ಪ್ರಚಾರ ಪಕ್ಷದ್ದು, ಹಣ ಸಾರ್ವಜನಿಕರದ್ದು!

Update: 2024-10-26 09:22 GMT

ಕಳೆದ ಕೆಲ ವರ್ಷಗಳಲ್ಲಿ ಬಿಜೆಪಿ ಪ್ರಚಾರಕ್ಕಾಗಿ ಮೋದಿ ಸಾರ್ವಜನಿಕ ಹಣವನ್ನು ಹೇಗೆಲ್ಲ ಬಳಸಿದ್ದಾರೆ ಎನ್ನುವ ಬಗ್ಗೆ ‘ನ್ಯೂಸ್ ಲಾಂಡ್ರಿ’ ವಿಶೇಷ ವರದಿ ಮಾಡಿದೆ.

ಈ ವರ್ಷದ ಮಾರ್ಚ್ 6.

ಬಿಹಾರದ ಬೆತಿಯಾದಲ್ಲಿ ಕೇಂದ್ರ ಸರಕಾರದ ಅಧಿಕೃತ ಕಾರ್ಯಕ್ರಮ. ಅದರಲ್ಲಿ ಪ್ರಧಾನಿ ಮೋದಿ, ‘‘ಈ ಜಿಲ್ಲೆ ಸೀತೆ ಮತ್ತು ಲವ ಕುಶರ ಜೀವನವನ್ನು ನೆನಪಿಸುತ್ತದೆ. ಆದರೆ ‘ಇಂಡಿಯಾ’ ಮೈತ್ರಿ ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ವಿರುದ್ಧವಾಗಿತ್ತು’’ ಎನ್ನುತ್ತಾರೆ.

ಸೆಪ್ಟಂಬರ್ 15.

ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ 36 ನಿಮಿಷಗಳ ಮೋದಿ ಭಾಷಣ. ‘‘ಜೆಎಂಎಂ, ಆರ್‌ಜೆಡಿ ಮತ್ತು ಕಾಂಗ್ರೆಸ್ ಜಾರ್ಖಂಡ್‌ನ ಶತ್ರುಗಳು. ಜಾರ್ಖಂಡ್‌ನ ಕನಸು ಬೇರೆಯಲ್ಲ, ಬಿಜೆಪಿ ಬೇರೆಯಲ್ಲ’’ ಎಂದು ಹೇಳಿಕೆ.

ಅಕ್ಟೋಬರ್ 2.

ಜಾರ್ಖಂಡ್‌ನ ಹಝಾರಿಬಾಗ್‌ನಲ್ಲಿನ ಬಿಜೆಪಿ ರೋಡ್‌ಶೋ. 45 ನಿಮಿಷಗಳ ಭಾಷಣ. ಜೆಎಂಎಂ ಮತ್ತು ಕಾಂಗ್ರೆಸ್ ನಾಯಕರು ಆದಿವಾಸಿಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡಲು ಬಯಸುತ್ತಾರೆ ಎಂದು ಮೋದಿ ಪ್ರತಿಪಾದಿಸಿದರು.

ಮೇಲಿನ ಎಲ್ಲವೂ ಈ ದೇಶದ ಜನರ ತೆರಿಗೆ ದುಡ್ಡಿನಲ್ಲಿ ನಡೆದ ಸರಕಾರದ ಅಧಿಕೃತ ಕಾರ್ಯಕ್ರಮಗಳು ಮತ್ತು ಮೋದಿ ಅವನ್ನು ಬಳಸಿಕೊಂಡದ್ದು ಮಾತ್ರ ಬಿಜೆಪಿ ಪ್ರಚಾರಕ್ಕೆ.

‘ನ್ಯೂಸ್ ಲಾಂಡ್ರಿ’ಯ ಬಸಂತ್ ಕುಮಾರ್ ಅವರ ವರದಿ ಈ ಅಂಶವನ್ನು ಎತ್ತಿಹೇಳಿದೆ.

ಮೋದಿ ಸಾರ್ವಜನಿಕ ಹಣವನ್ನು ಬಿಜೆಪಿ ಪ್ರಚಾರದ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂದು ವಿಪಕ್ಷಗಳು ಆಗಾಗ ಆರೋಪಿಸುತ್ತಲೇ ಇವೆ.

