ಭಾರತದ ಜನಸಂಖ್ಯೆ ಏರುತ್ತಿರುವುದು ನಿಜವೇ?
ಸರಕಾರ ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳುತ್ತಾ, ಇನ್ನೊಂದೆಡೆ ಒಟ್ಟಾರೆ ಫಲವಂತಿಕೆ ದರ ಕುಸಿಯುತ್ತಿದೆ ಎಂದು ವರದಿ ಬಿಡುಗಡೆ ಮಾಡಿ, ಜನರಲ್ಲಿ ಗೊಂದಲ ಉಂಟು ಮಾಡುವುದನ್ನು ಬಿಡಬೇಕಿದೆ. ಬಂಡವಾಳಶಾಹಿ ಧೋರಣೆಗೆ ವಿದಾಯ ಹೇಳಬೇಕಿದೆ. ಯುವಶಕ್ತಿಗೆ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ವಯೋವೃದ್ಧರ ಸಮಸ್ಯೆಗಳನ್ನು ಬಗೆ ಹರಿಸಲು ಸಕಾರಾತ್ಮಕವಾಗಿ ಯೋಚಿಸಬೇಕಿದೆ.
ಜುಲೈ 11, 1987ರಂದು ವಿಶ್ವದ ಜನಸಂಖ್ಯೆಯು 500 ಕೋಟಿಯ ಗಡಿ ದಾಟಿದ ದಿನ. ಹೀಗಾಗಿ ಜುಲೈ 11ರಂದು ಪ್ರತೀ ವರ್ಷವೂ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ನಿರಂತರವಾಗಿ ಬೆಳೆಯುವ ಜನಸಂಖ್ಯೆಗೆ ಬೇಕಾಗುವ ಆಹಾರ, ಬಟ್ಟೆ ಬರೆ, ವಸತಿ, ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗ ಇವುಗಳನ್ನು ಒದಗಿಸುವಷ್ಟು ಸಂಪನ್ಮೂಲಗಳು ಇಲ್ಲದೆ ಹೋದಾಗ ಜನಸಂಖ್ಯಾ ಬೆಳವಣಿಗೆಯು ಒಂದು ಸಮಸ್ಯೆಯಾಗುತ್ತದೆ.
ವಿಶ್ವಸಂಸ್ಥೆಯ ವರದಿ:
ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜನಸಂಖ್ಯಾ ಅಂದಾಜು ವರದಿಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. ವರದಿಯ ಪ್ರಕಾರ ಭಾರತದ ಜನಸಂಖ್ಯೆ 142.86 ಕೋಟಿ. ಚೀನಾದ್ದು 142.57 ಕೋಟಿ. ಚೀನಾದ ಜನಸಂಖ್ಯೆ ಈಗಾಗಲೇ ಕಡಿಮೆಯಾಗತೊಡಗಿದೆ. ಭಾರತದಲ್ಲಿ ಇನ್ನೂ ಮೂರು ದಶಕಗಳ ಕಾಲ ಜನಸಂಖ್ಯೆ ಹೆಚ್ಚಬಹುದು ಎಂದು ವಿಶ್ವಸಂಸ್ಥೆ ವರದಿ ವಿಶ್ಲೇಷಿಸಿದೆ. ಜನಸಂಖ್ಯೆ ಸುಸ್ಥಿರತೆ ಸಾಧಿಸುವ 2.1‘ಫರ್ಟಿಲಿಟಿ ರೇಟ’ನ್ನು ಭಾರತ ಸಾಧಿಸಿದೆಯಾದರೂ, ಹಲವಾರು ಕಾರಣಗಳಿಂದ ಜನಸಂಖ್ಯೆ ಹೆಚ್ಚಳ ಇನ್ನೂ ಮೂರು ದಶಕ ಮುಂದುವರಿಯುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
2050ರ ಹೊತ್ತಿಗೆ ಚೀನಾದ ಜನಸಂಖ್ಯೆ 131.7 ಕೋಟಿಗೆ ಇಳಿದರೆ, ಭಾರತದ ಜನಸಂಖ್ಯೆ 166.8 ಕೋಟಿಗೆ ಏರುತ್ತದೆ. ಚೀನಾದಲ್ಲಿ ವೃದ್ಧರ ಸಂಖ್ಯೆ 2030ರ ಹೊತ್ತಿಗೆ 19.2 ಕೋಟಿಗೆ ಏರಿ, ಈಗಿರುವ ಪ್ರಮಾಣದ ದುಪ್ಪಟ್ಟಾಗುತ್ತದೆ. ಭಾರತದಲ್ಲಿ 2050ರ ಹೊತ್ತಿಗೆ ಐದನೇ ಒಂದು ಭಾಗದಷ್ಟು ಜನ ವೃದ್ಧರಾಗುತ್ತಾರೆ ಎಂದು ವರದಿ ವಿಶ್ಲೇಷಿಸಿದೆ.
