ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ: ಒಡೆಯರ ಕೊಡುಗೆ
ಮೈಸೂರು ಸಂಸ್ಥಾನದ ಅರಸರು ಅವರ ಆಳ್ವಿಕೆಯ ಅವಧಿಯಲ್ಲಿ ಸಾಮಾಜಿಕ ಬದಲಾವಣೆಗಳಿಗೆ ಹೆಚ್ಚು ಆದ್ಯತೆ ನೀಡಿದರು. ಹೀಗಾಗಿ ಸಂಸ್ಥಾನದ ಅರಸರು ಬ್ರಾಹ್ಮಣೇತರರಿಗೆ ಶಿಕ್ಷಣದಲ್ಲಿ ಅನೇಕ ರೀತಿಯ ಸೌಲಭ್ಯಗಳನ್ನು ನೀಡಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಅವರ ಬದುಕಿನಲ್ಲಿ ಬೆಳಕು ಮೂಡಿಸಲು ಪ್ರಾರಂಭಿಸಿದ ಫಲವಾಗಿ, ಅವರೂ ಸಂಘಟಿತರಾಗಲು ಸಾಧ್ಯವಾಯಿತು.
ವರ್ಣ- ಜಾತಿಯೊಳಗಿನ ತಾರತಮ್ಯ-ಅಸಮಾನತೆಗೆ ಪರ್ಯಾಯವಾಗಿ, ಆದ್ಯತಾ ಉಪಚಾರ ತತ್ವದ ಅಡಿಯಲ್ಲಿ ಹುಟ್ಟಿ ಕೊಂಡುದೇ ಮೀಸಲಾತಿ. ಮೀಸಲಾತಿ ಕೇವಲ ಭಾರತಕ್ಕಷ್ಟೇ ಸೀಮಿತವಲ್ಲ. ಬೇರೆ ಬೇರೆ ಹೆಸರಿನಿಂದ ಇನ್ನೂ ಅನೇಕ ದೇಶಗಳಲ್ಲಿ ಈ ವ್ಯವಸ್ಥೆ ಇದೆ. ಇವುಗಳನ್ನು ‘ಪ್ರತಿರೋಧಕ ತಾರತಮ್ಯ’, ‘ರಕ್ಷಣಾತ್ಮಕ ತಾರತಮ್ಯ’, ‘ಸಕಾರಾತ್ಮಕ ಕ್ರಿಯೆ’ ಮತ್ತು ‘ಸಾಮಾಜಿಕ ನ್ಯಾಯ’. ಅದೇ ಸಾಮಾಜಿಕ ನ್ಯಾಯ-ಸರ್ವರಿಗೂ ಸಮಪಾಲು-ಸಮ ಬಾಳು. ದಕ್ಷಿಣ ಆಫ್ರಿಕಾ, ಬ್ರೆಝಿಲ್, ಶ್ರೀಲಂಕಾ, ಅಮೆರಿಕ ಸಂಯುಕ್ತ ಸಂಸ್ಥಾನ, ಮಲೇಶ್ಯ ಮುಂತಾದ ದೇಶಗಳಲ್ಲಿ ಮೀಸಲಾತಿಯು ಬೇರೆ ಬೇರೆ ನಾಮಾಂಕಿತದಿಂದ ಅಸ್ತಿತ್ವದಲ್ಲಿದೆ.
19ನೇ ಶತಮಾನದ ಮಧ್ಯ ಭಾಗದಲ್ಲಿ ಸಾವಿತ್ರಿಬಾಯಿ ಫುಲೆ ದಂಪತಿ ಅಸ್ಪಶ್ಯ ಹೆಣ್ಣು ಮಕ್ಕಳಿಗಾಗಿ ತೆರೆದ ಶಾಲೆ ಬಹುಶಃ ಈ ನಿಟ್ಟಿನಲ್ಲಿ ಮೊದಲಿನದು ಎಂದು ಹೇಳಿದರೆ ತಪ್ಪಾಗಲಾರದು. ಆ ನಂತರದಲ್ಲಿ ಮೈಸೂರು ಸಂಸ್ಥಾನದಲ್ಲಿ 1874(ಕಮಿಷನರ್ ಆಡಳಿತ) ರಲ್ಲಿ ಹೊರಡಿಸಿದ ಆದೇಶಕ್ಕೆ ಅನುಗುಣವಾಗಿ 21ನೇ ಜನವರಿ, 1895ರಲ್ಲಿ ಹೊರಡಿಸಿದ ಸುತ್ತೋಲೆ ಪ್ರಕಾರ, ಅಂದಿನ ದಿವಾನರಾದ ವಿ. ಪಿ. ಮಾಧವರಾವ್ (ವಾಣಿವಿಲಾಸ ಸನ್ನಿಧಾನ ಅವರ ಆಳ್ವಿಕೆ) ಅವರು ಪೊಲೀಸ್ ಇಲಾಖೆಯ 10 ಹುದ್ದೆಗಳಿಗೆ 8 ಹುದ್ದೆಗಳನ್ನು ಹಿಂದುಳಿದ ವರ್ಗಗಳಿಗಾಗಿ ಮೀಸಲಿಡಲಾಗಿತ್ತು. ಬಹುಶಃ ಅದು ನೈಜ ರೀತಿಯಲ್ಲಿ ಸಾಮಾಜಿಕವಾಗಿ ಹಿಂದುಳಿದವರಿಗೆ ಕೊಡ ಮಾಡಿದ ಮೊತ್ತ ಮೊದಲ ಮೀಸಲಾತಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 1902ರಲ್ಲಿ ಕೊಲ್ಲಾಪುರದ ಶಾಹು ಮಹಾರಾಜರು ಅಧಿಕೃತವಾಗಿ ರಾಜ್ಯ ಪತ್ರವನ್ನು ಹೊರಡಿಸುವುದರ ಮೂಲಕ ಶೇ.50ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ಕರುಣಿಸಿದರು.
