ಪ್ರಸಕ್ತ ರಾಜಕಾರಣದಲ್ಲಿ ಸಚ್ಚಾರಿತ್ರ್ಯಕ್ಕೆ ಬೆಲೆಯಿದೆಯೇ?
ಕಳೆದ ಕೆಲವು ಸಮಯದಿಂದ ಮುಡಾ ಹಗರಣ ಭಾರೀ ಸುದ್ದಿ ಮಾಡುತ್ತಿದೆ.
ಸಿದ್ದರಾಮಯ್ಯನವರ ನಲ್ವತ್ತು ವರ್ಷಗಳ ರಾಜಕೀಯ ಜೀವನ ಕಳಂಕರಹಿತವಾಗಿದ್ದು ಇಂತಹ ಆರೋಪವೊಂದನ್ನು ಅವರು ಮೊದಲ ಬಾರಿಗೆ ಎದುರಿಸುತ್ತಿದ್ದಾರೆ. ಈ ಆರೋಪದ ಸತ್ಯಾಸತ್ಯತೆಯ ಕುರಿತು ಈ ಹಂತದಲ್ಲಿ ಏನನ್ನೂ ಹೇಳಲಾಗದು. ಈಗ ಮಾನ್ಯ ನ್ಯಾಯಾಲಯದ ಆದೇಶದಂತೆ ತನಿಖೆಗೆ ಆದೇಶವಾಗಿ ಎಫ್‌ಐಆರ್ ದಾಖಲಾಗಿರುವುದರಿಂದ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಒತ್ತಾಯ ಮಾಡುತ್ತಿವೆ. ಈ ನಡುವೆ ಕೇಂದ್ರ ವಿತ್ತ ಸಚಿವೆ ಮತ್ತಿತರ ಬಿಜೆಪಿ ನಾಯಕರ ಮೇಲೆಯೂ ಇಲೆಕ್ಟ್ರಾಲ್ ಬಾಂಡ್‌ಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಎಫ್‌ಐಆರ್ ಆಯಿತು. ಕಾಂಗ್ರೆಸ್ ಪಕ್ಷ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆಯನ್ನು ಮುಂದಿರಿಸಿದಾಗ ಬಿಜೆಪಿ ಉತ್ತರ ಭಿನ್ನ ಧಾಟಿಯಲ್ಲಿತ್ತು. ಮುಡಾ ಬೇರೆ, ಇಲೆಕ್ಟ್ರಾಲ್ ಬಾಂಡ್ ವಿಷಯ ಬೇರೆ ಎಂಬುದು ಆ ಪಕ್ಷದ ಸಮಜಾಷಿಯಿಕೆ. ಹಾಗಾದರೆ ಎಫ್‌ಐಆರ್ ಅಥವಾ ತನಿಖಾ ಪ್ರಕ್ರಿಯೆಯೊಂದೇ ಪ್ರಸಕ್ತ ಸನ್ನಿವೇಶದಲ್ಲಿ ರಾಜೀನಾಮೆಗೆ ಕಾರಣವಾಗಲಾರದು ಎಂದಾಯಿತು.
ದೇಶದಾದ್ಯಂತ ಅನೇಕ ಮಂದಿ ರಾಜಕೀಯ ನಾಯಕರ ಮೇಲೆ ಬೇರೆ ಬೇರೆ ಸಾಂವಿಧಾನಿಕ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ನ್ಯಾಯಾಲಯದಲ್ಲಿ ರಾಜಕಾರಣಿಗಳು ಒಳಗೊಂಡಿದ್ದರೆನ್ನಲಾದ ಹಲವು ಹಗರಣಗಳ ವಿಚಾರಣೆಯೂ ಜಾರಿಯಲ್ಲಿದೆ. ರಾಜಕಾರಣಿಗಳ ವಿರುದ್ಧ ಯಾವುದೇ ಆರೋಪಗಳಿಲ್ಲದವರು ತುಂಬಾ ಕಡಿಮೆ. ಚುನಾವಣಾ ಸಂದರ್ಭದಲ್ಲಿ ಈ ರಾಜಕಾರಣಿಗಳು ಎದುರಿಸುತ್ತಿರುವ ಪ್ರಕರಣಗಳ ಪಟ್ಟಿ ಹೊರ ಬರುತ್ತದೆ. ಇದರಲ್ಲಿ ಬೆದರಿಕೆ, ಸುಲಿಗೆ, ಹಲ್ಲೆ, ಅತ್ಯಾಚಾರ, ಕೊಲೆ ಇತ್ಯಾದಿ ಕ್ರಿಮಿನಲ್ ಪ್ರಕರಣಗಳಿಂದ ಹಿಡಿದು ಗಂಭೀರ ಭ್ರಷ್ಟಾಚಾರ, ಅವ್ಯವಹಾರಗಳಂತಹ ಸಿವಿಲ್ ಪ್ರಕರಣಗಳ ವಿವರಗಳಿರುತ್ತವೆ. ಮೊದ ಮೊದಲು ಇದರಿಂದ ಶಾಕ್‌ಗೆ ಒಳಗಾಗುತ್ತಿದ್ದಂತಹ ಮತದಾರರು ಈಗೀಗ ಇವನ್ನೆಲ್ಲ ಮಾಮೂಲಿ ವಿದ್ಯಮಾನ ಎಂಬಂತೆ ಸ್ವೀಕರಿಸ ತೊಡಗಿದ್ದಾರೆ. ಈ ಹಗರಣ, ಪ್ರಕರಣಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿ ಮತದಾನ ಮಾಡುವಂತಹ ಕಾಲ ಎಂದೋ ಸರಿದು ಹೋಗಿದೆ.