ಫಲವಂತಿಕೆ ದರ
ಸಾಮಾನ್ಯವಾಗಿ ಒಂದು ದೇಶದ ಜನಸಂಖ್ಯೆಯ ಏರಿಕೆಯ ಗತಿಯನ್ನು ಅರಿಯಲು ಒಟ್ಟಾರೆ ಫಲವಂತಿಕೆ ದರ (Total Fertility Rate)ಎಂಬ ಮಾನದಂಡವನ್ನು ಬಳಸುತ್ತಾರೆ. ಅಂದರೆ ಒಂದು ದೇಶ/ಪ್ರದೇಶದಲ್ಲಿ ಒಬ್ಬ ಮಹಿಳೆ 18-49 ವಯಸ್ಸಿನ ತನ್ನ ಗರ್ಭಧಾರಣಾ ಅವಧಿಯಲ್ಲಿ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತಿದ್ದಾಳೆ ಎನ್ನುವ ಸರಾಸರಿ ಸಂಖ್ಯೆಯಿದು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಭಾರತದ ಒಟ್ಟಾರೆ ಫಲವಂತಿಕೆ ದರ (ಟಿಎಫ್‌ಆರ್) 5.9. ಅಂದರೆ 1951ರ ವೇಳೆಗೆ ಭಾರತದ ಮಹಿಳೆ ಸರಾಸರಿ 6 ಮಕ್ಕಳಿಗೆ ಜನ್ಮ ನೀಡುತ್ತಿದ್ದರು ಎಂದರ್ಥ.
ಒಟ್ಟಾರೆ ಫಲವಂತಿಕೆ ದರ ಅದೇ ರೀತಿ ಮುಂದುವರಿದಿದ್ದರೆ ಈಗ ಭಾರತದ ಜನಸಂಖ್ಯೆ 250-300 ಕೋಟಿಗೆ ತಲುಪಬೇಕಿತ್ತು. ಆದರೆ, ಭಾರತವು ಪ್ರಾರಂಭದಿಂದಲೇ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಹಾಗೂ ಕುಟುಂಬ ನಿಯಂತ್ರಣ ಸಾಧನಗಳ ಲಭ್ಯತೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಎಲ್ಲೆಲ್ಲಿ ಅರಿವು, ಮಹಿಳೆಯರ ಶಿಕ್ಷಣ ಹಾಗೂ ಸಬಲೀಕರಣ ಸಾಪೇಕ್ಷವಾಗಿ ಸಾಧ್ಯವಾಯಿತೋ ಅಲ್ಲೆಲ್ಲಾ ಬಹಳ ಬೇಗನೆ ಟಿಎಫ್‌ಆರ್ ದರ ಕುಸಿಯುತ್ತಾ ಬಂತು. ರಾಷ್ಟೀಯ ಕುಟುಂಬ ಆರೋಗ್ಯ ಸರ್ವೇ (ಎನ್‌ಎಫ್‌ಎಚ್‌ಎಸ್)ಯ ಅಂಕಿ ಅಂಶಗಳ ಪ್ರಕಾರ ಈಗ ಭಾರತದ ಸರಾಸರಿ ಟಿಎಫ್‌ಆರ್ ದರ 2.1ಗೆ ಕುಸಿದಿದೆ. ಅಂದರೆ 1951ಕ್ಕೆ ಹೋಲಿಸಿದರೆ ಜನಸಂಖ್ಯಾ ಏರಿಕೆಯ ದರ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ. ಸಂತಾನ ಶಕ್ತಿ ಫಲವತ್ತತೆ 2.1 ಇದ್ದಲ್ಲಿ ಜನಸಂಖ್ಯೆ ಹೆಚ್ಚುವುದೂ ಇಲ್ಲ. ಕಡಿಮೆಯೂ ಆಗುವುದಿಲ್ಲ ಎನ್ನುವುದು ತಜ್ಞರ ಲೆಕ್ಕಾಚಾರ.
