ಮೋದಿ ಸರಕಾರದ ‘ಅಭಿವೃದ್ಧಿ’ಯ ಕಥನಗಳು

Update: 2024-06-30 07:35 GMT

ಚುನಾವಣೆಯಲ್ಲಿ ಬಿಜೆಪಿ ಕುಸಿತದ ಬೆನ್ನಿಗೇ ಈಗ ದೇಶಾದ್ಯಂತ ಕುಸಿತದ, ಸೋರಿಕೆಯ, ಬಿರುಕು ಬಿಟ್ಟಿದ್ದರ ಸರಣಿ ವರದಿಗಳು ಬರುತ್ತಿವೆ. ಒಂದೆಡೆ ಪ್ರತಿಷ್ಠಿತ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದರೆ, ಇನ್ನೊಂದೆಡೆ ನೂತನ ರಾಮ ಮಂದಿರದ ಗರ್ಭಗುಡಿಯಲ್ಲೇ ಸೋರಿಕೆಯಾಗುತ್ತಿದೆ. ರಾಜಧಾನಿ ದಿಲ್ಲಿ ಒಂದೇ ಮಳೆಗೇ ನೀರಿನಿಂದ ಆವೃತ್ತವಾಗಿದ್ದರೆ, ಅಲ್ಲಿ ಅಯೋಧ್ಯೆಯಲ್ಲಿ ಭಾರೀ ಪ್ರಚಾರ ಮಾಡಿದ್ದ ಹೊಸ ರಾಮಪಥದ ರಸ್ತೆಗಳು ಗುಹೆಗಳ ಹಾಗೆ ತೆರೆದುಕೊಂಡಿವೆ, ಅಲ್ಲಿ ನೀರು ತುಂಬಿಕೊಂಡು ಹೋಗುವುದೇ ಅಸಾಧ್ಯವಾಗಿದೆ. ಒಟ್ಟಾರೆ ಮೋದಿ ಸರಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದ ಬೆನ್ನಿಗೇ ಒಂದಲ್ಲ ಒಂದು ಸೋರಿಕೆ, ಕುಸಿತ, ಬಿರುಕುಗಳದ್ದೇ ಸುದ್ದಿ.

ಒಂದಂತೂ ಸ್ಪಷ್ಟ. ಮೋದಿ ಸರಕಾರ ಈ ಹಿಂದೆ ಏನೇನೆಲ್ಲ ಜಂಭ ಕೊಚ್ಚಿಕೊಂಡಿತ್ತೋ, ಅವೆಲ್ಲವೂ ಬರೀ ಬರುಡೆ ಎಂಬುದು ಒಂದೊಂದಾಗಿ ಬಯಲಾಗುತ್ತಿದೆ. ಅಭಿವೃದ್ಧಿ ಹೆಸರಿನ ಅಸಲೀತನ ಹೊರಗಿಣುಕುತ್ತಿದೆ.

ಅಯೋಧ್ಯೆ ವಿಚಾರವನ್ನೇ ನೋಡುವುದಾದರೆ, ಅಪೂರ್ಣ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಶಂಕರಾಚಾರ್ಯರೇ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಮೋದಿ ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮಾಡಿ ಅಲ್ಲಿ ತಾವೊಬ್ಬರೇ ಮೆರೆದರು. ಆದರೆ ಅದೇ ಅಯೋಧ್ಯೆ ಇರುವ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಗ್ಗರಿಸಿ ಬಿತ್ತು. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಹೊರಟವರ ಆಟ ಜನರ ತೀರ್ಮಾನದ ಮುಂದೆ ನಡೆಯದೇ ಹೋಯಿತು. ಈಗ, ಅಯೋಧ್ಯೆಯಲ್ಲಿ ಆರೇ ತಿಂಗಳಿಗೆ ನೂತನ ರಾಮಮಂದಿರ ಸೋರತೊಡಗಿದೆ. ಮೊದಲ ಮಳೆಯ ನೀರಿಗೆ ಪೂಜೆಯೂ ನಿಂತುಹೋಗಿದೆ. ಭಕ್ತರು ಬರುವುದೂ ನಿಂತಿದೆ.

ಮಂದಿರದ ಹೆಸರಿನಲ್ಲಿ ದೇಣಿಗೆ ರೂಪದಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹವಾಯಿತು. ಮಂದಿರ ನಿರ್ಮಾಣ ಕಾರ್ಯವಂತೂ ಪಿಎಂಒ ಮೇಲ್ವಿಚಾರಣೆಯಲ್ಲಿಯೇ ನಡೆಯಿತು. ಆದರೂ ಕಡೆಗೆ ಆಗಿದ್ದೇನು? ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರಕ್ಕೆ ಬೀಗ ಹಾಕುತ್ತಾರೆ ಎಂದು ಜನರನ್ನು ಎತ್ತಿಕಟ್ಟಲು ನೋಡಿದವರು ಈಗೇನು ಹೇಳುತ್ತಾರೆ?

