ರಂಗಭೂಮಿಯ ಜಂಗಮ ಸದಾನಂದ ಸುವರ್ಣ
‘‘ನನಗೆ ರಂಗಭೂಮಿ ಬಹಳ ಮೆಚ್ಚಿನ ಮಾಧ್ಯಮ. ಸಿನೆಮಾ, ಧಾರಾವಾಹಿಗಳಲ್ಲಿ ದುಡಿದಿದ್ದರೂ ರಂಗಭೂಮಿಯಲ್ಲಿ ದುಡಿಯುವುದು ನನಗೆ ಪ್ರಿಯವಾದ ಕಾಯಕ. ನನ್ನ ಜೀವಮಾನದಲ್ಲಿ ಅತ್ಯಂತ ಸಂತಸದ ಕ್ಷಣಗಳನ್ನು ಅನುಭವಿಸಿದ್ದು ರಂಗಭೂಮಿಯಲ್ಲೇ. ಜೀವನೋಪಾಯಕ್ಕಾಗಿ ನಾನು ಮೊದಲು ವಿವಿಧ ಕ್ಷೇತ್ರಗಳಲ್ಲಿ ನೌಕರಿ ಮಾಡುತ್ತಲಿದ್ದರೆ ಸಂಜೆ ನಾನು ತೊಡಗುತ್ತಿದ್ದುದು ರಂಗಭೂಮಿಯ ಕುರಿತಾದ ಚಟುವಟಿಕೆಗಳಲ್ಲಿ. ಮುಂದೆ ಪೈಂಟ್ ವ್ಯಾಪಾರ ಮಾಡುತ್ತಿದ್ದರೂ ಹೇರಳ ಹಣ ಗಳಿಸುವ ಇಚ್ಛೆ ನನಗಿರಲಿಲ್ಲ. ಸಾಮಾನ್ಯನಂತೆ ನೆಮ್ಮದಿಯಿಂದ ಜೀವನ ಸಾಗಿಸುವುದಕ್ಕೆ ಸಾಕಾಗುವಷ್ಟು ಸಂಪಾದಿಸಿ ತೃಪ್ತನಾಗಿರುತ್ತಿದ್ದೆ. ರಂಗಭೂಮಿ ನನ್ನ ಬದುಕಿನಲ್ಲಿ ಎಲ್ಲವನ್ನೂ ಕಲಿಸಿದೆ. ನನ್ನ ಜೀವನವನ್ನು ರೂಪಿಸಿದೆ. ನಾನು ರಂಗಭೂಮಿಯಲ್ಲಿ ಪಡೆದ ಅನುಭವಗಳನ್ನು ವಿವರಿಸಲು ಸಾಧ್ಯವಿಲ್ಲ. ರಂಗಭೂಮಿಯ ಕುರಿತು ವೇದಿಕೆಯಲ್ಲಿ ಭಾಷಣ ಮಾಡುವಾಗ ಕೆಲವೊಂದು ವಿಷಯಗಳನ್ನು ಹೇಳುತ್ತೇನೆ. ಆದರೆ ರಂಗಭೂಮಿಯಲ್ಲಿ ಕಲಿತುದೆಲ್ಲವನ್ನೂ ಅನುಭವಿಸಿದ ಅನುಭವವನ್ನೆಲ್ಲ ಶಬ್ದಗಳಿಂದ ವಿವರಿಸಲು ಸಾಧ್ಯವಿಲ್ಲ. ರಂಗಭೂಮಿಯಲ್ಲಿ ಬದ್ಧತೆಯಿಂದ ಬದುಕಿಯೇ ಅನುಭವಿಸಿ ತಿಳಿಯಬೇಕು, ಅದಕ್ಕಾಗಿ ಜೀವನವಿಡೀ ರಂಗಭೂಮಿಯಲ್ಲಿ ಬದುಕುತ್ತ ಬೆಳೆಯಬೇಕು. ನಾನು ನಲವತ್ತರ ದಶಕದಿಂದ ರಂಗಭೂಮಿಯಲ್ಲಿ ಬದುಕುತ್ತಿದ್ದೇನೆ. ರಂಗಭೂಮಿಯಿಂದ ಕಲಿಯುತ್ತಲಿದ್ದೇನೆ, ಅನುಭವಿಸುತ್ತಲಿದ್ದೇನೆ. ರಂಗಭೂಮಿ ಜೀವನದುದ್ದಕ್ಕೂ ಕಲಿಸುತ್ತಲೇ ಇರುತ್ತದೆ. ಆದ್ದರಿಂದ ಕೊನೆತನಕ ಕಲಿಯುತ್ತಲೇ ಕಳೆಯಬೇಕಾಗಿದೆ. ಇಂದಿನವರೆಗಿನ ನನ್ನ ರಂಗ ಪಯಣದ ಬಗ್ಗೆ ಮೆಲುಕು ಹಾಕತೊಡಗಿದರೆ ಆಗಿನ ಕನ್ನಡ ರಂಗಭೂಮಿಯ ಪರಿಸ್ಥಿತಿ, ಆದರೊಂದಿಗೆ ನನ್ನ ಒಡನಾಟ, ಅದು ಬೆಳೆಯುತ್ತ ಬಂದಂತೆ ನಾನೂ ಬೆಳೆದೆ. ಈ ಐವತ್ತು ಅರುವತ್ತು ವರ್ಷಗಳಲ್ಲಿ ನಾನು ರಂಗಭೂಮಿಯಲ್ಲಿ ಬೆಳೆಯುತ್ತ ಬಂದದ್ದರಿಂದಲೇ ಇಂದು ಕೂಡ ರಂಗಭೂಮಿಯಲ್ಲಿ ಬದುಕಿ ಉಳಿದಿದ್ದೇನೆ. ಅಂದು ‘ಕುರುಡನ ಸಂಗೀತ’ದಿಂದ ಆರಂಭಿಸಿ ಇವತ್ತು ’ಉರುಳು, ಕೋರ್ಟ್ ಮಾರ್ಷಲ್, ಮಳೆ ನಿಲ್ಲುವವರೆಗೆ, ಕಲಂಕ್‌ದಿ ನೀರ್’ ತನಕ ಬಂದಿದ್ದೇನೆ. ಸಿನೆಮಾ, ಧಾರಾವಾಹಿ, ಯಾವುದರಲ್ಲಿ ತೊಡಗಿಕೊಂಡರೂ ಮತ್ತೆ ರಂಗಭೂಮಿಗೆ ಬಂದೇ ಬರುತ್ತೇನೆ. ಅದಕ್ಕೆ ಕಾರಣ ರಂಗಭೂಮಿಯ ಸೆಳೆತ’’ ಎನ್ನುವಲ್ಲಿ ಸುವರ್ಣರಿಗೆ ರಂಗಭೂಮಿಯ ಮೇಲಿರುವ ಅಪಾರ ಪ್ರೀತಿ, ಮಮತೆ, ಅಕ್ಕರೆ, ವಾತ್ಸಲ್ಯದ ವ್ಯಾಮೋಹವೇ ಅನಾವರಣಗೊಳ್ಳುತ್ತದೆ.