ಕುಸಿತಕ್ಕೆ ಕಾರಣಗಳೇನು?
ಭಾರತದ ಜನಸಂಖ್ಯಾ ನಿಯಂತ್ರಣ ಯೋಜನೆಯು ಪ್ರಧಾನವಾಗಿ ಮನವರಿಕೆ, ಸೌಲಭ್ಯಗಳ ಒದಗಿಸುವಿಕೆ ಹಾಗೂ ಮಹಿಳಾ ಸಬಲೀಕರಣಗಳನ್ನು ಆಧರಿಸಿಯೇ ನಡೆಯುತ್ತಿದೆ. ಜಗತ್ತಿನಾದ್ಯಂತ ಎಲ್ಲಾ ಯಶಸ್ವಿ ಕುಟುಂಬ ನಿಯಂತ್ರಣಗಳ ಕಥನವೂ ಇದೇ ಮಾರ್ಗವನ್ನು ಅನುಸರಿಸಿದೆ. 1994ರಲ್ಲಿ ಕೈರೋದಲ್ಲಿ ನಡೆದ ಜನಸಂಖ್ಯಾ ನಿಯಂತ್ರಣ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲೂ ಭಾರತ ಇದೇ ಮಾರ್ಗಕ್ಕೆ ಬದ್ಧವಾಗಿರುವುದಾಗಿ ಘೋಷಿಸಿದೆ.
ಭಾರತವು ಜನಸಂಖ್ಯಾ ಸ್ಫೋಟದ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲವೆಂದೂ, ವಾಸ್ತವವಾಗಿ ಜನಸಂಖ್ಯಾ ಏರಿಕೆಯು ಭಾರತದ ಬಡತನಕ್ಕೆ ಕಾರಣವಲ್ಲವೆಂದೂ ಹಾಗೂ ಈಗ ಭಾರತದಲ್ಲಿ ಯುವಜನಸಂಖ್ಯೆ ಹೆಚ್ಚಿರುವ ಕಾರಣದಿಂದ ಅದ್ಭುತ ಆರ್ಥಿಕ ಪ್ರಗತಿಯ ಅವಕಾಶವಿದೆಯಂಬುದೂ ಸ್ಫಟಿಕದಷ್ಟೇ ಸ್ಪಷ್ಟ. ಈ ಎಲ್ಲಾ ಅಂಶಗಳನ್ನು ಭಾರತ ಸರಕಾರದ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆಯ ಭಾಗವಾಗಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಯ 3,4 ಮತ್ತು 5ನೇ ಸುತ್ತಿನ ಸರ್ವೇಗಳು ಹಾಗೂ ಭಾರತದ 1991, 2001 ಮತ್ತು 2011ರ ಜನಸಂಖ್ಯಾ ಸೆನ್ಸಸ್ ವರದಿಗಳು ಸ್ಪಷ್ಟ ಪಡಿಸುತ್ತವೆ.