ಈಗಲೂ ರಾಜಕೀಯ ನಾಯಕರು ಕೆಲವೊಮ್ಮೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸುವುದಿದೆ. ಆದರೆ ಅದು ನೈತಿಕ ಒತ್ತಡ ಅಥವಾ ಆತ್ಮಸಾಕ್ಷಿಗೆ ಅನುಗುಣವಾಗಿ ಮಾತ್ರ ಆಗಿರುವುದಿಲ್ಲ. ಅಂತಹ ಪರಿಸ್ಥಿತಿ ಅವರ ಪಕ್ಷದೊಳಗೆ ನಿರ್ಮಾಣವಾಗುತ್ತದೆ. ಪಕ್ಷದೊಳಗೆ ಬೆಂಬಲ ಕುಸಿತ, ಅಧಿಕಾರಕ್ಕಾಗಿ ನಾಯಕರ ಮೇಲಾಟ, ಹೈಕಮಾಂಡ್ ಒತ್ತಡ ಮುಂತಾದ ಕಾರಣಗಳಿಗೆ ಎಂತಹ ನಾಯಕನೂ ತಲೆ ಬಾಗ ಬೇಕಾಗುತ್ತದೆ. ಇಲ್ಲಿ ಹಗರಣ ಒಂದು ನೆಪ ಅಷ್ಟೇ. ಹಾಗೆಯೇ ವಿಪಕ್ಷಗಳು ಹೂಡುವಂತಹ ತಂತ್ರಗಾರಿಕೆ, ಒತ್ತಡಕ್ಕೂ ಅಧಿಕಾರದಲ್ಲಿರುವ ನಾಯಕ ಹುದ್ದೆ ತ್ಯಜಿಸ ಬೇಕಾದ ಸನ್ನಿವೇಶ ನಿರ್ಮಾಣವಾಗುವುದಿದೆ.
ಸಿದ್ದರಾಮಯ್ಯನವರ ಮೇಲಿನ ಮುಡಾ ಹಗರಣದ ಆರೋಪ ಸುದ್ದಿಯಾದ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಈ ಬಗ್ಗೆ ಅನೌಪಚಾರಿಕವಾಗಿ ಮಾತನಾಡಿದ ವೀಡಿಯೊ ಒಂದು ವೈರಲ್ ಆಗಿತ್ತು. ಪಕ್ಷದ ಕಾರ್ಯಕರ್ತನೊಬ್ಬ ಹಗರಣದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ‘‘ಮುಡಾದಲ್ಲಿ ಎಲ್ಲರೂ ಇದ್ದಾರಪ್ಪ’’ ಎಂದು ವಿವರಣೆ ನೀಡುತ್ತ ಅಲ್ಲಿ ಪತ್ರಕರ್ತರಿರುವುದನ್ನು ಗಮನಿಸಿ, ತಮ್ಮ ಮಾತು ತುಂಡರಿಸಿದ್ದರು. ಕೇಂದ್ರ ಸಚಿವೆ ನಿಜಕ್ಕೂ ಸತ್ಯವನ್ನೇ ಹೇಳಿದ್ದಾರೆ. ಇದೀಗ ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ್ ಬೆಂಗಳೂರಲ್ಲಿ ಬಿಡಿಎ ಸೈಟ್ ಪಡೆದು ಅದನ್ನು ನಂತರ ವಿವಾದವಾಗುತ್ತಿದ್ದಂತೆ ಹಿಂದಿರುಗಿಸಿದರು ಎಂಬ ಸುದ್ದಿ ಹೊರ ಬಂದಿದೆ. ಇಂತಹ ಪ್ರಕರಣಗಳಲ್ಲಿ ಇವರೊಬ್ಬರೇ ಮಾತ್ರವಲ್ಲ. ತನಿಖೆ ನಡೆಸಿದರೆ ಇಂತಹ ಹಲವಾರು ನಾಯಕರ ಹಗರಣಗಳು ಹೊರ ಬೀಳುವುದರಲ್ಲಿ ಸಂದೇಹವಿಲ್ಲ. ಸಾಮಾನ್ಯವಾಗಿ ಇಂತಹ ಹಗರಣಗಳು ಮುಚ್ಚಿ ಹೋಗುವುದೇ ಹೆಚ್ಚು. ಆದರೆ ರಾಜಕಾರಣಿಗಳ ನಡುವಿನ ವೈಮನಸ್ಸು, ಸೇಡು ಹೊಗೆಯಾಡಿದಾಗ ಇವೆಲ್ಲ ಬಯಲಿಗೆ ಬರುತ್ತವೆ. ಈಗ ಆಗುತ್ತಿರುವುದು ಅದೇ ಆಗಿದೆ. ಸ್ಥಾನಮಾನ, ಅಧಿಕಾರವಿರುವಂತಹ ರಾಜಕಾರಣಿಗಳು ನಗರಗಳಲ್ಲಿ ನಿವೇಶನ ಮಂಜೂರಾತಿ ಮಾಡಿಸಿ ಕೊಳ್ಳುವುದು; ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಅಥವಾ ಕೈಗಾರಿಕೆಗಳಿಗಾಗಿ ಜಮೀನು ಒತ್ತುವರಿ ಮಾಡಿ ಕೊಳ್ಳುವುದು ಮತ್ತು ಹಳ್ಳಿ ಭಾಗಗಳಲ್ಲಿ ಅರಣ್ಯ ಕಬಳಿಕೆ ಮಾಡಿಕೊಳ್ಳುವುದು ಜನರಿಗೆ ಗೊತ್ತಿಲ್ಲದ ವಿಷಯವೇನಲ್ಲ.
ಈ ಎಲ್ಲ ವಿದ್ಯಮಾನಗಳ ನಡುವೆ ಈಗಾಗಲೇ ತಲೆ ಎತ್ತಿರುವ ಬೆಳವಣಿಗೆಯೊಂದನ್ನು ನಾವು ಕಡೆಗಣಿಸುವಂತಿಲ್ಲ. ಈಗ ಸುಳ್ಳು ಅಥವಾ ಕೃತಕವಾಗಿ ಸೃಸ್ಟಿಸಲಾದ ಪ್ರಕರಣದಲ್ಲಿ ಸಚ್ಚಾರಿತ್ರ್ಯವುಳ್ಳಂತಹ ವ್ಯಕ್ತಿಗಳನ್ನು ಸಿಲುಕಿಸಿ ಹಗೆತನ ತೀರಿಸುವಂತಹ ಸುಲಭ ದಾರಿಯನ್ನು ಕೆಲವರು ಕಂಡು ಕೊಂಡಿದ್ದಾರೆ. ಇದಕ್ಕೆ ಅಗತ್ಯವಿರುವ ತಂತ್ರಜ್ಞಾನ ಹಾಗೂ ಸ್ಥಾಪಿತ ಹಿತಾಸಕ್ತಿ ಶಕ್ತಿಗಳು ಸುಲಭದಲ್ಲಿ ಕೈ ಹಿಡಿಯುತ್ತವೆ. ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪು, ದೌರ್ಬಲ್ಯಗಳನ್ನು ಬಳಸಿ ಕೊಂಡು ವ್ಯಕ್ತಿಗಳನ್ನು ಹಣಿಯುವುದು ಸಹ ಇದೆ. ರಾಜಕೀಯದಲ್ಲಿ ಇಂತಹ ಉದಾಹರಣೆಗಳು ಇಲ್ಲದಿಲ್ಲ. ಏನಿದ್ದರೂ ಸಜ್ಜನಿಕೆ, ಸಚ್ಚಾರಿತ್ರ್ಯವುಳ್ಳವರ ಮಾನ ಹರಣ ಮಾಡಿ ದುರ್ಲಾಭ ಪಡೆಯುವುದು ಅತ್ಯಂತ ಹೇಯವಾದ ಕೃತ್ಯ. ಈ ಕಾರಣದಿಂದ ಹುದ್ದೆಗೆ ರಾಜೀನಾಮೆ ನೀಡಿ ತನಿಖಾ ಸಂಸ್ಥೆಯ ವರದಿ, ನ್ಯಾಯಾಲಯದ ತೀರ್ಪು ಬರುವ ತನಕ ಹೊರಗಿದ್ದು ಬಿಟ್ಟರೆ ಈ ನಿಟ್ಟಿನಲ್ಲಿ ಸಂಭವಿಸುವ ವಿಪರೀತವಾದ ವಿಳಂಬ ಅವರ ರಾಜಕೀಯ ಭವಿಷ್ಯವನ್ನೇ ಹೊಸಕಿ ಹಾಕಿ ಬಿಡ ಬಲ್ಲದು.