ಹೌದು ರಂಗಭೂಮಿಯೇ ತನ್ನ ಸುಖದ ಬೀಡು, ಸಂತಸದ ನೆಲೆವೀಡು ಅನ್ನುವುದನ್ನು ಸದಾನಂದ ಸುವರ್ಣರು ಪದೇ ಪದೇ ಹೇಳಿಕೊಳ್ಳುತ್ತಾರೆ. ಸುವರ್ಣರು ನಿಷ್ಕಾಮ ಕರ್ಮಯೋಗಿ. ಕಾಯಕದಲ್ಲಿ ಸದಾನಂದವನ್ನು ಕಂಡುಕೊಳ್ಳುವ ಅವರಿಗೆ ಅದರಲ್ಲಿ ದೊರೆಯುವ ಯಶಸ್ಸೇ ಸುವರ್ಣ ಪುರಸ್ಕಾರ. ಸುವರ್ಣರನ್ನು, ಸಂತೆಯೊಳಗಿದ್ದೂ ಇಲ್ಲದಂತೆ ಬದುಕುವ ಸಂತ ಅನ್ನಬಹುದು. ಮಹಾ ಮೌನಿ, ಮಹಾ ಮುನಿ, ರಂಗ ಜ್ಞಾನಿ ಎಂದೂ ವ್ಯಾಖ್ಯಾನಿಸಬಹುದು. ತನ್ನ ಮನೆಯಲ್ಲಿ ತಾನೊಬ್ಬನೇ ಧ್ಯಾನಸ್ಥನಾಗಿರುವ ಸುವರ್ಣರು ಓದು, ಅಧ್ಯಯನ, ಬರಹದೊಂದಿಗೆ ಅರಿವಿನ ಮನೆಯಾಗಿ, ಬೆಳಕಾಗಿದ್ದಾರೆ. ನಿರ್ಲಿಪ್ತತೆಯ, ನಿರ್ಮಮಕಾರದ ವ್ಯಕ್ತಿಗೆ ರಂಗ ಕ್ರಿಯೆಯೊಂದನ್ನು ಬಿಟ್ಟು ಬೇರೇನೂ ಬೇಕಿಲ್ಲ, ಆದರೆ ಎಲ್ಲವೂ ಅವರಿಗೆ ಪ್ರಾಪ್ತಿಯಾಗುತ್ತ ಬಂದಿದೆ. ಪ್ರಶಸ್ತಿ, ಗೌರವ ಸನ್ಮಾನಗಳೆಲ್ಲ ವಶೀಲಿಬಾಜಿಯ ಹಿಡಿತದಲ್ಲಿರುವ ಈ ದಿನಗಳಲ್ಲಿ ಅವುಗಳೆಲ್ಲ ತಾವಾಗಿಯೇ ನಿರ್ಲಿಪ್ತತೆ ಹಾಗೂ ನಿರ್ಮಮಕಾರದ ಪ್ರತೀಕವಾಗಿರುವ ರಂಗಭೂಮಿಯ ಮೇರು ಸಾಧಕ ಸುವರ್ಣರನ್ನು ಅರಸುತ್ತ ಬರುತ್ತಿವೆ, ಮೌಲ್ಯ ಹೆಚ್ಚಿಸಿಕೊಳ್ಳುತ್ತಿವೆ ಅನ್ನುವುದು ಸಂಭ್ರಮದ ಸಂಗತಿಯೇ.
ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲಿಕೆಯ ‘ರಂಗಕರ್ಮಿ ಸದಾನಂದ ಸುವರ್ಣ’ ಕೃತಿಯ ಬೆನ್ನುಡಿಯಲ್ಲಿ ಖ್ಯಾತ ಸಾಹಿತಿ ಡಾ.ನಾ.ಮೊಗಸಾಲೆ ಅವರು ಬಣ್ಣಿಸಿದಂತೆ ‘ಸಾಂಸ್ಕೃತಿಕವಾಗಿ ತೊಡಗಿಸಿಕೊಂಡಿರುವ ಸುವರ್ಣರದ್ದು ಅದಮ್ಯ ಚೇತನ, ಸರಳ ನಿರಾಡಂಬರ ಚೇತನ. ಈ ಇಳಿವಯಸ್ಸಿನಲ್ಲೂ ರಂಗಭೂಮಿಯ ಬಗ್ಗೆಯೇ ಕನಸು ಕಾಣುವ ಅವರು ‘ರಂಗಭೂಮಿಯ ಜಂಗಮ.’
(‘ರಂಗಜಂಗಮ ಸದಾನಂದ ಸುವರ್ಣ’ ಕೃತಿಯಲ್ಲಿ)