ಮಾನವಪೀಡಕ ಓಡು ಹುಳ!

Update: 2024-05-22 07:30 GMT

ಒಂದು ಕಲ್ಲು ಉಪ್ಪನ್ನು ಎರಡು ಹೋಳಾಗಿಸಿದರೆ ಕಾಣುವ ಗಾತ್ರ ಈ ಕೀಟದ್ದು. ಒಂದು ಇಂಚೂ ಉದ್ದವಿರದ ಇದರ ಆರು ಎಳೆ ಕೈಕಾಲುಗಳು ನೂಲಿನಷ್ಟಕ್ಕೆ ಸಪೂರ. ಈ ಕೀಟದ ಮೈಮೇಲಿನ ರೆಕ್ಕೆಗಳನ್ನು ಅವಚಿಕೊಂಡಿರುವ ಚಿಪ್ಪು, ಮನುಷ್ಯನ ಉಗುರಿನಷ್ಟಕ್ಕೆ ಕಠಿಣವಿದ್ದು, ಕಪ್ಪನೆ ಬಣ್ಣ. ನೋಡಲು ದಕ್ಷಿಣ ಕನ್ನಡದ ಕಡೆ ಹೆಸರಿಸುವ ತೆಂಗು ಮರಕ್ಕೆ ತೂತು ಕೊರೆದು ಹಸುರಿನ ಜೀವ ತೆಗೆಯುವ ಕುರುವಾಯಿಯಂತಿದ್ದರೂ, ಮೂತಿ ಮೇಲೆ ಓಡು ಹುಳಕ್ಕೆ ಕೊಂಬಿಲ್ಲ. ಈ ಕೀಟದ ಓಡಾಟ ಬಹುಪಾಲು ನೆಲ-ಗೋಡೆ ಮೇಲೆ. ರೆಕ್ಕೆ ಬಿಡಿಸಿ ಹಾರಾಟ ಕಮ್ಮಿ. ಅನೇಕ ಪಾಲು ಕೀಟಗಳು; ಗಿಡಮರದ ಎಲೆ ದಂಟು, ರೆಂಬೆಯನ್ನು ಹಿರಿದು ಮುಕ್ಕಿ ಕೃಷಿಗೆ ಕಂಟಕ ಇಕ್ಕತ್ತೆ. ಆದರೆ ಈ ವಿಚಿತ್ರ ಜೀವಿ ಹಾಗೆಲ್ಲ ಮಾಡದಿದ್ದರೂ ಮನುಷ್ಯನಿಗೆ ಮಾತ್ರ ಓಡು ಹುಳದಿಂದ ಮಹಾ ಉಪದ್ರ, ರಗಳೆ, ಕಿರಿಕ್!

ಕಣ್ಣೋಟದ ಅನುಭವ, ಆಗಿರುವ ನಿಜ ದರ್ಶನ, ಕೇಳಿದ ಮಾತು ಇವಿಷ್ಟನ್ನು ಓಡು ಹುಳದ ಕುರಿತು ಸಾದರಪಡಿಸುವೆ. ಪೂರ್ಣಚಂದ್ರ ತೇಜಸ್ವಿಯವರಂತೆ ಹುಳ-ಹುಪ್ಪಟೆ ಮೇಲಿನ ಅಥೆಂಟಿಕ್ ಅಧ್ಯಯನ ಹಾಗೂ ಅಕಾಡಮಿಕ್ ಬಯಾಲಜಿ ಜತೆಗೆ ಶೈಕ್ಷಣಿಕ ಪ್ರಾಕ್ಟಿಕಲ್‌ತನ ನನ್ನಿಂದ ಹೊರಡುವುದು ಕಷ್ಟಸಾಧ್ಯವೆಂದು ಮನಗಂಡಿರುವೆ.

