ಸೀತಾರಾಮ ಯೆಚೂರಿ-ಅಪರೂಪದ ಸಜ್ಜನ ರಾಜಕಾರಣಿ
ಭಾರತದ ವಿವಿಧತೆಯಲ್ಲಿನ ಏಕತೆಯ ಕುರಿತಾದ ಸೀತಾರಾಮ ಯೆಚೂರಿಯವರ ಬದ್ಧತೆ ಅವರ ನಡೆ ಮತ್ತು ನುಡಿಗಳಲ್ಲಿ ನಿಚ್ಚಳವಾಗಿ ಕಂಡುಬರುತ್ತಿತ್ತು. ಈ ಏಕತೆಯನ್ನು ಕಾಪಾಡುವ ಗುರುತರ ಹೊಣೆಗಾರಿಕೆ ಸಂಸತ್ತಿಗೆ ಇದೆ ಎಂಬುದನ್ನು ರಾಜ್ಯಸಭೆಯಿಂದ 2017ರಲ್ಲಿ ನಿವೃತ್ತರಾಗುವ ಸಂದರ್ಭದಲ್ಲಿ ಮತ್ತೆ ತೋರಿಸಿಕೊಟ್ಟಿದ್ದರು. ರಾಜಕಾರಣಿಗಿಂತಲೂ ಹೆಚ್ಚಾಗಿ ಅವರು ಚಿಂತಕರ ಗುಂಪಿಗೆ ಸೇರಿದ್ದರು ಅಂದರೂ ತಪ್ಪಾಗಲಾರದು.
ಸೈದ್ಧಾಂತಿಕ ತಳಹದಿಯ ರಾಜಕೀಯಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟ ಅಪರೂಪದ ರಾಜಕಾರಣಿ ಎಪ್ರಿಲ್ 12ಕ್ಕೆ ನಿಧನರಾದ ಸೀತಾರಾಮ ಯೆಚೂರಿ. ಪಕ್ಷರಾಜಕಾರಣದಲ್ಲಿಯೂ ಮರೆಯಾಗುತ್ತಿರುವ ಸಾಮಾಜಿಕ ಪ್ರಜ್ಞೆಯನ್ನು ನಿರಂತರ ಕಾಪಾಡಿಕೊಂಡು ಯಾವತ್ತೂ ಸಮಾನತೆ ಮತ್ತು ಭ್ರಾತೃತ್ವವನ್ನು ಎತ್ತಿಹಿಡಿಯುತ್ತಿದ್ದ ಮೇರು ವ್ಯಕ್ತಿತ್ವ ಅವರದು. ಅವರ ಅಗಲಿಕೆ ಕಮ್ಯುನಿಸ್ಟ್ ಚಳವಳಿಗೆ ದೊಡ್ಡ ಹೊಡೆತವಾದರೆ ಭಾರತದ ಸಾಮಾಜಿಕ-ರಾಜಕೀಯ ವ್ಯವಸ್ಥೆಗೆ ತುಂಬಲಾರದ ನಷ್ಟ.
ನಾನು ಅವರನ್ನು ಭೇಟಿ ಮಾಡಿದ್ದು ಕೇವಲ ಎರಡು ಬಾರಿ. 1990ರ ದಶಕದ ಆರಂಭದಲ್ಲಿ ಭಾರತದಲ್ಲಿ ಹೊಸ ಆರ್ಥಿಕ ನೀತಿಯನ್ನು ಕಾರ್ಯರೂಪಕ್ಕೆ ತರಲು ಅಂದಿನ ಸರಕಾರಗಳು ರಂಗಸಜ್ಜಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಮೂರು ದಿನಗಳ ‘ಭಾರತದ ಸಾರ್ವಭೌಮತೆ’ ಎಂಬ ವಿಷಯಕ್ಕೆ ಸಂಬಂಧಿಸಿದ ಕಮ್ಮಟವನ್ನು ಸಮಾನಮನಸ್ಕರು ದಿಲ್ಲಿಯಲ್ಲಿ ಏರ್ಪಡಿಸಿದ್ದರು. ಬ್ಯಾಂಕು ಅಧಿಕಾರಿಗಳ ಪ್ರತಿನಿಧಿಯಾಗಿ ಹೋದವರಲ್ಲಿ ನಾನೂ ಒಬ್ಬ. ಒಂದು ರಾತ್ರಿ ಇನ್ನೊಬ್ಬ ಪ್ರತಿನಿಧಿಯ ಜೊತೆ ಯೆಚೂರಿಯವರನ್ನು ಕಂಡಿದ್ದೆ. ಆಗ ಅವರು ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸಿಸ್ಟ್) -ಸಿಪಿಎಂನ ಪಾಲಿಟ್ ಬ್ಯುರೊದ ಸದಸ್ಯರಾಗಿದ್ದರು. ಯಾವುದೇ ಬಿಗುಮಾನವಾಗಲೀ ಅಹಂ ಆಗಲೀ ಇಲ್ಲದ ಅವರ ಸಜ್ಜನಿಕೆ ಮತ್ತು ಸರಳತೆ ನನಗೆ ಮೆಚ್ಚುಗೆಯಾಗಿದ್ದವು.
