ಭವಿಷ್ ಅಗರ್ವಾಲ್ ಅಹಂಕಾರಕ್ಕೆ ಓಲಾ ಸ್ಕೂಟರ್ ಬಲಿಯಾಯಿತೇ?
ವಿಜಯ್ ಶೇಖರ್ ಶರ್ಮಾ, ರವೀಂದ್ರನ್ ಬೈಜು, ಅಶ್ನೀರ್ ಗ್ರೋವರ್ ಈ ಮೂವರು ಸ್ಟಾರ್ಟ್‌ಅಪ್ ಸಂಸ್ಥಾಪಕರಲ್ಲಿ ಮೂವರೂ ಯಶಸ್ವೀ ಉದ್ಯಮಿಗಳು, ಸಾಕಷ್ಟು ಹಣವುಳ್ಳವರು ಮತ್ತು ಯೂತ್ ಐಕಾನ್‌ಗಳು. ಮಾಧ್ಯಮಗಳಂತೂ ಆ ಮೂವರನ್ನೂ ನವಭಾರತದ ಸೂಪರ್ ಸ್ಟಾರ್‌ಗಳನ್ನಾಗಿ ಮಾಡಿಬಿಟ್ಟಿವೆ. ಮೂವರಲ್ಲೂ ಯಾವುದೋ ಒಂದು ಹಂತದಿಂದ ತಮಗಿಂತ ಶಕ್ತಿವಂತರು, ಸಮರ್ಥರು, ಪ್ರಭಾವಿಗಳು, ಶ್ರೇಷ್ಠರು ಇನ್ನಾರಿಲ್ಲ ಎಂಬ ಭಾವನೆ ಬಂದುಬಿಟ್ಟಿದೆ ಮತ್ತು ಆ ಮೂವರೂ ತಾವು ನಿಯಮಗಳಿಗಿಂತಲೂ, ಕಾನೂನಿಗಿಂತಲೂ ಮೇಲೆ, ತಮ್ಮ ಗ್ರಾಹಕರು ಹಾಗೂ ಉದ್ಯಮ ಪರಿಣಿತರಿಗಿಂಲೂ ಮೇಲೆ ಎಂದುಕೊಂಡಿದ್ದೂ ಆಗಿದೆ.
ಈಗ ಮೂವರೂ ದಬಕ್ಕನೆ ನೆಲಕ್ಕುರುಳಿಬಿಟ್ಟಿದ್ದೂ ಆಗಿದೆ.
ಯಡವಟ್ಟಿನ ಮೇಲೆ ಯಡವಟ್ಟು ಮಾಡಿಕೊಂಡ ಮೇಲೆ, ಆರ್‌ಬಿಐ ಸೂಚನೆಗಳನ್ನು ಮೀರಿದ ಮೇಲೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಚ್ಚಿದ್ದು, ಈಗ ಪೇಟಿಎಂ ಉಳಿಸಲು ವಿಜಯ್ ಶೇಖರ್ ಶರ್ಮಾ ಒದ್ದಾಡುತ್ತಿದ್ದಾರೆ.
ಹಣಕಾಸು ವ್ಯವಹಾರದಲ್ಲಿನ ಗೋಲ್‌ಮಾಲ್, ಗ್ರಾಹಕರಿಗೆ ವಂಚನೆ ಎಲ್ಲವೂ ನಡೆದ ಬಳಿಕ ರವೀಂದ್ರನ್ ಬೈಜು ದಿವಾಳಿ ಹಂತಕ್ಕೆ ಬಂದು ನಿಂತಿದ್ದಾರೆ.
ಅಶ್ನೀರ್ ಗ್ರೋವರ್ ಅಂತೂ ಈಚಿನ ದಿನಗಳಲ್ಲಿ ತುಟಿ ಪಿಟಿಕ್ಕೆನ್ನದೆ ಕೂತುಬಿಟ್ಟಿದ್ದಾರೆ. ಆತನ ಪತ್ನಿ ವಂಚನೆ ಕೇಸ್‌ನಲ್ಲಿ ಅರೆಸ್ಟ್ ಆಗುವ ಸ್ಥಿತಿ ಬಂದ ನಂತರ ತನ್ನ ಹಳೇ ಕಂಪೆನಿಯ ವ್ಯವಹಾರಕ್ಕಷ್ಟೇ ಸೀಮಿತವಾಗಿ ಉಳಿದುಬಿಟ್ಟಿದ್ದಾರೆ.