ನನ್ನ ಬಾಲ್ಯದಿಂದಲೇ ಈ ಕೀಟವನ್ನು ನಮ್ಮ ಮನೆಯಲ್ಲಿ ಕಾಣುತ್ತಿರುವೆ. ಅಂತೆಯೇ ನಮ್ಮೂರ ಆಚೆ ಈಚೆಯ ಮನೆಗಳಲ್ಲೂ ಲಾಗಾಯ್ತಿನಿಂದ ಇವೆ. ಮಾಡಿಗೆ ಹೊದೆಸಿದ ಹೆಂಚಿನ ಸಂಧಿಮೂಲೇನ ಕಚ್ಚಿಕೊಂಡಹಾಗೆ ವಾಸಿಸುವ ಕಾರಣಕ್ಕೆ ಗ್ರಾಮ್ಯ ತುಳು ಭಾಷೆಯಲ್ಲಿ ಇದಕೆ ‘ಓಡು ಪುರಿ’ ಎಂದು ಹಿಂದಿನಿಂದ ಕರೆಯುತ್ತಾ ಬಂದಿರಬಹುದು. ತುಳುವಿನಲ್ಲಿ ‘ಓಡು’ ಅಂದರೆ ಹೆಂಚು. ‘ಪುರಿ’ ಅಂದರೆ ಹುಳ.

ಚಿಕ್ಕಂದಿನಲ್ಲಿ ‘‘ಊಟದಲ್ಲಿ ಇದೆಂತ ಹುಳು ಬಿದ್ದಿರುವುದು!?’’ ಎಂದು ಕೇಳಿದ್ದುಂಟು. ಸಾಂಬಾರಿಗೆ ಹಾಕಿದ ಒಗ್ಗರಣೆಯಲ್ಲಿ ಸಾಸಿವೆ, ಕೊತ್ತಂಬರಿ ಕಾಳು ಹೆಚ್ಚು ಸುಟ್ಟರೆ ಕರ‌್ರಗಾಗುವ ಹಾಗೆ ಓಡು ಹುಳಕ್ಕೂ ಸುಟ್ಟ ಮಸಾಲೆ ಪದಾರ್ಥಕೂ ವ್ಯತ್ಯಾಸ ತಕ್ಷಣ ಗೋಚರಿಸದು. ತಾಯಿಯವರು ‘‘ಊಟದಲ್ಲಿ ಒಂದು ನೊಣ ಒಂದೇ ಒಂದು ಸಣ್ಣ ಹುಳ ಮಾಡಿನಿಂದ ತಪ್ಪಿ ಬಿದ್ದಿರ್ತದೆ, ಅದನ್ನು ಬಟ್ಟಲ ಬದಿಗಿಡು’’ ಎಂದದ್ದು ಮೊದಮೊದಲ ನೆನಪು. ಬರಬರುತ್ತಾ ಓಡು ಹುಳ ಆಗಾಗ ಅಲ್ಲೊಮ್ಮೆ ಇಲ್ಲೊಮ್ಮೆ ಕಂಡರೂ ಮುಖ ತೋರಲು ನಾಚಿಕೆಪಟ್ಟಂತೆ ಮರದ ಕಿಟಕಿ ಅಂಚಿನ ಬಿರುಕಿನಲ್ಲಿ, ತೊಳೆದಿಟ್ಟ ಪಾತ್ರೆಯ ಹೊರಭಾಗದಲ್ಲಿ, ವಸ್ತ್ರದಲ್ಲೆಲ್ಲಾ ಅವಿತುಕೊಳ್ಳುತ್ತಿತ್ತು. ನಮಗೆ ಪುಟ್ಟವಯಸ್ಸಲ್ಲಿ ಎಲ್ಲವನ್ನೂ ತಟ್ಟಿ ಮುಟ್ಟಿ ಕುಟ್ಟಿ ನೋಡುವ ಆಟ. ಹಾಗೆ ಏನಾಗುತ್ತದೆಯೆಂದು ಹುಳವನ್ನು ಹಿಚುಕಿ ನೋಡಿ, ಬೆರಳನ್ನು ಮೂಗಿಗೆ ತಂದು ಮೂಸಿಯಾಯಿತು. ಯಕ್! ಆ ಹುಳದ ಮೈ ಸಿಡಿದು ಹೊರಟ ಎಂಥದೊ ರಾಸಾಯನಿಕ ರೀತಿಯ ವಾಸನೆ. ಆ ನಾತಭರಿತ ಕೈ ಬೆರಳ ತುದಿಯನ್ನು ತೋರಿಸಿದರೆ ‘‘ಏ ಕೊಳಕ, ಆ ಓಡು ಹುಳವನ್ನು ಎಂಥಕ್ಕೆ ಅಪ್ಪಚ್ಚಿ ಮಾಡಿದ್ದಾ? ಅದರ ಮೈಲಿ ಆ್ಯಸಿಡ್ ಉಂಟು ಗೊತ್ತುಂಟಾ’’ ಎಂದು ತಂದೆಯವರು ಶುರುಶುರುವಿಗೆ ಅಂದ ನೆನಪು. ಹಾಂ... ಆ್ಯಸಿಡ್ ಈ ಪೊಟ್ಟು ಹುಳದ ಮೈಯೊಳಗೆ! ಅಂದರೆ ಇದು ಭಯಂಕರ. ನೋಡಿದ ಹಾಗಲ್ಲ ಎಂಬ ಅಚ್ಚರಿ.

