ಕೊಟ್ಟವರು ಕೋಡಂಗಿ- ಇಸ್ಕೊಂಡವರು ಈರಭದ್ರರು!

Update: 2024-07-19 10:47 GMT

ಸಾಂದರ್ಭಿಕ ಚಿತ್ರ (Meta AI)

ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕವನ್ನು ಕರ್ನಾಟಕ ಸರಕಾರ ನನೆಗುದಿಗೆ ಹಾಕಿದೆ. ಸಚಿವ ಸಂಪುಟದಲ್ಲಿ ಸಮಗ್ರವಾದ ಚರ್ಚೆ ಇನ್ನೂ ನಡೆದಿಲ್ಲ. ಮತ್ತೆ ಸಂಪುಟದ ಮುಂದಿಟ್ಟು ಕೂಲಂಕಷವಾಗಿ ಚರ್ಚಿಸಿ, ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಕೊಂಚ ಗೊಂದಲ ಉಂಟಾಗಿತ್ತು, ಮುಂದಿನ ದಿನಗಳಲ್ಲಿ ಈ ಗೊಂದಲಗಳನ್ನು ನಿವಾರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಜುಲೈ 18ರಂದು ಸದನದಲ್ಲಿ ಪ್ರಕಟಿಸಿದ್ದಾರೆ.

ಕರ್ನಾಟಕದ ಐಟಿ-ಬಿಟಿ ಕಂಪೆನಿಗಳು ಇದು ‘‘ಡ್ರಕೋನಿಯನ್ ಕಾನೂನು’’ ಎಂದು ಗದ್ದಲ ಎಬ್ಬಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಕನ್ನಡಿಗರಿಗೆ ಉದ್ಯೋಗ ಕೊಡುವ ಈ ವಿಧೇಯಕವನ್ನು ದಿಢೀರ್ ತಡೆಹಿಡಿದಿರುವುದನ್ನು ಖಂಡಿಸಿರುವ ರಾಜ್ಯದ ಪ್ರಮುಖ ಪ್ರತಿಪಕ್ಷ, ’ಈ ನೆಲದಲ್ಲಿ ಬದುಕು ಮಾಡುತ್ತ ಕನ್ನಡ ಕಲಿತವರೆಲ್ಲ ಕನ್ನಡಿಗರೇ’ ಎಂದು ಪರಿಗಣಿಸಿ ಈ ನೆಲದ ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಬಹುದಿನಗಳ ಹೋರಾಟದ ಬೇಡಿಕೆಗೆ ನಿನ್ನೆಯಷ್ಟೇ ‘ಅಸ್ತು ‘ಎಂದು ಹೆಜ್ಜೆ ಇಟ್ಟಿದ್ದ ಸರಕಾರ, ದಿನ ಕಳೆಯುವುದರೊಳಗೇ ‘ಸುಸ್ತು’ ಹೊಡೆದಿರುವುದೇಕೆ? ಎಂದು ಪ್ರಶ್ನಿಸಿದೆ.

ನಾಡಿನ ಐಟಿ ಉದ್ದಿಮೆಯ ಮುಖವಾಣಿಗಳಲ್ಲಿ ಒಬ್ಬರಾಗಿರುವ ಟಿ.ವಿ. ಮೋಹನದಾಸ ಪೈಯವರಂತೂ, ಇದು ಸಂವಿಧಾನದ 19ನೇ ವಿಧಿಗೆ ವಿರುದ್ಧವಾದ ನಿರ್ಧಾರವಾಗಿದ್ದು, ಹರ್ಯಾಣ ಸರಕಾರ ಇಂತಹದೇ ತೀರ್ಮಾನ ತೆಗೆದುಕೊಂಡಾಗ, ಅದನ್ನು ಅಲ್ಲಿನ ಹೈಕೋರ್ಟು ರದ್ದುಪಡಿಸಿದೆ. ಕರ್ನಾಟಕ ಸರಕಾರದ ಈ ರೀತಿಯ ನಿರ್ಧಾರಗಳಿಂದಾಗಿ ತಮಗೆ ಒಂದೇ ದಿನದಲ್ಲಿ ಹಲವು ಮಂದಿ ಜಗತ್ತಿನಾದ್ಯಂತದಿಂದ ‘ಕರ್ನಾಟಕದಲ್ಲಿ ಏನಾಗುತ್ತಿದೆ?’ ಎಂದು ಕೇಳಿರುವುದಾಗಿಯೂ, ‘ಬ್ರ್ಯಾಂಡ್ ಕರ್ನಾಟಕ’ಕ್ಕೆ ಇದೊಂದು ಕಪ್ಪು ದಿನ ಎಂದೂ ಕಿಡಿ ಕಾರಿದ್ದಾರೆ.