ಒಂದು ವಿಧದಲ್ಲಿ ಹೇಳಬೇಕೆಂದರೆ, ಹಿಂದುಳಿದ ವರ್ಗಗಳ ಚಳವಳಿಯ ತಳಹದಿ 12ನೇ ಶತಮಾನದ ವಚನಕಾರರಿಂದ ಪ್ರಾರಂಭವಾಯಿತೆನ್ನಬಹುದು. ಶರಣರು ವಚನಗಳನ್ನು ರಚಿಸಿ ಆ ಮೂಲಕ ಜನ ಜಾಗೃತಿಗೊಳಿಸಿ ಪ್ರೋತ್ಸಾಹ ನೀಡಿದರು. ಹಲವು ವೃತ್ತಿಯನ್ನೇ ‘ಕಾಯಕ’ವನ್ನಾಗಿಸಿಕೊಂಡ ಹಿಂದುಳಿದ ವರ್ಗಗಳು ಅಣ್ಣ ಬಸವಣ್ಣನವರು ಸಂಘಟಿಸಿದ್ದ ಶರಣರ ಸಮೂಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವು. ಕಲ್ಯಾಣದಲ್ಲಿ ಉದ್ಭವಿಸಿದ ಕ್ರಾಂತಿಯಿಂದಾಗಿ, ಎಲ್ಲಾ ಕಾಯಕ ಸಮಾಜಗಳು ಬಲಹೀನಗೊಳ್ಳತೊಡಗಿದಂತೆ ಬ್ರಾಹ್ಮಣರ ಪ್ರಾಬಲ್ಯ ಮುಂದುವರಿದುಕೊಂಡು ಬಂದಿತು.
ಅಕ್ಷರ ವಂಚಿತರಾದ ಬ್ರಾಹ್ಮಣೇತರರು 19ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನದ ಪ್ರಾರಂಭದ ಕಾಲಘಟ್ಟದಲ್ಲಿ ತಮಗೆ ಸಿಗಬೇಕಾದ ನ್ಯಾಯದ ಬಗ್ಗೆ ಎಚ್ಚರಗೊಂಡರು.
ರಾಜ- ಮಹಾರಾಜರ ಕಾಲದ ಆಡಳಿತ ವ್ಯವಸ್ಥೆಯಲ್ಲಿ, ರಾಜರು ಕಂದಾಯ ವಸೂಲಿ ಮತ್ತು ಸೇವಾ ವ್ಯವಸ್ಥೆಯನ್ನು ತಮ್ಮ ಅಧೀನದಲ್ಲಿದ್ದ ಶ್ರೀಮಂತರು ಮತ್ತು ಪಾಳೇಗಾರರ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಹೆಗ್ಗಡೆ, ನಾಯಕ, ನಾಡಗೌಡ, ನಾಡಪ್ರಭು, ಸೀಮೆಗೌಡ, ಊರಗೌಡ ಇತ್ಯಾದಿಯವರು ಅಧಿಕಾರ ಹೊಂದಿದ್ದರು. ಇವರೆಲ್ಲರಿಗೂ ಬ್ರಾಹ್ಮಣರು ಸಲಹೆಗಾರರಾಗಿ, ಪುರೋಹಿತರಾಗಿ, ಕುಲಕರ್ಣಿಯರಾಗಿ, ಶಾನುಭೋಗರಾಗಿ ‘ಹೆಚ್ಚು ಮಹತ್ವ’ ಪಡೆದುಕೊಂಡಿದ್ದರೆಂಬುದು ಲಕ್ಷಿಸಬೇಕಾದ ಅಂಶ.
ಬ್ರಿಟಿಷರ ಏಕೀಕೃತ ಆಡಳಿತ ವ್ಯವಸ್ಥೆಯಿಂದಾಗಿ ಸಂಸ್ಥಾನದಲ್ಲಿ ದಿವಾನರಿಂದ ಜವಾನನರವರೆಗೂ ಅಧಿಕಾರ ದೊರಕಿತೇನೋ ಸರಿ, ಆದರೆ, ಅವೆಲ್ಲವೂ ಬ್ರಾಹ್ಮಣ ಮತ್ತು ಐರೋಪ್ಯರ ಪಾಲಾಗಿದ್ದವು. ಪ್ರಮುಖವಾಗಿ ಬ್ರಾಹ್ಮಣರಲ್ಲದವರು ಸಂಘಟಿತರಾಗಲು ತಿಳುವಳಿಕೆ ಮತ್ತು ಸರಕಾರದಲ್ಲಿ ಯಾವುದೇ ಗುರುತರವಾದ ಸ್ಥಾನಮಾನಗಳಿಲ್ಲದುದು ಕಾರಣವಾಯಿತು. ಆಡಳಿತ ಸೂತ್ರ ಹಿಡಿದವರು ಆಡಳಿತ, ವಾಣಿಜ್ಯ ಮತ್ತು ಕೃಷಿಗಳಿಗೆ ಆದ್ಯತೆ ನೀಡಲಿಲ್ಲ; ಶಿಕ್ಷಣವಂತೂ ಬ್ರಾಹ್ಮಣರಿಗಷ್ಟೇ ಸೀಮಿತವಾಗಿತ್ತು.
ಈ ಮಧ್ಯದಲ್ಲಿ 1831ರಿಂದ 1881ರವರೆಗೆ ಮದರಾಸ್ ಆಡಳಿತದ ರೆಸಿಡೆಂಟರ ಕೈಕೆಳಗೆ ಕಮಿಷನರುಗಳು ಮೈಸೂರು ಸಂಸ್ಥಾನದ ಆಡಳಿತ ನಡೆಸುತ್ತಿದ್ದರು. ಈ ಅವಧಿಯಲ್ಲಿ ಸಂಸ್ಥಾನ ಯಾವುದೇ ಬದಲಾವಣೆಯನ್ನು ಕಾಣಲಾಗದೆ ಯಥಾ ಸ್ಥಿತಿಯಲ್ಲಿಯೇ ಇತ್ತು. 1881ರಲ್ಲಿ ರಾಜರ ಕೈಗೆ ಅಧಿಕಾರ ಸಿಕ್ಕಿದ ನಂತರ ಸಂಸ್ಥಾನದ ದಿವಾನ ಹುದ್ದೆ ಹಾಗೂ ಕೆಳಗಿನ ಪ್ರಮುಖ ಹುದ್ದೆಗಳೆಲ್ಲವೂ ಬ್ರಾಹ್ಮಣರ ಪಾಲಾದವು. ಸಿವಿಲ್ ಪರೀಕ್ಷೆಯ ಕಾರಣ ಮದ್ರಾಸಿನ ಬ್ರಾಹ್ಮಣರೇ ಸಂಸ್ಥಾನದ ತುಂಬೆಲ್ಲಾ ತುಂಬಿಕೊಂಡರು. ಸಹಜವಾಗಿಯೇ ಮೈಸೂರು ಸಂಸ್ಥಾನದ ಬ್ರಾಹ್ಮಣರೂ ಕೂಡ ಇದರ ವಿರುದ್ಧ ರೊಚ್ಚಿಗೆದ್ದು ‘‘ಮೈಸೂರು ಮೈಸೂರಿನವರಿಗೆ’’ ಎಂಬ ಘೋಷಣೆ ಮುನ್ನೆಲೆಗೆ ಬಂದು ಚಳವಳಿಗೆ ಉಪಕ್ರಮವಾಯಿತು.
ಮೈಸೂರು ಸಂಸ್ಥಾನದ ಅರಸರು ಅವರ ಆಳ್ವಿಕೆಯ ಅವಧಿಯಲ್ಲಿ ಸಾಮಾಜಿಕ ಬದಲಾವಣೆಗಳಿಗೆ ಹೆಚ್ಚು ಆದ್ಯತೆ ನೀಡಿದರು. ಹೀಗಾಗಿ ಸಂಸ್ಥಾನದ ಅರಸರು ಬ್ರಾಹ್ಮಣೇತರರಿಗೆ ಶಿಕ್ಷಣದಲ್ಲಿ ಅನೇಕ ರೀತಿಯ ಸೌಲಭ್ಯಗಳನ್ನು ನೀಡಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಅವರ ಬದುಕಿನಲ್ಲಿ ಬೆಳಕು ಮೂಡಿಸಲು ಪ್ರಾರಂಭಿಸಿದ ಫಲವಾಗಿ, ಅವರೂ ಸಂಘಟಿತರಾಗಲು ಸಾಧ್ಯವಾಯಿತು. ಅವರಲ್ಲಿ ಉಂಟಾದ ತಿಳುವಳಿಕೆಯೂ ಸಹ ಕಾರಣವಾಯಿತು. ಸರಕಾರದಲ್ಲಿ ಯಾವುದೇ ಗುರುತರವಾದ ಸ್ಥಾನಮಾನಗಳು ಇಲ್ಲದಿದ್ದುದು, ಕೆಲವರಿಗಷ್ಟೇ ಸೀಮಿತವಾಗಿದ್ದುದು ಶಿಕ್ಷಣ ಮತ್ತು ಅವರ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಕಾರಣಗಳು. ಮತ್ತೂ ಹೇಳಬೇಕೆಂದರೆ ಸ್ಥಳೀಯವಾಗಿ ಪ್ರಾಬಲ್ಯಗಳಿಸಿದ್ದ ಗುಡಿ ಕೈಗಾರಿಕೆಗಳು ವಿದೇಶಿ ವಸ್ತುಗಳ ಆಮದಿನಿಂದಾಗಿ ಸಂಪೂರ್ಣ ಶಿಥಿಲಗೊಂಡವು. ಆಡಳಿತ ಸೂತ್ರ ಹಿಡಿದವರು ಗುಡಿ ಕೈಗಾರಿಕೆಗಳನ್ನು ಬಲಗೊಳಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆಡಳಿತ, ವಾಣಿಜ್ಯ ಮತ್ತು ಕೃಷಿಗೆ ಆದ್ಯತೆ ನೀಡಲಿಲ್ಲ. ಇನ್ನೂ ಅನೇಕ ತೊಂದರೆಗಳನ್ನು ಸಂಸ್ಥಾನದಲ್ಲಿ ಅನುಭವಿಸುವಂತಾಯಿತು. ಬ್ರಾಹ್ಮಣರನ್ನು ಹೊರತುಪಡಿಸಿದ ಜಾತಿಗಳವರು ಓದು- ಬರಹಕ್ಕೆ ಮಾತ್ರ ಅವರ ಶಿಕ್ಷಣ ಕೊನೆಗೊಂಡು ಸರಕಾರದಲ್ಲಿ ಯಾವುದೇ ಅಧಿಕಾರವನ್ನು ಗಳಿಸಲು ಸಾಧ್ಯವಾಗಲೇ ಇಲ್ಲ. ಅಷ್ಟರಲ್ಲಾಗಲೇ ಮದ್ರಾಸ್ ಪ್ರಾಂತದಲ್ಲಿ ಬ್ರಾಹ್ಮಣೇತರ ಸಮುದಾಯದವರು ಉನ್ನತ ಶಿಕ್ಷಣ ಪಡೆಯುವುದರ ಮೂಲಕ ಆಡಳಿತದಲ್ಲಿ ಸ್ಥಾನಮಾನಗಳನ್ನು ಗಳಿಸಿಕೊಳ್ಳಲು ಅವಕಾಶ ಪಡೆದುಕೊಂಡಿದ್ದರು. ಬ್ರಾಹ್ಮಣೇತರ ಸಮುದಾಯಗಳಿಗೆ ಆ ಸಂದರ್ಭದಲ್ಲಿ ಕ್ರೈಸ್ತರು ಕೂಡ ಬೆಂಬಲ ನೀಡಿದ್ದರು. ಇದೇ ಪರಿಸ್ಥಿತಿ ಮೈಸೂರು ಪ್ರಾಂತದಲ್ಲೂ ಕೂಡ ಕ್ರಮೇಣ ಕಾಣಿಸಿಕೊಳ್ಳತೊಡಗಿತು. ದಲಿತರಿಗಾಗಿ ಪ್ರತ್ಯೇಕ ಶಾಲೆಗಳು ಪ್ರಾರಂಭಗೊಂಡು ಅನೇಕ ಸಮುದಾಯಗಳು ಸಾಮಾಜಿಕ ಸಮಾನತೆಗಾಗಿ ಒತ್ತಾಯಿಸಲು ಪ್ರಾರಂಭಿಸಿದವು, ಬ್ರಾಹ್ಮಣೇತರ ಈ ಸಮುದಾಯಗಳ ಬೇಡಿಕೆಗೆ ಕ್ರೈಸ್ತರು ಮತ್ತು ಬ್ರಹ್ಮ ಸಮಾಜದವರು ಬೆಂಬಲಿಸಿದ್ದರಿಂದ ಆ ವರ್ಗಗಳ ಚಳವಳಿಗೆ ಆರಂಭ ದೊರಕಿತು.