ಅದೇ ಅಯೋಧ್ಯೆಯಲ್ಲಿ ಸಾವಿರಾರು ಮನೆಗಳು, ಅಂಗಡಿಗಳು ಮತ್ತು ಕನಸುಗಳ ಮೇಲೆ ಬುಲ್ಡೋಜರ್ ಹರಿಸಿ ನೆಲಸಮ ಮಾಡಿದ ಬಳಿಕ ನೂತನ ರಾಮಪಥ ರಸ್ತೆ ನಿರ್ಮಿಸಲಾಯಿತು. ಆದರೆ ಈಗ ಒಂದೇ ಮಳೆಗೆ ಆ ರಾಮಪಥ ರಸ್ತೆಯಲ್ಲಿ ದೊಡ್ಡ ಗುಂಡಿಯಾಗಿ ಬಿಟ್ಟಿದೆ. ಅಲ್ಲೂ ಮಳೆ ನೀರು ಹೋಗುವ ವ್ಯವಸ್ಥೆ ಸರಿಯಾಗಿ ಮಾಡದೆ ನೀರು ಇಡೀ ರಸ್ತೆಯನ್ನೇ ಬಂದ್ ಮಾಡಿದೆ. ಅದಕ್ಕೀಗ ಆರು ಇಂಜಿನಿಯರ್‌ಗಳನ್ನು ಬಲಿಪಶು ಮಾಡಿ ಅಮಾನತು ಮಾಡಲಾಗಿದೆ. ಅಯೋಧ್ಯೆಯ ಹೆಸರಲ್ಲಿ ರಾಜಕೀಯ ಲಾಭ ಬಾಚಿಕೊಳ್ಳುವುದು ಮೋದಿ, ಅಮಿತ್ ಶಾ, ಆದಿತ್ಯನಾಥ್. ಆದರೆ ತಲೆದಂಡ ಆಗುವುದು ಬೇರೆ ಯಾರದ್ದೋ. ವಿಚಾರ ಅಯೋಧ್ಯೆಯದ್ದು ಮಾತ್ರವಲ್ಲ. ಮೋದಿ ಸರಕಾರದ ಒಂದೊಂದೇ ಅವಾಂತರಗಳು ತಾವೇತಾವಾಗಿ ತೆರೆದುಕೊಳ್ಳುತ್ತಿವೆ.

ಮುಂಬೈಯಲ್ಲಿ ಹೊಸದಾಗಿ ಉದ್ಘಾಟನೆಯಾದ ಅಟಲ್ ಸೇತುಗೆ ಇರುವ ಸಂಪರ್ಕ ಮಾರ್ಗ ಬಿರುಕು ಬಿಟ್ಟಿರುವ ಸುದ್ದಿಯೂ ಬಂದಿದೆ. ಹದಿನೆಂಟು ಸಾವಿರ ಕೋಟಿ ರೂಪಾಯಿ ವೆಚ್ಚದ ಮುಂಬೈನ ಈ ಸೇತುವೆಯ ಸ್ಥಿತಿ ಉದ್ಘಾಟನೆಯಾದ ಎರಡೇ ತಿಂಗಳಿಗೆ ಹದಗೆಟ್ಟಿರುವುದಾಗಿ ಬಿಎಂಸಿ ಹೇಳಿದೆ.

ದೇಶದ ರಾಜಧಾನಿ ದಿಲ್ಲಿಯ ಪ್ರಗತಿ ಮೈದಾನ ಸುರಂಗದ್ದೂ ಇದೇ ಸ್ಥಿತಿ. ಎರಡೇ ವರ್ಷಗಳಲ್ಲಿ ಅದೂ ಸ್ವಿಮ್ಮಿಂಗ್ ಪೂಲ್ ನಂತಾಗಿ ಬಿಟ್ಟಿದೆ.

ಇನ್ನು ಉತ್ತರಾಖಂಡದಲ್ಲಿ ಪ್ರಗತಿಯ ಹೆಸರಿನಲ್ಲಿ ಆಗುತ್ತಿರುವ ಅಧ್ವಾನಗಳದ್ದಂತೂ ಬೇರೆಯೆ ಕಥೆ. ಜೋಶಿಮಠದಲ್ಲಿನ ಕುಸಿತ, ಸಿಲ್ಕ್ಯಾರಾ ಸುರಂಗ ಕುಸಿತ, ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವಲ್ಲಿನ ಅಧ್ವಾನ ಹೀಗೆ ಒಂದೆರಡಲ್ಲ.

ಬಿಹಾರದಲ್ಲಿ ವಾರದ ಅವಧಿಯಲ್ಲೇ ನಿರ್ಮಾಣ ಹಂತದಲ್ಲಿನ ಮೂರು ಸೇತುವೆಗಳು ಕುಸಿದಿವೆ. ಒಂದು ವೇಳೆ ಕಾಮಗಾರಿ ಮುಗಿದು, ಉದ್ಘಾಟನೆಯಾಗಿದ್ದರೂ, ಎರಡೇ ವರ್ಷಕ್ಕೆ ಅವುಗಳ ಸ್ಥಿತಿ ಹದಗೆಡದೇ ಇರುವುದಿಲ್ಲ ಎನ್ನುವಂತಾಗಿದೆ.

ಈ ಕುಸಿತ, ಈ ಸೋರಿಕೆ, ಈ ಅಧ್ವಾನಗಳು ಯಾವುದರ ಕಡೆಗೆ ಬೆರಳು ಮಾಡುತ್ತವೆ? ಮತ್ತು ಇವು ಏಕೆ ಅತ್ಯಂತ ಕಳವಳಕಾರಿ ಸಂಗತಿಗಳಾಗಿವೆ?

ಮೊದಲನೆಯದಾಗಿ, ಕಳೆದ 10 ವರ್ಷಗಳಲ್ಲಿ ಮೂಲಭೂತ ಸೌಕರ್ಯದಲ್ಲಿನ ಅಭಿವೃದ್ಧಿ ಯಾವ ಗತಿ ಮುಟ್ಟಿದೆ ಎಂಬುದರ ಅಸಲಿಯತ್ತು ಇಲ್ಲಿ ಬಯಲಾಗಿದೆ.

