ಕೋಲಾರ: ಕುಕ್ಕುಟೋದ್ಯಮಕ್ಕೆ ಭಾರೀ ನಷ್ಟ

Update: 2024-05-04 05:25 GMT

ಕೋಲಾರ: ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಹೆಚ್ಚಳವಾಗುತ್ತಿದ್ದು, ಬಿರು ಬಿಸಿಲಿಗೆ ಕುಕ್ಕುಟೋದ್ಯಮ ತತ್ತರಿಸಿ ಹೋಗಿದೆ. ವಿಪರೀತ ತಾಪಮಾನದಿಂದ ಕೋಳಿ ಫಾರಂಗಳಲ್ಲಿ 20 ದಿನಗಳಿಂದ ಸಾವಿರಾರು ಕೋಳಿಗಳು ಮೃತಪಟ್ಟಿವೆ. ಇದರಿಂದ ಕುಕ್ಕುಟೋದ್ಯಮಗಳು ಹಾಗೂ ವ್ಯಾಪಾರಿಗಳಿಗೆ ಭಾರೀ ನಷ್ಟ ಉಂಟಾಗುತ್ತಿದೆ.

ಜಿಲ್ಲೆಯಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ದಾಖಲೆಯಾಗಿದೆ. ಮೇ 5ರವರೆಗೆ ಶಾಖದ ಅಲೆಯ ಮುನ್ನೆಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ನೀಡಿವೆ.

ಜಿಲ್ಲೆಯಲ್ಲಿ ನೂರಾರು ಕೋಳಿ ಫಾರಂಗಳಿವೆ. ಅತಿಯಾದ ಬಿಸಿಲಿನಿಂದ ಕೋಳಿಗಳು ಆಹಾರ ತಿನ್ನುವುದು ಕಡಿಮೆಯಾಗಿದೆ. ಕೋಲಾರ ತಾಲೂಕಿನ ಚೆಲುವನಹಳ್ಳಿ ಗ್ರಾಮದ ತಿಮ್ಮೇಗೌಡ ಎಂಬುವರ ಜಮೀನಿನಲ್ಲಿರುವ ಕೋಳಿ ಫಾರಂನಲ್ಲಿ ಸುಮಾರು 15 ದಿನಗಳಲ್ಲಿ ಸುಮಾರು 300ರಿಂದ 400 ಕೋಳಿಗಳು ಸತ್ತು ಹೋಗಿವೆ. ಬಂಗಾರಪೇಟೆ ತಾಲೂಕಿನ ಮುರುಗನ್ ಎಂಬವರ ಕೋಳಿ ಫಾರಂನಲ್ಲಿ ಎರಡು ಸಾವಿರಕ್ಕೂ ಅಧಿಕ ಕೋಳಿಗಳು ಮೃತಪಟ್ಟಿವೆ ಎನ್ನಲಾಗಿದೆ.

ವಿಧಾನ ಪರಿಷತ್ ಸದಸ್ಯ ಹಾಗೂ ಕುಕ್ಕುಟೋದ್ಯಮಿ ಇಂಚರ ಗೋವಿಂದರಾಜು ಅವರ ಕೋಳಿ ಫಾರಂನಲ್ಲೂ 20 ದಿನಗಳಿಂದ ಕೋಳಿಗಳು ಸಾಯುತ್ತಿವೆ. ‘ಗುರುವಾರ ಒಂದೇ ದಿನ 200ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಇವೆಲ್ಲಾ ಮೊಟ್ಟೆ ಇಡುವ ಹಂತಕ್ಕೆ ಬಂದಿದ್ದ ಕೋಳಿಗಳು. ಒಂದೊಂದು ಸರಿಸುಮಾರು ನಾಲ್ಕೈದು ಕೆ.ಜಿ ತೂಗುವ ತಾಯಿ ಕೋಳಿಗಳು. 20 ದಿನಗಳಿಂದ ಸುಮಾರು 2 ಸಾವಿರ ಕೋಳಿಗಳನ್ನು ಗುಂಡಿಗೆ ಹಾಕಿದ್ದೇವೆ ಎಂದು ಇಂಚರ ಗೋವಿಂದರಾಜು ತಿಳಿಸಿದ್ದಾರೆ.