ಪ್ರಧಾನಿ ಕಚೇರಿಯ ವೆಬ್‌ಸೈಟ್ ಮತ್ತು ಪ್ರಧಾನಿ ಸೋಷಿಯಲ್ ಮೀಡಿಯಾ ಅಂಕಿಅಂಶಗಳನ್ನೇ ಆಧರಿಸಿ ನಡೆಸಿರುವ ವಿಶ್ಲೇಷಣೆಯಲ್ಲಿ ನ್ಯೂಸ್ ಲಾಂಡ್ರಿ ಮೂರು ವಿಚಾರಗಳನ್ನು ಸ್ಪಷ್ಟವಾಗಿ ಕಂಡುಕೊಂಡಿದೆ.

1. ಮೋದಿ ಅಧಿಕೃತ ಪ್ರವಾಸಗಳ ವೆಚ್ಚ ಭರಿಸಲು ಬಳಕೆಯಾಗುವುದು ಸಾರ್ವಜನಿಕ ಹಣ. ಆಗಾಗ ಅನಧಿಕೃತ ಕಾರ್ಯಕ್ರಮಗಳೂ ಇದರಲ್ಲಿ ಸೇರಿರುತ್ತವೆ.

‘ನ್ಯೂಸ್ ಲಾಂಡ್ರಿ’ ಆರ್‌ಟಿಐ ಪ್ರಶ್ನೆಗೆ ಪಡೆದ ಉತ್ತರದಲ್ಲಿ, ಅಧಿಕೃತವಲ್ಲದ ಕಾರ್ಯಕ್ರಮಗಳ ವೆಚ್ಚವನ್ನು ಪಕ್ಷ ಭರಿಸುತ್ತದೆ ಎಂದು ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದ್ದರೂ, ಸರಕಾರಿ ಕಾರ್ಯಕ್ರಮದ ಜೊತೆಗೆ ತಳುಕು ಹಾಕಿರುವ ಅಂಥ ಸಂದರ್ಭಗಳಲ್ಲಿನ ಪ್ರಯಾಣ ವೆಚ್ಚ ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

2. ಮೋದಿಯವರ ಅಧಿಕೃತ ಪ್ರವಾಸಗಳಲ್ಲಿನ ಭಾಷಣಗಳಲ್ಲಿ ಚುನಾವಣಾ ಪ್ರಚಾರದ ರಾಜಕೀಯ ಹೇಳಿಕೆಗಳಿರುತ್ತವೆ ಮತ್ತು ವಿಪಕ್ಷಗಳ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಿದೆ.

3. ಮೋದಿಯವರ ಅಧಿಕೃತ ರಾಜ್ಯ ಪ್ರವಾಸಗಳಲ್ಲಿ ಹೆಚ್ಚಿನವು ಅಲ್ಲಿ ಚುನಾವಣೆ ಘೋಷಣೆಗೆ ಮುಂಚಿನ 100 ದಿನಗಳ ಅವಧಿಯೊಳಗೆ ನಡೆದವಾಗಿವೆ.

2022ರ 45 ಅಧಿಕೃತ ಭೇಟಿಗಳಲ್ಲಿ ಐದನ್ನು ಅನಧಿಕೃತ ಎಂದು ಘೋಷಿಸಲಾಗಿದೆ.

2023ರ 48 ಅಧಿಕೃತ ಭೇಟಿಗಳಲ್ಲಿ 15 ಅಧಿಕೃತವಲ್ಲದ ಕಾರ್ಯಕ್ರಮಗಳು ಸೇರಿದ್ದವು.

ಈ ಅನಧಿಕೃತ ಕಾರ್ಯಕ್ರಮಗಳಲ್ಲಿ ಹೆಚ್ಚಿನವು ಬಿಜೆಪಿಯ ಚುನಾವಣಾ ಅಜೆಂಡಾ ಹೊಂದಿದ್ದವು ಮತ್ತು ವಿಪಕ್ಷಗಳನ್ನು ಟೀಕೆಗೆ ಗುರಿಪಡಿಸಲಾಗಿತ್ತು.

ಇಂತಹ ಅನಧಿಕೃತ ಕಾರ್ಯಕ್ರಮಗಳಲ್ಲಿ ಕಳೆದ ವರ್ಷ ಅಕ್ಟೋಬರ್ 2ರಂದು ರಾಜಸ್ಥಾನ ಮತ್ತು ಮಧ್ಯಪ್ರದೇಶ ಪ್ರವಾಸದ ವೇಳೆ ಚಿತ್ತೋರ್‌ಗಢದಲ್ಲಿ ಬಿಜೆಪಿ ಚುನಾವಣಾ ರ್ಯಾಲಿ ಆಯೋಜಿಸಲಾಗಿತ್ತು. ಈ ರ್ಯಾಲಿಯಲ್ಲಿ ಮೋದಿ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು.

