ಮೋದಿ 3.0 ಸರಕಾರ 100 ದಿನಗಳಲ್ಲಿ ಸಾಧಿಸಿದ್ದೇನು?

Update: 2024-09-18 04:18 GMT

ಹಿಂಬಾಗಿಲ ಪ್ರವೇಶ, ಪ್ರಸಾರ ಮಸೂದೆ, ವಕ್ಫ್ ಮಸೂದೆ, ಇಂಡೆಕ್ಸೇಶನ್ ಈ ಎಲ್ಲ ವಿಚಾರಗಳಲ್ಲೂ ಮೋದಿ ಸರಕಾರ ಯೂ ಟರ್ನ್ ಹೊಡೆದಿದೆ. ನಿರ್ಧಾರ ಬದಲಿಸಿದೆ ಎಂದಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್, ಮೋದಿಯವರನ್ನು ಅತ್ಯಂತ ದುರ್ಬಲ ಪ್ರಧಾನಿ ಎಂದು ಟೀಕಿಸಿದ್ದಾರೆ.

‘‘ಮೋದಿ ಮೂರನೇ ಅವಧಿಯ ಮೊದಲ 100 ದಿನಗಳಿಗಾಗಿ ಆಗಲೇ ತಯಾರಾಗಿದ್ದಾರೆ, ಯೋಜನೆಗಳೂ ಸಿದ್ಧವಾಗಿದೆ ಎಂದೆಲ್ಲ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ದೊಡ್ಡ ದೊಡ್ಡ ಹೆಡ್‌ಲೈನ್‌ಗಳಾಗಿದ್ದವು. ಆದರೆ ಅವೆಲ್ಲ ಎಲ್ಲಿವೆ?’’ ಎಂದು ಸುಪ್ರಿಯಾ ಪ್ರಶ್ನಿಸಿದ್ದಾರೆ.

ಮೋದಿ ನೇತೃತ್ವದ ಎನ್‌ಡಿಎ ಸರಕಾರ ಮೂರನೇ ಅವಧಿಯ ಮೊದಲ 100 ದಿನಗಳನ್ನು ಪೂರೈಸಿದೆ.

ಈ ಹೊತ್ತಲ್ಲಿ ಕಾಂಗ್ರೆಸ್ ಮೋದಿಯನ್ನು ದುರ್ಬಲ ಪ್ರಧಾನಿ ಎಂದೂ, ಅವರ ಸರಕಾರವನ್ನು ಯೂ ಟರ್ನ್ ಸರಕಾರ ಎಂದೂ ಜರೆದಿದೆ.

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್ ಮೋದಿ 3ನೇ ಅವಧಿಯ ನೂರು ದಿನಗಳಲ್ಲಿನ ವೈಫಲ್ಯಗಳದ್ದೇ ಒಂದು ಸುದೀರ್ಘ ಪಟ್ಟಿ ಮಾಡಿದ್ದಾರೆ.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ದೇಶದ ಸಮಸ್ಯೆಗಳನ್ನು ಬಗೆಹರಿಸುವ ದೂರದೃಷ್ಟಿಯಾಗಲೀ, ಪರಿಹಾರವಾಗಲೀ ಮೋದಿ ಬಳಿ ಇಲ್ಲವೆಂಬುದನ್ನು ಈ ನೂರು ದಿನ ಗಳು ಸಾಬೀತುಪಡಿಸಿವೆ’’ ಎಂದಿದ್ದಾರೆ. ಸಮಸ್ಯೆಗಳಿಗೆ ಕುರುಡಾಗುವ ಮತ್ತು ಸವಾಲುಗಳಿಗೆ ಬೆನ್ನು ಹಾಕುವ ಚಾಳಿಯನ್ನೇ ಮೋದಿ ಮುಂದುವರಿಸಿರುವುದಾಗಿ ಅವರು ಟೀಕಿಸಿದ್ದಾರೆ. ಈ 100 ದಿನಗಳಲ್ಲಿ ಸರಕಾರದ ಪ್ರತಿ ಕ್ಷಣದಲ್ಲೂ ಅಸ್ಥಿರತೆ, ಅನಿರ್ದಿಷ್ಟತೆ ಮತ್ತು ಅಪ್ರಬುದ್ಧತೆಯೇ ಕಾಣಿಸಿದೆ ಎಂದಿದ್ದಾರೆ.