ಎರಡನೆಯ ಬಾರಿ ಭೇಟಿಯಾದದ್ದು 15 ವರ್ಷಗಳ ಬಳಿಕ, ಅವರ ಪಕ್ಷದ ಒಂದು ಸಭೆಗೆ ಅವರು ಉಡುಪಿಗೆ ಬಂದಿದ್ದಾಗ. ಅಂದಿನ ದಿನಗಳಲ್ಲಿ ಕೇರಳದ ಖಾಸಗಿರಂಗದ ಬ್ಯಾಂಕುಗಳಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಆತಂಕಕಾರಿಯಾಗಿದ್ದವು. ಆ ಬ್ಯಾಂಕುಗಳ ಅಧಿಕಾರಿ ಸಂಘಗಳ ಮಾರ್ಗದರ್ಶಕನ ನೆಲೆಯಲ್ಲಿ ನನಗೆ ಯೆಚೂರಿಯವರಿಗೆ ಬಹಳಷ್ಟು ಮಾಹಿತಿಯನ್ನು ಕೊಡಲಿತ್ತು. ತಮ್ಮ ಸಭಾ ಕಾರ್ಯಕ್ರಮದ ಬಳಿಕ ನಮಗೆ ಅವರನ್ನು ಕಾಣಲು ಅವಕಾಶ ಕೊಟ್ಟರು. ನಮ್ಮ ಮನವಿಯನ್ನು ಪರಿಶೀಲಿಸಿದ ಬಳಿಕ ಕೆಲವು ಪೂರಕ ಮಾಹಿತಿಗಳನ್ನು ಕೋರಿದರು. ಅವರ ಪ್ರಶ್ನೆಗಳಿಂದ ಒಂದು ಸ್ಪಷ್ಟವಾಗಿತ್ತು: ಹಣಕಾಸುರಂಗದ ಆಗುಹೋಗುಗಳ ಬಗ್ಗೆ ಅವರ ತಿಳಿವು ಆಳವಾಗಿತ್ತು. ನಮ್ಮ ಸಂದರ್ಶನದ ಕೊನೆಗೆ ತಾನು ಇದನ್ನು ಅವಶ್ಯವಾಗಿ ಯುಪಿಎ ಸರಕಾರದ ಮತ್ತು ರಿಸರ್ವ್ ಬ್ಯಾಂಕಿನ ಗಮನಕ್ಕೆ ತರುತ್ತೇನೆ ಎಂದು ಆಶ್ವಾಸನೆ ನೀಡಿದ್ದರು.
ಈ ಎರಡೂ ಘಟನೆಗಳಲ್ಲಿ ನನಗೆ ಎದ್ದುಕಂಡ ಅವರ ಅಪರೂಪದ ಗುಣಗಳು ಎರಡು: ರಾಜಕೀಯ ಧುರೀಣರಾಗಿದ್ದರೂ ಅವರ ಸರಳತೆ ಮತ್ತು ತಮ್ಮ ಗಮನಕ್ಕೆ ಬಂದ ವಿಷಯದ ಬಗ್ಗೆ ಕೂಲಂಕಷವಾಗಿ ಅರಿಯುವ ಪ್ರಜ್ಞೆ. ಆ ಅಧ್ಯಯನ ಪ್ರವೃತ್ತಿಯೇ ಅವರು ಸಂಪಾದಿಸಿದ ಗೌರವಕ್ಕೆ ಕಾರಣವೆನ್ನಬಹುದು. (1981-2009ರ ಅವಧಿಯಲ್ಲಿ ವಿಭಿನ್ನ ರಾಜಕೀಯ ಧುರೀಣರನ್ನು ಅಧಿಕಾರಿ ಸಂಘದ ನನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಭೇಟಿಯಾಗಬೇಕಾಗಿ ಬಂದಿತ್ತು. ಹೆಚ್ಚಿನ ಭೇಟಿಗಳು ನಿರಾಶೆಯನ್ನು ಹುಟ್ಟಿಸಿದ್ದವು.)