ಅಕ್ಟೋಬರ್ 5ರಂದು ಜೋಧ್‌ಪುರದಲ್ಲಿ ರೋಡ್‌ಶೋ ನಂತರ ಮೋದಿ ಭಾಷಣವಿತ್ತು. ಅಲ್ಲಿ ಅವರು ಹಲವಾರು ಯೋಜನೆಗಳ ಉದ್ಘಾಟನೆಗೆ ತೆರಳಿದ್ದರು. ಪಕ್ಷ- ಅಥವಾ ಚುನಾವಣೆ ಸಂಬಂಧಿತ ಪ್ರಧಾನಿ ಭೇಟಿಗಳು ಅಧಿಕೃತವಲ್ಲದ ಪ್ರವಾಸಗಳಾಗಿವೆ ಮತ್ತು ಅಂಥ ಸಂದರ್ಭದಲ್ಲಿ ಪ್ರಧಾನ ಮಂತ್ರಿಯ ವಿಮಾನ ಪ್ರಯಾಣದ ವೆಚ್ಚವನ್ನು ಪಿಎಂಒ ಭರಿಸುವುದಿಲ್ಲ ಎಂದು ಆರ್‌ಟಿಐ ಮೂಲಕ ನ್ಯೂಸ್ ಲಾಂಡ್ರಿ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರ ಬಂದಿದೆ.

ಬಹಳ ಸಲ ಪ್ರಧಾನಿ ಮೋದಿಯ ಅಧಿಕೃತ ಪ್ರವಾಸಗಳ ಜೊತೆಗೇ ಅಧಿಕೃತವಲ್ಲದ ಕಾರ್ಯಕ್ರಮಗಳು ತಳುಕು ಹಾಕಿಕೊಂಡಿರುತ್ತವೆ. ಆದರೆ ಪಿಎಂಒ ವೆಬ್‌ಸೈಟ್ ಅವೆರಡನ್ನೂ ಪ್ರತ್ಯೇಕವಾಗಿಯೇ ಉಲ್ಲೇಖಿಸುತ್ತದೆ. ಅಧಿಕೃತ ಪ್ರವಾಸಗಳ ಜೊತೆಗೇ ಇರುವ ಅಧಿಕೃತವಲ್ಲದ ಕಾರ್ಯಕ್ರಮಗಳ ವೆಚ್ಚವನ್ನು ಪಿಎಂಒ ಹೇಗೆ ಲೆಕ್ಕ ಹಾಕುತ್ತದೆ?

ನ್ಯೂಸ್ ಲಾಂಡ್ರಿ ಕೇಳಿರುವ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

2019ರ ಸ್ಕ್ರಾಲ್ ವರದಿಯೊಂದು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಎಂದೂ ಅಧಿಕೃತ ಮತ್ತು ಅನಧಿಕೃತ ಪ್ರವಾಸಗಳು ಒಂದರ ಜೊತೆ ಇನ್ನೊಂದು ತಳುಕು ಹಾಕಿಕೊಂಡಿರುತ್ತಿರಲಿಲ್ಲ ಎಂಬುದನ್ನು ಹೇಳುತ್ತದೆ. 2014ರ ಲೋಕಸಭೆ ಚುನಾವಣೆಯವರೆಗೆ 28 ತಿಂಗಳ ಕಾಲ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ಪಂಕಜ್ ಪಚೌರಿ ಈ ವಿಚಾರ ಖಚಿತಪಡಿಸುತ್ತಾರೆ.

ಮನಮೋಹನ್ ಸಿಂಗ್ ಅವರು ಸರಕಾರ ಮತ್ತು ಪಕ್ಷದ ಕೆಲಸದ ನಡುವೆ ಸ್ಪಷ್ಟ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುತ್ತಿದ್ದರು ಎಂಬುದನ್ನು ಪಚೌರಿ ಹೇಳುತ್ತಾರೆ. ಅವರ ಅಧಿಕೃತ ಪ್ರವಾಸ ಮತ್ತು ಪಕ್ಷದ ಪ್ರಚಾರ ಎರಡೂ ಒಟ್ಟಿಗೇ ಆದದ್ದನ್ನು ಅವರೊಂದಿಗಿನ ತಮ್ಮ 28 ತಿಂಗಳ ಅವಧಿಯಲ್ಲಿ ಯಾವತ್ತೂ ನೋಡಿದ್ದಿಲ್ಲ ಎಂದು ಪಚೌರಿ ಹೇಳಿದ್ದಾರೆ.