1891ರಲ್ಲಿ ನಡೆಸಿದ ಜನಗಣತಿಯಲ್ಲಿ ವೀರಶೈವರನ್ನು ಶೂದ್ರರೆಂದು ಪರಿಗಣಿಸಿದುದನ್ನು ವೀರಶೈವ ವರ್ಗಕ್ಕೆ ಸೇರಿದ ವೀರಸಂಗಪ್ಪ ಮತ್ತು ವಿರೂಪಾಕ್ಷಯ್ಯ ಮುಂತಾದ ಪ್ರಮುಖರುಗಳಿಗೆ ಅಪಥ್ಯವೆನಿಸಿತು. ವೀರಶೈವರು ಸಾಮಾಜಿಕವಾಗಿ ಬ್ರಾಹ್ಮಣರಿಗಿಂತ ಕೀಳಲ್ಲ; ಆದರೆ ಅವರಿಗೆ ಸರಿ ಸಮಾನರೆಂದು ತೋರಿಸಲು ‘ದಿ ಮೈಸೂರ್ ಸ್ಟಾರ್’ ಎಂಬ ಹೆಸರಿನ ಕನ್ನಡ ವಾರಪತ್ರಿಕೆಯನ್ನು ಆರಂಭಿಸಿದ್ದೇ ಅಲ್ಲದೆ ಬ್ರಾಹ್ಮಣರಷ್ಟೇ ಸಂಸ್ಕೃತದಲ್ಲಿ ಪ್ರಾವೀಣ್ಯತೆ ಪಡೆದು ಸಂಸ್ಕೃತದಲ್ಲಿ ಕೃತಿಗಳನ್ನು ರಚಿಸಲು ಶಕ್ತರೆಂಬುದನ್ನು ತೋರಿಸಲು ವಿದ್ವಾನ್ ಕರಿಬಸವ ಶಾಸ್ತ್ರಿ ಗಳನ್ನು ಪ್ರೋತ್ಸಾಹಿಸಿದ ಫಲವಾಗಿ ಕನ್ನಡದಲ್ಲಿ ಮತ್ತು ಸಂಸ್ಕೃತದಲ್ಲಿ ಉತ್ತಮ ಸಾಹಿತ್ಯ ಕೃತಿಗಳು ಹೊರಬಂದವು. ‘ವೀರಶೈವ ಮತಪ್ರಕಾಶಿಕ’ ಎಂಬ ಮಾಸ ಪತ್ರಿಕೆಯನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಕಟಿಸುವುದರ ಮೂಲಕ ವೀರಶೈವರು ಬ್ರಾಹ್ಮಣರ ವಿರುದ್ಧ ಧ್ವನಿ ಎತ್ತಿದರು.
1881ರಲ್ಲಿ ಪ್ರಾರಂಭಗೊಂಡ ಪ್ರಜಾಪ್ರತಿನಿಧಿ ಸಭೆಯಲ್ಲಿ ರೈತ ಮತ್ತು ವಣಿಕ ವರ್ಗಗಳ ಪ್ರತಿನಿಧಿಗಳು ಇದ್ದುದು ವಿಶೇಷ ವೆನಿಸಿತು. ಇವೇ ಮುಂತಾದ ಕಾರಣಗಳಿಂದ ಒಕ್ಕಲಿಗರು ಮತ್ತು ವೀರಶೈವರು ಒಂದಾಗಿರಲು ಸಾಧ್ಯವಾಯಿತು. ಆನಂತರದ ಬೆಳವಣಿಗೆಯಲ್ಲಿ ಶಿಕ್ಷಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ ವೀರಶೈವರು 1905ರಲ್ಲಿ ‘ಮೈಸೂರು ಲಿಂಗಾಯತ ಶಿಕ್ಷಣ ನಿಧಿ ಸಂಘ’ ಸ್ಥಾಪಿಸಿಕೊಂಡರು. 1906ರಲ್ಲಿ ಬೆಂಗಳೂರಿನಲ್ಲಿ ಲಿಂಗಾಯತರ ಶಿಕ್ಷಣ ನಿಧಿ ಸಂಘ ಸ್ಥಾಪನೆ ಅನುಸರಿಸಿ ‘ಒಕ್ಕಲಿಗರ ಸಂಘ’ ರಚನೆಗೊಂಡಿತು. ಇದು ಒಕ್ಕಲಿಗರ ಭವಿಷ್ಯದಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿತು. ಪರಿಣಾಮವಾಗಿ ಒಕ್ಕಲಿಗರ ಶಿಕ್ಷಣವನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಆದ್ಯತೆ ನೀಡುವಂತಾಯಿತು. ಸಂಸ್ಥಾನದ ಕೆಲವು ಜಿಲ್ಲಾ ಕೇಂದ್ರಗಳಲ್ಲೂ ಒಕ್ಕಲಿಗರ ವಿದ್ಯಾರ್ಥಿ ನಿಲಯಗಳು ಪ್ರಾರಂಭಗೊಂಡು, ಅಂದು ದಿವಾನರಾಗಿದ್ದ ವಿ.ಪಿ. ಮಾಧವರಾಯರು ಬೆಂಗಳೂರಿನಲ್ಲಿ ಬಹು ವಿಸ್ತಾರವಾದ ನಿವೇಶವನ್ನು ಒಕ್ಕಲಿಗರಿಗೆ ಕೊಡ ಮಾಡಿದರು. ಆ ಸಮಾಜದ ಜಾಗೃತಿಗಾಗಿ 1907ರಲ್ಲಿ ‘ಒಕ್ಕಲಿಗರ ಪತ್ರಿಕೆ’ ಕೂಡಾ ಪ್ರಾರಂಭವಾಯಿತು. ಒಕ್ಕಲಿಗರಲ್ಲಿ ಜಾಗೃತಿ ಮೂಡಿಸಲು ಪ್ರಮುಖವಾಗಿ ಶ್ರಮಿಸಿದವರು ಕೆ.ಎಚ್. ರಾಮಯ್ಯನವರು. ಆನಂತರದಲ್ಲಿ ಅನೇಕ ಜಾತಿ ಸಂಘಗಳು ಹುಟ್ಟಿಕೊಂಡವು.