ಹಿಂಬಾಗಿಲ ಪ್ರವೇಶ, ಪ್ರಸಾರ ಮಸೂದೆ, ವಕ್ಫ್ ಮಸೂದೆ, ಇಂಡೆಕ್ಸೇಶನ್ ಈ ಎಲ್ಲ ವಿಚಾರಗಳಲ್ಲೂ ಮೋದಿ ಸರಕಾರ ಯೂ ಟರ್ನ್ ಹೊಡೆದಿದೆ. ನಿರ್ಧಾರ ಬದಲಿಸಿದೆ ಎಂದಿರುವ ಸುಪ್ರಿಯಾ, ಮೋದಿಯವರನ್ನು ಅತ್ಯಂತ ದುರ್ಬಲ ಪ್ರಧಾನಿ ಎಂದು ಟೀಕಿಸಿದ್ದಾರೆ.

‘‘ಮೋದಿ ಮೂರನೇ ಅವಧಿಯ ಮೊದಲ 100 ದಿನಗಳಿಗಾಗಿ ಆಗಲೇ ತಯಾರಾಗಿದ್ದಾರೆ, ಯೋಜನೆಗಳೂ ಸಿದ್ಧವಾಗಿದೆ ಎಂದೆಲ್ಲ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ದೊಡ್ಡ ದೊಡ್ಡ ಹೆಡ್‌ಲೈನ್‌ಗಳಾಗಿದ್ದವು. ಆದರೆ ಅವೆಲ್ಲ ಎಲ್ಲಿವೆ?’’ ಎಂದು ಸುಪ್ರಿಯಾ ಪ್ರಶ್ನಿಸಿದ್ದಾರೆ.

‘‘ಮುಂದಿನ ಐದು ವರ್ಷಗಳವರೆಗೆ ಯಾವುದೇ ಯೋಜನೆ ಅಥವಾ ದೂರದೃಷ್ಟಿಯನ್ನು ಹೊಂದಿದ್ದೀರಾ?’’ ಎಂದು ಕೂಡ ಮೋದಿಯನ್ನು ಕೆಣಕಿದ್ದಾರೆ.

‘‘ನೀವು ಭ್ರಷ್ಟರೆಂದು ಕರೆದವರೆಲ್ಲರೂ ಈಗ ಬಿಜೆಪಿಯಲ್ಲಿದ್ದಾರೆ. ನೀವು ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಲು ಹೊರಟಿದ್ದೀರಾ? ತನಿಖಾ ಏಜೆನ್ಸಿಗಳ ದುರ್ಬಳಕೆಗಾಗಿ ಸುಪ್ರೀಂ ಕೋರ್ಟ್ ನಿಮಗೆ ಹಲವು ಬಾರಿ ಛೀಮಾರಿ ಹಾಕಿದೆ. ಏಜೆನ್ಸಿಗಳನ್ನು ಈಗಲೂ ಬಿಜೆಪಿಯ ಅಡಿಯಾಳಾಗಿ ಬಳಸುವುದನ್ನು ಮುಂದುವರಿಸುತ್ತೀರಾ ಅಥವಾ ಮುಕ್ತವಾಗಿರಿಸುತ್ತೀರಾ?’’ ಎಂದು ಕೇಳಿದ್ದಾರೆ.

‘‘ಆರೆಸ್ಸೆಸ್ ಜೊತೆಗೆ ನಿಮ್ಮ ಸಂಬಂಧ ಕೆಟ್ಟಿದೆ. ನಿಮ್ಮ ಪಕ್ಷದೊಳಗೆ ತೀವ್ರ ಆಂತರಿಕ ಕಲಹವಿದೆ. ನಿಮ್ಮ ಸರಕಾರಕ್ಕೆ ದಿಕ್ಕುದೆಸೆ ಇಲ್ಲವಾಗಿದೆ. ಕೆಲವರ ಮುಖಸ್ತುತಿ ನಿಮ್ಮನ್ನು ಖುಷಿಯಾಗಿಡಬಹುದು. ಆದರೆ ನೀವು ದೇಶದ ವಾಸ್ತವದ ಜೊತೆ ನಂಟು ಕಳೆದುಕೊಂಡಿದ್ದೀರಿ’’ ಎಂದು ಕಿಡಿ ಕಾರಿದ್ದಾರೆ.