ಈ ಮೂವರನ್ನೂ ಉದ್ಯಮ ಜಗತ್ತಿನ ಪರಿಣಿತರು ಎಚ್ಚರಿಸಿದ್ದು ಒಂದೆರಡು ಸಲವಲ್ಲ. ವರ್ಷಗಳಿಂದಲೂ ಅಪಾಯದ ಬಗ್ಗೆ ಎಚ್ಚರಿಸುತ್ತಲೇ ಬಂದಿದ್ದರು. ಆದರೆ ಮೂವರಲ್ಲಿ ಒಬ್ಬರಿಗೂ ಎಚ್ಚರವಾಗಲೇ ಇಲ್ಲ. ತಮಗೆ ಜನರು ಮತ್ತು ಸರಕಾರದಿಂದ ಸಿಕ್ಕಾಪಟ್ಟೆ ಬೆಂಬಲವಿದೆ ಎಂಬ ಭ್ರಮೆಯಲ್ಲೇ ಮೂವರೂ ಉಳಿದುಬಿಟ್ಟಿದ್ದರು.
ಆದರೆ ಎಲ್ಲದಕ್ಕೂ ಒಂದು ಕಾಲ ಎಂದಿರುತ್ತದೆ. ಅದನ್ನು ದಾಟಿದ ಮೇಲೆ, ಜನರೆದುರು ಥಳುಕು ಬಳುಕಿನಿಂದ ಕಾಣಿಸುವ ಪಿಆರ್ ಕಸರತ್ತಾಗಲೀ, ರಾಷ್ಟ್ರೀಯತೆಯ ಮುಖವಾಡವಾಗಲೀ ಯಾರನ್ನೂ ರಕ್ಷಿಸುವುದಿಲ್ಲ.
ಈ ಮೂವರಿಂದಾಗಿ ಈಗ ದೇಶದ ಸ್ಟಾರ್ಟ್‌ಅಪ್ ಎಕೋಸಿಸ್ಟಮ್‌ಗೂ ಕೆಟ್ಟ ಹೆಸರು ಬಂದಿದೆ.
ವಿಷಯ ಏನೆಂದರೆ, ಈ ಮೂವರ ಜೊತೆ ಮತ್ತೂ ಒಂದು ಹೆಸರು ಅದೇ ಪಟ್ಟಿಗೆ ಸೇರಿಕೊಳ್ಳುತ್ತಿದೆ.
ಆ ಹೆಸರೇ ಓಲಾ ಇಲೆಕ್ಟ್ರಿಕ್‌ನ ಭವಿಷ್ ಅಗರ್ವಾಲ್.
ಈ ಐಐಟಿ ಮನುಷ್ಯ ಬಹಳ ಚುರುಕು ಅನ್ನೋದರಲ್ಲಿ ಅನುಮಾನವಿಲ್ಲ. ವಿಶ್ವದ ಅತಿ ಕಿರಿಯ ಬಿಲಿಯನೇರ್ ಅನ್ನುವ ಹೆಗ್ಗಳಿಕೆ ಬೇರೆ. ಆದರೆ ಭಾರತದ ಎಲಾನ್ ಮಸ್ಕ್ ಆಗಲು ಹೋಗಿ ತನ್ನ ಓಲಾ ಲಿಲೆಕ್ಟ್ರಿಕ್ ಅನ್ನೇ ಹಾಳುಗೆಡವಿದ್ದಾರೆ.
ಇತ್ತೀಚೆಗೆ ಕಾಮಿಡಿಯನ್ ಕುನಾಲ್ ಕಾಮ್ರಾ ಜೊತೆಗಿನ ಟ್ವಿಟರ್ ಜಗಳದ ಕಾರಣಕ್ಕೆ ಮೀಡಿಯಾಗಳಲ್ಲಿ ಭವಿಷ್ ದೊಡ್ಡ ಸುದ್ದಿಯಾದರು. ಓಲಾ ಸರ್ವೀಸ್ ಸೆಂಟರ್‌ನ ಎದುರು ಧೂಳು ಹಿಡಿದು ನಿಂತಿದ್ದ ಓಲಾ ಸ್ಕೂಟರ್‌ಗಳ ಚಿತ್ರವೊಂದನ್ನು ಕಾಮ್ರಾ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು ಮತ್ತು ಗ್ರಾಹಕರ ಜೊತೆ ನಡೆದುಕೊಳ್ಳುವ ರೀತಿಯೇ ಇದು? ಎಂದು ಕೇಳಿದ್ದರು.
