ಸರಳ ಕೃಷಿಕನ ಜೈತ್ರಯಾತ್ರೆ : 'ಪದ್ಮಶ್ರೀ ಅಬ್ದುಲ್ ಖಾದಿರ್ ನಡಕ್ಕಟ್ಟಿನ್'

Update: 2024-09-03 09:26 GMT

ಸುಮಾರು ಎಪ್ಪತ್ತರ ಪ್ರಾಯದ ಪದ್ಮಶ್ರೀ ಅಬ್ದುಲ್ ಖಾದರ್ ನಡಕ್ಕಟ್ಟಿನ್ ಅವರ ‌ಭೇಟಿಯು ನನ್ನಲ್ಲಿ ಸ್ಫೂರ್ತಿ ತುಂಬಿದೆ ಹಾಗೂ ಅಚ್ಚರಿ ಮೂಡಿಸಿದೆ. ಉತ್ತರ ಕರ್ನಾಟಕದ ಧಾರವಾಡದ ಒಬ್ಬ ಸಾಮಾನ್ಯ ಕೃಷಿಕ. ಶುಭ್ರ ಬಿಳಿ ಕುರ್ತಾ ಹಾಗೂ ಬಿಳಿ ಪಂಚೆ, ತಲೆಯಲ್ಲಿ ಸದಾ ಸಮಯ ಬಿಳಿ ಟೋಪಿಯನ್ನು ಧರಿಸುವ ಪದ್ಮಶ್ರೀ ಅಬ್ದುಲ್ ಖಾದರ್ ಅವರ ವೇಷಭೂಷಣವು ಅಲ್ಲಿನ ಪ್ರಾದೇಶಿಕ ಪಾರಂಪರಿಕ ಮುಸ್ಲಿಂ ಉಡುಗೆ.

2022ರಲ್ಲಿ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಗಳಿಸುವ ಮೂಲಕ ಸಾಮಾನ್ಯ ಕೃಷಿಕ ಜೀವನದ ಶ್ರೇಷ್ಠ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.

ತನ್ನ ಜೀವನೋಪಾಯಕ್ಕಾಗಿ ಕೃಷಿ ಕ್ಷೇತ್ರದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರಿಗೆ ಉಪಯುಕ್ತವೆನಿಸುವ ನಲ್ವತ್ತಕ್ಕಿಂತಲೂ ಹೆಚ್ಚಿನ ಉಪಕರಣ, ಯಂತ್ರಗಳನ್ನು ಅಭಿವೃದ್ಧಿಪಡಿಸಿದ ಸಾಧನೆಗಾಗಿ ಈ ಪ್ರಶಸ್ತಿ ಅವರನ್ನು ಹುಡುಕಿ ಬಂದಿದೆ. ಕೇವಲ ಹತ್ತನೇ ತರಗತಿಯ ಶಿಕ್ಷಣ ಪಡೆದು, ತನಗೆ ಪಿತ್ರಾರ್ಜಿತವಾಗಿ ಲಭಿಸಿದ 60 ಎಕರೆ ಜಮೀನಿನಲ್ಲಿ ವಿವಿಧ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ.

ಅವರ ಹೊಸ ಪ್ರಯೋಗ ಹಾಗೂ ಸಂಶೋಧನೆಗಳು ಆಪ್ತರ ನಡುವೆ ವಿಶೇಷವಾಗಿ ಗುರುತಿಸುವಂತೆ ಮಾಡಿತು. ಕೃಷಿ ಉಪಕರಣಗಳನ್ನು ರಿಪೇರಿ ಮಾಡುವುದಲ್ಲದೆ ಕೃಷಿಕರಿಗೆ ಹೊಸ ಯಂತ್ರಗಳನ್ನು ಸಿದ್ಧಪಡಿಸಿ ನೀಡತೊಡಗಿದರು.

ಅವರು ಸಿದ್ಧಪಡಿಸಿ ಕೊಟ್ಟ ಯಂತ್ರಗಳು ಸ್ಥಳೀಯ ಕೃಷಿಕರ ಮೆಚ್ಚುಗೆ ಗಳಿಸಿದವು. ಬಳಿಕ ಉದ್ದಿಮೆಯನ್ನು ಸ್ಥಾಪಿಸಿ ಅವುಗಳ ಉತ್ಪಾದನೆಯನ್ನು ಪ್ರಾರಂಭಿಸಿದರು. ಪೇಟೆಂಟ್‌ನಂತಹ ಕಾನೂನಾತ್ಮಕ ಔಪಚಾರಿಕತೆಗಳನ್ನು ಪೂರ್ಣಗೊಳಿಸಿ ಅದರ ಮಾರ್ಕೆಟಿಂಗ್‌ಗಾಗಿ 1975ರಲ್ಲಿ ಧಾರವಾಡದ ಅನ್ನಿಗೇರಿಯಲ್ಲಿ 'ವಿಶ್ವಶಾಂತಿ ಅಗ್ರಿಕಲ್ಚರಲ್ ರಿಸರ್ಚ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸೆಂಟರ್' ಎಂಬ ಹೆಸರಿನ ಒಂದು ಕಂಪೆನಿಯನ್ನೂ ಸ್ಥಾಪಿಸಿದರು.