ಮೋದಿ ಸರಕಾರ ಹಿಂದಿನ 10 ವರ್ಷಗಳಲ್ಲಿ ಮೂಲಸೌಕರ್ಯಕ್ಕೆ ಮೊದಲ ಆದ್ಯತೆ ಕೊಟ್ಟಿತ್ತು. ದೇಶದ ಇನ್‌ಫ್ರಾಸ್ಟ್ರಕ್ಚರ್ ಸ್ವರೂಪವನ್ನೇ ಬದಲು ಮಾಡಲಿದೆ ಎನ್ನಲಾಗಿದ್ದ ‘ಮೇಕ್ ಇನ್ ಇಂಡಿಯಾ’ ಎಂಬುದು ಮಾತಲ್ಲಿಯೇ ಉಳಿದಿದೆ. ಮೋದಿಯವರ ಪ್ರತಿಯೊಂದು ಭಾಷಣ, ಪ್ರತಿಯೊಂದು ಇಂಟರ್‌ವ್ಯೆನಲ್ಲೂ ಅದರದ್ದೇ ಮಾತಿತ್ತು. ಈಗ ಅದರ ಬಗ್ಗೆ ಮಾತೇ ಇಲ್ಲವಾಗಿದೆ.

ಎರಡನೆಯದಾಗಿ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ನಿಜವಾಗಿಯೂ ಬಳಕೆಯಾಗುತ್ತಿರುವ ಹಣ ಎಷ್ಟು ಎನ್ನುವ ಅನುಮಾನ ಮೂಡುತ್ತದೆ. ಮಧ್ಯಂತರ ಬಜೆಟ್‌ನಲ್ಲಿ ಅದಕ್ಕಾಗಿ ಮೀಸಲಿಟ್ಟಿದ್ದು 11.11 ಲಕ್ಷ ಕೋಟಿ ರೂ. ಇದು ಹಿಂದಿನ ಸರಕಾರದಲ್ಲಿನ ಹಂಚಿಕೆಗಿಂತ 6 ಪಟ್ಟು ಹೆಚ್ಚು. 5,000 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣ, 15,000 ಕಿ.ಮೀ. ಹೈವೇ ಎಂದೆಲ್ಲ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು.

ಆದರೆ ಇಷ್ಟಕ್ಕೆಲ್ಲ ಹಣ ಬಂದಿದ್ದು ಎಲ್ಲಿಂದ? ಇಲ್ಲಿ ತೊಡಗಿಸಲಾದ ಹಣ ಆರೋಗ್ಯ, ಶಿಕ್ಷಣ, ಸಂಶೋಧನೆಗೆ ಬಳಕೆಯಾಗಬೇಕಾದ ಪಾಲಿನಿಂದ ತೆಗೆದುಕೊಂಡದ್ದಲ್ಲವೇ? ಅಷ್ಟು ದೊಡ್ಡ ಮೊತ್ತ ಸರಿಯಾಗಿ ಖರ್ಚಾಗುತ್ತಿದೆಯೇ? ಮೂಲಸೌಕರ್ಯಕ್ಕಾಗಿ ಆಗುತ್ತಿರುವ ನಿಜವಾದ ವೆಚ್ಚ ಎಷ್ಟು?

ಮೂರನೆಯದಾಗಿ, ನಿಜವಾಗಿಯೂ ಇಷ್ಟೊಂದು ಕೋಟಿ ಕೋಟಿ ರೂ.ಗಳ ರಸ್ತೆ, ಸೇತುವೆಗಳಿಂದ ಎಷ್ಟು ಜನಸಾಮಾನ್ಯರಿಗೆ ಉಪಯೋಗವಿದೆ? ಅಹಮದಾಬಾದ್-ಮುಂಬೈ ಬುಲೆಟ್ ರೈಲು ಎಷ್ಟು ಮಂದಿಯ ಉಪಯೋಗಕ್ಕೆ ಬರಲಿದೆ?

ಮೂಲ ಸೌಕರ್ಯ ನಿರ್ಮಾಣದ ಉದ್ದೇಶವೇ ಹೂಡಿಕೆ ಹೆಚ್ಚಿಸುವುದು. ಫ್ಯಾಕ್ಟರಿಗಳ ನಿರ್ಮಾಣ, ಉದ್ಯೋಗ ಸೃಷ್ಟಿ, ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುವುದು. ಆದರೆ ಇವಾವುದೂ ಆಗುತ್ತಿಲ್ಲ. ವಿದೇಶಿ ಹೂಡಿಕೆಯಂತೂ ದಾಖಲೆ ಮಟ್ಟಕ್ಕೆ ಕುಸಿದಿದೆ.

ಮೂಲಸೌಕರ್ಯ ಅಭಿವೃದ್ಧಿ ಜೊತೆಗೆ ನೌಕರಿಗಳ ಸೃಷ್ಟಿಯಾಗಬೇಕು. ಅದಾದರೂ ಆಯಿತೇ ಎಂದು ನೋಡಿದರೆ ಅದು ಕೂಡ ಕಾಣಿಸುತ್ತಿಲ್ಲ.

ದೇಶದ ಅಭಿವೃದ್ಧಿಗಾಗಿ ಮೂಲಸೌಕರ್ಯದಲ್ಲಿ ಹಣ ತೊಡಗಿಸಬೇಕೆಂಬುದು ನಿಜ. ಇಲ್ಲದೇ ಹೋದರೆ ಅರ್ಥಿಕ ಪ್ರಗತಿ ಅಸಾಧ್ಯ. ಆದರೆ ಪ್ರಶ್ನೆಯೆಂದರೆ, ಮೂಲಸೌಕರ್ಯ ಯೋಜನೆಗಳ ಅನುಷ್ಠಾನದ ಕಥೆಯೇನು ಎಂಬುದು.

ಯಾಕೆ ಮೂಲಸೌಕರ್ಯದ ಮೇಲಿನ ವೆಚ್ಚದಂಥ ಅನೇಕ ವಿಚಾರಗಳು ಪಾರದರ್ಶಕವಾಗಿಲ್ಲ? ಬರೀ ಐಟಿ ಸೆಲ್ ಅಬ್ಬರದ ಪ್ರಚಾರದ ಪೋಸ್ಟರ್‌ಗಳು, ವೀಡಿಯೊಗಳಿಗೆ ಬೇಕಾದ ಹಾಗೆ ಅಭಿವೃದ್ಧಿ ಕೆಲಸ ನಡೆಯುತ್ತಿದೆಯೇ?