ಸಮಯ ಕಳೆಯಿತು. ನಾನೂ ಬೆಳೆದೆ. ಊರಿನ ಕೃಷಿಯಲ್ಲಿ ಹಾಗೂ ಅದರ ಬೆಳೆಯ ಮಾರ್ಕೆಟ್ ದರದಲ್ಲಿ ಏರುಪೇರಾದವು. ಆಗುತ್ತಲೇ ಇರುತ್ತದೆ. ಆದರೆ, ಈ ಓಡು ಹುಳುವಿನ ಸಂಖ್ಯೆ ಮಾತ್ರ ನಿಯಂತ್ರಿಸಬಲ್ಲ ಸ್ಥಿತಿಯಲ್ಲಿತ್ತು. ಅದಾಗಿಯೂ ಈಗ ಸುಮಾರು ಐದಾರು ವರ್ಷಗಳಿಂದೀಚೆ ಓಡು ಹುಳಗಳ ಸಂತಾನ ಯದ್ವಾತದ್ವ ಏರಿದೆ. ಇದರ ಪರಿಣಾಮ ಹುಳ ಇರುವೆಡೆ ಮನುಷ್ಯನಿಗೆ ಸರಿಯಾಗಿ ನಿದ್ದೆ ಬರದು, ಊಟ ಸೇರದು, ಓದಲಾಗದು, ನಡೆಯಲು, ಕೂರಲು, ನಿಲ್ಲಲೂ ಸರಿಯಾಗಿ ಆಗದ ಪರಿಸ್ಥಿತಿ ಎಂಬಂತಾಗಿದೆ. ಹುಳದ ರೂಪ ನೋಡಿದರೆ ದೇವಮೂರ್ತಿ- ವಾಮನ, ಪ್ರವೃತ್ತಿ ಮಾತ್ರ ಮಾನವಪೀಡಕ!

ರಾತ್ರಿ ಹೊತ್ತಿಗೆ ಲೈಟು ಬೆಳಕಿಗೆ ಓಡು ಹುಳ ವಿಪರೀತ ಚಟುವಟಿಕೆಯುಕ್ತ. ಸೀಮಿತ ಪ್ರದೇಶದ ನಿವಾಸಿಗಳಿಗೆ ಮಾತ್ರ ತಟ್ಟಿರುವ ಈ ಹುಳದ ಟಾರ್ಚರ್ ಕುರಿತು ಮುಂದೆ ಹೇಳುವೆ...

ಓಡು ಹುಳದ ಆವಾಸ:

ನಮ್ಮ ಮನೆಯೂ ಇರುವ ಸಂಪಾಜೆ ಹೋಬಳಿ ಸೇರಿ, ಪೆರಾಜೆ-ಸುಳ್ಯದ ಕಡೆ, ಸುಬ್ರಮಣ್ಯ ಸೈಡು ನಾ ಕಂಡ ಮಟ್ಟಿಗೆ ಓಡು ಹುಳದ ಇರುವಿಕೆಯಂತೂ ಇದೆ. ಬಾಕಿ ಕಡೆಗಳಲ್ಲೂ ಇರಬಹುದೆಂಬ ಖಾತ್ರಿಯಿಲ್ಲ. ಒಟ್ಟಾರೆ ಕೇರಳ-ಕೊಡಗು ಗಡಿಗಳಲ್ಲಿ ಬರತಕ್ಕ ಸರಿಸುಮಾರು ಊರುಗಳಲ್ಲಿ ಈ ಹುಳ ವಾಸಗೊಂಡಿದೆ ಎಂಬುದು ಖರೆ.

