ಓಟಗಾರರ ಸ್ವರ್ಗ ಕಾಪ್ಚೋರ್ವಾ ಮತ್ತು ದೂರದ ಓಟದ ಚಾಂಪಿಯನ್ ಜೊಶುವಾ ಚೆಪ್ಟಗೈ

Update: 2024-08-09 04:54 GMT
Editor : Ismail | Byline : ದರ್ಶನ್ ಜೈನ್

ಪೂರ್ವ ಉಗಾಂಡಾದ ಗಡಿಯಲ್ಲಿರುವ, ಓಟಗಾರರ ಸ್ವರ್ಗ ಅಂತಲೇ ಕರೆಸಿಕೊಳ್ಳುವ ಪುಟ್ಟ ಊರು ಕಾಪ್ಚೋರ್ವಾ.

ಜೊಶುವಾ ಚೆಪ್ಟಗೈ, ಸ್ಟೀಫನ್ ಕಿಪ್ರೋಟಿಚ್ ಮತ್ತು ಜಾಕೋಬ್ ಕಿಪ್ಲಿಮೋ ತರಹದ ದೂರದ ಓಟದ ವಿಶ್ವ ಚಾಂಪಿಯನ್‌ಗಳ ಊರು. ಉಗಾಂಡಾ ಮತ್ತು ಕೀನ್ಯಾದ ಗಡಿಭಾಗದಲ್ಲಿರುವ ಎತ್ತರ, ತಗ್ಗು, ಗುಡ್ಡ ಪ್ರದೇಶಗಳ ಈ ಊರಿನ ಜಾನುವಾರುಗಳನ್ನು ಕದಿಯಲು ಕೀನ್ಯಾದಿಂದ ಬೇಟೆಗಾರರು ಬರುತ್ತಿದ್ದರಂತೆ, ಅವರಿಂದ ತಪ್ಪಿಸಿಕೊಳ್ಳಲು ಜಾನುವಾರುಗಳೊಂದಿಗೆ ಓಡಲು ಆರಂಭಿಸಿದರಂತೆ. ಇವತ್ತು ಮೂರು ಜನ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಗಳನ್ನು ಜಗತ್ತಿಗೆ ಕೊಟ್ಟ, ಇನ್ನಷ್ಟು ಓಟದ ಚಾಂಪಿಯನ್‌ಗಳನ್ನು ತಯಾರಿಸುತ್ತಿರುವ ಈ ಊರಿನಲ್ಲಿ ಪ್ರಕೃತಿಯೇ ನಿರ್ಮಿಸಿರುವ ರಮ್ಯತೆ ಬಿಟ್ಟರೆ ಆಧುನಿಕ ಎಂದು ಹೇಳಿಕೊಳ್ಳುವ ಯಾವ ಸೌಲಭ್ಯಗಳೂ ಇಲ್ಲ. ಬಡತನ, ಅಭಿವೃದ್ಧಿಯ ಕೊರತೆಯ ಹೊರತಾಗಿಯೂ ಈ ಪುಟ್ಟ ಊರು ಕ್ರೀಡಾ ಜಗತ್ತಿನಲ್ಲಿ ಪ್ರಸಿದ್ಧ ಊರು. ಉಗಾಂಡಾ ದೇಶವು ಓಟದ ಸ್ಪರ್ಧೆಗಳಲ್ಲಿ ಗೆದ್ದಿರುವ ಪದಕಗಳ ಪೈಕಿ ಅರ್ಧದಷ್ಟು ಪದಕಗಳನ್ನು ಈ ಊರಿನ ಕ್ರೀಡಾಪಟುಗಳೇ ಗೆದ್ದಿದ್ದಾರೆ.

ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಇದುವರೆಗೆ ಉಗಾಂಡಾ ದೇಶವು ಒಟ್ಟಾರೆಯಾಗಿ ಐದು ಚಿನ್ನದ ಪದಕಗಳು ಸೇರಿದಂತೆ 13 ಪದಕಗಳನ್ನು ಗೆದ್ದಿದೆ. ಅದರಲ್ಲಿ ಎರಡು ಚಿನ್ನದ ಪದಕಗಳು ಮತ್ತು ಒಂದು ಬೆಳ್ಳಿ ಪದಕವನ್ನು ಓಟಗಾರ ಜೊಶುವಾ ಚೆಪ್ಟಗೈ ಒಬ್ಬರೇ ಗೆದ್ದಿದ್ದಾರೆ.

ದೂರದ ಓಟದ ಜಾಗತಿಕ ಶ್ರೇಷ್ಠ ಕ್ರೀಡಾಪಟುಗಳ ಸಾಲಿನಲ್ಲಿ ಇರುವ ಜೊಶುವಾ ಚೆಪ್ಟಗೈ ಒಂದೇ ವರ್ಷದ ಒಳಗೆ (2019) ದೂರದ ಓಟದ ಸ್ಪರ್ಧೆಯಲ್ಲಿ ನಾಲ್ಕು ವಿಶ್ವ ದಾಖಲೆ ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.