‘ರಾಜ್ಯ ಸರಕಾರಕ್ಕೆ ಕಣ್ಣು ಕಿವಿ ಇಲ್ಲದಾಗಿದೆ. ಪಶುಪಾಲನಾ ಇಲಾಖೆ ಏನೂ ಮಾಡುತ್ತಿಲ್ಲ. ಬರಗಾಲದ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡುತ್ತಾರೆ’ ಎಂದರು.

ಕೋಳಿ ಸಾಕಣೆದಾರರು ಕೋಳಿ ಫಾರಂಗೆ ಹವಾನಿಯಂತ್ರಿತ ವ್ಯವಸ್ಥೆ, ಫ್ಯಾನ್ ಅಳವಡಿಕೆ ಮಾಡುತ್ತಿದ್ದಾರೆ. ಆಗಾಗ್ಗೆ ನೀರು ಸಿಂಪಡಿಸುತ್ತಾ ತಂಪು ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಮರಿಗಳು ಕುಡಿಯುವ ನೀರು ಬಿಸಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಬರಗಾಲದಿಂದಾಗಿ ರಾಜ್ಯದಲ್ಲಿ ಹತ್ತಾರು ಸಮಸ್ಯೆ ಗಳು ನಿರ್ಮಾಣವಾಗಿದೆ. ಜಾನುವಾರುಗಳಿಗೆ ಮೇವು ಇಲ್ಲವಾಗಿದೆ. ಕುಕ್ಕುಟೋದ್ಯಮ ನಷ್ಟದಲ್ಲಿದೆ. ಸರಕಾರ ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಕಾಳಜಿ ಇಲ್ಲವಾಗಿದೆ.

- ಇಂಚರ ಗೋವಿಂದರಾಜು, ವಿಧಾನ ಪರಿಷತ್ ಸದಸ್ಯ

2 ವಾರದಲ್ಲಿ 54 ಸಾವಿರ ರೂ. ನಷ್ಟ ಉಂಟಾಗಿದೆ. ಕೋಳಿ ಫಾರಂ ಶೆಡ್ ಮೇಲೆ ಸ್ಪ್ರಿಂಕ್ಲರ್ ಅಳವಡಿಸಿದ್ದೇವೆ. ಬಿಸಿ ಗಾಳಿಗೆ ಏನು ಮಾಡುವುದು? ಇದೇ ವಾತಾವರಣ ಮುಂದುವರಿದರೆ ನಮಗೆ ಕಷ್ಟ.

- ತಿಮ್ಮೇಗೌಡ, ಕೋಳಿ ಫಾರಂ ಮಾಲಕ, ಕೋಲಾರ

ಕೋಳಿ ಫಾರಂಗಳಿಗೆ ತೆರಳಿ ಪರಿಶೀಲಿಸಿದ್ದೇನೆ. ಜಿಲ್ಲೆಯಲ್ಲಿ ತಾಪಮಾನ ಹೆಚ್ಚಿರುವ ಕಾರಣ ತೊಂದರೆ ಉಂಟಾಗಿದೆ. ಕುಕ್ಕುಟೋದ್ಯಮಿಗಳೇ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕೋಳಿ ಫಾರಂಗಳಲ್ಲಿ ತಂಪು ವಾತಾವರಣ ನಿರ್ಮಿಸಬೇಕು.

- ಡಾ.ಜಿ.ಟಿ.ರಾಮಯ್ಯ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸಿ.ವಿ.ನಾಗರಾಜ್. ಕೋಲಾರ

contributor

Similar News