ಮೋದಿ ಸರಕಾರದ ಅತಿ ದೊಡ್ಡ ಯೋಜನೆ ಹೈವೇಗೆ ಸಂಬಂಧಿಸಿದ್ದು. 2014-15ರಲ್ಲಿ ಹೈವೇ ನಿರ್ಮಾಣದ ವೇಗ ದಿನಕ್ಕೆ 12 ಕಿ.ಮೀ. ಇತ್ತು. 2020-21ರ ಹೊತ್ತಿಗೆ ಈ ವೇಗ ದಿನಕ್ಕೆ 30 ಕಿ.ಮೀ. ಗೆ ಏರಿತು. 2014ರಿಂದ ಈವರೆಗೆ 9 ವರ್ಷಗಳಲ್ಲಿ ಹೆಚ್ಚುಕಡಿಮೆ 55,000 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ.

ಈಗ ಮೋದಿ ಸರಕಾಎದ ಮೂರನೇ ಅವಧಿಯಲ್ಲೂ ಮೂಲಸೌಕರ್ಯ ವೃದ್ಧಿಯ ಮಾತಿದೆ. ಆದರೆ ಅದರ ಮತ್ತೊಂದು ಮಗ್ಗುಲಿನ ಬಗ್ಗೆ ತಿಳಿಯಬೇಕು. ಈ ಹೆದ್ದಾರಿಗಳನ್ನು ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನಿರ್ಮಿಸಲಾಯಿತು. ಹೀಗಾಗಿ ಅಲ್ಲಿ ಪರಿಹಾರದ ಪ್ರಶ್ನೆ ಬರುತ್ತದೆ. ಅಲ್ಲಿ ಆಗಿರುವ ಅಧ್ವಾನಗಳ ಕಥೆಯೂ ದೊಡ್ಡದಿದೆ. ಜೋರು ಜೋರಾಗಿ ಹಣ ಚೆಲ್ಲಿದ್ದ ಎನ್‌ಎಚ್‌ಎಐ ಜೇಬು ಈಗ ಖಾಲಿಯಾಗಿದೆ. ಹೊಸದಾಗಿ ಹಣ ಸಂಗ್ರಹಕ್ಕೆ ಸರಕಾರ ತಡೆಯೊಡ್ಡಿದೆ.

ನಮಗೆ ಕಾಣಿಸುವ ಹೈವೇಗಳೆಲ್ಲವೂ ಲಕ್ಷಾಂತರ ಕೋಟಿ ರೂ. ಸಾಲದ ಮೇಲೆ ನಿಂತಿವೆ. 2023ರ ಮಾರ್ಚ್ ವರೆಗಿನ ಲೆಕ್ಕದಲ್ಲಿ ಎನ್‌ಎಚ್‌ಎಐ ಮೇಲಿರುವ ಸಾಲದ ಹೊರೆ 3,42,801 ಕೋಟಿ ರೂ. ಇದರಲ್ಲಿ 1,88,717.42 ಕೋಟಿ ರೂ.ಗಳನ್ನು ಅದು 2030ರೊಳಗೆ ಮರುಪಾವತಿಸಬೇಕಿದೆ. ಆದರೆ ಆರ್‌ಟಿಐ ಮಾಹಿತಿ ಪ್ರಕಾರ, ಮಾಡಿಕೊಂಡಿರುವ ಸಾಲ ತೀರಿಸಲು ಎನ್‌ಎಚ್‌ಎಐಗೆ 25 ವರ್ಷ ಹಿಡಿಯಲಿದೆ. ಅಂದರೆ 2050ರವೆರಗೂ ಅದರ ಮೇಲೆ ಋಣಭಾರವಿರುತ್ತದೆ.

ಇದರ ನಡುವೆಯೇ, ನಿಜವಾಗಿಯೂ ಎಷ್ಟು ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಎಂಬ ಪ್ರಶ್ನೆಯೂ ಎದ್ದಿದೆ.

ಮೊದಲು ಹೇಗಿತ್ತೆಂದರೆ, ಚತುಷ್ಪಥವಾಗಲಿ, ಷಟ್ಪಥವಾಗಲಿ ಎಲ್ಲ ಲೇನ್‌ಗಳನ್ನೂ ಸೇರಿಸಿಯೇ ಕಿ.ಮೀ. ಲೆಕ್ಕ ಹಾಕಲಾಗುತ್ತಿತ್ತು. ಆದರೆ ಈಗ ಪ್ರತೀ ಲೇನ್ ಅನ್ನೂ ಪ್ರತ್ಯೇಕವೆಂಬಂತೆ ಲೆಕ್ಕಹಾಕಿ ಕಿ.ಮೀ. ಲೆಕ್ಕ ಕೊಡಲಾಗುತ್ತದೆ. ಅಂದರೆ, ಮೊದಲಿನ ಲೆಕ್ಕದಲ್ಲಿನ 6 ಲೇನ್‌ಗಳ 1 ಕಿ.ಮೀ. ಉದ್ದದ ಹೈವೇಯನ್ನು ಈಗ ಅಳತೆಯ ಹೊಸ ಫಾರ್ಮುಲಾ ಪ್ರಕಾರ, 6 ಕಿ.ಮೀ. ಎಂದು ಲೆಕ್ಕ ಹಾಕಲಾಗುತ್ತದೆ. ಹೇಗಿದೆ ನೋಡಿ ಮೋದಿ ಸರಕಾರದ ಸಾಧನೆಯ ಲೆಕ್ಕಾಚಾರ?