ಹಿಂದುಳಿದ ವರ್ಗಗಳು ಸೇರಿದಂತೆ ಸಮಾಜದಲ್ಲಿ ಎಲ್ಲ ವರ್ಗದವರು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತಹ ಮಹಾನ್ ಉದ್ದೇಶದಿಂದ ಮಹಾರಾಜರ ಸರಕಾರವು 1910ರಲ್ಲಿ ಒಂದು ಪ್ರಕಟಣೆ ಹೊರಡಿಸಿತು. ಆ ಪ್ರಕಟಣೆಯ ಪೂರ್ಣ ಪಾಠ ಇಂತಿದೆ-‘‘ಜಾತಿ ಆಧಾರದ ಮೇಲೆ ಯಾರನ್ನೂ ಸಾರ್ವಜನಿಕ ಶಾಲೆಗಳಿಂದ ದೂರವಿಡುವ ಪರಿಪಾಠವನ್ನು ಸರಕಾರವು ಎತ್ತಿ ಹಿಡಿಯಲಾರದು. ಸಾರ್ವಜನಿಕ ಶಾಲೆಗಳನ್ನು ಲೋಕಾದಾಯಗಳಿಂದ ನಡೆಸುತ್ತಿರುವುದರಿಂದ ಆಸ್ಪತ್ರೆ, ನ್ಯಾಯಾಲಯಗಳು, ರೈಲು ಪ್ರಯಾಣ ಇತ್ಯಾದಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಇರುವಂತೆಯೇ ಶಿಕ್ಷಣವೂ ರಾಜ್ಯದ ಎಲ್ಲಾ ವರ್ಗದ ಜನರಿಗೂ ಲಭ್ಯವಾಗಬೇಕೆಂದು ಉದ್ದೇಶಿಸಲಾಗಿದೆ.’’ ದಲಿತರು ಅನಾದಿ ಕಾಲದಿಂದಲೂ ಶಿಕ್ಷಣದಿಂದ ವಂಚಿತರಾದುದರಿಂದ ಪ್ರತ್ಯೇಕವಾಗಿ ಶಾಲೆಗಳನ್ನು ತೆರೆಯಲಾಯಿತು. ಹಾಗೆ ತೆರೆದ ಶಾಲೆಗಳು ‘ಪಂಚಮ’ ಶಾಲೆಗಳೆಂದು ಹೆಸರಾದವು. ‘ಹಿಂದೂ ದಲಿತ ವರ್ಗ ಮಿಷನ್’ 1913ರಲ್ಲಿ ಹುಟ್ಟಿಕೊಂಡ ಈ ಸಂಸ್ಥೆಯು ಆ ಸಮುದಾಯಗಳ ವಿದ್ಯಾಭ್ಯಾಸ ಮುಂತಾದ ಅಭಿವೃದ್ಧಿ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿತು. 1915ರಲ್ಲಿ ಸರಕಾರ ಮತ್ತೊಂದು ಸುತ್ತೋಲೆ ಹೊರಡಿಸಿ ‘‘ಯಾರನ್ನೂ ಸಾಮಾಜಿಕ ಅಥವಾ ಧಾರ್ಮಿಕ ನಿರ್ಬಂಧದ ಆಧಾರದ ಮೇಲೆ ಸಾರ್ವಜನಿಕ ಶಾಲೆಗಳಿಗೆ ಸೇರಿಸಿಕೊಳ್ಳುವುದನ್ನು ನಿಷೇಧಿಸಕೂಡದು’’ ಎಂದು ಆಜ್ಞಾಪಿಸಿತು. ಈ ಸುತ್ತೋಲೆಯಲ್ಲಿ ಹೊರಡಿಸಿದ ಆಜ್ಞೆಯು ಸರಕಾರದ ದೃಷ್ಟಿಯಲ್ಲಿ ಎಲ್ಲಾ ಜಾತಿಯವರು, ಎಲ್ಲಾ ಧಾರ್ಮಿಕರು ಒಂದೇ ಎಂಬ ಭಾವನೆಯನ್ನು ಮೂಡಿಸುವುದಾಗಿತ್ತು. ನಂತರದಲ್ಲಿ ಸರಕಾರವು ಹಿಂದುಳಿದವರಿಗಾಗಿ ಅನೇಕ ಶಾಲೆಗಳನ್ನು ಪ್ರಾರಂಭಿಸಿತು. ಸಂಸ್ಥಾನದಲ್ಲೆಲ್ಲಾ ಸಾಕಷ್ಟು ಸಂಖ್ಯೆಯ ಶಾಲೆಗಳು ತೆರೆದವು. ಪ್ರಮುಖ ನಗರಗಳಲ್ಲೆಲ್ಲಾ ಹಿಂದುಳಿದ ವರ್ಗಗಳ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸಿ, ಹದಿನೈದು ಸಾವಿರ ರೂಪಾಯಿಗಳ ವಾರ್ಷಿಕ ಅನುದಾನವನ್ನು ಸರಕಾರ ಮಂಜೂರು ಮಾಡಿತ್ತು.