ಅವರು ಮಾತನಾಡುವಾಗ ಭಾಷೆಯ ಮೇಲೆ ಅವರಿಗಿದ್ದ ಹಿಡಿತ, ತರ್ಕಬದ್ಧವಾದ ಮಾತು ಮತ್ತು ವಿಷಯದ ಬಗ್ಗೆ ಅವರಿಗಿದ್ದ ಆಳವಾದ ಅರಿವು ಇವುಗಳ ಮೂಲಕ ರಾಜಕಾರಣದಲ್ಲಿ ತಮ್ಮದೇ ಒಂದು ಛಾಪನ್ನು ಅವರು ಬೆಳೆಸಿಕೊಂಡಿದ್ದರು. ಭಾರತದ ವಿವಿಧತೆಯಲ್ಲಿನ ಏಕತೆಯ ಕುರಿತಾದ ಅವರ ಬದ್ಧತೆ ಅವರ ನಡೆ ಮತ್ತು ನುಡಿಗಳಲ್ಲಿ ನಿಚ್ಚಳವಾಗಿ ಕಂಡುಬರುತ್ತಿತ್ತು. ಈ ಏಕತೆಯನ್ನು ಕಾಪಾಡುವ ಗುರುತರ ಹೊಣೆಗಾರಿಕೆ ಸಂಸತ್ತಿಗೆ ಇದೆ ಎಂಬುದನ್ನು ರಾಜ್ಯಸಭೆಯಿಂದ 2017ರಲ್ಲಿ ನಿವೃತ್ತರಾಗುವ ಸಂದರ್ಭದಲ್ಲಿ ಮತ್ತೆ ತೋರಿಸಿಕೊಟ್ಟಿದ್ದರು. ರಾಜಕಾರಣಿಗಿಂತಲೂ ಹೆಚ್ಚಾಗಿ ಅವರು ಚಿಂತಕರ ಗುಂಪಿಗೆ ಸೇರಿದ್ದರು ಅಂದರೂ ತಪ್ಪಾಗಲಾರದು.
ರಾಜಕಾರಣದಲ್ಲಿ ಚರ್ಚೆಗಳ ಗುಣಮಟ್ಟವನ್ನು ಕಾಪಾಡಬೇಕಿದ್ದರೆ ಕಣದಲ್ಲಿರುವವರಿಗೆ ಭಾಷೆಯ ಮೌಲ್ಯದ ಅರಿವು ಮತ್ತು ಅದರ ಮೇಲೆ ಹಿಡಿತ, ವಿಷಯದ ಬಗ್ಗೆ ಅಧ್ಯಯನ ಮಾಡುವ ಪ್ರವೃತ್ತಿ ಮತ್ತು ಇತರರ ಅಭಿಪ್ರಾಯವನ್ನು ಗೌರವಿಸುವ ಗುಣಗಳು ಅತೀ ಅಗತ್ಯ. ಸೀತಾರಾಮ ಯೆಚೂರಿಯವರು ಇವುಗಳನ್ನೆಲ್ಲಾ ಮೈಗೂಡಿಸಿಕೊಂಡಿದ್ದರು. ಅವರು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕಳೆದ ದಿನಗಳಲ್ಲಿಯೇ ಈ ಗುಣಗಳು ಪ್ರವರ್ಧಮಾನಕ್ಕೆ ಬಂದವು.
