ಅಪಾಯದ ಅಂಚಿನಲ್ಲಿ ಹೈ ಟೆನ್ಶನ್ ಗೋಪುರ: ಹೆದ್ದಾರಿ ಪ್ರಾಧಿಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಜ್ವಲಂತ ನಿದರ್ಶನ

Update: 2024-07-26 06:18 GMT

ಕಾರ್ಕಳ : ರಾಹೆ -169  ಕಾರ್ಕಳ ಸಾಣೂರು ಭಾಗದಲ್ಲಿ ಕೆಲಸ ಪ್ರಾರಂಭವಾದಾಗಿನಿಂದ ಒಂದಲ್ಲ ಒಂದು ಅವಾಂತರ ನಡೆಯುತ್ತಲೇ ಇದೆ. ಆದರೂ ರಾಷ್ಟ್ರೀಯ ಹೆದ್ದಾರಿ ಕೆಲಸ ನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳು ಮಾತ್ರ ಜನರ ಸಮಸ್ಯೆ ಬಗ್ಗೆ ಕ್ಯಾರೆ ಅನ್ನದೆ ‘ಆನೆ ನಡೆದದ್ದೇ ದಾರಿ’ ಎಂಬಂತೆ ಸಾರ್ವಜನಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸದೆ ವರ್ತಿಸುತ್ತಿದ್ದು, ಸಾರ್ವಜನಿಕರ ಪಾಲಿಗೆ ನುಂಗಲಾರದ ತುತ್ತಾಗಿ ಮಾರ್ಪಟ್ಟಿದೆ.

ಇದೀಗ ಸಾಣೂರಿನ ಮುರತಂಗಡಿ ಬಳಿ 220 ಕೆವಿ ಹೈ ಟೆನ್ಷನ್ ವಿದ್ಯುತ್ ತಂತಿ ಹಾದು ಹೋಗುತ್ತಿದ್ದು, ರಸ್ತೆ ಬದಿಯಲ್ಲೇ ಹೈ ಟೆನ್ಷನ್ ಗೋಪುರವಿದೆ. ಇದರ ಪಕ್ಕದಲ್ಲೇ ಗುಡ್ಡದ ನೀರು ಹರಿದು ಗುಡ್ಡ ಜರಿಯುವ ಭೀತಿ ಎದುರಾಗಿದೆ. ಗೋಪುರ ಧರಾಶಾಯಿಯಾಗಲು ದಿನಗಣನೆ ಆರಂಭಿಸಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಊರು ಹೊತ್ತಿ ಉರಿಯಲು ಕಾಯುತ್ತಿದೆಯೇ ಎಂಬಂತೆ ಭಾಸವಾಗುತ್ತಿದೆ.

ಕಳೆದೊಂದು ವರ್ಷದಿಂದ ಮುರತಂಗಡಿಯ ಸಾಣೂರು ಯುವಕ ಮಂಡಲದ ಮೈದಾನದ ಬಳಿ ಹೆದ್ದಾರಿ ಕಾಮಗಾರಿ ವೇಳೆ ಕಡಿದಿರುವ ಗುಡ್ಡದ ಜರಿಯುತ್ತಿರುವ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಾರ್ವಜನಿಕರು ನಿರಂತರ ಆಗ್ರಹಿಸುತ್ತಿದ್ದಾರೆ. ಎರಡು ವಾರಗಳ ಹಿಂದೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಸಕ ಮತ್ತು ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಅಪಾಯಕಾರಿ ಜಾಗಕ್ಕೆ ಭೇಟಿ ನೀಡಿ 1 ವಾರದ ಒಳಗೆ ಕಾಮಗಾರಿ ಪ್ರಾರಂಭಿಸಲು ಮತ್ತು ಮೂರು ತಿಂಗಳ ಒಳಗೆ ತಡೆಗೋಡೆ ನಿರ್ಮಾಣ ಕಾರ್ಯವನ್ನು ಮುಗಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೆ, ಕಳೆದ 12 ದಿನಗಳಿಂದ ನಿರಂತರ ಮಳೆ ಸುರಿದು ಗುಡ್ಡದ ಇನ್ನಷ್ಟು ಭಾಗದ ಮಣ್ಣು ಜರಿದು ರಸ್ತೆಗೆ ಬೀಳುತ್ತಿದ್ದರೂ ಇಲಾಖೆ ಯಾವುದೇ ರಕ್ಷಣಾತ್ಮಕ ಕೆಲಸ ಕಾರ್ಯಗಳನ್ನು ಇನ್ನೂ ಕೈಗೆತ್ತಿಕೊಂಡಿಲ್ಲ. ಇಲಾಖೆಯು ಒಂದು ತಿಂಗಳ ಹಿಂದೆ ಗುಡ್ಡಜರಿದ ಭಾಗಕ್ಕೆ ಬಿಳಿ ಟಾರ್ಪಲ್ ಹೊದಿಸಿ, ಅಣಕವಾಡುತ್ತಿದೆ.

ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ದೇಶನದ ಹೊರತಾಗಿಯೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಮುಂದೆ ಆಗುವ ಎಲ್ಲಾ ಭಾರಿ ಅನಾಹುತಕ್ಕೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಭೂ ಮಾಲಕರ ಹೋರಾಟ ಸಮಿತಿಯ ಪ್ರಮುಖರು ಹಾಗೂ ಸಾರ್ವಜನಿಕರು ಎಚ್ಚರಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ದೇಶನವಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಬೇಜವಾಬ್ದಾರಿಯಿಂದ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿದ್ದು, ಯಾವುದಾದರೂ ಅನಾಹುತ ನಡೆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇರ ಹೊಣೆಗಾರರಾಗಬೇಕಾಗುತ್ತದೆ.

<ಸಾಣೂರು ನರಸಿಂಹ ಕಾಮತ್, ರಾಷ್ಟ್ರೀಯ ಹೆದ್ದಾರಿ ಭೂ ಮಾಲಕರ ಹೋರಾಟ ಸಮಿತಿಯ ಪ್ರಮುಖ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಮುಹಮ್ಮದ್ ಶರೀಫ್, ಕಾರ್ಕಳ

contributor

Similar News