ಶಿಕ್ಷಕರ ವರ್ಗಾವಣೆ, ಪೋಷಕರು ಮತ್ತು ಎಸ್‌ಡಿಎಂಸಿ
✍️ ಮೊಯ್ದಿನ್ ಕುಟ್ಟಿ
ಸಂಚಾಲಕರು, ಕರ್ನಾಟಕ ರಾಜ್ಯ ಎಸ್‌ಡಿಎಂಸಿ
ಸಮನ್ವಯ ಕೇಂದ್ರ ವೇದಿಕೆ(ರಿ)
ಸರಕಾರಿ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಲ್ಲದ ರೀತಿಯಲ್ಲಿ ಶಾಲೆ ಶುರು ಆಗಿ ಸುಮಾರು ಎರಡು ತಿಂಗಳ ನಂತರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಾ ಇದೆ.
ಶಾಲೆಗಳಲ್ಲಿ ಮಕ್ಕಳ ದಾಖಲಾತಿ ನಡೆದು ಶಿಕ್ಷಕರು ಹಾಗೂ ಮಕ್ಕಳು ಹೊಂದಿ ಕೊಳ್ಳುವ ಸಮಯದಲ್ಲಿ ಶಿಕ್ಷಕರ ಬದಲಾವಣೆ ಎನ್ನುವುದು ಮಕ್ಕಳ ಪಾಲಿಗೆ ಅಷ್ಟೇನೂ ಒಳ್ಳೆಯ ಬೆಳವಣಿಗೆ ಖಂಡಿತಾ ಅಲ್ಲ.
ಅದಲ್ಲದೆ ವರ್ಗಾವಣೆಗೆ ಅರ್ಜಿ ಹಾಕಿ ಕಾಯುತ್ತಿದ್ದ ಶಿಕ್ಷಕರಿಂದ ಮಕ್ಕಳಿಗೆ ಈ ವರೆಗೆ ಸರಿಯಾದ ಶಿಕ್ಷಣ ದೊರಕುವ ಸಾಧ್ಯತೆ ಕೂಡ ಕಡಿಮೆ. ಅರ್ಜಿ ಕೊಟ್ಟ ದಿನದಿಂದ ಖಾಲಿ ಇರುವ ಶಾಲೆಗಳ ಹುಡುಕಾಟ, ತಮ್ಮ ಹೆಸರು ಫೈನಲ್ ಲಿಸ್ಟ್ ನಲ್ಲಿ ಬರಬಹುದೇ ಎನ್ನುವ ಚಿಂತೆ, ಬಾರದೆ ಇದ್ದರೆ ಯಾರ ಮುಖಾಂತರ ಶಿಫಾರಸು ನಡೆಸಿದರೆ ಸಿಗಬಹುದು ಎನ್ನುವ ಆಲೋಚನೆ, ಫೈನಲ್ ಲಿಸ್ಟ್ ನಲ್ಲಿ ಬಂದರೆ ಯಾವ ಶಾಲೆಗೆ ಹೋದರೆ ಹೆಚ್ಚುವರಿ ಆಗದೆ 5-6 ವರ್ಷ ನೌಕರಿ ಮಾಡಲು ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರ, ಹೋದ ಕೂಡಲೇ ಮುಖ್ಯೋಪಾಧ್ಯಾಯರ ಹೆಚ್ಚುವರಿ ಜವಾಬ್ದಾರಿ ಬರುವ ಸಾಧ್ಯತೆ ಇದೆಯೇ? ಅದನ್ನು ಬಳಸಿ ಕೊಳ್ಳಬಹುದೇ? ಅಥವಾ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯತೆ ಇದೆಯೇ? ಇದಕ್ಕೂ ಶಿಫಾರಸು ಮಾಡಲು ಯಾರ ಅನುಗ್ರಹ ಬೇಕು ? ಈ ರೀತಿಯ ಹಲವು ಚಿಂತೆ ಹಾಗೂ ಚಿಂತನೆಗಳಿಂದ ಈ ಶಿಕ್ಷಕರಿಗೆ ಪಾಠ ಮಾಡಲು ನೆಮ್ಮದಿಯಾದರೂ ಇದೆಯೇ?