ಈ ದೇಶದಲ್ಲಿ ದ್ವಿಚಕ್ರವಾಹನಗಳು ಎಷ್ಟೋ ಮಂದಿಯ ಬದುಕಿನ ದಿನನಿತ್ಯದ ಭಾಗ. ಅವು ಸರ್ವೀಸ್ ಸೆಂಟರ್‌ನಲ್ಲಿ ನಿಂತಿರುವಷ್ಟು ಲಕ್ಷುರಿ ಅಲ್ಲ.
ಕಾಮ್ರಾ ತಮ್ಮ ಟ್ವೀಟ್ ಅನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೂ ಟ್ಯಾಗ್ ಮಾಡಿದ್ದರು.
ಅವತ್ತು ರವಿವಾರವಾಗಿತ್ತು ಮತ್ತು ಕಾಮ್ರಾ ಟ್ವೀಟ್ ರಿಟ್ವೀಟ್ ಆಗತೊಡಗಿತ್ತು. ಅಲ್ಲಿಗೆ ಅದು ಮುಗಿದೂ ಹೋಗಬೇಕಿತ್ತು. ಕಾಮ್ರಾ ಕೂಡ ಮತ್ತೇನೂ ಅದನ್ನು ಬೆಳೆಸಿರಲಿಲ್ಲ. ಓಲಾ ಗ್ರಾಹಕರ ಕಥೆ ಈಗಾಗಲೇ ಜಗಜ್ಜಾಹೀರಾಗಿರುವಂಥದ್ದು. ಕಾಮ್ರಾ ಹೇಳಿದ್ದರಲ್ಲಿ ಅತಿಶಯೋಕ್ತಿ ಏನೂ ಇರಲಿಲ್ಲ. ಆದರೆ ಅಂದು ಕುನಾಲ್ ಕಾಮ್ರಾ ಪೋಸ್ಟ್‌ಗೆ ಭವಿಷ್ ಸರಣಿ ಉತ್ತರ ಬರೆಯುವುದಕ್ಕೆ ಶುರು ಮಾಡಿದ್ದರು. ಕಾಮ್ರಾ ಒಬ್ಬ ವಿಫಲ ಕಾಮಿಡಿಯನ್. ಅವರು ಬೇಕಾದರೆ ಓಲಾ ಸರ್ವೀಸ್ ಸೆಂಟರ್‌ನಲ್ಲಿ ಕೆಲಸ ಮಾಡಬಹುದು. ಈ ಟ್ವೀಟ್‌ಗಳಿಗೂ ಅವರು ಸಂಬಳ ತಗೋಬಹುದು ಎಂದೆಲ್ಲ ಬರೆದರು.
ಇಂಥ ನಡವಳಿಕೆಯನ್ನು ಭವಿಷ್ ಅವರ ಐಕಾನ್ ಆಗಿರುವ ಎಲಾನ್ ಮಸ್ಕ್ ಕೂಡ ಆಗಾಗ ತೋರಿಸುತ್ತಾರೆ. ಕೇಳಿದ್ದಕ್ಕೆ ಸರಿಯಾಗಿ ಉತ್ತರಿಸದೆ, ಪ್ರಶ್ನಿಸಿದವರನ್ನು ಹೀಗಳೆಯುವ, ಅವಮಾನಿಸುವ ಜಾಯಮಾನ ಅದು.
ಕಾಮ್ರಾ ಓಲಾ ಬಗ್ಗೆ ಒಂದು ಕಟು ಸತ್ಯ ಹೇಳಿದ್ದರು ಅಷ್ಟೆ.
ಓಲಾ ಸ್ಕೂಟರ್ ಚಲಿಸುತ್ತಿರುವಾಗಲೇ ಬೆಂಕಿ ಹೊತ್ತಿಕೊಳ್ಳುವುದು, ಇದ್ದಕ್ಕಿದ್ದಂತೆ ಬಂದ್ ಆಗುವುದು ಎಲ್ಲರಿಗೂ ಗೊತ್ತೇ ಇದೆ.
ಅವಮಾನಿಸಿ ಎಲ್ಲ ಬಗೆಹರಿಸಿಬಿಡುತ್ತೇನೆ ಎಂದುಕೊಂಡಿದ್ದ ಭವಿಷ್‌ಗೆ ಶಾಕ್ ಕಾದಿತ್ತು. ಮಾರನೇ ದಿನ ಷೇರು ಮಾರುಕಟ್ಟೆಯಲ್ಲಿ ಓಲಾ ಇಲೆಕ್ಟ್ರಿಕ್ ಷೇರು ಶೇ.9ರಷ್ಟು ಕುಸಿದಿತ್ತು.