ಇದೇ ಅವಕಾಶವನ್ನು ಬಳಸಿಕೊಂಡು, ತೆಲಂಗಾಣದಂತಹ ಆಸುಪಾಸಿನ ರಾಜ್ಯಗಳು ಕರ್ನಾಟಕದ ಕೈಗಾರಿಕೆಗಳಿಗೆ ತಮ್ಮಲ್ಲಿ ಕೆಂಪುಗಂಬಳಿ ಹಾಸಿ ಸ್ವಾಗತಿಸಲು ತಾವು ಸಿದ್ಧರಿರುವುದಾಗಿ ಹೇಳಿಕೆ ನೀಡಿದೆಯಂತೆೆ.

ಇವಿಷ್ಟು ಸದ್ಯದ ಬೆಳವಣಿಗೆಗಳು.

ರಾಜಕೀಯ ಎಂದರೆ ಏನೆಂಬುದನ್ನು ಈಗೀಗ ಈ ಐಟಿ-ಬಿಟಿ ಕಂಪೆನಿಗಳಿಂದ ನಮ್ಮ ರಾಜಕಾರಣಿಗಳು ಕಲಿಯಬೇಕಾಗಿ ಬಂದಿರುವ ದುರಂತದ ಸ್ಥಿತಿ ಇದು. ಯಾಕೆಂದು ವಿವರಿಸುತ್ತೇನೆ.

ಉದಾರೀಕರಣಗೊಂಡ ವ್ಯವಸ್ಥೆಯಲ್ಲಿ, ಯಾವುದೇ ಉದ್ಯಮ ಅಥವಾ ಕೈಗಾರಿಕೆಯನ್ನು ಆರಂಭಿಸಲು ಅದಕ್ಕೆ ಭೂಮಿಯನ್ನು, ವಿದ್ಯುತ್-ನೀರು ಮತ್ತಿತರ ಸವಲತ್ತುಗಳನ್ನು ಒದಗಿಸುವಾಗ, ವಿವಿಧ ಸಬ್ಸಿಡಿಗಳು- ಇನ್ಸೆಂಟಿವ್‌ಗಳನ್ನು ರಾಜ್ಯದ ಜನರ ತೆರಿಗೆ ದುಡ್ಡಿನಿಂದ ನೀಡುವಾಗ - ಭೂಮಿ ಕಳೆದುಕೊಂಡವರಿಗೆ ಮತ್ತು ಸ್ಥಳೀಯರಿಗೆ ಉದ್ಯೋಗ ಒದಗಿಸಬೇಕು ಎಂಬ ಷರತ್ತು ಇರುವುದು ಹೊಸದೇನಲ್ಲ. ಸ್ವತಃ ಮೋಹನದಾಸ ಪೈ ಅವರು ಕರ್ನಾಟಕದಲ್ಲಿ ‘ಸಾಧನೆಗೈದ’’ ಸಂಸ್ಥೆಗಳೂ ಸೇರಿದಂತೆ ಎಲ್ಲ ಕೈಗಾರಿಕೆಗಳು, ಐಟಿ-ಬಿಟಿ ಉದ್ಯಮಗಳೂ ಇದೇ ಷರತ್ತಿನ ಮೇಲೆ ಇಲ್ಲಿ ಬೀಡು ಬಿಟ್ಟಂತಹವು. ಸರಕಾರಗಳ ಸಡಿಲಿನ ಕಾರಣದಿಂದಾಗಿ ಇವರು ಈ ನಿಯಮವನ್ನು ಪಾಲಿಸದಿದ್ದಾಗಲೂ ಕಡೆಗಣಿಸಿದ್ದೇ, ಇಂದು ಕೊಟ್ಟವರು ಕೋಡಂಗಿಗಳು-ಇಸ್ಕೊಂಡವರು ಈರಭದ್ರರು ಆಗಿರುವುದಕ್ಕೆ ಕಾರಣ.