ಕಿರುನಗು ಬೀರುತ್ತಾ, "ತಮ್ಮ ಸಮಯ ಪೋಲಾಗುತ್ತಿಲ್ಲ. ಅಲ್ವಾ?" ಎಂದು ಮಧ್ಯೆ ನೆನಪಿಸುತ್ತಾ ತಮ್ಮ ಜೀವಮಾನ ಸಾಧನೆಯ ಕುರಿತ ಮಾತುಗಳನ್ನು ಮುಂದುವರೆಸಿದರು. ವಿವಿಧ ಕ್ಷೇತ್ರಗಳಲ್ಲಿ ಅಸಾಧ್ಯ ಸಾಧನೆಗೈದ ಒಬ್ಬ ಸಾಮಾನ್ಯ ಮನುಷ್ಯನ ಅನುಭವ ಮಾತುಗಳನ್ನು ನಾನು ಆಕಾಂಕ್ಷೆಯಿಂದ ಕೇಳಿಸಿಕೊಂಡೆನು. ತಾನು ಶಾಲೆಯಲ್ಲಿ ಕಲಿಯುತ್ತಿದ್ದ ವೇಳೆ ಆವಿಷ್ಕರಿಸಿದ 'ವಾಟರ್ ಅಲಾರಂ' ಎಂಬ ಮೊದಲ ಯಂತ್ರದ ಕಾರ್ಯಾಚರಣೆಯ ರೀತಿ ವಿವರಿಸಿದಾಗ ಅಚ್ಚರಿಗೊಂಡೆ.

ಆ ಕಾಲದಲ್ಲಿ ಪ್ರತಿದಿನ ಬೆಳಗ್ಗೆ ಅವರು ತಡವಾಗಿ ಎಚ್ಚರಗೊಳ್ಳುತ್ತಿದ್ದರು. ಅಲಾರಂ ಇಟ್ಟು ನೋಡಿದರೂ ಫಲ ಕಾಣಲಿಲ್ಲ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ತರಗತಿಗೆ ತಲುಪಲು ಅಸಾಧ್ಯವಾಗಿತ್ತು. ಸಣ್ಣಂದಿನಿಂದಲೇ ಏನು ಸಿಕ್ಕರೂ ಪ್ರಯೋಗಿಸಿ ನೋಡುವ ಅವರು ತಾನೇ ಈ ಸಮಸ್ಯೆಗೆ ಪರಿಹಾರ ಕಂಡರು. ಅಲಾರಂ ಬಡಿದ ನಂತರವೂ ಎಚ್ಚರಗೊಳ್ಳದಿದ್ದರೆ ಮುಖದ ಮೇಲೆ ನೀರು ಚೆಲ್ಲುವ ಟೈಂಪೀಸ್ ಮತ್ತು ಬಾಟಲನ್ನು ಒಂದು ತೆಳುವಾದ ಹಗ್ಗದ ಮೂಲಕ ಕಟ್ಟಿರುವ ಕಿರು ಉಪಕರಣವನ್ನು ತಯಾರಿಸಿದರು. ಇದರಿಂದ ತಡವಾಗಿ ಎಚ್ಚರಗೊಳ್ಳುವ ಸಮಸ್ಯೆ ಕ್ರಮೇಣ ಅಂತ್ಯ ಕಂಡಿತು.