‘‘ಕಳೆದ 100 ದಿನಗಳಲ್ಲಿ 38 ರೈಲು ಅಪಘಾತಗಳು ಸಂಭವಿಸಿದ್ದು, 21 ಸಾವುಗಳು ಮತ್ತು 112ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ’’ ಎಂದು ಸುಪ್ರಿಯಾ ಹೇಳಿದ್ದಾರೆ. ಕೆಲವು ರೈಲುಗಳಂತೂ ಹಳಿ ತಪ್ಪದ ದಿನವೇ ಇಲ್ಲ ಎಂದು ಹೇಳಿದ್ದಾರೆ.

ರೈಲ್ವೆ ಮಂತ್ರಿ ರೀಲ್ಸ್ ಮಾಡಿಕೊಂಡಿದ್ದಾರೆ. ಈ ಅಪಘಾತಗಳನ್ನು ಸಣ್ಣ ಘಟನೆಗಳೆಂದು ತಳ್ಳಿಹಾಕಿದ್ದಾರೆ ಎಂದು ಸುಪ್ರಿಯಾ ಟೀಕಿಸಿದ್ದಾರೆ.ಮೂಲಸೌಕರ್ಯ ಕುಸಿಯುತ್ತಿರುವುದನ್ನು ಈ ನೂರು ದಿನಗಳು ಬಹಿರಂಗಪಡಿಸಿವೆ ಎಂದಿದ್ದಾರೆ.

ಇತ್ತೀಚೆಗೆ ಉದ್ಘಾಟನೆಗೊಂಡ ವಿಮಾನ ನಿಲ್ದಾಣಗಳು, ಸೇತುವೆಗಳು, ರಸ್ತೆಗಳು ಮತ್ತು ಪ್ರತಿಮೆಗಳು ಸೇರಿದಂತೆ ನೂರು ದಿನಗಳಲ್ಲಿ 56 ಪ್ರಮುಖ ಮೂಲಸೌಕರ್ಯ ಯೋಜನೆಗಳು ಕುಸಿದಿವೆ ಎಂದು ಅವರು ಪಟ್ಟಿ ಮಾಡಿದ್ದಾರೆ.

‘‘ಜಬಲ್‌ಪುರ ವಿಮಾನ ನಿಲ್ದಾಣ, ದಿಲ್ಲಿ ಮತ್ತು ರಾಜ್‌ಕೋಟ್ ವಿಮಾನ ನಿಲ್ದಾಣಗಳು ಒಂದೇ ಒಂದು ಮಳೆಯನ್ನೂ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಎಂಟು ತಿಂಗಳೊಳಗೆ ಶಿವಾಜಿ ಪ್ರತಿಮೆ ಒಡೆದು ಹೋಯಿತು. ಹೊಸ ಸಂಸತ್ತಿನ ಕಟ್ಟಡದ ಛಾವಣಿ ಸೋರಿತು. ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯೊಳಗೆ ನೀರು ಬಂದದ್ದು ನಿಮ್ಮ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಗುಜರಾತಿನಲ್ಲಿ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡ 18,000 ಕೋಟಿ ರೂ.ಗಳ ಸುದರ್ಶನ ಸೇತು ಬಿರುಕು ಬಿಟ್ಟಿದೆ’’ ಎಂದು ಎಲ್ಲವನ್ನೂ ಸುಪ್ರಿಯಾ ಉಲ್ಲೇಖಿಸಿದರು.

ಭಯೋತ್ಪಾದಕ ದಾಳಿಗೆ 100 ದಿನಗಳಲ್ಲಿ 21 ಯೋಧರು ಹುತಾತ್ಮರಾಗಿದ್ದು, 26 ದಾಳಿಗಳು ನಡೆದಿವೆ. ದಾಳಿಯಲ್ಲಿ 29 ಸೈನಿಕರು ಗಾಯಗೊಂಡಿರುವುದು, 15 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಜಮ್ಮುವಿನಲ್ಲಿ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದರು.

ಮಹಿಳೆಯರ ವಿರುದ್ಧದ ಅಪರಾಧಗಳ ಹೆಚ್ಚಳ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿ ಬಗ್ಗೆಯೂ ಸುಪ್ರಿಯಾ ಪ್ರಸ್ತಾವಿಸಿದ್ದಾರೆ.

ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ವಿದೇಶಿ ನೇರ ಹೂಡಿಕೆ ಶೇ. 43ರಷ್ಟು ಕುಸಿದಿದೆ. ನಿರುದ್ಯೋಗ ಎಂಟು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಎಂದು ಹೇಳಿದರು.