1975ರ ಆಪತ್ಕಾಲೀನ ಪರಿಸ್ಥಿತಿಯಲ್ಲಿ ಜೈಲಿಗೆ ದಬ್ಬಲ್ಪಟ್ಟರು; ಆ ಬಳಿಕ ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತಾಗ ವಿಶ್ವವಿದ್ಯಾನಿಲಯದ ಕುಲಪತಿಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ವಿದ್ಯಾರ್ಥಿಗಳ ನಾಯಕರೂ ಯೆಚೂರಿಯವರೇ ಆಗಿದ್ದರು. ತಮ್ಮ ನಿವಾಸದಿಂದ ಹೊರಬಂದು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ತಮ್ಮ ಕುರಿತಾದ ‘ಆರೋಪ ಪಟ್ಟಿ’ಯನ್ನು ಯೆಚೂರಿಯವರಲ್ಲಿಯೇ ಓದಲು ಹೇಳಿ ಅದನ್ನು ಸ್ವೀಕರಿಸಿದ ಇಂದಿರಾ ಗಾಂಧಿಯವರು ಮುಂದೆ ರಾಜೀನಾಮೆ ಕೊಟ್ಟರು. ಆ ಪ್ರತಿರೋಧಗಳು ತಾತ್ವಿಕ ನೆಲೆಯಲ್ಲಿ ಎಂಬುದನ್ನು ಯೆಚೂರಿ ಅವರ ಮುಂದಿನ ವರ್ತನೆಗಳು ತೋರಿಸಿದ್ದವು. ಇದಕ್ಕೆ ಉದಾಹರಣೆಯೇ ಅವರು ಇಂದಿರಾರ ಸೊಸೆ ಸೋನಿಯಾ ಗಾಂಧಿ ಮತ್ತು ಮೊಮ್ಮಗ ರಾಹುಲ್ ಗಾಂಧಿ ಅವರ ಆಪ್ತವರ್ಗಕ್ಕೆ ಸೇರಿದವರಾಗಿದ್ದರು ಎಂಬುದು.
ಕಮ್ಯುನಿಸ್ಟ್ ಚಳವಳಿಯು ವಿಶ್ವದಾದ್ಯಂತ ತನ್ನ ಅಸ್ತಿತ್ವವನ್ನು ಕಳಕೊಳ್ಳುತ್ತಿರುವ ಕಾಲಘಟ್ಟದಲ್ಲಿ, ಭಾರತದಲ್ಲಿ ಅದರ ಮೂಲ ಸಿದ್ಧಾಂತಗಳಾದ ಸಮಾನತೆ ಮತ್ತು ಭ್ರಾತೃತ್ವವನ್ನು ನಿರಂತರ ಪ್ರತಿಪಾದಿಸುತ್ತಾ ಬಂದ ಯೆಚೂರಿ ಅವರು, ದೇಶದ ಮತ್ತು ಸಮಾಜದ ಹಿತದೃಷ್ಟಿಯಿಂದ ತಮಗಿಂತ ಭಿನ್ನವಾದ ಸಿದ್ಧಾಂತಗಳನ್ನು ಹೊಂದಿದ ಇತರ ಪಕ್ಷಗಳ ಜೊತೆ ನಿರ್ದಿಷ್ಟವಾದ ಗಡಿಗಳ ಒಳಗೆ ಹೊಂದಾಣಿಕೆ ಮಾಡುವ ವಿಶಾಲದೃಷ್ಟಿಯನ್ನೂ ಹೊಂದಿದ್ದರು. ಈ ಕಾರಣದಿಂದಾಗಿಯೇ 2004ರಲ್ಲಿ ಅಂದಿನ ಯುಪಿಎ ಸರಕಾರಕ್ಕೆ ಬೆಂಬಲ ನೀಡಲು ಎಡಪಕ್ಷಗಳನ್ನು ಒತ್ತಾಯಿಸಿ ಸಫಲರಾದರು.(ಇದೇ ದೂರದೃಷ್ಟಿ 1996ರಲ್ಲಿ ಸಿಪಿಎಂ ಪಕ್ಷಕ್ಕೆ ಇದ್ದಿದ್ದರೆ ಅಜಾತಶತ್ರುವಾಗಿದ್ದ ಅಂದಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ದೇಶದ ಪ್ರಧಾನಿಯಾಗುತ್ತಿದ್ದರು. ಭಾರತದ ಮುಂದಿನ ರಾಜಕೀಯ ಚರಿತ್ರೆಯೇ ಬದಲಾಗುತ್ತಿತ್ತು ಎಂಬುದು ಬೇರೆ ವಿಚಾರ). ಮೈತ್ರಿಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಸೂಚಿಗಳನ್ನು ಹೆಣೆಯುವಲ್ಲಿ ಅವರ ಕೊಡುಗೆ ಗಣನೀಯವಾಗಿತ್ತು. 2004-14ರ ಮೈತ್ರಿಸರಕಾರದ ಕಾಲಘಟ್ಟದಲ್ಲಿ ಸರಕಾರವು ಕಾರ್ಯರೂಪಕ್ಕೆ ತಂದ ಆಹಾರ ಭದ್ರತಾ ಹಕ್ಕು, ಮಾಹಿತಿ ಹಕ್ಕು, ಉದ್ಯೋಗ ಖಾತರಿ ಹಕ್ಕು ಮುಂತಾದ ಪ್ರಗತಿಪರ ಕಾಯ್ದೆಗಳನ್ನು ರೂಪಿಸುವಲ್ಲಿ ಯೆಚೂರಿ ಅವರ ಪಾತ್ರ ಅನನ್ಯವಾಗಿತ್ತು.