ಹಿಂದುಳಿದ ವರ್ಗಗಳ ಚಳವಳಿ :
ವಿದ್ಯಾಭ್ಯಾಸದ ಪ್ರೋತ್ಸಾಹಕ್ಕೆ ಒಳಗಾದ ಎಲ್ಲ ಸಮುದಾಯಗಳು ಎಚ್ಚೆತ್ತು ಕೊಂಡವು. ಬ್ರಾಹ್ಮಣೇತರರ ಉನ್ನತಿಗಾಗಿ ಶ್ರಮಿಸಲು ಮದ್ರಾಸ್ ರಾಜ್ಯದಲ್ಲಿ 1916ರಲ್ಲಿ ‘ಲಿಬರಲ್ ಫೇಡರೇಷನ್’ ಜನ್ಮ ತಾಳಿತು; ಕ್ರಮೇಣ ಅದು ‘ಜಸ್ಟಿಸ್ ಪಾರ್ಟಿ’ ಎಂಬ ಹೆಸರಿನಲ್ಲಿ ಕರೆಯಲ್ಪಟ್ಟಿತು. ಮೈಸೂರು ಸಂಸ್ಥಾನದಲ್ಲಿ ಅದು ಪ್ರಭಾವ ಬೀರಿತು. ವಿದ್ಯಾವಂತರಾದ ಹಿಂದುಳಿದ ವರ್ಗಗಳು ಸರಕಾರಿ ನೌಕರಿ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಅವಕಾಶಕ್ಕಾಗಿ ಹಾತೊರೆದವು, ಹೀಗಿದ್ದರೂ ಪ್ರತಿಭೆಯಲ್ಲಿ ಬ್ರಾಹ್ಮಣರನ್ನು ಮೀರಿಸಲು ಸಫಲರಾಗಲಿಲ್ಲ. ತತ್ಪರಿಣಾಮ ಸರಕಾರ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಹುದ್ದೆಗಳೆಲ್ಲವೂ ಬ್ರಾಹ್ಮಣರ ಪಾಲಾಗತೊಡಗಿದವು. ಇದರಿಂದ ಭಯಭ್ರಾಂತರಾದ ಹಿಂದುಳಿದ ವರ್ಗಗಳು ಜಾಗೃತಗೊಳ್ಳಲು ಪ್ರಾರಂಭಿಸಿದವು. ಸರಕಾರದ ಹುದ್ದೆಗಳನ್ನು ಪಡೆಯಲು ವಿಫಲಗೊಂಡ ಈ ಸಮುದಾಯಗಳ ರಾಜಕೀಯ ಪ್ರತಿನಿಧಿಗಳು ಪ್ರಜಾಪ್ರತಿನಿಧಿ ಸಭೆಗಳಲ್ಲಿ ಈ ಬಗ್ಗೆ ಬೇಡಿಕೆಗಳನ್ನು ಮುಂದಿಟ್ಟು ಹೋರಾಟಕ್ಕೆ ಅಡಿ ಇಟ್ಟರು. ಎನ್.ಬಸವಯ್ಯನವರ ನೇತೃತ್ವದಲ್ಲಿ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತು. ಇಷ್ಟಾದರೂ ದಿವಾನರು ಹೋರಾಟಗಾರರ ಆಗ್ರಹಕ್ಕೆ ಮಣಿಯಲಿಲ್ಲ.
ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣೇತರ ಚಳವಳಿ ತನ್ನ ಬೇಡಿಕೆಗಳ ಈಡೇರಿಕೆಗೆ ಸಫಲತೆ ಪಡೆಯುವ ಸಂದರ್ಭದಲ್ಲಿ ಮೈಸೂರಿಗೆ ದಿವಾನರಾಗಿ ಬಂದವರು ಸರ್ ಎಂ. ವಿಶ್ವೇಶ್ವರಯ್ಯನವರು (1912-1918). ಹಿಂದುಳಿದ ವರ್ಗಗಳಿಗೆ ಸರಕಾರ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಹುದ್ದೆಗಳ ಆಯ್ಕೆಗೆ ಮೀಸಲಾತಿ ಕೊಡಬೇಕೆಂಬ ಉದ್ದೇಶಗಳಿಗೆ ಎಂ. ವಿಶ್ವೇಶ್ವರಯ್ಯನವರು ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಾರೆಂಬ ಉದ್ದೇಶದಿಂದ ವಿರುದ್ಧವಾಗಿದ್ದರು. ‘‘ಸಾರ್ವಜನಿಕ ಸೇವೆಯಲ್ಲಿ ಕೇವಲ ಜಾತಿ ಮತ್ತು ಪಂಗಡಗಳ ಆಧಾರದ ಮೇಲೆ ಸರಕಾರಿ ಹುದ್ದೆಗಳನ್ನು ತುಂಬಬಾರದು; ಅರ್ಹತೆ ಯುಳ್ಳವರಿಗೆ ಸರಕಾರಿ ಸೇವೆ ಸಿಗುವಂತಾಗಬೇಕು’’ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.
1917ರಲ್ಲಿ ನಡೆದ ಹಿಂದುಳಿದ ವರ್ಗಗಳ ಮಹಾ ಸಮ್ಮೇಳನ ಬ್ರಾಹ್ಮಣೇತರರು ವ್ಯವಸ್ಥಿತವಾಗಿ ಸಂಘಟಿತರಾಗಲು ಪ್ರಯೋಜನವಾಯಿತು. ಜನಸಂಖ್ಯೆಯಲ್ಲಿ ಕೇವಲ ಶೇ. 4ರಷ್ಟಿರುವ ಬ್ರಾಹ್ಮಣರು ಆಡಳಿತದಲ್ಲಿ ಶೇ. 70ರಷ್ಟು ಹುದ್ದೆಗಳನ್ನು ಪಡೆದುಕೊಂಡು ಪ್ರಥಮ ಸ್ಥಾನದಲ್ಲಿದ್ದರು. ದಿವಾನರಾದಿಯಾಗಿ ಎಲ್ಲಾ ಪ್ರಮುಖ ಹುದ್ದೆಗಳಲ್ಲೂ ಅವರೇ ತುಂಬಿದ್ದರು. ಅದೇ ವರ್ಷ ನವೆಂಬರ್ ತಿಂಗಳಿನಲ್ಲಿ ಎಚ್. ಚನ್ನಯ್ಯ ಮತ್ತು ರಾವ್ ಸಾಹೇಬರ ನೇತೃತ್ವದಲ್ಲಿ ಸಮಾವೇಶಗೊಂಡ ಹಿಂದುಳಿದ ವರ್ಗಗಳ ಸಭೆ ಶಾಸಕಾಂಗ ಮತ್ತು ಕಾರ್ಯಾಂಗಗಳಲ್ಲಿ ಎಲ್ಲಾ ಕೋಮಿನವರಿಗೂ ಪ್ರಾತಿನಿಧ್ಯ ನೀಡುವಂತೆ ಗೊತ್ತುವಳಿಯನ್ನು ಅಂಗೀಕರಿಸಿತು. ಹಾಗೆ, ಡಿಸೆಂಬರ್ ತಿಂಗಳಿನಲ್ಲಿ ಹಿಂದುಳಿದ ವರ್ಗಗಳು ‘ಪ್ರಜಾಮಿತ್ರ ಮಂಡಳಿ’ ಎಂಬ ಪ್ರಪ್ರಥಮ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಕೊಂಡವು. ಡಿ.ಬನುಮಯ್ಯ, ಎನ್. ಸುಬ್ಬಯ್ಯ ಮತ್ತು ಅಬ್ಬಾಸ್ ಖಾನ್ ರಾಜಕೀಯ ಪಕ್ಷದ ಕಾರ್ಯಕಾರಿ ಸದಸ್ಯರಾಗಿ ನಿಯುಕ್ತಿಗೊಂಡರು.