ಕಳೆದ 100 ದಿನಗಳಲ್ಲಿಯೇ ಅದಾನಿ ಭಾಗಿಯಾಗಿರುವ ಹೊಸ ಹಗರಣಗಳೂ ಬಯಲಿಗೆ ಬಂದಿವೆ ಎಂದರು ಸುಪ್ರಿಯಾ.

‘‘ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ವಿರುದ್ಧ ಭ್ರಷ್ಟಾಚಾರ, ಹಿತಾಸಕ್ತಿ ಸಂಘರ್ಷ ಮತ್ತು ಅಧಿಕಾರ ದುರುಪಯೋಗದ ಗಂಭೀರ ಆರೋಪ ಮಾಡಲಾಗಿದ್ದರೂ, ನೀವು ಮೌನವಹಿಸಿದ್ದೀರಿ. ಮಾಧವಿ ಬುಚ್ ಅವರನ್ನು ಏಕೆ ರಕ್ಷಿಸುತ್ತಿದ್ದೀರಿ? ಯಾವ ರಹಸ್ಯಗಳು ಬಯಲಾಗಬಹುದು ಎಂಬ ಭಯ ಕಾಡುತ್ತಿದೆ?’’ ಎಂದು ಕೇಳಿದ್ದಾರೆ.

ಲಡಾಖ್‌ನ ಕುರಿಗಾಹಿಗಳು ಚೀನಾ ಆಕ್ರಮಣಗಳ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ಸುಪ್ರಿಯಾ ಟೀಕಿಸಿದ್ದಾರೆ. ‘‘ಈಗ ಲಡಾಖ್‌ನಿಂದ ಸಾವಿರಾರು ಜನರು ದಿಲ್ಲಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಅವರ ಹಾದಿಯಲ್ಲೂ ಮೊಳೆಗಳನ್ನು ನೆಟ್ಟು, ಗೋಡೆಗಳನ್ನು ಕಟ್ಟಿ ತಡೆಯುತ್ತೀರಾ?’’ ಎಂದು ಕೇಳಿದ್ದಾರೆ.

ಚೀನಾವನ್ನು ಹೆಸರಿಸಲು ನಿಮಗೆ ಖಂಡಿತವಾಗಿಯೂ ಧೈರ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಣಿಪುರ ಹಿಂಸಾಚಾರದಲ್ಲಿ ಡ್ರೋನ್‌ಗಳು, ರಾಕೆಟ್‌ಗಳು ಬಳಕೆಯಾಗುತ್ತಿರುವುದರ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿಗೆ ಸಮಯವಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

‘‘16 ತಿಂಗಳ ಅವಧಿಯಲ್ಲೇ ಅಲ್ಲಿಗೆ ಹೋಗದವರು ಈಗ 100 ದಿನಗಳಲ್ಲಿ ಏಕೆ ಹೋಗುತ್ತಾರೆ?’’ ಎಂದು ಟೀಕಿಸಿದ್ದಾರೆ.

ಲೋಕಸಭಾ ಚುನಾವಣೆ ಸಮಯದಲ್ಲಿ 100 ದಿನಗಳ ಅಜೆಂಡಾದ ಮಾತು ಕೇವಲ ಬಾಯಿಮಾತಾಗಿತ್ತು. ಸತ್ಯವೆಂದರೆ, ಅವರಲ್ಲಿ ಯಾವುದೇ ಯೋಜನೆ, ದೂರದೃಷ್ಟಿಯೇ ಇಲ್ಲ. ಹಲವಾರು ಸಂಸ್ಥೆಗಳನ್ನು ಹಾಳುಗೆಡವಿದರೂ ಎ 1 ಮತ್ತು ಎ 2ಗಳ ಬೊಕ್ಕಸ ತುಂಬುವ ಮೂಲಕ ಹೇಗಾದರೂ ಅಧಿಕಾರ ಉಳಿಸಿಕೊಳ್ಳುವ ಹತಾಶ ಬಯಕೆ ಮಾತ್ರ ಅವರಲ್ಲಿ ಉಳಿದಿದೆ ಎಂದು ಸುಪ್ರಿಯಾ ಟೀಕಿಸಿದ್ದಾರೆ.

ಈ 100 ದಿನಗಳ ಅವಧಿಯಲ್ಲಿ ಮೋದಿ ಸರಕಾರ ಏನನ್ನಾದರೂ ಸಾಧಿಸಿತೆ?