ಕರ್ನಾಟಕ ಸರಕಾರ ತಕ್ಷಣ ಮಾಡಬೇಕಾಗಿರುವ ಕೆಲಸ ಏನೆಂದರೆ, ಈ ಎಲ್ಲ ಉದ್ಯಮಗಳು ತಮಗೆ ಅಪಾರ ಗಾತ್ರದ ಭೂಮಿ ಪಡೆಯುವಾಗ, ಬೇರೆ ಹತ್ತಾರು ಸವಲತ್ತುಗಳನ್ನು ಪಡೆದಾಗ ಏನೆಲ್ಲ ಒಪ್ಪಂದಗಳಿಗೆ ಸಹಿ ಹಾಕಿದ್ದರು ಎಂಬುದನ್ನು ಶ್ವೇತಪತ್ರವೊಂದರ ಮೂಲಕ ಬಹಿರಂಗಪಡಿಸಬೇಕು.

1978ರಲ್ಲಿ ಕಿಯಾನಿಕ್ಸ್ ಮತ್ತು ಕೆಐಎಡಿಬಿಗಳು ಜೊತೆಯಾಗಿ ಬೆಂಗಳೂರಿನಲ್ಲಿ ಸ್ಥಾಪಿಸಿದ 332 ಎಕ್ರೆ ಗಾತ್ರದ ಇಲೆಕ್ಟ್ರಾನಿಕ್ ಸಿಟಿ, 1992ರಲ್ಲಿ TUPM ವ್ಯವಸ್ಥೆಯ ಮೂಲಕ ಐಟಿ ಉದ್ಯಮ ಕಾಲಿಟ್ಟಾಗ, ಕೇವಲ 13 ಕಂಪೆನಿಗಳನ್ನು ಹೊಂದಿತ್ತು. ಇಂದು ಅಲ್ಲಿ 5,000ಕ್ಕೂ ಮಿಕ್ಕಿ ಐಟಿ ಕಂಪೆನಿಗಳು ಕೆಲಸ ಮಾಡುತ್ತಿವೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವುದು ಮಾತ್ರವಲ್ಲದೇ ಅಲ್ಲಿಗೆ ಅಗತ್ಯವಿರುವ ಉದ್ಯೋಗ ಯೋಗ್ಯ ಕೌಶಲವುಳ್ಳ ಯುವಕರನ್ನು ಸಿದ್ಧಗೊಳಿಸುವುದು ಕೂಡ ಈ ಸಂಸ್ಥೆಗಳಿಗೆ ವಿಧಿಸಲಾಗಿರುವ ಷರತ್ತುಗಳ ಭಾಗವಾಗಿತ್ತು. ಅಲ್ಲೇ ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ MMMU&@ ಅದೇ ಉದ್ದೇಶದ ಭಾಗ. ಬರಬರುತ್ತಾ, ಭಾರತದ MU ರಾಜಧಾನಿ ಎಂಬ ಕೊಂಬು, ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಮಾಡುವ ರಾಜ್ಯ ಎಂಬ ಹಮ್ಮುಗಳೆಲ್ಲದರ ದೊಡ್ಡ ಪಾಲು ಕಸಿದುಕೊಂಡ ಈ ಐಟಿ ಕಂಪನಿಗಳು ತಾವೇ ‘ಬ್ರ್ಯಾಂಡ್ ಬೆಂಗಳೂರು’ ಎಂದು ಹೊರಟಲ್ಲಿಂದಲೇ, ಸರ್ಕಾರಗಳಿಗಿಂತ ಇವರ ಹೇಳಿಕೆಗಳು ‘‘ದೊಡ್ಡದಾಗ’’ ತೊಡಗಿದವು. ನೀತ್ಯಾತ್ಮಕ ನಿರ್ಧಾರಗಳಲ್ಲಿ ಇವರ ‘ಬುಲ್ಲೀಯಿಂಗ್’ ಶುರುವಾಯಿತು; ಸರಕಾರಗಳಿಗೆ- ಸರಕಾರದ ನಿರ್ಧಾರಗಳಿಗೆ (ಅದು ಯಾವುದೇ ರಾಜಕೀಯ ಪಕ್ಷದ್ದಿರಲಿ!) ತಾವೇ ಪ್ರಾಕ್ಸಿಗಳೆಂಬ ಮಟ್ಟಕ್ಕೆ ಇವರೆಲ್ಲ ಬೆಳೆದುನಿಂತರು. ರಾಜ್ಯದ ನೆಲ, ನೀರು, ವಿದ್ಯುತ್, ತೆರಿಗೆ ಹಣ ಎಲ್ಲವನ್ನೂ ಗರಿಷ್ಠ ಪ್ರಮಾಣದಲ್ಲಿ ಗೋರಿಕೊಂಡ ಬಳಿಕ ಈಗ, ರಾಜ್ಯದ ಜನರಿಗೆ ಕೆಲಸ ಕೊಡಿ ಎಂದರೆ, ಇದು ‘ಸಂವಿಧಾನ ಬಾಹಿರ’ ಎಂಬ ವರಾತ ತೆಗೆಯುತ್ತಿದ್ದಾರೆ.

