ಶಿಕ್ಷಕ ಪ್ರಶಸ್ತಿ: ಆಯ್ಕೆ ಮಾನದಂಡ ಬದಲಾಗಲಿ

Update: 2024-07-10 07:22 GMT

ಮಾನ್ಯರೇ,

ಮಕ್ಕಳು ಹಾಗೂ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಶಿಕ್ಷಕರಿಗೆ ಪ್ರತಿವರ್ಷ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ‘ಉತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಯು ಶಿಕ್ಷಕರ ಕಾರ್ಯದಕ್ಷತೆಯನ್ನು ಹೆಚ್ಚಿಸಬಹುದು. ಅಲ್ಲದೆ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಶಿಕ್ಷಕ ವೃತ್ತಿಗೆ ನೀಡಿದ ಕೊಡುಗೆಗಳನ್ನು ಗುರುತಿಸಲು ಪ್ರಶಸ್ತಿಯು ಉತ್ತಮ ಮಾರ್ಗವಾಗಿದೆ. ಶಿಕ್ಷಕರ ಪ್ರಯತ್ನಗಳು ಮತ್ತು ಸಾಧನೆಗಳನ್ನು ಮೌಲ್ಯೀಕರಿಸಿ, ಅವರ ಆತ್ಮವಿಶ್ವಾಸ ಹೆಚ್ಚಿಸಿ, ವೃತ್ತಿಪರ ಬೆಳವಣಿಗೆ ಮತ್ತು ಗುರುತಿಸುವಿಕೆಗೆ ಅವಕಾಶಗಳನ್ನು ಒದಗಿಸಿ ಬೋಧನೆಯಲ್ಲಿ ಶ್ರೇಷ್ಠತೆಗಾಗಿ ಶ್ರಮಿಸಲು ಪ್ರಶಸ್ತಿಗಳು ಶಿಕ್ಷಕರನ್ನು ಪ್ರೇರೇಪಿಸುತ್ತವೆ.

ನಮ್ಮ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು 2024ನೇ ಸಾಲಿನ ‘ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಜಿಗಳನ್ನು ಈಗಾಗಲೇ ಆಹ್ವಾನಿಸಿದೆ. ಅಗತ್ಯ ದಾಖಲೆಗಳ ಜೊತೆ ಅರ್ಜಿಗಳನ್ನು ಸಲ್ಲಿಕೆ ಮಾಡಲು 15 ಜುಲೈ 2024ರ ತನಕ ಅವಕಾಶ ಕಲ್ಪಿಸಲಾಗಿದೆ. ಅಂದರೆ ಶಿಕ್ಷಕರು ತಾವು ಪಡೆಯುವ ಪ್ರಶಸ್ತಿಗೆ ತಾವೇ ಅರ್ಜಿ ಸಲ್ಲಿಸಬೇಕಾಗಿದೆ! ಇದು ಬೇಸರದ ಸಂಗತಿ. ಈ ಪರಿಪಾಠ ತಪ್ಪಬೇಕು. ಸ್ವಾಭಿಮಾನಿಯಾಗಿರುವ ಶಿಕ್ಷಕ ತನಗೆ ಪ್ರಶಸ್ತಿ ಕೊಡಿ ಎಂದು ಕೇಳಲು ಮುಜುಗರ ಪಡಬಹುದು. ಶಿಕ್ಷಕ ತನ್ನ ವೃತ್ತಿ ಬದುಕಿನಲ್ಲಿ ರೂಢಿಸಿಕೊಂಡು ಬಂದ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕಾರ್ಯದಕ್ಷತೆಯನ್ನು ಶಿಕ್ಷಣ ಇಲಾಖೆಯೇ ಗುರುತಿಸಿ ಪ್ರಶಸ್ತಿ ನೀಡಿದರೆ ಉತ್ತಮ. ಅಲ್ಲದೆ ಎಷ್ಟೋ ಶಿಕ್ಷಕರು ಅರ್ಹತೆ ಇಲ್ಲದಿದ್ದರೂ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ, ಪ್ರಭಾವಿ ರಾಜಕಾರಣಿಗಳ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಪ್ರಶಸ್ತಿ ಪಡೆಯುವಂತಾಗುವುದು ದುರ್ದೈವದ ಸಂಗತಿ. ಹೀಗಾಗಿ ಶಿಕ್ಷಣ ಇಲಾಖೆಯು ಶಿಕ್ಷಕ ಪ್ರಶಸ್ತಿಯ ಆಯ್ಕೆಯ ಮಾನದಂಡವನ್ನು ಬದಲಿಸಲಿ.

-ಹರಳಹಳ್ಳಿಪುಟ್ಟರಾಜು, ಪಾಂಡವಪುರ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News