ಅಷ್ಟು ಮಾಡಿಯಾದ ಮೇಲೂ ಹೆದ್ದಾರಿ ಸ್ಥಿತಿಯಾದರೂ ಚೆನ್ನಾಗಿದೆಯೇ? ರಸ್ತೆ ಸ್ಥಿತಿ ಹೇಗಿದೆ ಎಂದರೆ, 2018ರಿಂದ 2020ರ ಅವಧಿಯಲ್ಲಿ 5,000 ಜನ ಬರೀ ರಸ್ತೆಗುಂಡಿಗಳಿಗೇ ಬಲಿಯಾಗಿದ್ದಾರೆ.

ರಸ್ತೆಗಳದ್ದು ಈ ಕಥೆಯಾದರೆ, ರೈಲ್ವೆಯಲ್ಲಿನದಂತೂ ಬರೀ ಜುಮ್ಲಾ. ದೇಶಾದ್ಯಂತ ರೈಲ್ವೇ ಇಲೆಕ್ಟ್ರಿಫಿಕೇಷನ್ ಬಗ್ಗೆ ಬಿಜೆಪಿ 2019ರ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿತ್ತು. ಆದರೆ ಆಗಲಿಲ್ಲ. ಸರಕು ಸಾಗಣೆಗೇ ಮೀಸಲಾದ ಕಾರಿಡಾರ್ ಯೋಜನೆಯನ್ನು 2022ರೊಳಗೆ ಮುಗಿಸುವ ಮಾತನ್ನೂ ಕೊಟ್ಟಿತ್ತು. ಅದೂ ಆಗಲಿಲ್ಲ.

ಇಲೆಕ್ಟ್ರಿಫಿಕೇಷನ್ ಬಗೆಗಿನ ಪಶ್ನೆಗೆ ಸಂಸತ್ತಿನಲ್ಲಿ ಸ್ವತಃ ಅಶ್ವಿನಿ ವೈಷ್ಣವ್ ಅವರೇ ಗೊತ್ತಿಲ್ಲ ಎಂದುಬಿಟ್ಟಿದ್ದರು. ಸರಕು ಸಾಗಣೆ ಕಾರಿಡಾರ್ ಬಗ್ಗೆಯೂ ಅವರ ಬಳಿ ಸ್ಪಷ್ಟ ಚಿತ್ರಣವೇ ಇರಲಿಲ್ಲ.

ಇನ್ನು ರೈಲ್ವೆಯಲ್ಲಿ ಅತ್ಯಾಧುನಿಕ ಕವಚ್ ಸುರಕ್ಷತಾ ವ್ಯವಸ್ಥೆ ಅಳವಡಿಕೆ ಬಗ್ಗೆ ಪ್ರಚಾರ ಮಾಡಿದ್ದೇ ಮಾಡಿದ್ದು. ಆದರೆ ಅಪಘಾತ ಸಂಭವಿಸಿದಾಗೆಲ್ಲ ಅಲ್ಲಿ ಕವಚ್ ಇರಲೇ ಇಲ್ಲ ಎಂಬುದು ಬಯಲಾಗುತ್ತಲೇ ಇದೆ. ಕಡೆಗೆ ಲೋಕೋ ಪೈಲೆಟ್ ಮೇಲೆ ಆರೋಪ ಹೊರಿಸಿ ಸರಕಾರ ತನ್ನ ತಪ್ಪನ್ನು ಮರೆಮಾಚುವುದು ನಡೆದಿದೆ. ಆದರೆ ಸುರಕ್ಷತೆ ಬಗ್ಗೆ ಗಮನವನ್ನೇ ಕೊಡಲಾಗುತ್ತಿಲ್ಲ ಎಂಬುದೇ ಕಟು ಸತ್ಯ.

ಶೋಕಿಗಾಗಿಯೇ ಎಲ್ಲವನ್ನೂ ಮಾಡುತ್ತಿರುವವರಿಗೆ ಜನರ ಸುರಕ್ಷೆಯಂತಹ ವಿಚಾರಗಳು ಮುಖ್ಯವೆನ್ನಿಸುವುದಾದರೂ ಹೇಗೆ? ಇವರ ಈ ಶೋಕಿಯ ಭರದಲ್ಲಿ ಭಾರತೀಯ ರೈಲ್ವೆ ತನ್ನ ಇತಿಹಾಸದಲ್ಲೇ ಎಂದೂ ಕಂಡಿರದಂಥ ದುರವಸ್ಥೆ ಮುಟ್ಟಿದೆ.

ಇದೇ ಶೋಕಿಯಿಂದ ಮಾಡಿದ ವಂದೇ ಭಾರತ್ ಜನಸಾಮಾನ್ಯರಿಗೆ ಉಪಯೋಗವಾಗುತ್ತಿದೆಯೇ? ಆದರೆ ನಿಜವಾಗಿಯೂ ಜನರಿಗೆ ಬೇಕಿರುವ ರೈಲಿನಲ್ಲಿ ಪ್ರಯಾಣ ದರ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ನೀಡಲಾಗಿದ್ದ ರಿಯಾಯಿತಿ ಕಸಿದುಕೊಳ್ಳಲಾಗಿದೆ. ರೈಲ್ವೆ ಸುರಕ್ಷತೆಯಂತೂ ಕಡು ಕೆಟ್ಟ ಸ್ಥಿತಿಯಲ್ಲಿದೆ.