ಮೂಲಸೌಕರ್ಯ, ರೈತರು, ಮಧ್ಯಮ ವರ್ಗ, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಗಮನದಲ್ಲಿಟ್ಟುಕೊಂಡು 15 ಲಕ್ಷ ಕೋಟಿ ರೂ.ಯ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂಬುದು ಸರಕಾರದ ಹೇಳಿಕೆ.

ಸರಕಾರದ ಹೇಳಿಕೆಯ ಪ್ರಕಾರ,

1. ರಸ್ತೆ, ರೈಲ್ವೆ, ಬಂದರುಗಳು ಮತ್ತು ವಾಯುಮಾರ್ಗಗಳ ಮೇಲೆ 3 ಲಕ್ಷ ಕೋಟಿ ರೂ. ಗಳ ಯೋಜನೆಗಳಿಗೆ ಅನುಮೋದನೆ.

900 ಕಿ.ಮೀ. ವ್ಯಾಪಿಸಿರುವ 8 ರಾಷ್ಟ್ರೀಯ ಹೈಸ್ಪೀಡ್ ರಸ್ತೆ ಕಾರಿಡಾರ್ ಯೋಜನೆಗಳೂ ಇದರಲ್ಲಿವೆ.

2. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತು ಬಿಡುಗಡೆ.

ಕಂತಿನ ಭಾಗವಾಗಿ 9.3 ಕೋಟಿ ರೈತರಿಗೆ 20,000 ಕೋಟಿ ರೂ.

ಈವರೆಗೆ ಒಟ್ಟು 12 ಕೋಟಿ 33 ಲಕ್ಷ ರೈತರಿಗೆ 3 ಲಕ್ಷ ಕೋಟಿ ರೂ.ವಿತರಣೆ.

3. ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ, 7 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ. ಸಂಬಳ ಪಡೆಯುವ ವ್ಯಕ್ತಿಗಳು 17,500 ರೂ. ವರೆಗೆ ತೆರಿಗೆ ಉಳಿಸಬಹುದು. ಸ್ಟ್ಯಾಂಡರ್ಡ್ ಡಿಡಕ್ಷನ್ 75,000 ರೂ.ಗೆ ಹೆಚ್ಚಳ. ಕುಟುಂಬ ಪಿಂಚಣಿಗೆ ವಿನಾಯಿತಿ ಮಿತಿ 25,000 ರೂ. ಗೆ ಏರಿಕೆ.

ಏಕೀಕೃತ ಪಿಂಚಣಿ ಯೋಜನೆ ಅಡಿಯಲ್ಲಿ 25 ವರ್ಷಗಳ ಸೇವೆ ಹೊಂದಿರುವ ಸರಕಾರಿ ನೌಕರರು ತಮ್ಮ ಸರಾಸರಿ ಮೂಲ ವೇತನದ ಶೇ.50 ಅನ್ನು ಪಿಂಚಣಿಯಾಗಿ ಪಡೆಯುತ್ತಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳಿಗೆ ಅನುಮೋದನೆ. ನಗರ ಯೋಜನೆಯಡಿ 1 ಕೋಟಿ, ಗ್ರಾಮೀಣ ಪ್ರದೇಶಗಳಲ್ಲಿ 2 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ.

4. ಮಹಿಳಾ ಸಬಲೀಕರಣಕ್ಕಾಗಿ 11 ಲಕ್ಷ ಹೊಸ ಲಖ್‌ಪತಿ ದೀದಿಗಳಿಗೆ ಪ್ರಮಾಣಪತ್ರ.

5. ಅಭಿವೃದ್ಧಿ ಹೊಂದಿದ ಬುಡಕಟ್ಟು ಗ್ರಾಮ ಅಭಿಯಾನದ ಅಡಿಯಲ್ಲಿ, 63,000 ಬುಡಕಟ್ಟು ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಅನುಮೋದನೆ.

ನೈರ್ಮಲ್ಯ ಕಾರ್ಮಿಕರು, ತ್ಯಾಜ್ಯ ತೆಗೆಯುವವರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ನಮಸ್ತೆ ಯೋಜನೆ.

6. ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ಅಪ್‌ಗಳಿಗಾಗಿ 1,000 ಕೋಟಿ ವೆಂಚರ್ ಕ್ಯಾಪಿಟಲ್ ಫಂಡ್ ಸ್ಥಾಪನೆ.

