ಆಝಾದ್ ಫೌಂಡೇಶನ್ ಮುಚ್ಚುಗಡೆ ಎಷ್ಟು ಸರಿ?

Update: 2024-03-04 10:06 GMT

ಮಾನ್ಯರೇ,

ಕೇಂದ್ರ ಸರಕಾರವು ಮೌಲಾನಾ ಆಝಾದ್ ಎಜುಕೇಶನ್ ಫೌಂಡೇಶನನ್ನು ಮುಚ್ಚಲು ಆದೇಶ ಹೊರಡಿಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಈ ದೇಶದಲ್ಲಿ ಆಧುನಿಕ ಶಿಕ್ಷಣವನ್ನು ಕಟ್ಟಿದ ಮಹಾನ್ ನಾಯಕ ಮೌಲಾನ್ ಅಬುಲ್ ಕಲಾಂ ಆಝಾದ್ ಅವರು. ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರಷ್ಟೇ ಅಲ್ಲ, ಕ್ರೈಸ್ತ, ಸಿಖ್, ಭೌದ್ಧ, ಪಾರ್ಸಿ, ಜೈನಧರ್ಮೀಯರೂ ಸೇರುತ್ತಾರೆ. ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವಲ್ಲಿ ಶಿಕ್ಷಣದ ಪಾತ್ರ ಬಹುದೊಡ್ದದು.

ದೇಶದ ಅಭಿವೃದ್ಧಿಯಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರು ಒಂದು ಭಾಗವಾಗುವುದು ಅತ್ಯಗತ್ಯ. ಈ ಕಾರಣದಿಂದ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಇನ್ನಷ್ಟು ಅನುದಾನಗಳನ್ನು ನೀಡುವುದು ಸರಕಾರದ ಕರ್ತವ್ಯವಾಗಿದೆ. ಆದರೆ ಸರಕಾರದ ನಿರ್ಧಾರ ಈಗಾಗಲೇ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಮುಸ್ಲಿಮರನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಇದು ಪರೋಕ್ಷವಾಗಿ ಭಾರತದ ಅಭಿವೃದ್ಧಿಯ ಮೇಲೆಯೂ ದುಷ್ಪರಿಣಾಮ ಉಂಟು ಮಾಡುತ್ತದೆ. ಒಂದೆಡೆ ಮಂದಿರ-ಮಸೀದಿಯೆಂದು ಜನರನ್ನು ಒಡೆಯುತ್ತಾ ಇನ್ನೊಂದೆಡೆ ಶಿಕ್ಷಣದಲ್ಲೂ ಪಕ್ಷಪಾತ ಅನುಸರಿಸುತ್ತಿರುವ ಸರಕಾರದ ನೀತಿ ಭಾರತವನ್ನು ಹಲವು ದಶಕಗಳಷ್ಟು ಹಿಂದಕ್ಕೆ ಕೊಂಡೊಯ್ಯಲಿದೆ. ದುರ್ಬಲ ಸಮುದಾಯದ ಅನ್ನ, ಶಿಕ್ಷಣ, ಮನೆಗಳನ್ನು ಬುಲ್ಡೋಜರ್ನಲ್ಲಿ ಧ್ವಂಸಗೊಳಿಸುವ ಮೂಲಕ ಇನ್ನೊಂದು ಸಮುದಾಯವನ್ನು ಖುಷಿ ಪಡಿಸುವ ಅತ್ಯಂತ ಹೀನ ರಾಜಕೀಯಕ್ಕೆ ಮೋದಿ ನೇತೃತ್ವದ ಸರಕಾರ ಇಳಿದಿರುವುದು ಆಘಾತಕಾರಿಯಾಗಿದೆ. ಇದು ಈ ದೇಶದ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎರಡೂ ವರ್ಗಕ್ಕೂ ಅಂತಿಮವಾಗಿ ಅನ್ಯಾಯವನ್ನಷ್ಟೇ ಮಾಡುತ್ತದೆ. ಇದರ ವಿರುದ್ಧ ಬಹುಸಂಖ್ಯಾತರು ಧ್ವನಿಯೆತ್ತಬೇಕಾಗಿದೆ.

ಸದಾನಂದ ಗೌಡ, ಮಂಡ್ಯ

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News