ಮೇ ತಿಂಗಳ ಬಿಸಿಲ ಉಷ್ಣದ ಸಮಯ. ಸಾಯಂಕಾಲ. ಮೊದಲ ಸಲ ಜೂನಿನ ಮುಂಗಾರು ಲಕ್ಷಣವಾಗಿ ಮಳೆ ಹುಯ್ಯಲು ದಟ್ಟೈಸಿದ ಬಾನು ತುಂಬಾ ಮೋಡಗಳು. ತಂಪಾಗಲು ಹಪಹಪಿಸುತ್ತಿರುವ ಪರಿಸರ. ಆ ಹೊತ್ತು ‘ಜೊಂಯ್’ ಅಂತ ಸದ್ದು ಹೊಮ್ಮಿಸುತ್ತಾ ಆಗಸದಿಂದ ಧುಮ್ಮಿಕ್ಕಿ ಇಳಿದ ಒಂದು ರಾಶಿ ಓಡು ಹುಳಗಳು. ಯಬಾ ಆ ಅವಸ್ಥೆ ಹೇಳಿ ತೀರದು! ಇಳಿದು ಬಂದ ಸಹಸ್ರ ಹುಳಗಳು ಗಮನಾರ್ಹವಾಗಿ ಹಳತಾದ ಹೆಂಚಿನ ಮನೆಯಿದ್ದರೆ, ಮರದ ಪಕ್ಕಾಸು, ರೀಪಿನ ಸಂಧಿಯಲ್ಲಿ ಜೊಂಕೆ ಜೊಂಕೆಯಾಗಿ ಬಂದು ಸೇರಿಕೊಳ್ಳುತ್ತವೆ. ಥೇಟ್ ಜೇನು ಹುಳಗಳ ರೀತಿ. ಲಡ್ಡಾಗಿರುವ ಮರದ ಪರಿಕರ ಓಡು ಹುಳಕ್ಕೆ ಇಷ್ಟದ ಜಾಗವಾಗಿದ್ದು, ಆ ಮರವನ್ನು ಇನ್ನೂ ಕುಂಬು ಗುಜುರಿಯಾಗಿಸುತ್ತದೆ.

ಹುಳದ ವ್ಯಾಪ್ತಿ:

ನಾ ಕಂಡ ಅನುಭವದ ಮೇರೆ ಈ ಓಡು ಹುಳ, ತೀರ ತಂಪು ತೀರ ಉಷ್ಣ ಹವೆಯ ಪ್ರದೇಶದೊಳಗೆ ಬಾಳದು. ಸಮ ಉಷ್ಣ-ಶೀತ ಇರುವೆಡೆ ಇತ್ತೀಚೆಗೆ ಈ ಹುಳಗಳ ಸಂಖ್ಯೆಯಲ್ಲಿ ಗಣನೀಯ ಉಬ್ಬರವಾಗಿವೆ. ಇದು ಮಳೆಗಾಲ ಸಮೀಪಿಸುವ ಸಂದರ್ಭ ಪ್ರವೇಶ ಪಡೆದರೆ, ಚಳಿಗಾಲ ತಲುಪುವ ಹೊತ್ತಿಗೆ ತನ್ನ ಸಂತಾನ ಹಿಗ್ಗಿಸಿಬಿಟ್ಟಿರುತ್ತವೆ.

ಮಳೆ ಹನಿ ಸಿಂಚನದಿಂದ ತೇವಗೊಂಡ ಮರದ ಪಕ್ಕಾಸಿನ ತಿರುಳು, ನೀರ ರಸ ಉಳಿಸಿಕೊಂಡು ಒಗೆದು ಒಣಹಾಕಿದ ಬಟ್ಟೆಯ ತೇವವನ್ನು ಸೇವಿಸುವುದು; ಈ ಓಡು ಹುಳ. ಇದರ ಮೈಬಣ್ಣ ಕಪ್ಪಗೆ. ಹಾಗಾಗಿ ತಾನು ಕುಳಿತಿರುವುದು ಯಾರ ನೋಟಕ್ಕೂ ಬೀಳದಂತೆ ವಸ್ತುವಿನ ಕಪ್ಪನೆಯ ಭಾಗಾನ ವಾಸಯೋಗ್ಯ ದೃಷ್ಟಿಯಿಂದ ಆಯ್ಕೆ ಮಾಡಿಕೊಳ್ಳುತ್ತದೆ.