ಪಕ್ಷದ ಪ್ರಚಾರದ ವೆಚ್ಚವನ್ನು ಪಕ್ಷವೇ ಭರಿಸುತ್ತಿತ್ತು. ಅವರು ಪಕ್ಷದ ಪ್ರಚಾರಕ್ಕೆ ಹೋಗುವಾಗ ಪಿಎಂಒ ಸಿಬ್ಬಂದಿ ಕೂಡ ಇರುತ್ತಿರಲಿಲ್ಲ. ಖಾಸಗಿ ಕಾರ್ಯದರ್ಶಿ ಮಾತ್ರ ಅವರೊಂದಿಗೆ ಹೋಗುತ್ತಿದ್ದರು ಎಂಬುದನ್ನೂ ಪಚೌರಿ ಹೇಳಿದ್ದಾರೆ. ಇನ್ನು ವಾಜಪೇಯಿ ಕಾಲದ ವಿವರಗಳಿಗೆ ಹೋಗುವುದಾದರೆ, ಪಿಎಂಒ ವೆಬ್‌ಸೈಟ್ ವಾಜಪೇಯಿ ಅವರ ಎರಡು ದೇಶೀಯ ಮತ್ತು ಅಧಿಕೃತ ಪ್ರವಾಸಗಳನ್ನು ಮಾತ್ರ ಉಲ್ಲೇಖಿಸಿದೆ. ಅವುಗಳಲ್ಲಿ ಪಕ್ಷದ ಪ್ರಚಾರ ಇದ್ದುದು ಸ್ಪಷ್ಟವಿಲ್ಲ.

2024ರಲ್ಲಿ ಮೋದಿ 38 ಅಧಿಕೃತ ಭೇಟಿಗಳಲ್ಲಿ 14 ಭೇಟಿಗಳನ್ನು ಪಕ್ಷದ ಪ್ರಚಾರಕ್ಕೆ ಬಳಸಿದ್ದಿದೆ. 21 ಕಾರ್ಯಕ್ರಮಗಳಲ್ಲಿ ವಿಪಕ್ಷಗಳನ್ನು ಟೀಕಿಸಿದ್ದಾರೆ.

2024ರ ಲೋಕಸಭೆ ಚುನಾವಣೆ ಘೋಷಣೆಗೆ ಮುನ್ನ ನಡೆದ 9 ಅಧಿಕೃತ ಭೇಟಿಗಳಲ್ಲಿಯೂ ವಿಪಕ್ಷಗಳ ಬಗ್ಗೆ ಟೀಕೆಗಳನ್ನೇ ಮಾಡಿದ್ದಾರೆ.

ಉದಾಹರಣೆಗೆ, ಫೆಬ್ರವರಿ 16 ರಂದು ಹರ್ಯಾಣದ ರೇವಾರಿಯಲ್ಲಿ ಮೋದಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ್ದರ ಬಗ್ಗೆ ಪಿಎಂಒ ವೆಬ್‌ಸೈಟ್ ಉಲ್ಲೇಖಿಸಿದೆ. ಆದರೆ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊ, ‘ಎನ್‌ಡಿಎ ಚಾರ್ ಸೌ ಪಾರ್’ ಬಗ್ಗೆ, ಬಿಜೆಪಿ ಉತ್ತಮ ಆಡಳಿತ ಮತ್ತು ಕಾಂಗ್ರೆಸ್‌ನ ಕೆಟ್ಟ ಆಡಳಿತದ ಬಗ್ಗೆ ಮೋದಿ ಮಾತನಾಡುವುದನ್ನು ತೋರಿಸಿದೆ.

ಫೆಬ್ರವರಿ 20ರಂದು ಜಮ್ಮುವಿನಲ್ಲಿ ಯೋಜನೆಗಳ ಉದ್ಘಾಟನೆಗೆ ಹೋಗಿದ್ದವರು, ಜಮ್ಮು ಮತ್ತು ಕಾಶ್ಮೀರದೊಳಗಿನ ರಾಜವಂಶದ ರಾಜಕೀಯದ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ.