ಭಾರತದ ಬಡತನ ಮತ್ತು ಜನಸಂಖ್ಯೆ
1951ರಲ್ಲಿ ಭಾರತದ ಜನಸಂಖ್ಯೆ 36 ಕೋಟಿ ಇದ್ದರೆ ಈಗ 140 ಕೋಟಿಯಾಗಿದೆ. ಅಂದರೆ ಹೆಚ್ಚೂಕಡಿಮೆ 4 ಪಟ್ಟು ಹೆಚ್ಚಿದೆ. ಆಗ ಭಾರತದ ಜಿಡಿಪಿ 2.52 ಲಕ್ಷ ಕೋಟಿ ರೂ. ಈಗ ಭಾರತದ ಜಿಡಿಪಿ 200 ಲಕ್ಷ ಕೋಟಿ ರೂ. ಅಂದರೆ ಭಾರತದ ಸಂಪತ್ತು ಸ್ವಾತಂತ್ರ್ಯಾನಂತರದಲ್ಲಿ 83 ಪಟ್ಟು ಹೆಚ್ಚಾಗಿದೆ. ಅಂದರೆ, ಸ್ವಾತಂತ್ರ್ಯಾನಂತರದಲ್ಲಿ ಜನಸಂಖ್ಯೆ 4 ಪಟ್ಟು ಹೆಚ್ಚಾದರೂ, ಸಂಪತ್ತು 83 ಪಟ್ಟು ಹೆಚ್ಚಿಗೆಯಾಗಿದೆ. ಈ ಸಂಪತ್ತನ್ನು ಸೃಷ್ಟಿಸಿರುವವರು ಈ ದೇಶದ ಕಾರ್ಮಿಕರು, ರೈತರು, ಉದ್ಯೋಗಿಗಳೇ. ಆದರೂ ಅವರು ಬಡವರಾಗಿಯೇ ಉಳಿದಿರಲು ಸಂಪತ್ತಿನ ವಿತರಣೆಯಲ್ಲಿ ಬಂಡವಾಳ ಶಾಹಿ ನೀತಿಗಳನ್ನು ಅನುಸರಿಸುತ್ತಿರುವುದು ಕಾರಣವೇ ಹೊರತು ಜನಸಂಖ್ಯೆ ಏರಿಕೆಯಲ್ಲ.
‘‘ಬಡತನದಿಂದ ತುಂಬಿದ ಶ್ರೀಮಂತ ದೇಶ ನಮ್ಮದು’’ ಎಂದು ಪಂಡಿತ ಜವಾಹರಲಾಲ್ ನೆಹರೂರವರು ಒಮ್ಮೆ ಹೇಳಿದ್ದರು. ನೆಲ, ಜಲ, ಉತ್ತುಂಗ ಶಿಖರಗಳು, ದೇಶವನ್ನು ಸುತ್ತುವರಿದ ಮೂರು ಸಮುದ್ರಗಳು, ಪ್ರಕೃತಿಯ ಸೌಂದರ್ಯ, ಭೂ- ಜಲ ಸಂಪತ್ತು, ವಿಪುಲ ಖನಿಜ ದ್ರವ್ಯಗಳು ಭಾರತದಲ್ಲಿ ಸಮೃದ್ಧವಾಗಿವೆ. ನಮ್ಮ ದೇಶ ‘ಸುಜಲಾಂ ಸುಫಲಾಂ ಸಸ್ಯ ಶ್ಯಾಮಲಾಂ’ ಎಂದೆನಿಸಿತು. ಆದರೆ, ಇಂದು ಎಲ್ಲರಿಗೂ ಅವಶ್ಯವಾದ ಆಶ್ರಯಗಳು ಸಾಕಷ್ಟು ಸಿಗದಂತಾಗಿದೆ. ಬಡತನ ರೇಖೆಯ ಕೆಳಗೆ ಅನೇಕ ಕುಟುಂಬಗಳಿವೆ. ಇದಕ್ಕೆ ಮುಖ್ಯ ಕಾರಣ ಬಂಡವಾಳಶಾಹಿ ನೀತಿ. ಬಂಡವಾಳಶಾಹಿಗಳ ಕಪಿ ಮುಷ್ಟಿಯಲ್ಲಿ ದೇಶ ಇರುವುದರಿಂದ ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಹಾಗೆ ನೋಡಿದರೆ, ಎನ್‌ಎಫ್‌ಎಚ್‌ಎಸ್ ವರದಿಗಳು ಹಾಗೂ ಜಗತ್ತಿನಾದ್ಯಂತ ನಡೆಯುತ್ತಿರುವ ಅಧ್ಯಯನಗಳು ಮುಂದಿಡುತ್ತಿರುವ ಅಪಾಯ ಜನಸಂಖ್ಯೆ ಹೆಚ್ಚಳದ್ದಲ್ಲ, ಜನಸಂಖ್ಯೆ ಕಡಿಮೆ ಆಗುತ್ತಿರುವುದು!
ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈಜ್ಞಾನಿಕ ಪತ್ರಿಕೆ ‘ಲ್ಯಾನ್ಸೆಟ್’ ಅಧ್ಯಯನದ ಪ್ರಕಾರ ಈಗ ಭಾರತದ ಜನಸಂಖ್ಯೆ 142.86 ಕೋಟಿಯಿದ್ದು, 2050ರ ವೇಳೆಗೆ 166.8 ಕೋಟಿ ತಲುಪಬಹುದೆಂದು ಊಹಿಸಿದ್ದರೂ, ಜನಸಂಖ್ಯೆಯ ವೇಗ ಈಗ ಕುಸಿಯುತ್ತಿರುವುದರಿಂದ ವಾಸ್ತವದಲ್ಲಿ 2050ರಿಂದ ಭಾರತದ ಜನಸಂಖ್ಯೆ 109 ಕೋಟಿಗೆ ಇಳಿಯಬಹುದು!. ಅದಕ್ಕಿಂತ ಗಂಭೀರವಾದ ಸಂಗತಿಯೆಂದರೆ, ಆ ಸಂದರ್ಭದಲ್ಲಿ ಕೆಲಸ ಮಾಡಬಲ್ಲ ಯುವಕರ ಸಂಖ್ಯೆಗಿಂತ ಹಿರಿಯರ, ವಯೋವೃದ್ಧರ ಸಂಖ್ಯೆ ಎರಡು ಪಟ್ಟು ಹೆಚ್ಚುತ್ತದೆ. ಇದು ಆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಈಗಾಗಲೇ ಚೀನಾದಲ್ಲಿ ಈ ಪರಿಸ್ಥಿತಿ ಎದುರಾಗಿದೆ. ಆದ್ದರಿಂದಲೇ ಅಲ್ಲಿ ಒಂದು ಮಕ್ಕಳ ನೀತಿಯನ್ನು ಸಡಿಲಿಸಿ ಮೂರು ಮಕ್ಕಳನ್ನು ಪಡೆಯಲು ಉತ್ತೇಜನ ನೀಡಲಾಗುತ್ತಿದೆ.
ಮುಗಿಸುವ ಮುನ್ನ:
ಸರಕಾರ ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳುತ್ತಾ, ಇನ್ನೊಂದೆಡೆ ಒಟ್ಟಾರೆ ಫಲವಂತಿಕೆ ದರ ಕುಸಿಯುತ್ತಿದೆ ಎಂದು ವರದಿ ಬಿಡುಗಡೆ ಮಾಡಿ, ಜನರಲ್ಲಿ ಗೊಂದಲ ಉಂಟು ಮಾಡುವುದನ್ನು ಬಿಡಬೇಕಿದೆ. ಬಂಡವಾಳಶಾಹಿ ಧೋರಣೆಗೆ ವಿದಾಯ ಹೇಳಬೇಕಿದೆ. ಯುವಶಕ್ತಿಗೆ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ವಯೋವೃದ್ಧರ ಸಮಸ್ಯೆಗಳನ್ನು ಬಗೆ ಹರಿಸಲು ಸಕಾರಾತ್ಮಕವಾಗಿ ಯೋಚಿಸಬೇಕಿದೆ. ಅಂಗೈಯಲ್ಲಿ ಅರಮನೆ ತೋರಿಸುವ ಕೆಲಸ ಕೈ ಬಿಟ್ಟು, ವಾಸ್ತವದ ಮೂಸೆಯಲ್ಲಿ ರಚನಾತ್ಮಕ ಕೆಲಸಗಳತ್ತ ದೇಶದ ಹೊಸ ನೀತಿ ನಿಯಮಗಳು ರೂಪಿತಗೊಳ್ಳಬೇಕಿದೆ. ಅಂದಾಗ ದೇಶಕ್ಕೆ ಭವ್ಯ ಭವಿಷ್ಯವಿದೆ.