ಪಿತ್ರಾರ್ಜಿತವಾಗಿ ದೊರೆತ ಬಂಜರು ಭೂಮಿಯಲ್ಲಿ ಇತರ ಬೆಳೆಗಳು ಫಲ ಕಾಣದಿದ್ದಾಗ ಹುಣಸೆ ಮರಗಳು ಅಲ್ಲಿನ ವಾಯುಗುಣ, ಮಣ್ಣಿಗೆ ಸೂಕ್ತ ಎಂದು ಅವರು ಮನಗಂಡರು. ಹಾಗೆ ಎಕರೆ ಗಟ್ಟಲೆ ಪ್ರದೇಶದಲ್ಲಿ ಹುಣಸೆ ಕೃಷಿಯ ಮೂಲಕ ಪ್ರಯೋಗ ನಡೆಸಲಾಯಿತು. 3000 ಹುಣಸೆ ಮರಗಳನ್ನು ನೆಟ್ಟು ಅವುಗಳು ಯಥೇಚ್ಛವಾಗಿ ಫಲ ನೀಡಲು ಆರಂಭಿಸಿದಾಗ ಪುನಃ ಆ ಭೂಮಿಯಲ್ಲಿ ಪ್ರಯೋಗಿಸಿ ನೋಡಲು ಮುಂದಾದರು. ಮಳೆನೀರು ಸಂಗ್ರಹಕ್ಕಾಗಿ ಗುಂಡಿ ತೋಡಿದರು. ನೆರಳು, ನೀರು, ಹಸಿರು ವಾತಾವರಣದಲ್ಲಿ ಇನ್ನೂ ಸಮೃದ್ಧವಾಗಿ ಫಸಲು ದೊರೆಯಲಾರಂಭಿಸಿದಾಗ ಮೌಲ್ಯ ವರ್ಧಕ ಉತ್ಪನ್ನಗಳ ಕುರಿತು ಚಿಂತಿಸತೊಡಗಿದರು. ಹುಣಸೆರಸವನ್ನು ಸಂಗ್ರಹಿಸಲು ಭೂಗರ್ಭ ಟ್ಯಾಂಕ್‌ಗಳನ್ನು ನಿರ್ಮಿಸಿದರು‌. ಹುಣಸೆಯ ಉಪ್ಪಿನಕಾಯಿ, 'ಜಾಮ್' ಸೇರಿದ ಉತ್ಪನ್ನಗಳ ಪರಿಚಯಿಸಿದರು. ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲೂ ಇವು ಗ್ರಾಹಕರನ್ನು ಸೆಳೆಯಿತು. ಆದರೆ ಇದರ ಉತ್ಪಾದನೆ ಹೆಚ್ಚು ಶ್ರಮಯುತವಾದುದು ಎಂದು ಅವರು ಮನಗಂಡರು. ಕಾರ್ಮಿಕ ಶ್ರಮವನ್ನು ಕಡಿಮೆಗೊಳಿಸಲು ಸಹಕಾರಿಯಾಗುವ ಯಂತ್ರಗಳನ್ನು ಸಿದ್ಧಪಡಿಸುವ ಸಾಹಸಕ್ಕೆ ಕೈ ಹಾಕಿದರು.

ಈ ಚಿಂತನೆ ಹುಣಸೆ ಹಣ್ಣಿನ ಸಂಸ್ಕರಣೆಯಲ್ಲಿ ಸಹಾಯಕವಾಗುವ ಹಲವು ಯಂತ್ರಗಳ ಹುಟ್ಟಿಗೆ ಹೇತುವಾಯಿತು. ಹುಣಸೆ ಬೀಜಗಳನ್ನು ಬೇರ್ಪಡಿಸುವ ಯಂತ್ರಗಳನ್ನು ಪ್ರಥಮವಾಗಿ ಕಂಡು ಹಿಡಿಯಲಾಯಿತು. ಹುಣಸೆ ಹಣ್ಣುಗಳನ್ನು ಕತ್ತರಿಸಲು ಬೇರೊಂದು ಯಂತ್ರ.

ಹುಣಸೆಗೆ ಸಂಬಂಧಿಸಿದ ಅವರ ಉತ್ಸಾಹವನ್ನು ಕಂಡು ಜನರು 'ಹುಣಸೆ ಹುಚ್ಚ' ಎಂದು ಹೆಸರಿಟ್ಟು ಕರೆಯತೊಡಗಿದರು.