ಇಂತಹ ವೈರುಧ್ಯಗಳು ತುಂಬಿರುವ ವರ್ಗಾವಣೆ ಲೆಕ್ಕಾಚಾರದಲ್ಲಿ ಮುಳುಗಿ ಹೋಗಿರುವ ಶಿಕ್ಷಕರ ಮಧ್ಯೆ ಮಕ್ಕಳಿಗೆ ಮೂಲಭೂತ ಶಿಕ್ಷಣವನ್ನು ದೊರಕಿಸಲು ಪ್ರಾಮುಖ್ಯತೆ ಕೊಡಬೇಕಾದ ಶಿಕ್ಷಣ ಇಲಾಖೆಯು ವರ್ಗಾವಣೆಯ ಬ್ಯುಸಿ ಶೆಡ್ಯೂಲ್ ನೊಂದಿಗೆ ಕಾರ್ಯ ನಿರತವಾಗಿದೆ(ಈ ಲೆಕ್ಕಾಚಾರ ಏನೂ ಮಾಡದೆ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿಯನ್ನು ಹೊಂದಿರುವ ಶಿಕ್ಷಕರನ್ನು ಹೊರತು ಪಡಿಸಿ).
ಶಿಕ್ಷಕರ ಲೆಕ್ಕಾಚಾರ ಒಂದು ಕಡೆ ಆದರೆ ಪೋಷಕರ ಹಾಗೂ ಎಸ್‌ಡಿಎಂಸಿಯವರ ಲೆಕ್ಕಾಚಾರ ಬೇರೊಂದು ರೀತಿಯಲ್ಲಿ ನಡೆಯುತ್ತಾ ಇರುತ್ತದೆ.
ನಮ್ಮೂರಿನ ಒಳ್ಳೆಯ ಶಿಕ್ಷಕ ಅಥವಾ ಶಿಕ್ಷಕಿ ಬೇರೆ ಶಾಲೆಗೆ ಹೋದರೆ ನಮ್ಮ ಮಕ್ಕಳಿಗೆ ಕಷ್ಟ ಅಗಬಹುದೇ? ಎನ್ನುವ ಪ್ರಶ್ನೆ ಹುಟ್ಟಿ ಕೊಳ್ಳುತ್ತದೆ
ಈ ‘ಒಳ್ಳೆಯ’ ಎನ್ನುವುದರಲ್ಲಿ ಮಕ್ಕಳ ಶಿಕ್ಷಣದ ಲೆಕ್ಕಾಚಾರ ಮಾಡುವವರು ತುಂಬಾ ಕಡಿಮೆ, ಈ ಒಳ್ಳೆಯ ಹೆಸರಿನಲ್ಲಿ ಗುರುತಿಸುವ ಹೆಚ್ಚಿನ ಶಿಕ್ಷಕರು ಒಳ್ಳೆಯ ವಾಗ್ಮಿಗಳು ಅಥವಾ ಒಳ್ಳೆಯ ಮಾತುಗಾರರು ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಇವರು ಯಾರೇ ಶಾಲೆಗೆ ಬಂದರೂ ಅವರೊಂದಿಗೆ ಅನ್ಯೋನ್ಯತೆಯನ್ನು ತೋರಿಸುತ್ತಾ ಭೌತಿಕವಾಗಿ ಶಾಲೆಗೆ ಬೇಕಾದ ಆವಶ್ಯಕತೆಗೆ ದಾನಿಗಳನ್ನು ಮನವೊಲಿಸುವುದರಲ್ಲಿ ಶಕ್ತರಾಗಿದ್ದು, ಶಾಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದು, ಅದರ ಯಶಸ್ಸಿನಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಎಲ್ಲರ ಮನದಲ್ಲಿ ಒಳ್ಳೆಯ ಶಿಕ್ಷಕ/ಶಿಕ್ಷಕಿ ಆಗಿರುತ್ತಾರೆ. ಇವರಿಗೆ ಶಾಲೆಯ ಹೊರಗೆ ಕೂಡ ಅಭಿಮಾನಿ ಬಳಗ ಹುಟ್ಟಿಕೊಂಡು ಎಲ್ಲಾ ವಿಷಯದಲ್ಲೂ ರಾಜಕೀಯ ಮಾಡುವಷ್ಟು ಬೆಳೆದಿರುತ್ತಾರೆ.
