ಪದವೀಧರ ಶಿಕ್ಷಕರಿಗೆ ನ್ಯಾಯ ದೊರಕಿಸಿ

Update: 2024-08-06 06:44 GMT

ಮಾನ್ಯರೇ,

ವೃಂದ ಮತ್ತು ನೇಮಕ ನಿಯಮದ ಪೂರ್ವಾನ್ವಯ ಜಾರಿ ನಿರ್ಧಾರ ರಾಜ್ಯದ ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ (ಪಿಎಸ್‌ಟಿ) ಭವಿಷ್ಯವನ್ನೇ ಬುಡಮೇಲು ಮಾಡಿದೆ. ವಿದ್ಯಾರ್ಹತೆ ಪರಿಗಣಿಸದೆ ವಿಷಯವಾರು ವರ್ಗಾವಣೆ, ಭಡ್ತಿಯಲ್ಲಿ ಆಗುತ್ತಿರುವ ಅನ್ಯಾಯದಿಂದಾಗಿ 1.11 ಲಕ್ಷ ಶಿಕ್ಷಕರ ಸ್ಥಿತಿ ಡೋಲಾಯಮಾನವಾಗಿರುವ ಕಾರಣ ಈ ಪರಿಸ್ಥಿತಿಯ ವಿರುದ್ಧ ಸಿಡಿದೆದ್ದಿರುವ ಶಿಕ್ಷಕರು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಆಗಸ್ಟ್ 12ರಂದು ಮತ್ತೊಂದು ಸುತ್ತಿನ ಹೋರಾಟಕ್ಕೆ ಕಹಳೆ ಮೊಳಗಿಸಿದ್ದಾರೆ.

ನಮ್ಮ ರಾಜ್ಯದ ಒಂದರಿಂದ ಎಂಟನೇ ತರಗತಿಯವರೆಗಿನ ಸರಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಲಕ್ಷಾಂತರ ಮಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರ ಒಂದರಿಂದ ಐದನೇ ತರಗತಿಯವರೆಗೆ ಬೋಧನೆ ಮಾಡುವ ಶಿಕ್ಷಕರನ್ನು ಪಿಎಸ್‌ಟಿ ಶಿಕ್ಷಕ (ಪ್ರಾಥಮಿಕ ಶಿಕ್ಷಕ)ರೆಂದು ಹಾಗೂ ಆರರಿಂದ ಎಂಟನೇ ತರಗತಿಯವರೆಗೆ ಬೋಧನೆ ಮಾಡುತ್ತಿರುವ ಶಿಕ್ಷಕರನ್ನು ಜಿಪಿಟಿ ಶಿಕ್ಷಕ (ಪದವೀಧರ ಶಿಕ್ಷಕ)ರೆಂದು ಪರಿಗಣಿಸಿ ಅದರಂತೆ 2017ರಲ್ಲಿ ಹೊಸದಾಗಿ ನೇಮಕಾತಿ ವೃಂದವನ್ನು ಬದಲಾವಣೆ ಮಾಡಿದೆ. ಆದರೆ ಹಾಲಿ ಸೇವಾನಿರತ ಪ್ರಾಥಮಿಕ ಪದವೀಧರ ಶಿಕ್ಷಕರಿಗೆ ತಮ್ಮ ಸೇವೆಯನ್ನು ವಿಲೀನಗೊಳಿಸಿ ಮುಂಭಡ್ತಿ ನೀಡಬೇಕೆಂಬುದು ಅವರ ಬಹುದಿನದ ಒತ್ತಾಸೆಯಾಗಿದೆ.

ರಾಜ್ಯದಲ್ಲಿ ಹಾಲಿ ಒಂದರಿಂದ ಎಂಟನೇ ತರಗತಿಗೆ ಪಾಠ ಮಾಡುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಸುಮಾರು 80,000ಕ್ಕಿಂತ ಹೆಚ್ಚು ಮಂದಿ ವಿವಿಧ ವಿಷಯಗಳಲ್ಲಿ ಪದವಿ ವಿದ್ಯಾರ್ಹತೆ ಹೊಂದಿದ ಶಿಕ್ಷಕರಿದ್ದಾರೆ. ಈ ಶಿಕ್ಷಕರು ಕಳೆದ 20-25 ವರ್ಷಗಳಿಂದ ಯಾವುದೇ ಭಡ್ತಿಯಿಲ್ಲದೆ ಒಂದೇ ಹುದ್ದೆಯಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್‌ಸಿಟಿಇ) ನಿಗದಿಪಡಿಸಿರುವ ವಿದ್ಯಾರ್ಹತೆ ಹೊಂದಿರುವ ಅರ್ಹ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ. ಇವರೆಲ್ಲರನ್ನೂ ಸೇವಾ ಜ್ಯೇಷ್ಠತೆಯೊಂದಿಗೆ ಮುಂಭಡ್ತಿ ನೀಡಿ, ಸದರಿ ಪ್ರಾಥಮಿಕ ಶಾಲಾ ಶಿಕ್ಷಕರು 6ರಿಂದ 8ನೇ ತರಗತಿಯವರೆಗೆ ಹಾಗೂ ಪ್ರೌಢಶಾಲೆಗಳಿಗೆ ಮುಂಭಡ್ತಿ ಹೊಂದಿದರೂ ತಮ್ಮ 10, 15, 20, 25 ಹಾಗೂ 30 ವರ್ಷಗಳ ಕಾಲಮಿತಿ ಭಡ್ತಿಯನ್ನು ಪಡೆಯಲು ಯಾವುದೇ ತೊಂದರೆ ಆಗದಂತೆ ಸರಕಾರ ಅಭಯ ನೀಡಿ, ಹಾಲಿ ಇರುವ ನೇಮಕಾತಿ ವೃಂದಗಳಿಗೆ ಸೂಕ್ತ ತಿದ್ದುಪಡಿ ಹಾಗೂ ಬದಲಾವಣೆ ಮಾಡುವುದು ನ್ಯಾಯ ಸಮ್ಮತವಾಗಿದೆ.

ಈ ಬಗ್ಗೆ ಸರಕಾರ ಶೀಘ್ರವಾಗಿ ತೀರ್ಮಾನ ಕೈಗೊಂಡು, ಪದವೀಧರ ಶಿಕ್ಷಕರು ಹೋರಾಟಕ್ಕೆ ಇಳಿಯುವ ಮುನ್ನ ಅವರೊಂದಿಗೆ ಫಲಪ್ರದವಾದ ಮಾತುಕತೆ ನಡೆಸಿ ಆದಷ್ಟು ಬೇಗ ಸೂಕ್ತ ಆದೇಶ ಹೊರಡಿಸಬೇಕಾಗಿದೆ.

-ಹರಳಹಳ್ಳಿಪುಟ್ಟರಾಜು,

ಪಾಂಡವಪುರ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News