನ ಮತ್ತು ಹೋರಾಟವನ್ನು ಪ್ರಾಸಗೀತೆಗಳಲ್ಲಿ ಪ್ರಸ್ತುತ ಪಡಿಸಿದ ಮೊದಲ ರಂಗಪ್ರಯೋಗ ಸ್ಯಾಡ್ಲರ್ಸ್ ವೆಲ್ಸ್ ಥಿಯೇಟರಿನಲ್ಲಾಯಿತು. ಸಂಗೀತ ನಿರ್ವಹಣೆ ಮಾಡಿದ್ದು ಹೆಸರಾಂತ ಸಂಗೀತ ನಿರ್ದೇಶಕ ವಿಲಿಯಂ ರೀವ್.

ಅದೇ ರೀತಿಯಲ್ಲಿ ‘ಟಿಪ್ಪು ಸಾಹೇಬನ ಇಬ್ಬರು ಮಕ್ಕಳು’ ಎಂಬ ಭಾವಪ್ರಧಾನವಾದ ನಾಟಕವು 1792ರ ಆಗಸ್ಟ್ 20ರಂದು ಆಸ್ಟ್ಲೇ ರಂಗಮಂದಿರದಲ್ಲಿ ನಡೆಯಿತು. ಈ ನಾಟಕವು ಮೂರು ಭಾಗಗಳನ್ನು ಒಳಗೊಂಡಿತ್ತು. ಮೊದಲ ಭಾಗದಲ್ಲಿ ಟಿಪ್ಪುವಿನ ಮಕ್ಕಳನ್ನು ಅವರ ತಂದೆಯಿಂದ ಬೇರ್ಪಡಿಸಿ ಶ್ರೀರಂಗಪಟ್ಟಣದ ಮುಖ್ಯದ್ವಾರದಿಂದ ಕರೆದೊಯ್ಯುವಂತಹ ದೃಶ್ಯ. ಎರಡನೆಯ ಭಾಗದಲ್ಲಿ ಕೋಟೆಯೊಳಗೆ ರಾಜಕುಮಾರರನ್ನು ಒತ್ತೆಯಾಳುಗಳಾಗಿ ಪಡೆದುಕೊಂಡು ಇರಿಸಿಕೊಳ್ಳುವುದು. ಮೂರನೆಯ ಭಾಗದಲ್ಲಿ ತಂದೆಯೊಬ್ಬನಿಂದ ಮಕ್ಕಳನ್ನು ಒತ್ತೆಯಾಳನ್ನಾಗಿ ಪಡೆದ ಬ್ರಿಟಿಷ್ ಸೈನ್ಯದ ದಂಡು ತಂದೆ ಮಕ್ಕಳ ಸಂಬಂಧದ ಸಂವೇದನೆ ಇಲ್ಲದೇ ಸಂಭ್ರಮಿಸುವ ದೃಶ್ಯ. ಇದು ಲಂಡನ್‌ನ ಜನರಲ್ಲಿ ಭಾವೋದ್ರೇಕವನ್ನು ಉಂಟು ಮಾಡುವಂತಹ ನಾಟಕವಾಗಿತ್ತು.

1799ರಲ್ಲಿ ಶ್ರೀರಂಗಪಟ್ಟಣದ ಪತನವಾದ ಮೇಲೆ ಸ್ಯಾಡ್ಲರ್ಸ್ ವೆಲ್ಸ್ ನಿರ್ಮಾಣದಲ್ಲಿ ಟಿಪ್ಪು ಸಾಹೇಬ ಅಥವಾ ಹಿಂದೂಸ್ಥಾನದ ಬಯಲು ಎಂಬ ನಾಟಕವು ವೇದಿಕೆಯನ್ನು ಕಂಡಿತು. ಇದು ಇಲ್ಲಿಗೇ ನಿಲ್ಲದೇ 1823ರ ಜನವರಿ 20ರಂದು ಜೆ.ಎಚ್. ಆಮ್ಹೆರ್ಸ್ಟ್ ಟಿಪ್ಪೂ ಸಾಹೇಬ ಅಥವಾ ಶ್ರೀರಂಗಪಟ್ಟಣದ ಮೇಲೆ ದಾಳಿ ಎಂಬ ದೊಡ್ಡ ನಿರ್ಮಾಣದ ರಂಗಪ್ರಯೋಗ ರಾಯಲ್ ಕೋಬರ್ಗ್ ಥಿಯೇಟರಿನಲ್ಲಿ ವೇದಿಕೆಯನ್ನು ಕಂಡಿತು. ಪ್ರಾರಂಭದಿಂದ ಇಷ್ಟು ಹೊತ್ತಿಗೆ 37 ಹೊಸ ದೃಶ್ಯಗಳು ಸೇರಿದ್ದವು. ಇದರಲ್ಲಿ ಹೈದರಲಿಯ ಹೋರಾಟದ ಭೂಮಿಕೆಯ ಪರ್ವವೂ ಸೇರಿತ್ತು. ಈ ನಾಟಕದಲ್ಲಿ ಟಿಪ್ಪುವಿನ ಪಾತ್ರ ಮಾಡಿದ್ದು ಆಗಿನ ಹೆಸರಾಂತ ರಂಗಕರ್ಮಿ ಹನ್ರಿ ಸ್ಟೀಫನ್ ಕೆಂಬಲ್. ಈ ಬಾರಿಯ ನಾಟಕವು ಮಕ್ಕಳ ವೀಕ್ಷಣೆಯನ್ನೂ ಗಮನದಲ್ಲಿಟ್ಟುಕೊಂಡು ಮಾಡಿದ ರಂಗ ಪ್ರಯೋಗವಾಗಿತ್ತು.