ಶೈಕ್ಷಣಿಕ - ಸಾಮಾಜಿಕ ವಲಯಗಳಲ್ಲಿ ಮರ್ಕಝ್ ನಡೆಸುತ್ತಿರುವ ಅವಿಶ್ರಾಂತ ಸೇವೆಯನ್ನು ಕಾಣಲು ಮಗನ ಜೊತೆ ಸಾವಿರ ಕಿಲೋಮೀಟರ್ ಸಾಗಿ ಬಂದಿದ್ದರು. ತನ್ನ ಪ್ರದೇಶದಲ್ಲೂ ಉಭಯ ವಿದ್ಯೆಯನ್ನು ಧಾರೆಯೆರೆಯುವ ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವ ತನ್ನ ಇರಾದೆಯನ್ನು ಹೇಳಿಕೊಂಡರು. ಅದರ ಮಧ್ಯೆ ಮಾತುಗಿಳಿದಾಗ ಇಷ್ಟೂ ಅನುಭವಗಳನ್ನು ಹಂಚಿಕೊಂಡರು. ಬೀಜ ಬಿತ್ತನೆ, ಗೊಬ್ಬರ ಹಾಸುವಿಕೆ, ಬೆಳೆ ಕೊಯ್ಯಲು, ಬೆಳೆ ಸಂಸ್ಕರಿಸಲು, ಅತಿವೇಗ ನೀರು ಬಿಸಿಗೈಯಲು ಈ ಪ್ರಾಯದ ಮಧ್ಯೆ ಅವರು ಆವಿಷ್ಕರಿಸಿದ ಯಂತ್ರಗಳು ನಿಜಕ್ಕೂ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಅವರ ಈ ಅಚ್ಚರಿಯ ಸಾಧನೆ ಸಾಮಾನ್ಯರಾದ ಅನೇಕ ಕೃಷಿಕರ ಸಮಯವನ್ನೂ, ಶ್ರಮವನ್ನೂ ಸಂರಕ್ಷಿಸಿದೆ.

ಮಾತಿನ ಕೊನೆಗೆ ಅವರು ಉತ್ತರ ಕರ್ನಾಟಕಕ್ಕೆ ಆಹ್ವಾನಿಸಿದರು. ಅಲ್ಲಿನ ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ನಾನು ಅವರಿಗೆ ಮರ್ಕಝ್ ಕಡೆಯಿಂದ ಪ್ರೀತಿಯ ಕಾಣಿಕೆ ಹಸ್ತಾಂತರಿಸಿದೆನು. ಅವರ ಬದುಕು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಲು ವಿಧ್ಯಾರ್ಥಿಗಳ ಜೊತೆಗೆ ಒಂದು ಸೆಷನ್ ನಡೆಸಿದೆವು. ಕೊನೆಗೆ ಪರಸ್ಪರ ಒಳಿತಿಗಾಗಿ ಪ್ರಾರ್ಥಿಸಿ ಬೀಳ್ಕೊಟ್ಟೆನು. ನಂತರ ಕೆಲವು ಮೀಟಿಂಗಿನ ಅಗತ್ಯಕ್ಕಾಗಿ ಕೋಝಿಕ್ಕೋಡ್ ಕಡೆ ಯಾತ್ರೆಯಲ್ಲಿದ್ದೆನು. ಯಾತ್ರೆಯುದ್ಧಕ್ಕೂ ಅಬ್ದುಲ್ ಖಾದರ್ ನಡಕ್ಕಟ್ಟಿನ್ ಎಂಬ ಒಬ್ಬ ಧರ್ಮಭಕ್ತ ಸಾಮಾನ್ಯ ಕೃಷಿಕನ ಸಾಹಸ ಸಾಧನೆಗಳೇ ಮನಸನಿನಲ್ಲಿ ತುಂಬಿನಿಂತಿತು. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದರಿಂದ ಬಿಳಿ ವಸ್ತ್ರ, ಟೋಪಿ ಧರಿಸಿ ಪದ್ಮಶ್ರೀ ಪ್ರಶಸ್ತಿ ಪಡೆಯುವ ಅವರ ಆ ದೃಶ್ಯ ಜನಸಾಮಾನ್ಯರ ಹಾಗೂ ನಮ್ಮ ವಿಧ್ಯಾರ್ಥಿಗಳನ್ನು ಹುರಿದುಂಬಿಸಿದೆ ಎಂದು ನನಗೆ ತೋರಿತು. ಈ ಬರಹ ಅಂತಹ ಒಂದು ಪ್ರೋತ್ಸಾಹಕ ಟಿಪ್ಪಣಿ ಕೂಡಾ ಹೌದು.