ಇವರಿಂದ ಹೆಚ್ಚಿನ ಶಾಲೆಯ ಮಕ್ಕಳಿಗೆ ಒಂದು ಪೈಸೆಯ ಪ್ರಯೋಜನ ಕೂಡ ದೊರೆಯುವುದಿಲ್ಲ. ಯಾಕೆಂದರೆ ಇವರು ಒಳ್ಳೆಯವರು ಆಗಿರುವ ಕಾರಣ ಶಾಲಾ ಅವಧಿಯಲ್ಲಿ ನಡೆಯುವ ಎಲ್ಲಾ ಶಾಲೆಗಳ ಕಾರ್ಯಕ್ರಮ, ಅಧಿಕಾರಿಗಳೊಂದಿಗೆ ಸುತ್ತಾಟ, ರೋಟರಿ, ಜೇಸಿಯಂತಹ ಸಂಘ ಸಂಸ್ಥೆಗಳ ಕಾರ್ಯಕ್ರಮ, ಸುತ್ತ ಮುತ್ತಲಿನ ಶಾಲೆಗಳ ಆಡಳಿತದಲ್ಲಿ ಕೈ ಆಡಿಸುವುದಕ್ಕೆ ಎಲ್ಲಾ ಈ ‘ಒಳ್ಳೆಯ’ ಶಿಕ್ಷಕ/ಶಿಕ್ಷಕಿ ಹೋಗುವ ಕಾರಣ ಮಕ್ಕಳಿಗೆ ಪಾಠ ಎನ್ನುವುದು ಮರೀಚಿಕೆ ಆಗಿ ಬಿಟ್ಟಿರುತ್ತದೆ.
ಈ ಹೆಚ್ಚಿನ ಸಂಖ್ಯೆಯ ಒಳ್ಳೆಯ ಶಿಕ್ಷಕರ ನಡುವೆ ಯಾವುದೇ ರೀತಿಯ ಜನರ ಕಣ್ಣಿಗೆ ಕಾಣದ ಪ್ರತಿಭೆಯುಳ್ಳ ಶಿಕ್ಷಕರನ್ನು ನಾವು ಮರೆಯುತ್ತಾ ಇದ್ದೇವೆ. ಇವರು ಶಾಲೆಗೆ ಸಮಯಕ್ಕೆ ಸರಿಯಾಗಿ ಬಂದು ತನ್ನ ಪಾಠವನ್ನು ಮಾಡುವುದಲ್ಲದೆ, ಈ ‘ಒಳ್ಳೆಯ’ ಶಿಕ್ಷಕರು ಮಾಡದೆ ಬಿಟ್ಟಿರುವ ವಿಷಯವನ್ನು ಕೂಡ ಮಕ್ಕಳಿಗೆ ಹೇಳಿ ಮಕ್ಕಳಿಗೆ ಸಿಗಬೇಕಾದ ಕನಿಷ್ಠ ಕಲಿಕೆಯನ್ನು ಕೊಡುವುದರಲ್ಲಿ ಮಗ್ನರಾಗಿರುತ್ತಾರೆ. ಆದರೆ ಇವರು ಯಾರಿಗೂ ಒಳ್ಳೆಯ ಶಿಕ್ಷಕರಾಗಿ ಕಾಣುವುದೇ ಇಲ್ಲ, ಯಾಕೆಂದರೆ ಇವರಿಗೆ ಶಾಲೆಗೆ ಯಾರಾದರೂ ಬಂದರೆ ಸಮಯ ಕೊಡಲು ಅಥವಾ ಅವರ ಮುಂದೆ ಒಳ್ಳೆಯ ಶಿಕ್ಷಕರೆಂಬ ಹೆಸರು ಪಡಕೊಳ್ಳುವ ಜಾಣ್ಮೆ ಇರುವುದಿಲ್ಲ, ಅವರು ಏನಿದ್ದರೂ ಮಕ್ಕಳ ಶಿಕ್ಷಣ ಹಾಗೂ ಮಕ್ಕಳ ಪ್ರಗತಿಯ ಬಗ್ಗೆ ಮಾತ್ರ ವ್ಯಾಕುಲರಾಗಿದ್ದು, ಇಂತಹವರು ವರ್ಗಾವಣೆಯಾಗಿ ಹೋದರೆ ಯಾರಿಗೂ ಕೂಡ ಗೊತ್ತಾಗುವುದೇ ಇಲ್ಲ ಹಾಗೂ ಇದರ ಬಗ್ಗೆ ಯಾರೂ ತಲೆಕೆಡಿಸಿ ಕೊಳ್ಳುವುದಿಲ್ಲ.