7. ಯುವಜನರಲ್ಲಿ ಸಬಲೀಕರಣ ಮತ್ತು ಕೌಶಲ್ಯ ಅಭಿವೃದ್ಧಿ ಉತ್ತೇಜಿಸಲು 2 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ.

8. ಆರೋಗ್ಯ ಕ್ಷೇತ್ರದಲ್ಲಿ, ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ. 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ನಾಗರಿಕರಿಗೆ 5 ಲಕ್ಷ ರೂ.ವರೆಗಿನ ಉಚಿತ ವಿಮೆ. 75,000 ಹೊಸ ವೈದ್ಯಕೀಯ ಸೀಟುಗಳ ಸೃಷ್ಟಿ.

ಸರಕಾರ ತನ್ನ ಇವೆಲ್ಲ ಸಾಧನೆಗಳ ಬಗ್ಗೆ ಹೇಳಿಕೊಳ್ಳುತ್ತಿರುವುದರ ಆಚೆಗೆ ಘೋರವಾಗಿ ಕಾಣಿಸುತ್ತಿರುವುದು ಅದರ ಹಿಂದುತ್ವ ಅಜೆಂಡಾ ಮತ್ತು ಮುಸ್ಲಿಮ್ ದ್ವೇಷ. ಬಿಜೆಪಿಗೆ ಬಹುಮತವಿಲ್ಲದ ಮೋದಿ ಮೂರನೇ ಅವಧಿಯಲ್ಲೂ ಈ ದೇಶದ ಅಲ್ಪಸಂಖ್ಯಾತರು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ಮೂರನೇ ಅವಧಿಯ ಇಷ್ಟು ದಿನಗಳಲ್ಲಿ ದೇಶದಾದ್ಯಂತ ಆಗಲೇ ಗೋ ಹತ್ಯೆ, ಬೀಫ್ ಸೇವನೆ, ಮಾಂಸ ಸಾಗಾಟ ಎಂಬೆಲ್ಲ ಆರೋಪದ ಮೇಲೆ ಐದಾರು ಘೋರ ಹತ್ಯೆ ಪ್ರಕರಣಗಳು ನಡೆದಿವೆ.

ಕ್ಷುಲ್ಲಕ ಆರೋಪದ ಮೇಲೆ ಮುಸ್ಲಿಮರ ಮನೆಗಳನ್ನು ನೆಲಸಮ ಮಾಡಲಾಗಿದೆ.

72ರ ವೃದ್ಧನನ್ನು ಬೀಫ್ ಇಟ್ಟುಕೊಂಡಿದ್ದಾರೆ ಎಂಬ ನೆಪ ಹೊರಿಸಿ ಹಲ್ಲೆ ಮಾಡುವ ಘೋರ ಘಟನೆಯೂ ಮಹಾರಾಷ್ಟ್ರದಲ್ಲಿ ನಡೆದು ಹೋಗಿದೆ.

ಫರೀದಾಬಾದ್‌ನಲ್ಲಿ ಸ್ವಯಂಘೋಷಿತ ಗೋರಕ್ಷಕರ ಗುಂಡಿಗೆ 12ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಮಿಶ್ರಾ ಬಲಿಯಾಗಿ ಹೋದ.

ಅದಕ್ಕೆ ಕೇವಲ ಮೂರು ದಿನಗಳ ಮೊದಲು ಚರ್ಖಿ ದಾದ್ರಿಯಲ್ಲಿ ಮುಸ್ಲಿಮ್ ವಲಸಿಗ ಕಾರ್ಮಿಕನನ್ನು ಗೋಮಾಂಸ ಸೇವಿಸಿದ್ದಾನೆ ಎಂದು ಶಂಕಿಸಿದ್ದ ಗುಂಪೊಂದು ಕೊಂದಿತ್ತು.

ಆದರೆ ಆರ್ಯನ್ ಮಿಶ್ರಾನನ್ನು ಕೊಂದದ್ದಕ್ಕೆ ಅವರಲ್ಲಿ ಬ್ರಾಹ್ಮಣನನ್ನು ಕೊಂದೆವು ಎಂಬ ದುಃಖವಿತ್ತೇ, ಹೊರತು ಆತನ ಜಾಗದಲ್ಲಿ ಕೊಲೆಯಾದವನು ಮುಸ್ಲಿಮ್ ಆಗಿದ್ದರೆ ಅವರೆಲ್ಲ ಸಂಭ್ರಮಿಸುತ್ತಿದ್ದರು ಎಂಬುದಕ್ಕೆ ಅವರ ಆ ಮಾತು ಸಾಕ್ಷಿಯಂತಿತ್ತು.