ವಿಶಾಲಮಟ್ಟದಲ್ಲಿ ತಾವು ನಂಬಿದ ಸಿದ್ಧಾಂತಗಳ ಚೌಕಟ್ಟಿನ ಒಳಗೆ ಮೈತ್ರಿಕೂಟಗಳನ್ನು ಬೆಸೆಯಲು ಯೆಚೂರಿಯವರು ಸಫಲರಾದರೇನೋ ಹೌದು. ವಿಪರ್ಯಾಸವೆಂದರೆ, ತಾವು ಪ್ರಧಾನ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿಯೇ ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಅಧಿಕಾರ ಕಳಕೊಂಡ ಅವರ ಪಕ್ಷ ಇಂದು ಕೇರಳರಾಜ್ಯದಲ್ಲಿ ಮಾತ್ರ ಆಡಳಿತದ ಚುಕ್ಕಾಣಿಯನ್ನು ಉಳಿಸಿಕೊಂಡಿದೆ. ಇದು ವಿಶ್ವದಾದ್ಯಂತ ದುರ್ಬಲವಾಗುತ್ತಿರುವ ಎಡಪಂಥೀಯ ಶಕ್ತಿಗಳ ಭವಿಷ್ಯದತ್ತ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಮಾತ್ರವಲ್ಲ ಕಮ್ಯುನಿಸಂ ಇಂದು ಕವಲುದಾರಿಯಲ್ಲಿ ಇದೆ ಎಂಬುದನ್ನು ಒತ್ತಿ ಹೇಳುತ್ತದೆ.
ಅಧಿಕಾರವಿಲ್ಲದೆಯೂ ಪಕ್ಷಭೇದವಿಲ್ಲದೆ ಪ್ರಜ್ಞಾವಂತರ ಮನಸ್ಸನ್ನು ಗೆದ್ದ ಅಪರೂಪದ ರಾಜಕಾರಣಿ ಸೀತಾರಾಮ ಯೆಚೂರಿ ಅವರು. ರಾಜಕೀಯ ಜೀವನದಲ್ಲಿ ತಾತ್ವಿಕ ನೆಲೆಯಿಲ್ಲದೆ, ಸಿದ್ಧಾಂತಗಳನ್ನು ಮೂಲೆಗುಂಪಾಗಿಸುವ, ಜನಪರ ಕಾಳಜಿಗೆ ಬದಲಾಗಿ ಅಧಿಕಾರವೇ ಗುರಿಯಾಗಿರುವ ಮತ್ತು ವೈಚಾರಿಕ ಹಾಗೂ ವಿಷಯಾಧಾರಿತ ಚರ್ಚೆಗೆ ಅವಕಾಶವಿಲ್ಲದೆ ಇರುವ ಇಂದಿನ ದಿನಗಳಲ್ಲಿ ಅವರ ಅಕಾಲಿಕ ನಿರ್ಗಮನ ಒಂದು ನಿರ್ವಾತವನ್ನು ಉಂಟುಮಾಡುತ್ತದೆ.