ಪ್ರಜಾಮಿತ್ರ ಮಂಡಳಿ ವತಿಯಿಂದ ಪ್ರಭುಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿಗಾಗಿ ಮನವಿ ಸಲ್ಲಿಸಲಾಯಿತು. ಈಗಾಗಲೇ ಹೇಳಿರುವಂತೆ ದಿವಾನರಾದ ಎಂ.ವಿಶ್ವೇಶ್ವರಯ್ಯನವರು ಪ್ರತಿಭೆಯನ್ನು ಮುಂದಿಟ್ಟು ಮೀಸಲಾತಿಯನ್ನು ವಿರೋಧಿಸಿದರು. ಮಹಾರಾಜರು ಮತ್ತು ದಿವಾನರ ನಡುವೆ ನಡೆದ ಸಂವಾದದಂತೆ ನಂಬಿದ ತತ್ವಾದರ್ಶಗಳಿಗೆ ಇಬ್ಬರು ಬದ್ಧರಾಗಿದ್ದರು.
ಪ್ರಜಾಮಿತ್ರ ಮಂಡಳಿಯವರು ಸಲ್ಲಿಸಿದ ಮನವಿಯ ಮೇರೆಗೆ, ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಬದ್ಧರಾಗಿದ್ದ ಮಹಾರಾಜ ನಾಲ್ವಡಿಯವರು, ಕೊಟ್ಟ ಮಾತಿಗೆ ಚಾಚೂ ತಪ್ಪದೆ 1918ರ ಆಗಸ್ಟ್ 23ರಂದು ಆ ಸಮಯದಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದ ಲೆಸ್ಲಿ ಸಿ. ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದರು. ಸಮಿತಿಯಲ್ಲಿ ಶ್ರೀಕಂಠೇಶ್ವರ ಅಯ್ಯರ್, ಎಚ್. ಚೆನ್ನಯ್ಯ, ಎಂ. ಬಸವಯ್ಯ, ಗುಲಾಮ್ ಅಹಮದ್ ಕಲಾಮಿ ಮತ್ತು ಎಂ.ಮುತ್ತಣ್ಣ ಇವರುಗಳನ್ನು ಸದಸ್ಯರುಗಳನ್ನಾಗಿ ನೇಮಕ ಮಾಡಲಾಯಿತು. ಸಮಿತಿ ನೇಮಕವಾದ ಕೆಲವು ದಿನ/ತಿಂಗಳಲ್ಲೇ ಎಂ. ವಿಶ್ವೇಶ್ವರಯ್ಯ ಅವರು ದಿವಾನ ಪದವಿಗೆ ರಾಜೀನಾಮೆ ಇತ್ತರು.
ಸಮಿತಿ ಅಧ್ಯಯನಕ್ಕಾಗಿ ಸರಕಾರ ಕೊಟ್ಟ ಮೂರು ಪರಿಶೀಲನಾಂಶಗಳು ಹೀಗಿವೆ:
1. ಸರಕಾರಿ ಸೇವೆಯಲ್ಲಿನ ನೇಮಕಾತಿಯ ಪ್ರಸಕ್ತ ನಿಯಮಗಳಿಗೆ ಬದಲಾವಣೆಗಳ ಅಗತ್ಯತೆ ಇದ್ದರೆ ಅವುಗಳು;
2. ಹಿಂದುಳಿದ ಸಮುದಾಯಗಳಿಗೆ ಸೇರಿದವರಿಗೆ ಉನ್ನತ ಮತ್ತು ವೃತ್ತಿಪರ ಶಿಕ್ಷಣವನ್ನು ನೀಡುವುದನ್ನು ಪ್ರೋತ್ಸಾಹಿಸಲು ಬೇಕಾದ ವಿಶೇಷ ಸೌಲಭ್ಯಗಳು;
3. ದಕ್ಷತೆಗೆ ಬಾಧಕವಾಗದಂತೆ ಸರಕಾರಿ ಸೇವೆಯಲ್ಲಿ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯ ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಇತರ ಯಾವುದೇ ವಿಶೇಷ ಕ್ರಮಗಳು, ಶಿಕ್ಷಣದ ವ್ಯಾಪಕ ಪ್ರಸರಣದಿಂದಾಗಿ ನಿರೀಕ್ಷಿಸಿದಂತೆ ಹಿಂದುಳಿದ ಸಮುದಾಯಗಳಲ್ಲಿ ಉಂಟಾಗುವ ಹೆಚ್ಚಿನ ಸ್ಥಾನಮಾನದ ಭಾವನೆಯ ಮೂಲಕ ರಾಜ್ಯಕ್ಕೆ ಉಂಟಾಗುವ ಸಾಮಾಜಿಕ ಒಳಿತಿನ ಬಗ್ಗೆ ಸಹ ಸೂಕ್ತ ಗಮನ ನೀಡುವುದು.