ವಿದ್ಯುತ್ ಲೈಟಿನ ಪ್ರಕಾಶವು ಸೂರ್ಯ ರಶ್ಮಿಯಂತೆ ಸುಡದು. ಹಾಗಾಗಿ ಈ ಕೀಟವು ರಾತ್ರಿಯಾದೊಡನೆ ಲೈಟಿನ ಸುತ್ತ ಅದರ ಬೆಳಕಿಗೆ ಆಕರ್ಷಣೆಗೊಂಡು ಹಾರಾಟ-ಚಲನೆಗೈಯುತ್ತದೆ. ಲೈಟನ್ನು ಮುತ್ತಿಕ್ಕುತ್ತವೆ.

ಕಾಲದ ಬಿಸಿ; ಉತ್ತುಂಗ. ಆಗ ಎಪ್ರಿಲ್ ಶುರು. ಆ ವೇಳೆ, ಓಡು ಹುಳಗಳು ಪರಿಸರದ ಉಷ್ಣತೆ ತಾಳಿಕೊಳ್ಳಲು ಹೆಣಗುತ್ತಾ ಹೋರಾಡುತ್ತಾ ಒಂದೊಂದಾಗಿ ಮರಣ ಹೊಂದುತ್ತವೆ. ಮೇ ಮೊದಲ ವಾರಕ್ಕಾಗಲೇ ಇದ್ದ ಅಷ್ಟೂ ಹುಳಗಳು ಮಂಗಮಾಯ! ಆಯಿತು, ಇದರ ಕತೆ ಮುಗಿಯಿತು ಅಂದುಕೊಂಡರೆ ತಪ್ಪು. ಒಂದೆರಡು ವಾರ ತಲುಪುವಷ್ಟಕ್ಕೆ ಪುನಃ ಇನ್ನೊಂದು ಓಡು ಕೂಟ ಮನೆಯ ಮಾಡಿನ ವಾಸಕ್ಕೆ ರೆಡಿ!

ಮನೆಗೆ ಮಾರಿ:

ಕೃಷಿಗಾಗಲಿ, ಮನೆಯ ಕೈದೋಟಕ್ಕಾಗಲಿ, ಹೂ ಗಾರ್ಡನಿಗಾಗಲಿ ಏನೊಂದು ತಾಪತ್ರಯ ಮಾಡದ ಓಡು ಹುಳ. ಆದರೆ ಹೆಂಚಿನ ಮಾಡಿರುವ ಮನೆಯೊಳಗೆ ಇದರ ಆಟಾಟೋಪ ಹೇಳಿ ಪ್ರಯೋಜನವಿಲ್ಲ! ಇದಕೆ ಶಾಶ್ವತ ಪರಿಹಾರವೂ ಇಲ್ಲಿ ತನಕ ಕಂಡುಹಿಡಿದಿಲ್ಲ.

ಓಡು ಹುಳದಿಂದ ಮನುಷ್ಯನಿಗೆ ಎಷ್ಟೊಂದು ಉಪಟಳವೆಂದರೆ ನಮ್ಮೂರಿನ ಒಬ್ಬರು ‘‘ನಿನ್ನೆ ಕತ್ತಲೆಗೆ ಮಲಗಿದ್ದ ನಮ್ಮ ಮಗನ ಕಿವಿಯೊಳಗೆ ಓಡು ಹುಳ ಹೊಕ್ಕಿ ಕಷ್ಟ ಆಯ್ತು. ಆ ಹುಳನ ಹೇಗೆ ತೆಗಿಯೂದಂತ!? ಇನ್ನು ಡಾಕ್ಟ್ರಿಗೇ ತೋರ್ಸಬೇಕಷ್ಟೆ’’ ಎಂದದ್ದಿದೆ. ಈ ಹುಳ ಕಿವಿಯೊಳಗಿನ ಕಪ್ಪನೆ ಪ್ರದೇಶ ಕಂಡೊಡನೆ ನುಗ್ಗಿದೆ. ಅಲ್ಲಿ ಅವಚಿ ಕುಳಿತಿದೆ. ಅಲ್ಲೇ ಸುಮ್ಮಗೆ ಕೂರದೆ ಹರಿದಾಡಲು ಪ್ರಯತ್ನಿಸುತ್ತದೆ.