ಫೆಬ್ರವರಿ 22ರಂದು ಗುಜರಾತಿನ ನವಸಾರಿಯಲ್ಲಿ 47,000 ಕೋಟಿ ರೂ.ಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಮೋದಿ, ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಆ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ಧ್ವಜ ಇರಲಿಲ್ಲವಾದರೂ, ಸಭಿಕರಲ್ಲಿ ಹಲವರು ಬಿಜೆಪಿ ಟೋಪಿ ಧರಿಸಿರುವುದು ಕಂಡುಬಂದಿತ್ತು.

ಇದೇ ರೀತಿಯಲ್ಲಿ, ಮಹಾರಾಷ್ಟ್ರದ ಯವತ್ಮಾಲ್‌ನಿಂದ ತಮಿಳುನಾಡಿನ ತೂತುಕುಡಿ, ವಾರಣಾಸಿ, ಬೇಗುಸರಾಯ್, ಔರಂಗಾಬಾದ್ ಮತ್ತು ಬಿಹಾರದ ಬೆತಿಯಾ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಮಿನಿಂದ ಅರುಣಾಚಲ ಪ್ರದೇಶದವರೆಗೆ ಎಲ್ಲ ಕಡೆಯೂ ಅಧಿಕೃತ ಕಾರ್ಯಕ್ರಮದಲ್ಲಿ ಪಕ್ಷ ಪ್ರಚಾರ ಮತ್ತು ವಿಪಕ್ಷ ಟೀಕೆಯ ನಡೆಯನ್ನೇ ಅವರು ಲೋಕಸಭೆ ಚುನಾವಣೆ ಘೋಷಣೆಯಾಗುವವರೆಗೂ ಮುಂದುವರಿಸಿದ್ದರು.

2021ರ ನವೆಂಬರ್ 16ರಂದು ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸುವ ಅಧಿಕೃತ ಕಾರ್ಯಕ್ರಮವಿತ್ತು. ಆದರೆ ಅವರ ಯೂಟ್ಯೂಬ್ ವೀಡಿಯೊದಲ್ಲಿ, ಅವರು ತಮ್ಮ ಸಾರ್ವಜನಿಕ ಭಾಷಣದಲ್ಲಿ ಹಿಂದಿನ ಸರಕಾರಗಳನ್ನು ಟೀಕಿಸುವುದನ್ನು ಕಾಣಬಹುದು. ಪ್ರೇಕ್ಷಕರ ಸಾಲಿನಲ್ಲಿ ಬಿಜೆಪಿ ಧ್ವಜಗಳು ಕಂಡಿದ್ದವು.

2021ರ ನವೆಂಬರ್ 25 ರಂದು, ಜೆವಾರ್‌ನಲ್ಲಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದ ಮೋದಿ ನಂತರ ಮಾಡಿದ್ದು ಚುನಾವಣಾ ಭಾಷಣವಾಗಿತ್ತು. ಖುಶಿನಗರ, ಸಿದ್ಧಾರ್ಥನಗರ, ಮಹೋಬಾ, ಮೀರತ್, ಗೋರಖ್‌ಪುರ ಮತ್ತು ಪ್ರಯಾಗ್‌ರಾಜ್‌ನಲ್ಲಿಯೂ ಪ್ರಧಾನಿ ಅಧಿಕೃತ ಭೇಟಿಗಳಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. ಆದರೆ ಅವರ ಭಾಷಣಗಳಲ್ಲಿ ಮಾತ್ರ ಬಿಜೆಪಿ ಪ್ರಚಾರವಿತ್ತು. ಇದೇ ರೀತಿಯಲ್ಲಿ, ವಿಧಾನಸಭಾ ಚುನಾವಣೆ ಘೋಷಣೆಗೆ ವಾರಗಳ ಮೊದಲಿನ ಜಾರ್ಖಂಡ್ ಭೇಟಿಗಳಲ್ಲಿಯೂ ಅವರು ಪಕ್ಷದ ಪ್ರಚಾರ ಮಾಡಲು ಸಾರ್ವಜನಿಕ ಹಣ ಬಳಸಿಕೊಂಡಿದ್ದಾರೆ ಎಂದು ‘ನ್ಯೂಸ್ ಲಾಂಡ್ರಿ’ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿ.ಎನ್. ಉಮೇಶ್

contributor

Similar News