ಮುಸ್ಲಿಮ್ ವಲಸಿಗರನ್ನು ಸ್ಪಷ್ಟವಾಗಿ ಹೊರಗಿಡುವ ಪೌರತ್ವ ತಿದ್ದುಪಡಿ ಕಾಯ್ದೆ ಹಿಂದೂ-ಮುಸ್ಲಿಮ್ ಎಂದು ಒಡೆಯುವುದನ್ನು ಇನ್ನಷ್ಟು ಹೆಚ್ಚಿಸಿದೆ.

ಮುಸ್ಲಿಮ್ ಪ್ರತಿಭಟನಾಕಾರರನ್ನು ಜೈಲಿಗೆ ಹಾಕಲಾಗುತ್ತದೆ, ಅವರ ಮನೆಗಳನ್ನು ಅಮಾನವೀಯವಾಗಿ ಮತ್ತು ಕಾನೂನು ಬಾಹಿರವಾಗಿ ನೆಲಸಮ ಮಾಡಲಾಗುತ್ತದೆ. ಮುಸ್ಲಿಮ್ ವ್ಯಾಪಾರಿಗಳನ್ನು ಗುರುತಿಸುವ ಹಾಗೆ ಮಾಡಿ ಅವರ ಮೇಲೆ ಬಹಿಷ್ಕಾರ ಹಾಕಿಸುವ, ಹಲ್ಲೆ ಮಾಡಿಸುವ ವಾತಾವರಣ ನಿರ್ಮಿಸಲಾಗುತ್ತಿದೆ.

ಇತಿಹಾಸ ತಿದ್ದುತ್ತೇವೆ ಎನ್ನುವಲ್ಲಿ ಕೂಡ ಅಲ್ಪಸಂಖ್ಯಾತರನ್ನೇ ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ಪಠ್ಯಪುಸ್ತಕಗಳಿಂದ ಮುಸ್ಲಿಮ್ ಆಡಳಿತಗಾರರ ಕೊಡುಗೆಗಳ ಕುರಿತ ಪಾಠವನ್ನೇ ತೆಗೆಯಲಾಗುತ್ತದೆ. ನಗರಗಳು ಮತ್ತು ಬೀದಿಗಳ ಹೆಸರನ್ನು ಬದಲಿಸುವುದು ಅಲ್ಪಸಂಖ್ಯಾತರು ಮತ್ತು ದೇಶದ ವೈವಿಧ್ಯತೆ ಮೇಲಿನ ಮತ್ತೊಂದು ದಾಳಿ.

ಈ ನಡುವೆ, ಅಯೋಧ್ಯೆಯ ರಾಜಕೀಯ ಉಪಯುಕ್ತತೆ ಕಡಿಮೆಯಾಗುತ್ತಿದ್ದಂತೆ, ಹಿಂದುತ್ವದ ತನ್ನ ಪ್ರಮುಖ ಅಜೆಂಡಾದಲ್ಲಿ ವೇಗ ಕಾಪಾಡಿಕೊಳ್ಳಲು ಬಿಜೆಪಿ ಕಾಶಿ ಮತ್ತು ಮಥುರಾಗಳನ್ನು ಮುನ್ನೆಲೆಗೆ ತರುತ್ತಿದೆ.

ಅಂತರ್‌ರಾಷ್ಟ್ರೀಯ ಸಮುದಾಯ ಭಾರತದಲ್ಲಿ ಹದಗೆಡುತ್ತಿರುವ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಗಮನಿಸುತ್ತಿದೆ. ದೇಶದಲ್ಲಿ ಸರಕಾರಿ ಪ್ರಾಯೋಜಿತ ಕೋಮು ವಿಭಜನೆ ಢಾಳಾಗಿ ಕಾಣಿಸುತ್ತಿದೆ.

ಇದನ್ನೆಲ್ಲಾ ಮೋದಿ ಸರಕಾರಕ್ಕೆ ಆಸರೆಯಾಗಿರುವ ಪ್ರಮುಖ ಮಿತ್ರಪಕ್ಷಗಳು ಮೂಕಪ್ರೇಕ್ಷಕವಾಗಿ ನೋಡುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಹರೀಶ್ ಎಚ್.ಕೆ.

contributor

Similar News