ಇನ್ನೊಬ್ಬರು ‘‘ಬೆಂಗ್ಳೂರಿಗೆ ಬಂದು ಅಂಗಿಯೊಳಗೆ ತುರಿಕೆಯಾಗಿ ನೋಡ್ತೇನೆ ಮಾರ್ರೆ, ಊರಲ್ಲಿ ಹತ್ತಿದ ಓಡು ಹುಳ ಇಲ್ಲಿಗೂ ಬಂದಿದೆ, ಕರ್ಮ!’’ ಅಂದಿದ್ದಿದೆ. ಮೈಮೇಲೆ ಈ ಹುಳ ಹತ್ತಿದೆ ಎಂದು ಅಲ್ಲಿಗೇ ಕೈಹಾಕಿ ಹಿಚುಕಿದರೆ ಸುಟ್ಟ ರೀತಿಯ ಕಲೆ ಚರ್ಮದ ಮೇಲೆ ಮೂಡುತ್ತದೆ.

ತನ್ನ ಸುರಕ್ಷೆಗಾಗಿ ಜೀವ ರಕ್ಷಣೆ ಬಯಸಿ ಮನುಷ್ಯನ ಭೀತಿಪಡಿಸಲೆಂದು ಓಡು ಹುಳವು ತಲೆಯ ಕೂದಲಿನ ಮೇಲೆ ರಾತ್ರಿ ಲೈಟಿನ ಬೆಳಕಿಗೆ ಪಟಪಟ ಉದುರುತ್ತದೆ. ಹೀಗಾಗಿ ಬರಹಗಾರರು ತನ್ಮಯರಾಗಿ ಏನಾದರೊಂದು ಓದಿ ಬರೆದು ಮಾಡುವುದಿರಲಿ ಯಾವ ಕೆಲಸವನ್ನೂ ಮಗ್ನತೆಯಿಂದ ನಡೆಸಲು ಸಾಧ್ಯವಾಗದ ಪರಿಸ್ಥಿತಿ!

ಈಗಾಗಿ ಓಡು ಹುಳಗಳ ಹಾವಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆನ್ನುವುದೇ ದೊಡ್ಡ ಪ್ರಶ್ನೆ. ಉತ್ತರ ಕೊಡಗು, ಸುಳ್ಯ-ಬೆಳ್ಳಾರೆ ಕಡೆ ರಬ್ಬರ್ ಮರಗಳ ಕೃಷಿ ಜಾಸ್ತಿಯಿರುವುದರಿಂದ ಇವುಗಳ ಕಾಟ ಹೆಚ್ಚಿದೆ ಅನ್ನುತ್ತಾರೆ.

ಈ ಹುಳವನ್ನು ನಿಯಂತ್ರಿಸಲು ದ್ರವ ರೂಪದ ಕೆಮಿಕಲ್ ಇದ್ದರೂ ಅದನ್ನು ಈ ವರ್ಷ ಸಿಂಪಡಿಸಿದರೆ ಒಮ್ಮೆಗಷ್ಟೆ. ಬರುವ ವರ್ಷ ಮತ್ತೊಂದು ಗುಂಪು ಆಗಮಿಸಿಯೇ ಆಗಮಿಸುತ್ತದೆ. ಇದರ ಉಪಟಳದಿಂದ ಮನುಷ್ಯ ಹೇಗೆ ಬಚಾವ್ ಆಗುವುದು? ಈ ಚಡಪಡಿಕೆ ಮಾತ್ರ ಜೀವಂತ!

Writer - ವಾರ್ತಾಭಾರತಿ

contributor

Editor - Thouheed

contributor

Byline - ಅಕ್ಷಯ ಕಾಂತಬೈಲು

contributor

Similar News