ಇದಕ್ಕಿಂತಲೂ ಹೆಚ್ಚಿನ ಸ್ವಾರಸ್ಯ ಇರುವುದು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಒಂದೇ ಶಾಲೆಯಲ್ಲಿ 10 ರಿಂದ 25 ವರ್ಷ ನೌಕರಿ ಮಾಡುತ್ತ ಇರುವವರು. ಇವರಿಗೆ ಯಾವುದೇ ನಿಯಮ ಬಾಧಕ ಆಗುವುದೇ ಇಲ್ಲ. ಇವರೆಲ್ಲಾ ಊರಿಗೆ ‘ಒಳ್ಳೆಯ’ ಶಿಕ್ಷಕರಾಗಿರುತ್ತಾರೆ. ಎಲ್ಲಾ ಸರಕಾರಿ ಕಾರ್ಯಕ್ರಮಗಳ ಸ್ಥಿರ ಸಾನಿಧ್ಯರಾಗಿದ್ದು, ಸರಕಾರದಿಂದ ಬರುವಂತಹ ಯಾವುದೇ ರೀತಿಯ ಸವಲತ್ತುಗಳು ಅವರ ಶಾಲೆಗೆ ಬರುವಂತೆ ಮಾಡಲು ಶಕ್ತರಾಗಿರುತ್ತಾರೆ. ರಾಜಕೀಯವಾಗಿ ಶಕ್ತರಿರುವ ಕಾರಣ ಆವರಿಗೆ ನಿಯಮಗಳು ಬಾಧಿಸುವುದೇ ಇಲ್ಲ, ಅಧಿಕಾರಿಗಳೊಂದಿಗೆ ಆತ್ಮೀಯ ಒಡನಾಟ ಇರುವುದಲ್ಲದೆ ಅವರ ಸುತ್ತಮುತ್ತಲಿನ ಕಾರ್ಯಕ್ರಮಗಳಿಗೆ ಅಧಿಕಾರಿಗಳ ಪರ್ಸನಲ್ ಡ್ರೈವರ್‌ಗಳಾಗಿ ಕೂಡ ಸೇವೆ ಸಲ್ಲಿಸುವ ಕಾರಣ ಎಲ್ಲರೂ ಮೌನರಾಗಿ ಇರಬೇಕಾಗುತ್ತದೆ. ಇದಲ್ಲದೆ ವಾರ್ಷಿಕವಾಗಿ ಸ್ವಯಂ ಅರ್ಜಿ ಸಲ್ಲಿಸಿ ಪಡಕೊಳ್ಳುವ ಪ್ರಶಸ್ತಿಗಳು ಕೂಡ ಇವರಿಗೆ ಅಥವಾ ಇವರಿಗೆ ಆಸಕ್ತಿ ಇರುವವರಿಗೇ ಸಲ್ಲುತ್ತಿರುವುದು ಇವರು ಎಷ್ಟು ಶಕ್ತರು ಎನ್ನುವುದನ್ನು ತೋರಿಸುತ್ತದೆ.
ಇಲ್ಲಿ ಎಸ್‌ಡಿಎಂಸಿಯವರು ಒಂದು ಶಾಲೆಯ ಶಿಕ್ಷಕರು ವರ್ಗಾವಣೆ ಪಡೆದು ಕೊಂಡರೆ ಆ ಶಿಕ್ಷಕರಿಂದ ನಮ್ಮ ಮಕ್ಕಳಿಗೆ ಏನು ಪ್ರಯೋಜನ ಆಗಿದೆ ಎಂದು ಆಲೋಚಿಸಬೇಕೇ ವಿನಃ, ಭೌತಿಕ ಬೆಳವಣಿಗೆಯಿಂದ ಖಂಡಿತ ಅಲ್ಲ.
ಮತ್ತೆ ಯಾವ ಶಿಕ್ಷಕರೂ ಕೂಡ ಅವರ ಅಗತ್ಯತೆಗೆ ಪೂರಕವಾಗಿ ಸ್ಪಂದಿಸುತ್ತಾರೆಯೇ ವಿನಃ ನಮ್ಮ ಮಕ್ಕಳಿಗೆ ಬೇಕಾಗಿ ಇರುವುದಿಲ್ಲ. ವರ್ಗಾವಣೆ ಎನ್ನುವುದು ಶಿಕ್ಷಕರ ಅನುಕೂಲಕ್ಕಾಗಿ ಇರುವ ಕಾರಣ ಶಾಲೆಯಿಂದ ಹೊರಗೆ ಹೋದ ಶಿಕ್ಷಕರ ಬಗ್ಗೆ ಚಿಂತಿಸದೆ, ಶಾಲೆಗೆ ಬರುವ ಶಿಕ್ಷಕರು ಮೇಲೆ ತಿಳಿಸಿದ ಒಳ್ಳೆಯ ಶಿಕ್ಷಕರು ಆಗದೆ ಕನಿಷ್ಠ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಇರುವಂತಹವರು ಬರಲಿ ಎಂದು ಆಶಿಸೋಣ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಹಗಲಿರುಳು ಸಮಯವನ್ನು ಕೊಡುತ್ತಿರುವ ಶಿಕ್ಷಕರನ್ನು ಗೌರವಿಸೋಣ.