5,000 ಮೀಟರ್‌ನಲ್ಲಿ (12:35:36 ನಿ.)

10,000 ಮೀಟರ್‌ನಲ್ಲಿ (26: 11:00 ನಿ.)

5ಕೆ ರೋಡ್ ರನ್ ( 12:51 ನಿ.)

15ಕೆ ರೋಡ್ ರನ್ (41:05 ನಿ.)

ತನ್ನ ಹದಿನೆಂಟನೆಯ ವಯಸ್ಸಿಗೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಓಡಲು ಶುರು ಮಾಡಿದ ಜೊಶುವಾ 2015ರ 10,000 ಮೀಟರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಂಭತ್ತನೇ ಸ್ಥಾನ ಪಡೆದರು, ಮರುವರ್ಷದ ಒಲಿಂಪಿಕ್ಸ್‌ನಲ್ಲಿ 10,000 ಮೀ. ಓಟದಲ್ಲಿ ಆರನೇ ಸ್ಥಾನ, 5,000 ಮೀ. ಓಟದಲ್ಲಿ 8ನೇ ಸ್ಥಾನ ಪಡೆದಿದ್ದರು. ಟೋಕಿಯೊದಲ್ಲಿ ನಡೆದ ಮುಂದಿನ ಒಲಿಂಪಿಕ್ಸ್‌ನಲ್ಲಿ 10,000 ಮೀ. ಓಟದಲ್ಲಿ ಬೆಳ್ಳಿ ಮತ್ತು 5,000 ಮೀ. ಓಟದಲ್ಲಿ ಚಿನ್ನದ ಪದಕ ಪಡೆದಿದ್ದರು. ಈ ಬಾರಿ 10,000 ಮೀ. ಓಟದಲ್ಲಿ ನೂತನ ವಿಶ್ವ ದಾಖಲೆಯ ಜೊತೆಗೆ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. 5,000 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಫೇವರೇಟ್ ಆಗಿದ್ದ ಜೊಶುವಾ ಅಚಾನಕ್ಕಾಗಿ ಬರೀ 27 ವರ್ಷಕ್ಕೇ ಓಟದ ಸ್ಪರ್ಧೆಯಿಂದ ನಿವೃತ್ತಿಯಾಗಿದ್ದಾರೆ.

ತನ್ನ ನಿವೃತ್ತಿ ಸಂದೇಶದಲ್ಲಿ ಜೋಶುವಾ ಹೇಳಿದ್ದೇನೆಂದರೆ ‘‘10,000 ಮೀ. ಓಟದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಪದಕ, ಮೂರು ಬಾರಿ ವಿಶ್ವ ಚಾಂಪಿಯನ್‌ಶಿಪ್ ಮತ್ತೀಗ ವಿಶ್ವದಾಖಲೆಯೊಂದಿಗೆ ಒಲಂಪಿಕ್ ಚಿನ್ನದ ಪದಕ.. ನನ್ನ ಪದಕದ ಸಂಗ್ರಹ ಇಲ್ಲಿಗೆ ಮುಗಿದಿದೆ.’’

ಇನ್ನಷ್ಟು ವರ್ಷಗಳ ಓಟ ಬಾಕಿ ಇದ್ದರೂ ಉಗಾಂಡಾದಲ್ಲಿ ಬೆಳೆಯುತ್ತಿರುವ ದೂರದ ಓಟದ ಓಟಗಾರರ ಭವಿಷ್ಯಕ್ಕಾಗಿ ನಿವೃತ್ತಿ ಘೋಷಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊಶುವಾ ಚೆಪ್ಟಗೈ ಫೌಂಡೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ತನ್ನ ತವರೂರು ಕಾಪ್ಚೋರ್ವಾದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಕ್ರೀಡಾ ಅಕಾಡಮಿಗಳನ್ನು ಸ್ಥಾಪಿಸಿ, ಉಚಿತವಾಗಿ ವಿಶ್ವದರ್ಜೆಯ ಶಿಕ್ಷಣ ಮತ್ತು ಕ್ರೀಡಾ ತರಬೇತಿಯನ್ನು ನೀಡಲು ಮುಂದಾಗಿದ್ದಾರೆ. ಈಗಾಗಲೇ ಅವರ ಸಂಸ್ಥೆಗೆ ಮಿಲಿಯನ್ ಗಟ್ಟಲೆ ಆರ್ಥಿಕ ಸಹಾಯದ ಭರವಸೆಗಳೂ ದೊರೆತಿವೆ. ಬಡ ದೇಶ ಉಗಾಂಡಾದಿಂದ ಇನ್ನಷ್ಟು ಚಾಂಪಿಯನ್‌ಗಳು ಉದಯಿಸಲಿ!

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ದರ್ಶನ್ ಜೈನ್

contributor

Similar News