ಸಮಿತಿಯು 1911ರ ಜನಗಣತಿ ವರದಿ ಮತ್ತು 1916, 1917 ಮತ್ತು 1918ರಲ್ಲಿ ವಿವಿಧ ಜಾತಿಗಳು ಸರಕಾರದಲ್ಲಿ ಹೊಂದಿರುವ ಪ್ರಮುಖ ಹುದ್ದೆಗಳನ್ನು ಆಧಾರವಾಗಿಟ್ಟುಕೊಂಡು ಎಲ್ಲಾ ಜನ-ಜಾತಿ-ವರ್ಗಗಳ
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕ ಇವೇ ಮುಂತಾದ ಅಂಶಗಳನ್ನು ಸಾದ್ಯಂತ ಅಧ್ಯಯನ ಮಾಡಿ, ಮೂರು ವಿಭಾಗಗಳನ್ನೊಳಗೊಂಡ ವರದಿಯನ್ನು ಜುಲೈ 30, 1919ರಂದು ಬ್ರಾಹ್ಮಣ, ಆಂಗ್ಲೋ ಇಂಡಿಯನ್ ಮತ್ತು ಬ್ರಿಟಿಷರು ಇವರನ್ನು ಹೊರತುಪಡಿಸಿ ಸರಕಾರಕ್ಕೆ ವರದಿ ಸಲ್ಲಿಸಿತು. ವರದಿಯಲ್ಲಿ ಸಾಧಿಸಬೇಕಾದ ಗುರಿಯ ಬಗ್ಗೆ ಕ್ರಮಗಳನ್ನೂ ಈ ಕೆಳಕಂಡಂತೆ ಸಾದರ ಪಡಿಸಿದೆ:
ಸೇವೆಯಲ್ಲಿ ಬ್ರಾಹ್ಮಣರು ಮತ್ತು ಇತರ ವರ್ಗಗಳ ಪ್ರಾತಿನಿಧ್ಯದ (Adequate representation) ನಡುವಿನ ಅಸಮಾನತೆಯನ್ನು ಕಡಿಮೆ ಮಾಡುವ ಬಗ್ಗೆ ಮತ್ತು ನಿಗದಿತ ಅವಧಿಯೊಳಗಾಗಿ ಸಮಾನತೆಯನ್ನು ಸಾಧಿಸುವ ಬಗ್ಗೆ ಸರಕಾರ ಅಳವಡಿಸಿಕೊಳ್ಳಬೇಕಾದ ನಿರ್ದಿಷ್ಟ ವಿಧಾನಗಳ ಬಗ್ಗೆ ಸೂಚಿಸಿರುವ ಕ್ರಮಗಳೆಂದರೆ-
1. ಅರ್ಹತಾದಾಯಕ ಶೈಕ್ಷಣಿಕ ಪರೀಕ್ಷೆಗಳಿಂದ ವಿನಾಯಿತಿಗಳನ್ನು ನೀಡುವುದು;
2. ಸಮಾನ ಅಥವಾ ತತ್ಸಮಾನ ವಿದ್ಯಾರ್ಹತೆ ಇರುವವರ ವಿಷಯದಲ್ಲಿ ಆದ್ಯತಾ ಆಯ್ಕೆ;
3. ನಿಗದಿತ ಪರೀಕ್ಷೆಗಳ ಕಠಿಣತೆಯ ಸಡಿಲಿಕೆ; ಮತ್ತು
4. ನೇಮಕಾತಿಗಳನ್ನು ಮಾಡುವಾಗ ಹಿಂದುಳಿದ ವರ್ಗಗಳ ಕನಿಷ್ಠ ಪ್ರಮಾಣದ ಆಯ್ಕೆಯನ್ನು ಅಗತ್ಯ ಪಡಿಸುವುದು.
ಎಂ. ವಿಶ್ವೇಶ್ವರಯ್ಯನವರು ದಿವಾನ ಪದವಿಗೆ ರಾಜೀನಾಮೆ ಇತ್ತ ಮೇಲೆ, ದಿವಾನರಾಗಿ ಬಂದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವ ಕಾಂತರಾಜ ಅರಸು ಅವರು.
ಮೈಸೂರು ಸಂಸ್ಥಾನವು ಲೆಸ್ಲಿ ಸಿ. ಮಿಲ್ಲರ್ ಸಮಿತಿ ವರದಿಯನ್ನು ಒಪ್ಪಿಕೊಂಡು 1921ರ ಮೇ ತಿಂಗಳಿನಲ್ಲಿ ಹಿಂದುಳಿದ ವರ್ಗಗಳಿಗಾಗಿ ಶೇ.75ರಷ್ಟು ಹುದ್ದೆಗಳನ್ನು ಮೀಸಲಿರಿಸಲು ಆದೇಶಿಸಿತು. ಈ ವರದಿ ಮತ್ತು ಸರಕಾರದ ಆದೇಶ ಭಾರತದಲ್ಲಿ ಹಿಂದುಳಿದ ವರ್ಗಗಳ ನಿಜ ಸ್ಥಿತಿ ಮತ್ತು ಅವುಗಳ ಸಂಖ್ಯಾ ಸಾಮರ್ಥ್ಯವನ್ನು ತೋರಿಸುತ್ತದೆ. ಮಿಲ್ಲರ್ ಸಮಿತಿ ವರದಿ ಆಧಾರಿತ ಮೀಸಲಾತಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ 1956ರಲ್ಲಿ ರಾಜ್ಯಗಳು ಪುನರ್ ವಿಂಗಡಣೆ ಆಗುವವರೆಗೂ ಮೈಸೂರು ರಾಜ್ಯದಲ್ಲಿ ಜಾರಿಯಲ್ಲಿತ್ತು ಎಂಬುದೇ ವಿಶೇಷ.
ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ರಾಜಕೀಯ ಹೋರಾಟಕ್ಕೆ ಸ್ಫೂರ್ತಿಯಾಗಿ ಪರಿವರ್ತನಾ ಚಳವಳಿಗೆ ಬೆಂಬಲ ನೀಡುವುದರೊಂದಿಗೆ ಕನ್ನಡ ನೆಲದ ಸಮಾನತೆಯ ಕನಸನ್ನು ನನಸಾಗಿಸಿದ ಪ್ರಪ್ರಥಮ ಹರಿಕಾರ ರೆನಿಸಿಕೊಂಡರು.