2021-22ರಲ್ಲಿನ ಆಪರೇಟಿಂಗ್ ರೇಶಿಯೊ ಅಂತೂ ಶೇ.107.39 ಇತ್ತು. ಅಂದರೆ ರೈಲ್ವೆ ವಾರ್ಷಿಕ 107 ರೂ. ಖರ್ಚು ಮಾಡಿದರೆ, ಗಳಿಸಿದ್ದು 100 ರೂ. ಮಾತ್ರ. ಇದು ದೇಶದ ಇತಿಹಾಸದಲ್ಲಿಯೇ ಅತಿ ಕೆಳಮಟ್ಟದ್ದು. ಕಡೆಗೆ ಈ ನಷ್ಟದ ಹೊರೆ ಹೊರುವವರು ಈ ದೇಶದ ಜನಸಾಮಾನ್ಯರು. ಕೋಟ್ಯಧಿಪತಿ ಕಾರ್ಪೊರೇಟ್ ಕುಳಗಳಿಗಿಂತ ಹೆಚ್ಚು ತೆರಿಗೆ ಭಾರ ಹೊರುವವರು ಜನಸಾಮಾನ್ಯರೇ ಅಲ್ಲವೆ?

ರೈಲಿನ ಅವ್ಯವಸ್ಥೆ ಇದಾದರೆ, ಇನ್ನು ಸರಕಾರದ ಯಶಸ್ಸಿಗೆ ಪಾಲು ಕೊಡಬಹುದಾದ ಬಂದರುಗಳು, ವಿಮಾನ ನಿಲ್ದಾಣಗಳ ಸ್ಥಿತಿಯಾದರೂ ಸರಿಯಿದೆಯೇ?

ಜಗತ್ತಿನ 3ನೇ ಅತಿ ದೊಡ್ಡ ವಿಮಾನಯಾನ ಮಾರುಕಟ್ಟೆ ಎಂಬ ಹೆಗ್ಗಳಿಕೆ ದೇಶಕ್ಕಿದೆ. ಜನಸಾಮಾನ್ಯರಿಗೂ ವಿಮಾನ ಯಾನ ಯೋಗ ಎಂದು 2016ರಲ್ಲಿ ಉಡಾನ್ ಯೋಜನೆ ಶುರು ಮಾಡಲಾಯಿತು. ಪ್ರಾದೇಶಿಕ ವಿಮಾನಯಾನ ಸಂಪರ್ಕದ ಉದ್ದೇಶ ಈ ಯೋಜನೆಯದ್ದಾಗಿತ್ತು. ಅದಕ್ಕಾಗಿ ಸಣ್ಣ ವಿಮಾನ ನಿಲ್ದಾಣಗಳ ಮೂಲಕ ನಿಭಾಯಿಸುವ ಪ್ರಯತ್ನವಿತ್ತು.

2014ರಲ್ಲಿ ನಾಗರಿಕ ವಿಮಾನಗಳಿಗಾಗಿ ಇದ್ದ ಏರ್ಪೋಟ್‌ಗಳು 74. ಈಗ ಸುಮಾರು 150ರಷ್ಟಿವೆ. ಜೊತೆಗೇ 20 ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ಗಳನ್ನೂ ನಿರ್ಮಿಸಲಾಯಿತು.

ಯೋಜನೆಯೇನೋ ಒಳ್ಳೆಯದಿತ್ತು. ಆದರೆ ವಾಸ್ತವದಲ್ಲಿ ಆದದ್ದೇ ಬೇರೆ. ಸಿಎಜಿ ವರದಿ 2023 ಹೇಳಿರುವ ಪ್ರಕಾರ, ಸರಕಾರ ನೀಡಿದ್ದ ರಿಯಾಯಿತಿ ಅವಧಿಯ ಬಳಿಕ ಈ ವಿಶೇಷ ಯೋಜನೆಯ ಶೇ.7ರಷ್ಟು ಮಾರ್ಗಗಳು ಮಾತ್ರವೇ ಸುಸ್ಥಿರವಾಗಿದ್ದವು. ಉಳಿದವುಗಳು ಮಾಧ್ಯಮಗಳಲ್ಲಿ ಹೆಡ್‌ಲೈನ್ ಆದ ಕೆಲವೇ ದಿನಗಳ ಬಳಿಕ ಮುಚ್ಚಿಹೋದವು. ಈಗ ಉಡಾನ್ ಬಗ್ಗೆ ಸರಕಾರವೇ ಚಕಾರ ಎತ್ತುತ್ತಿಲ್ಲ.

ಇನ್ನು ದೇಶದ ಬಂದರುಗಳ ವಿಚಾರ. ನಮ್ಮ ಬಂದರುಗಳು ವಿಶ್ವದರ್ಜೆಯನ್ನು ಮುಟ್ಟುವ ಹಾದಿಯಲ್ಲಿವೆ ಎಂಬುದು ನಿಜ. ಈಗಿನ ವಾರ್ಷಿಕವಾಗಿ ನಿರ್ವಹಿಸುವ 2,600 ಮಿಲಿಯನ್ ಟನ್‌ಗಳ ಸಾಮರ್ಥ್ಯವನ್ನು 2047ರ ಹೊತ್ತಿಗೆ 10,000 ಮಿಲಿಯನ್ ಟನ್‌ಗೆ ಹೆಚ್ಚಿಸುವುದು ಗುರಿಯಿದೆ.

ಆದರೆ, ಈಗ ಬಂದರು, ಏರ್ ಪೋರ್ಟ್‌ಗಳ ಉಸ್ತುವಾರಿಯೆಲ್ಲ ಒಬ್ಬ ಉದ್ಯಮಿಯ ಜೇಬು ತುಂಬಿಸುವ ದಾರಿಯಾಗಿಬಿಟ್ಟಿದೆ.

ಅದಾನಿ ಪೋರ್ಟ್ಸ್ ಸ್ಪೆಷಲ್ ಎಕನಾಮಿಕ್ ರೆನ್ ಲಿಮಿಟೆಡ್ ಮೂಲಕ ಗೌತಮ್ ಅದಾನಿಯ ಅದಾನಿ ಗ್ರೂಪ್ ದೇಶದ ಕಾರ್ಗೋ ವ್ಯವಸ್ಥೆಯ ಶೇ.27ರಷ್ಟು ಭಾಗದ ಮೇಲೆ ನಿಯಂತ್ರಣ ಸಾಧಿಸಿದೆ. ದೇಶದಲ್ಲೀಗ ಅದಾನಿ ಅತಿ ದೊಡ್ಡ ಏರ್‌ಪೋರ್ಟ್ ಮತ್ತು ಪೋರ್ಟ್ ಆಪರೇಟರ್ ಆಗಿದ್ದಾರೆ. ಇನ್ನು ದೇಶದ ಜನತೆ ಇವರ ಮರ್ಜಿಯಂತೆ ನಡೆಯಬೇಕು.