ವಿಫಲ ಕಾಮೆಡಿಯನ್ ಓಲಾ ಷೇರು ಬೀಳಿಸಿಬಿಟ್ಟರು ನೋಡಿ ಎಂದು ಜನ ಆಡಿಕೊಂಡರು. ಆದರೆ ನಿಜ ಅದಾಗಿರಲಿಲ್ಲ. ತನ್ನ ಕಂಪೆನಿಯ ಷೇರು ಬೀಳುವುದಕ್ಕೆ ಸ್ವತಃ ಭವಿಷ್ ಕಾರಣರಾಗಿದ್ದರು. ತನ್ನನ್ನು ತಾನೇ ಜಗತ್ತಿನ ಮುಂದೆ ಬಟಾ ಬಯಲು ಮಾಡಿಕೊಂಡಿದ್ದರು. ಈಗ ಓಲಾ ಗೋಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಸಾವಿರಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಹಕರ ಹಕ್ಕುಗಳ ಪ್ರಾಧಿಕಾರದ ಕೇಂದ್ರೀಯ ಮಂಡಳಿ (ಸಿಸಿಪಿಎ) ಓಲಾ ಇಲೆಕ್ಟ್ರಿಕ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕಳೆದ ವರ್ಷ ಗ್ರಾಹಕ ವ್ಯವಹಾರಗಳ ಇಲಾಖೆಯಡಿಯ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ಓಲಾ ಇ-ಸ್ಕೂಟರ್‌ಗಳಿಗೆ ಸಂಬಂಧಿಸಿ 10,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಇವುಗಳಲ್ಲಿ, 3,389 ಪ್ರಕರಣಗಳು ಸೇವೆಯಲ್ಲಿನ ವಿಳಂಬದ ಬಗ್ಗೆ ಇವೆ.
ಆದರೆ 1,899 ದೂರುಗಳು ವಿತರಣಾ ವಿಳಂಬಕ್ಕೆ ಸಂಬಂಧಿಸಿವೆ ಮತ್ತು 1,459 ದೂರುಗಳು ಸೇವಾ ಭರವಸೆಗಳನ್ನು ಪೂರೈಸದೆ ಇರುವುದರ ಬಗ್ಗೆ ಇವೆ. ಓಲಾ ಸಿಕ್ಕಾಪಟ್ಟೆ ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನುವುದಕ್ಕೆ ಈ ದೂರುಗಳೇ ಸಾಕು.
ವಾಹನಗಳಲ್ಲಿನ ಉತ್ಪಾದನಾ ದೋಷಗಳು, ರದ್ದಾದ ಬುಕಿಂಗ್‌ಗಳಿಗೆ ಮರುಪಾವತಿ ಕೊರತೆ, ಸೇವೆಯ ನಂತರ ಮರುಕಳಿಸುವ ಸಮಸ್ಯೆಗಳು, ಓವರ್‌ಚಾರ್ಜ್, ಬಿಲ್ಲಿಂಗ್ ವ್ಯತ್ಯಾಸಗಳು ಮತ್ತು ಬ್ಯಾಟರಿಯಲ್ಲಿ ಆಗಾಗ ಸಮಸ್ಯೆಗಳು ತಲೆದೋರುವುದು ಸೇರಿದಂತೆ ಹಲವಾರು ಗ್ರಾಹಕರ ಕುಂದುಕೊರತೆಗಳನ್ನು ನೋಟಿಸ್ ಎತ್ತಿ ತೋರಿಸುತ್ತದೆ.
‘ದಿ ಮಾರ್ನಿಂಗ್ ಕಾಂಟೆಕ್ಸ್ಟ್’ ವರದಿ ಪ್ರಕಾರ, ಓಲಾ ಯಾವತ್ತೂ ಲಾಭದಲ್ಲಿದ್ದದ್ದೇ ಇಲ್ಲ. ಬೈಜೂಸ್‌ಗೆ ಅಪಾಯ ಕಾದಿದೆ ಎಂದು ಎರಡು ವರ್ಷ ಹಿಂದೆ ಎಚ್ಚರಿಸಿದ್ದು ಕೂಡ ಇದೇ.