ಈಗಾಗಲೇ ನಿಯಮ ಇದೆಯಲ್ಲ?

ಕರ್ನಾಟಕ ಸರಕಾರ ತರಲು ಉದ್ದೇಶಿಸಿರುವ ವಿಧೇಯಕ ಏಕಾಏಕಿ ಹುಟ್ಟಿಕೊಂಡದ್ದಲ್ಲ. ಅದು ಈಗಾಗಲೇ ಇರುವ ಸರಕಾರಿ ಆದೇಶವೊಂದನ್ನು ಶಾಸನಾತ್ಮಕವಾಗಿ ಜಾರಿಗೆ ತರುವ ನಿರ್ಧಾರ ಅಷ್ಟೇ. 2020ರಲ್ಲಿ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಸರಕಾರವು ಕರ್ನಾಟಕ ಕೈಗಾರಿಕಾ ನೀತಿ: 2020-2025 [GOVERNMENT ORDER No. CI 199 SPI 2018, BENGALURU, DATED 13.08.2020] ಹಾಗೂ ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ: : 2020- 2025 [Government Order no: ITBT 07 ADM 2019 dated 7 th September, 2020 ಗಳನ್ನು ಜಾರಿಗೆ ತಂದಿತ್ತು. ಅದರಲ್ಲಿ, ಈ 2020-2025ರ ಅವಧಿಯಲ್ಲಿ, ಕೈಗಾರಿಕೆಗಳ ಮೂಲಕ 20 ಲಕ್ಷ ಹಾಗೂ ಐಟಿ-ಬಿಟಿ ಉದ್ಯಮಗಳ ಮೂಲಕ 60ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶ ವ್ಯಕ್ತಪಡಿಸಲಾಗಿತ್ತು. ಅದಕ್ಕಾಗಿ ಈ ಉದ್ದಿಮೆಗಳಿಗೆ ಯಾವರೀತಿಯ ರತ್ನಗಂಬಳಿ ಹಾಸಲಾಗುತ್ತದೆ, ಏನೆಲ್ಲ ಪ್ರೋತ್ಸಾಹ ನೀಡಲಾಗುತ್ತದೆ ಎಂಬುದನ್ನು ವಿವರಿಸಲಾಗಿತ್ತು.