ವಿವಿಧ ವಿಜ್ಞಾನ ಶಾಖೆಗಳಲ್ಲಿ ಅನೇಕಾರು ಯಂತ್ರಗಳನ್ನು ಆವಿಷ್ಕರಿಸಿದ ಮುಸ್ಲಿಂ ವಿದ್ವಾಂಸರು ನಮ್ಮ ನಡುವೆ ಕಳೆದು ಹೋಗಿದ್ದಾರೆ. ಖಗೋಳ ಶಾಸ್ತ್ರ, ವೈಮಾನಿಕ ವೀಕ್ಷಣೆಯಲ್ಲಿ ನಿಪುಣರಾದವರು, ಕಡಲು ಯಾತ್ರೆಯಲ್ಲಿನ ದಿಶಾ ಶೋಧಕರೂ ಕೂಡಾ ಇದರಲ್ಲಿ ಸೇರಿದ್ದಾರೆ. ಮುಹಮ್ಮದ್ ಇಬ್ನು ಮೂಸಲ್ ಖವಾರಿಸ್ಮಿ, ಅಲ್ ಬಿರೂನಿ, ಇಬ್ನು ಸೀನಾ, ಇಬ್ನು ಹೈಸಂ, ಅಲ್ ಅಹ್ರಾವೀ ಮುಂತಾದ ವೈದ್ಯ-ಗಣಿತ-ಜ್ಯೋತಿಶಾಸ್ತ್ರದಲ್ಲಿ ಹೆಸರುವಾಸಿಯಾದ ವಿದ್ವಾಂಸರು ಕೂಡಾ ಇದ್ದಾರಲ್ವಾ. ಈ ಹೊಸ ಕಾಲದಲ್ಲೂ ಅಷ್ಟರ ಮಟ್ಟಿಗಿನ ಸಂಶೋಧನೆಗಳಲ್ಲಿ ಮೊದಲ ಪಂಕ್ತಿಯಲ್ಲಿ ನಮಗೆ ಸಾಧ್ಯವಾಗಬೇಕಿದೆ. ಪ್ರತಿನಿತ್ಯ ಮಾಡುವ ಕೆಲಸಗಳನ್ನು ಶ್ರಮರಹಿತವಾಗಿ ಹೇಗೆ ನಿರ್ವಹಿಸಬಹುದು ಎಂಬ ಆಲೋಚನೆಯಿಂದ ಅವರಿಗೆ 40ರಷ್ಟು ಯಂತ್ರಗಳನ್ನು ಆವಿಷ್ಕರಿಸಲು ಸಾಧ್ಯವಾಯಿತು. ಹಾಗಾದರೆ ನಮಗೂ ಯಾಕೆ ನಮ್ಮ ಅಗತ್ಯಕ್ಕೆ ತಕ್ಕುದಾದ ಇಂತಹ ಆಲೋಚನೆ ಮಾಡಕೂಡದು? ಸದಾ ಉತ್ಸಾಹ, ನಿರಂತರ ಪರಿಶ್ರಮಗಳು ಫಲ ಕಂಡೇ ತೀರುತ್ತದೆ. ಕಳೆದ ವರ್ಷ 'ಮರ್ಕಝ್ ಸೆಂಟರ್ ಆಫ್ ಎಕ್ಸಲ್ಲನ್ಸ್' ಆಗಿರುವ ಪೂನೂರ್ ಜಾಮಿಅ ಮದೀನತುನ್ನೂರ್ ಲೈಫ್ ಫೆಸ್ಟಿವಲ್ ರೋಂಡೆವ್ಯೂ'24 ರಲ್ಲಿ ಭಾಗವಹಿಸಿದಾಗ ಆಧುನಿಕ ತಾಂತ್ರಿಕ ಶಿಕ್ಷಣ, ಕೃತಕ ಬುದ್ಧಿಮತ್ತೆಗಳನ್ನು ನಮ್ಮ ವಿದ್ಯಾರ್ಥಿಗಳು ಕ್ರಿಯಾತ್ಮಕವಾಗಿ ಉಪಯೋಗಿಸುವ ಉದಾಹರಣೆಗಳು ನನಗೆ ಕಾಣಲು ಸಾಧ್ಯವಾಯಿತು. ಹೊಸ ತಲೆಮಾರು ವೈಜ್ಞಾನಿಕ , ತಾಂತ್ರಿಕ ವಲಯಗಳಲ್ಲಿ ಅಧ್ಯಯನ ನಡೆಸಲು ಹೊಸ ಸಾಧ್ಯತೆಗಳನ್ನು ಕಂಡು ಹಿಡಿಯಲು ಉತ್ಸುಕರಾಗಬೇಕಾಗಿದೆ.

ಎ.ಪಿ ಅಬೂಬಕ್ಕರ್ ಮುಸ್ಲಿಯಾರ್, ಕಾಂತಪುರಂ

(ಗ್ರಾಂಡ್ ಮುಫ್ತಿ ಆಫ್ ಇಂಡಿಯಾ)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಪಿ ಅಬೂಬಕ್ಕರ್ ಮುಸ್ಲಿಯಾರ್

contributor

Similar News