ಓಲಾ ಗ್ರಾಹಕರ ಗೋಳು ಒಂದೆರಡಲ್ಲ. ಕಣ್ಣೀರು ಹಾಕಿದವರಿದ್ದಾರೆ, ತಮಾಷೆಯಾಗಿಯೇ ಕಷ್ಟ ಹೇಳಿಕೊಂಡವರಿದ್ದಾರೆ. ಕಡೆಗೆ ಓಲಾ ಶೋರೂಂಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದವರೂ ಇದ್ದಾರೆ.
ಓಲಾ ಸ್ಕೂಟರ್‌ಗಳು ಯಾರೂ ಬೆಂಕಿ ಹಚ್ಚದೆಯೂ ಹೊತ್ತಿಕೊಂಡು ಉರಿಯುತ್ತವೆ. ಕಷ್ಟಪಟ್ಟು ತಿಂಗಳ ಕಂತು ಕಟ್ಟಿಕೊಂಡು ಓಲಾ ಸ್ಕೂಟರ್ ಮಾಲಕನಾದವನು ತಿಂಗಳಲ್ಲೇ ಅದು ಮುರಿದುಬಿದ್ದರೆ ಪರಿಸ್ಥಿತಿ ಹೇಗಿದ್ದೀತು?
ನ್ಯೂಸ್ ಲಾಂಡ್ರಿ ಓಲಾದ ಕೆಲವು ಗ್ರಾಹಕರನ್ನು ಖುದ್ದು ಮಾತಾಡಿಸಿದಾಗ, ಹಲವು ವಾಸ್ತವ ಬಯಲಾಗಿತ್ತು.
ಅನೇಕರು ಅದನ್ನು ಕೊಂಡ ದಿನದಿಂದಲೂ ಸಮಸ್ಯೆ ಎದುರಿಸಿದ್ದಾರೆ. ದುರಸ್ತಿಗೆ ಮತ್ತೆ ಸಾವಿರಗಟ್ಟಲೆ ರೂ. ಕಳೆದುಕೊಂಡವರಿದ್ದಾರೆ. ನಡುರಸ್ತೆಯಲ್ಲೇ ನಿಂತುಹೋಗಿ, ಕಡೆಗೆ ಕ್ರೇನ್ ಮೂಲಕ ಎತ್ತಿಸಬೇಕಾದ ಗೋಳು ಅನುಭವಿಸಿದವರಿದ್ದಾರೆ.
ಓಲಾದಲ್ಲಿನ ದೊಡ್ಡ ಸಮಸ್ಯೆಯೆಂದರೆ, ಎಚ್‌ಎಂಐ- ಹ್ಯೂಮನ್ ಮೆಷಿನ್ ಇಂಟರ್‌ಫೇಸ್. ಅದು ಇಲೆಕ್ಟ್ರಿಕ್ ಸ್ಕೂಟರ್‌ಗೆ ಬೇಕಿರುವ ಆಪರೇಟಿಂಗ್ ಸಿಸ್ಟಮ್. ಅದೇ ಕೆಟ್ಟುಹೋದರೆ ಇಡೀ ಸ್ಕೂಟರ್ ನಿಷ್ಪ್ರಯೋಜಕ ಆಗಿಬಿಡುತ್ತದೆ.
ಓಲಾ ಸ್ಕೂಟರ್‌ನಲ್ಲಿ ಈ ಎಚ್‌ಎಂಐ ವೈಫಲ್ಯದ ಪ್ರಮಾಣ ಶೇ.75ರಷ್ಟಿದೆ. ಅಂದರೆ 4 ಸ್ಕೂಟರ್‌ಗಳಲ್ಲಿ 3 ಸ್ಕೂಟರ್‌ಗಳು ವಿಫಲ.
ಎಚ್‌ಎಂಐ ತಯಾರಕ ಕಂಪೆನಿಯೇ ಸಮಸ್ಯೆಯ ಮೂಲ ಹುಡುಕಲು ಹರಸಾಹಸ ಪಟ್ಟಿತು. ಯಾಕೆಂದರೆ ಓಲಾ ವಿನ್ಯಾಸದ ಮಾನದಂಡಕ್ಕೆ ಅನುಸಾರವಾಗಿಯೇ ಅದು ಈ ಎಚ್‌ಎಂಐ ಅನ್ನು ತಯಾರಿಸಿತ್ತು. ಕಡೆಗೆ ಗೊತ್ತಾದದ್ದು ಏನೆಂದರೆ, ಸ್ಕೂಟರ್‌ನ ಬಿಡಿಭಾಗಗಳು ಅದರ ವಿನ್ಯಾಸಕ್ಕೆ ಹೊಂದಿಕೊಳ್ಳುತ್ತಿಲ್ಲ ಎಂಬುದು. ಅದೇ ಕಾರಣದಿಂದಲೇ ಇಷ್ಟು ದೊಡ್ಡ ವೈಫಲ್ಯ ಎದುರಾಗಿದೆ.