1829ರ ಈಸ್ಟರ್ ಸೋಮವಾರ ‘ಸ್ಟಾರ್ಮಿಂಗ್ ಆಫ್ ಶ್ರೀರಂಗಪಟ್ಟಣ’ ಅಥವಾ ‘ದಿ ಡೆತ್ ಆಫ್ ಟಿಪ್ಪೂ ಸಾಹೇಬ್’ ನಾಟಕ ರಂಗನಾಯಕನಾಗಿ ಟಿಪ್ಪುವಿನ ಮುಂದುವರಿದ ಸರಣಿಯಾಗಿತ್ತು. ಕೋಟೆಯ ಮೇಲಿನ ದಾಳಿಯನ್ನು ಬಹಳ ಆಕರ್ಷಕವಾಗಿ ಆಸ್ಟ್ಲೇ ರಂಗಮಂದಿರದಲ್ಲಿ ತೋರಲಾಗಿತ್ತು. ಜಾನ್ ಜಿ ಕಾರ್ಟ್ಲಿಚ್ ಟಿಪ್ಪು ಆಗಿ ವೇದಿಕೆಯ ಮೇಲೆ ಭಯಂಕರವಾಗಿ ಅಬ್ಬರಿಸಿದ್ದರು. ಹುಲಿಯಂತೆಯೇ ಗರ್ಜಿಸಿದ್ದ ಪ್ರಸಂಗವು ಆಗ ನಿಜವಾಗಿ ಟಿಪ್ಪು ಕೂಡಾ ಹಾಗೆ ಗರ್ಜಿಸಿರಲಾರ ಎಂದು ಮೆಚ್ಚುಗೆಯ ಮಾತುಗಳನ್ನು ಆಡುವಂತೆ ಜನಪ್ರಿಯವಾಗಿತ್ತು. ನಾಟಕವು ಇಂಗ್ಲೆಂಡಿನ ದೇಶಭಕ್ತಿಯನ್ನು ಢಣಢಣಿಸಿದರೂ ಟಿಪ್ಪುವಿನ ವ್ಯಕ್ತಿತ್ವದ ಬಗ್ಗೆಯೇ ಗುನುಗುವಂತೆ ಮಾಡುತ್ತಿತ್ತು.

‘ಮೈಸೂರು ಹುಲಿ’ ಎಂಬ ಬಿರುದನ್ನು ಇಂಗ್ಲಿಷರು ಬಿಡದೇ ಟಿಪ್ಪುವಿನ ಹೆಸರನ್ನು ಬಳಸುತ್ತಿದ್ದರು. 1823ರಲ್ಲಿ ಬರ್ನಾಡ್ ವೈಕ್ಲಿಫ್ ಎಂಬ ಇಂಗ್ಲಿಷ್ ಕವಿ ಟಿಪ್ಪು ಮಡಿದುಬಿದ್ದ ಸ್ಥಳದಲ್ಲಿ ಭಾವುಕನಾಗಿ ಮುಸಲ್ಮಾನನೊಬ್ಬನ ಶೋಕ ಎಂಬ ಪದ್ಯವನ್ನು ರಚಿಸಿದ. ಈ ಬಗೆಯಾಗಿ ಅದೆಷ್ಟೋ ಪ್ರಸಂಗಗಳನ್ನು ಡೆನಿಸ್ ಎಂ. ಫಾರೆಸ್ಟ್ ಉಲ್ಲೇಖಿಸುತ್ತಾರೆ.

‘ಟೈಗರ್ ಆಫ್ ಮೈಸೂರ್’ ಪುಸ್ತಕವನ್ನು ಬರೆದಿರುವ ಡೆನಿಸ್ ಎಮ್ ಫಾರೆಸ್ಟ್ ತಮ್ಮ ಕೃತಿಯ ‘ದ ಲೆಜೆಂಡ್ ರಿಮೈನ್ಸ್’ ಎಂಬ ಕೊನೆಯ ಅಧ್ಯಾಯದಲ್ಲಿ ಇಂಗ್ಲಿಷ್ ಜನರ ಮನಸ್ಸಿನಲ್ಲಿ ಟಿಪ್ಪು ಬೀರಿದ್ದ ಪ್ರಭಾವವನ್ನು ವಿವರಿಸಿದ್ದಾರೆ. ಈ ಲೇಖನಕ್ಕೂ ಅದೇ ಅಧ್ಯಾಯ ಆಧಾರ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News