ದೇಶದ ಸುಮಾರು 458 ಮೂಲಸೌಕರ್ಯ ಯೋಜನೆಗಳಿಗೆ ಈ ವರ್ಷದ ಮೇ ತಿಂಗಳಲ್ಲಿ ಖರ್ಚಾಗಿರುವುದು 5.71 ಲಕ್ಷ ಕೋಟಿ ರೂ.ಗೂ ಅಧಿಕ. ಇದು ಸಾಧಾರಣ ಮೊತ್ತವಲ್ಲ. ಸರಕಾರದ್ದೇ ಅಂಕಿಅಂಶಗಳ ಪ್ರಕಾರ, 127 ಯೋಜನೆಗಳು 60 ತಿಂಗಳುಗಳು ಅಥವಾ ಅದಕ್ಕಿಂತ ಹೆಚ್ಚು ತಡವಾದದ್ದಿದೆ.

ಸರಕಾರ ಮರೆಮಾಚುತ್ತಿರುವ ಮತ್ತೊಂದು ವಿಚಾರ ಏನೆಂದರೆ, ಜನರನ್ನು ಮರುಳು ಮಾಡಲು ಬಳಸಲಾಗುವ ಈ ಯೋಜನೆಗಳ ಮೇಲೆ ಸರಕಾರ ಹಾಕುತ್ತಿರುವ ಹಣ ಆರೋಗ್ಯ, ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ ವಲಯಗಳದ್ದಾಗಿದೆ.

ಶಿಕ್ಷಣದ ಮೇಲೆ ಜಿಡಿಪಿಯ ಶೇ.6ರಷ್ಟನ್ನು ತೊಡಗಿಸುವುದಾಗಿ 2014ರಲ್ಲಿ ಬಿಜೆಪಿ ಹೇಳಿತ್ತು. ಆದರೆ 2014ರಿಂದ 2024ರವರೆಗೆ ಶಿಕ್ಷಣದ ಮೇಲೆ ಖರ್ಚಾಗಿರುವುದು ವಾರ್ಷಿಕ ಜಿಡಿಪಿಯ ಶೇ.0.44 ಮಾತ್ರ.

ಆರೋಗ್ಯ ಕ್ಷೇತ್ರದ ಕಡೆ ಹೆಚ್ಚಿನ ಗಮನ ಕೊಡಬೇಕಾದ ಸರಕಾರ ಆರೋಗ್ಯ ಕ್ಷೇತ್ರಕ್ಕಾಗಿ ಖರ್ಚು ಮಾಡುತ್ತಿರುವುದು ‘ಲಾನ್ಸೆಟ್’ ವರದಿಯ ಪ್ರಕಾರ, ಜಿಡಿಪಿಯ ಶೇ.1.2ನ್ನು ಮಾತ್ರ. ಜಿ20ಯ ಎಲ್ಲ ದೇಶಗಳಲ್ಲಿಯೇ ಇದು ಅತ್ಯಂತ ಕಡಿಮೆ. ಆದರೆ ಯಥಾ ಪ್ರಕಾರ ಸರಕಾರ ‘ಲಾನ್ಸೆಟ್’ ವರದಿಯನ್ನೂ ನಿರಾಕರಿಸಿತು, ಆ ಮಾತು ಬೇರೆ.

16 ಏಮ್ಸ್‌ಗಳ ಬಗ್ಗೆಲ್ಲ ಹೇಳಲಾಯಿತು. ಅವುಗಳಲ್ಲಿ ಒಂದೂ ಪೂರ್ಣ ಮಟ್ಟದಲ್ಲಿ ಕಾರ್ಯನಿರ್ವಹಿಸಲು ತಯಾರಾಗಿಲ್ಲ.

ಬಹಳ ದುಃಖದ ಸಂಗತಿಯೆಂದರೆ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬೇರೆ ದೇಶಗಳೆಲ್ಲ ದೊಡ್ಡ ಪ್ರಮಾಣದಲ್ಲಿ ಹಣ ತೊಡಗಿಸುತ್ತಿದ್ದರೆ, ನಮ್ಮಲ್ಲಿ ಇದ್ದುದನ್ನೂ ಕಡಿತ ಮಾಡಲಾಗುತ್ತಿದೆ.

ಅಮೆರಿಕ, ಇಂಗ್ಲೆಂಡ್, ಚೀನಾ, ಇಸ್ರೇಲ್, ದಕ್ಷಿಣ ಕೊರಿಯಾದಂತಹ ದೇಶಗಳೆಲ್ಲ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ತೊಡಗಿಸುವ ಹಣ ಏರಿಕೆಯಾಗುತ್ತಲೇ ಇದೆ. ಆದರೆ ನಮ್ಮಲ್ಲಿ ಮಾತ್ರ ಅದು ಇಳಿಕೆಯಾಗುತ್ತಿದೆ. ಇದು ಈ ಸರಕಾರದ ಅತ್ಯಂತ ಮೂರ್ಖತನವಲ್ಲದೆ ಮತ್ತೇನೂ ಅಲ್ಲ.