ಅದರಿಂದಾಗಿಯೇ ಚಾರ್ಜಿಂಗ್‌ನಲ್ಲಿ ಸಮಸ್ಯೆ, ಸ್ಕೂಟರ್‌ನಲ್ಲಿ ವೈಬ್ರೇಷನ್ ಕಾಣಿಸುತ್ತಿತ್ತು. ಏನೂ ಕೆಲಸಕ್ಕೆ ಬಾರದಂತೆ ಬಂದ್ ಆಗಿ ನಿಲ್ಲುವುದಂತೂ ಓಲಾದ ತೀರಾ ಸಾಮಾನ್ಯ ಸಮಸ್ಯೆಯಾಗಿತ್ತು ಮತ್ತು ಹಾಗೆ ಬಂದ್ ಆಯಿತು ಎಂದರೆ ಅದರ ಕಥೆ ಮುಗಿಯಿತು ಎಂದೇ ಅರ್ಥ.
ಇಷ್ಟೆಲ್ಲ ಸಮಸ್ಯೆ ತನ್ನಲ್ಲಿಯೇ ಇದೆ ಎಂದು ತಿಳಿದ ಬಳಿಕವೂ ಓಲಾ ಉತ್ಪಾದನೆ ನಿಲ್ಲಿಸಲಿಲ್ಲ ಎಂದು ‘ದಿ ಮಾರ್ನಿಂಗ್ ಕಾಂಟೆಕ್ಸ್ಟ್’ ವರದಿ ಹೇಳುತ್ತದೆ.
ಸರಿಯಾಗಿರುವ ಶೇ.25ರಷ್ಟು ಸ್ಕೂಟರ್‌ಗಳ ಮಾರಾಟ ಮಾಡಿಬಿಡುವುದು ಅದರ ಅಜೆಂಡಾ ಆಗಿತ್ತು. ಆದರೆ ಶೇ.75ರಷ್ಟಿರುವ ವಿಫಲತೆ ಸರಿಪಡಿಸುವ ಗೋಜಿಗೇ ಅದು ಹೋಗಲಿಲ್ಲ. ಅದು ಕಂಪೆನಿಯ ತಕ್ಷಣದ ಆದ್ಯತೆಯಾಗಬೇಕಿತ್ತು, ಆದರೆ ಅದನ್ನು ಮಾಡಲೇ ಇಲ್ಲ.
ಅಂಥ ಕೆಟ್ಟ ನಿರ್ಧಾರದ ಫಲ ಏನೆಂದರೆ, ಇವತ್ತು ಓಲಾ ಶೋರೂಂ ಹೊಸ ಗಾಡಿಗಳಿಗಿಂತಲೂ ಹೆಚ್ಚಾಗಿ ಮುರಿದುಬಿದ್ದ ಸ್ಕೂಟರ್‌ಗಳ ಹಾಳು ಕೊಂಪೆಯಾಗಿದೆ. ಇಷ್ಟಾದರೂ ಭವಿಷ್‌ಗೆ ನಾಚಿಕೆಯಾದಂತಿಲ್ಲ.
ಪ್ರತೀ ತಿಂಗಳೂ ಸರ್ವೀಸ್ ಸೆಂಟರ್‌ಗೆ ದುರಸ್ತಿಗಾಗಿ ಬರುವ ಸ್ಕೂಟರ್‌ಗಳ ಸಂಖ್ಯೆಯೇ 80,000ಕ್ಕೂ ಹೆಚ್ಚು.
2021ರ ಡಿಸೆಂಬರ್‌ನಿಂದ ಸ್ಕೂಟರ್ ವಿತರಣೆ ಶುರು ಮಾಡಿದಾಗಿನಿಂದಲೂ ಅದರಲ್ಲಿ ಸಮಸ್ಯೆ ಇದೆ. ಆದರೆ 3 ವರ್ಷಗಳ ನಂತರವೂ ಸಮಸ್ಯೆ ಬಗೆಹರಿದಿಲ್ಲ ಎಂದಾದರೆ ಅದನ್ನು ಹೇಗೆ ಕ್ಷಮಿಸುವುದು?