ಈ ಎಲ್ಲ ನಿಯಮ-ಷರತ್ತುಗಳಿಗೆ ಒಳಪಟ್ಟೇ ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕಕ್ಕೆ ಬಂದಿಳಿದಿರುವ ಕೈಗಾರಿಕೆಗಳಿಗೆ, ಐಟಿ-ಬಿಟಿ ಕಂಪೆನಿಗಳಿಗೆ ನೀವು ಒಪ್ಪಿ ಬಂದಿರುವ ನಿಯಮಗಳಿಗೆ ಶಾಸನಾತ್ಮಕ ಚೌಕಟ್ಟು ತರುತ್ತೇವೆ ಎಂದಾಕ್ಷಣ ಅವರಿಗೆ ಉರಿ ಹತ್ತಿಕೊಂಡಿರುವುದು ಯಾಕೆ? ಕೈಗಾರಿಕಾ ನೀತಿ-ಐಟಿಬಿಟಿ ನೀತಿಗಳಿಗಾಗಿ ಪರಿಣತರ ಜೊತೆ ಸಮಾಲೋಚನೆಗಳು ನಡೆದಿಲ್ಲವೇ/ ನಡೆಯುತ್ತಿದ್ದಾಗ ಇವರೆಲ್ಲ ಏಕೆ ಮೌನವಾಗಿದ್ದರು? ಈಗ ಇನ್ನೊಂದು ಸರಕಾರ ಇದೇ ನೀತಿಗೆ ಶಾಸನಾತ್ಮಕ ಬಲ ತುಂಬಲು ಹೊರಟಾಗ, ಅದರ ವಿರುದ್ಧ ಜನಾಭಿಪ್ರಾಯ ರೂಪಿಸುವ-ಬೇರೆ ರಾಜ್ಯಗಳಿಗೆ ಚುಚ್ಚಿಕೊಡುವ ಹುನ್ನಾರ ಯಾಕೆ?

ಅಂದಹಾಗೆ, ಸದ್ರಿ ಕೈಗಾರಿಕಾ ನೀತಿಯಲ್ಲಿ ಈ ಮಾತುಗಳನ್ನು ಬಹಳ ಸ್ಪಷ್ಟವಾಗಿ ದಾಖಲಿಸಲಾಗಿದೆ.

ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಬಂದಿಳಿದಿರುವ ಕೈಗಾರಿಕೆಗಳು ಈ ನಿಯಮಗಳನ್ನು ಗಮನಿಸಿಲ್ಲವೆ?

ಕರ್ನಾಟಕ ಸರಕಾರ ಈ ರೀತಿಯ ಬುಲ್ಲೀಯಿಗ್‌ಗ್ಗೆ ಅವಕಾಶ ನೀಡಬಾರದು. ಯಾವುದೇ ಮುಲಾಜಿಲ್ಲದೇ ತನ್ನ ಉದ್ದೇಶಿತ ವಿಧೇಯಕವನ್ನು ಜಾರಿಗೊಳಿಸಬೇಕು ಮತ್ತು ರಾಜ್ಯದ ಸಂಪನ್ಮೂಲಗಳ ಲಾಭ ಪಡೆದು ರಾಜ್ಯದಲ್ಲಿ ನೆಲೆ ನಿಂತಿರುವ ಎಲ್ಲ ಕೈಗಾರಿಕೆಗಳು, ತಮ್ಮ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ ನಿಯಮಗಳನ್ನು ಎಷ್ಟರ ಮಟ್ಟಿಗೆ ಪಾಲಿಸಿವೆ ಎಂಬುದರ ಅಂಕಿ-ಸಂಖ್ಯೆಗಳನ್ನು ತೆರಿಗೆದಾರರಿಗೆ ಸಾರ್ವಜನಿಕಪಡಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಜಾರಾಂ ತಲ್ಲೂರು

contributor

Similar News