ಐಟಿ, ಎಐಗಳ ಕಡೆ ಹೋಗುವ ಶೋಕಿ ತೋರಿಸಲಾಗುತ್ತಿದೆ. ಜನರೇ ದುಡಿಯುವುದಕ್ಕೆ ತಯಾರಿರುವಾಗ, ಉದ್ಯೋಗಕ್ಕಾಗಿ ಚಡಪಡಿಸುತ್ತಿರುವಾಗ ಎಐ ತರುವ ಮೂಲಕ ಇನ್ನೆಂಥ ಅಧ್ವಾನ ಸೃಷ್ಟಿಸಲು ಹೊರಟಿದೆ ಸರಕಾರ? ಅಂತಿಮವಾಗಿ ಆಗುವುದೇನು?

ದೇಶದ ಸಾಲ ತೀರಿಸುವುದರಲ್ಲಿಯೇ ಜನ ಹೈರಾಣಾಗುವಂತಾಗಿದೆ. ಹೈವೇಯಲ್ಲಿ ನಾವು ಕಟ್ಟುವ ಟೋಲ್ ನೇರ ಹೋಗುವುದು ಸರಕಾರ ಮಾಡಿಕೊಂಡಿರುವ ಸಾಲದ ಇಎಂಐಗಾಗಿ. ದೇಶದ ಸಾಲ ಜಿಡಿಪಿಯ ಶೇ.80ರಷ್ಟಾಗಿದೆ. ಇನ್ನು ಐಎಂಎಫ್ ಕೊಟ್ಟ ಸಾಲವನ್ನೂ ಸೇರಿಸಿಕೊಂಡರೆ ಸಾಲ ಜಿಡಿಪಿಯ ಶೇ.100 ಕೂಡ ಆಗಬಹುದು.

ಆದರೆ ಮೋದಿ ಸರಕಾರ ಮಾತ್ರ ತನ್ನ ಅಬ್ಬರ, ಬಡಾಯಿಯನ್ನು ಮೂರನೇ ಅವಧಿಯಲ್ಲೂ ನಿಲ್ಲಿಸಿಲ್ಲ. ದೇಶದ ಈ ಸ್ಥಿತಿಯಲ್ಲಿ ಜನರನ್ನು ಕಾಪಾಡುವವರು ಯಾರು?

ಒಂದೆಡೆ ಪ್ರತಿಷ್ಠಿತ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದರೆ, ಇನ್ನೊಂದೆಡೆ ನೂತನ ರಾಮ ಮಂದಿರದ ಗರ್ಭಗುಡಿಯಲ್ಲೇ ಸೋರಿಕೆಯಾಗುತ್ತಿದೆ. ರಾಜಧಾನಿ ದಿಲ್ಲಿ ಒಂದೇ ಮಳೆಗೇ ನೀರಿನಿಂದ ಆವೃತ್ತವಾಗಿದ್ದರೆ, ಅಲ್ಲಿ ಅಯೋಧ್ಯೆಯಲ್ಲಿ ಭಾರೀ ಪ್ರಚಾರ ಮಾಡಿದ್ದ ಹೊಸ ರಾಮಪಥದ ರಸ್ತೆಗಳು ಗುಹೆಗಳ ಹಾಗೆ ತೆರೆದುಕೊಂಡಿವೆ, ಅಲ್ಲಿ ನೀರು ತುಂಬಿಕೊಂಡು ಹೋಗುವುದೇ ಅಸಾಧ್ಯವಾಗಿದೆ. ಒಟ್ಟಾರೆ ಮೋದಿ ಸರಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದ ಬೆನ್ನಿಗೇ ಒಂದಲ್ಲ ಒಂದು ಸೋರಿಕೆ, ಕುಸಿತ, ಬಿರುಕುಗಳದ್ದೇ ಸುದ್ದಿ.

ಒಂದಂತೂ ಸ್ಪಷ್ಟ. ಮೋದಿ ಸರಕಾರ ಈ ಹಿಂದೆ ಏನೇನೆಲ್ಲ ಜಂಭ ಕೊಚ್ಚಿಕೊಂಡಿತ್ತೋ, ಅವೆಲ್ಲವೂ ಬರೀ ಬರುಡೆ ಎಂಬುದು ಒಂದೊಂದಾಗಿ ಬಯಲಾಗುತ್ತಿದೆ. ಅಭಿವೃದ್ಧಿ ಹೆಸರಿನ ಅಸಲೀತನ ಹೊರಗಿಣುಕುತ್ತಿದೆ.

ದೇಶದ ಸಾಲ ತೀರಿಸುವುದರಲ್ಲಿಯೇ ಜನ ಹೈರಾಣಾಗುವಂತಾಗಿದೆ. ಹೈವೇಯಲ್ಲಿ ನಾವು ಕಟ್ಟುವ ಟೋಲ್ ನೇರ ಹೋಗುವುದು ಸರಕಾರ ಮಾಡಿಕೊಂಡಿರುವ ಸಾಲದ ಇಎಂಐಗಾಗಿ. ದೇಶದ ಸಾಲ ಜಿಡಿಪಿಯ ಶೇ.೮೦ರಷ್ಟಾಗಿದೆ. ಇನ್ನು ಐಎಂಎಫ್ ಕೊಟ್ಟ ಸಾಲವನ್ನೂ ಸೇರಿಸಿಕೊಂಡರೆ ಸಾಲ ಜಿಡಿಪಿಯ ಶೇ.೧೦೦ ಕೂಡ ಆಗಬಹುದು.

ಆದರೆ ಮೋದಿ ಸರಕಾರ ಮಾತ್ರ ತನ್ನ ಅಬ್ಬರ, ಬಡಾಯಿಯನ್ನು ಮೂರನೇ ಅವಧಿಯಲ್ಲೂ ನಿಲ್ಲಿಸಿಲ್ಲ. ದೇಶದ ಈ ಸ್ಥಿತಿಯಲ್ಲಿ ಜನರನ್ನು ಕಾಪಾಡುವವರು ಯಾರು?

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಎಚ್. ವೇಣುಪ್ರಸಾದ್

contributor

Similar News