ಪ್ರಸಕ್ತ ಸನ್ನಿವೇಶದಲ್ಲಿ ಚಾರಿತ್ರ್ಯವಂತ ರಾಜಕಾರಣಿಗಳ ಸಂಖ್ಯೆ ಬೆರಳೆಣಿಕೆಗೆ ಸೀಮಿತವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಒಂದು ಬಾರಿಯಾದರೂ ಅವ್ಯವಹಾರ, ಭ್ರಷ್ಟಾಚಾರದ ಆರೋಪಗಳಿಗೆ ಸಿಲುಕದವರು ತೀರಾ ವಿರಳ. ಇನ್ನು ಇದರಿಂದ ಹೊರತಾದವರು ಇದ್ದರೂ ಸ್ವಜನ ಪಕ್ಷಪಾತದ ಆರೋಪದಿಂದ ತಪ್ಪಿಸಿಕೊಳ್ಳುವುದಂತೂ ವಿರಳಾತಿ ವಿರಳವೆಂದೇ ಹೇಳಬಹುದು. ಈ ಸಮಸ್ಯೆಗೆ ಚುನಾವಣಾ ವ್ಯವಸ್ಥೆ ಮತ್ತು ಅಧಿಕಾರ ವ್ಯಾಮೋಹ, ದುರಾಸೆಗಳೇ ಮುಖ್ಯ ಕಾರಣಗಳಾಗಿವೆ. ಕೇಂದ್ರ ಸಚಿವರಾಗಿರುವ ಕುಮಾರ ಸ್ವಾಮಿಯವರು ಬಹಳ ಹಿಂದೆ, ‘‘ಯಾರಾದರೂ ಮನೆ ದುಡ್ಡು ಹಾಕಿ ರಾಜಕಾರಣ ಮಾಡುತ್ತಾರೆಯೇ?’’ ಎಂದು ಮಾರ್ಮಿಕವಾಗಿ ಮಾಧ್ಯಮದ ಮುಂದೆ ಪ್ರಶ್ನಿಸಿದ್ದರು. ಈ ಮಾತು ಇಡೀ ರಾಜಕೀಯ ವ್ಯವಸ್ಥೆ ಯಾಕೆ ಹೊಲಸಾಗುತ್ತಿದೆ ಎನ್ನುವುದಕ್ಕೆ ಕನ್ನಡಿ ಹಿಡಿಯುವಂತಿದೆ. ಪ್ರಸಕ್ತ ನಿಯಮದಂತೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯೋರ್ವ ರೂ.70.00 ಲಕ್ಷ ಮತ್ತು ಆಸೆಂಬ್ಲಿ ಚುನಾವಣೆಗೆ ರೂ.40.00 ಲಕ್ಷ ಖರ್ಚು ಮಾಡಬಹುದು ಎಂದಿದೆ. ಆದರೆ ವಾಸ್ತವ ವೆಚ್ಚ ಇದಕ್ಕಿಂತ ಎಷ್ಟೋ ಪಟ್ಟು ಅಧಿಕವಾಗಿರುತ್ತದೆ ಎಂಬುದು ಗುಟ್ಟೇನಲ್ಲ. ಆದರ್ಶ, ಮೌಲ್ಯಗಳನ್ನು ಇಟ್ಟು ಕೊಂಡಂತಹ ವ್ಯಕ್ತಿ ಹಣ ಅಥವಾ ಜಾತಿ ಬಲವಿಲ್ಲದ ಮಂದಿ ಈ ಪರಿಸ್ಥಿತಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಹೇಗೆ ಸಾಧ್ಯ? ಹೀಗಿದ್ದಾಗ ಚುನಾವಣೆ ವೆಚ್ಚಕ್ಕೆ ಅಗತ್ಯವಿರುವ ಹಣವನ್ನು ಅನೈತಿಕ ಮಾರ್ಗದ ಮೂಲಕ ಮರಳಿ ಪಡೆಯಲು ಸಾಮರ್ಥ್ಯವುಳ್ಳವನು ಮಾತ್ರ ಯಶಸ್ವಿಯಾಗಬಲ್ಲ. ಆದ್ದರಿಂದ ಚುನಾವಣಾ ವ್ಯವಸ್ಥೆ ಆಮೂಲಾಗ್ರವಾಗಿ ಬದಲಾಗದೆ ಕೈ ಬಾಯಿ ಶುದ್ಧವಿರುವ ಚಾರಿತ್ರ್ಯವಂತ ರಾಜಕಾರಣಿಯನ್ನು ರಾಜಕಾರಣದಲ್ಲಿ ಕಾಣಲು ಸಾಧ್ಯವೇ?