ಮರೆಯಲಾಗದ ಸಂಗೀತ ಗಾರುಡಿಗ ಮುಹಮ್ಮದ್ ರಫಿ

Update: 2024-07-31 10:24 GMT

ಗಾಯನ ಲೋಕದ ಮಿನುಗು ತಾರೆ ಮುಹಮ್ಮದ್ ರಫಿಯವರಿಗೆ ಅವರೇ ಸರಿಸಾಟಿ. ಅವರ ಧ್ವನಿ ಮಾಧುರ್ಯದ ಅನುಕರಣೆ ಮಾಡಲು ಬಂದ ಅದೆಷ್ಟೋ ಹಾಡುಗಾರರು ಅಸಫಲರಾದರು. ಕಾರಣ ರಫಿಯವರ ಧ್ವನಿಯಲ್ಲಿ ದೇವದತ್ತವಾದ ಲಾಲಿತ್ಯದ ಚಂಚಲತೆ, ಸಾಹಿತ್ಯದ ಆಂತರ್ಯದ ಬದ್ಧತೆ, ಮಾಧುರ್ಯದ ಹೊಯ್ದಟ, ಭಾವನೆಗಳ ಆಳ ಇವುಗಳ ಸಂಗಮವಿತ್ತು.

ರಫಿಯವರು 24ನೇ ಡಿಸೆಂಬರ್ 1924ರಲ್ಲಿ ಅಮೃತಸರದ ಕೋಟ್ಲಾ ಸುಲ್ತಾನ್ ಸಿಂಹ ಎಂಬಲ್ಲಿ ಮಜಹಬಿ ಪರಿವಾರದವರಿಗೆ ಆರನೆಯ ಸಂತಾನವಾಗಿ ಜನಿಸಿದರು. ಕುಟುಂಬದಲ್ಲಿ ಯಾರೂ ಗಾಯಕರಿಲ್ಲದಿದ್ದರೂ ರಫಿಯವರು ಗಾಯಕರಾಗಲು ತುಂಬಾ ಸಾಹಸಪಟ್ಟರು. ಅವರು ಯಶಸ್ವಿ ಗಾಯಕರಾಗಲು ಅವರ ಹಿರಿಯ ಸಹೋದರ ಹಮೀದ್ ಪ್ರಮುಖ ಕಾರಣ.

ಕಿರಾಣಿ ಅಂಗಡಿಯನ್ನು ಹೊಂದಿದ್ದ ಅಣ್ಣ ಹಮೀದ್ ಬಳಿ ಅದೆಷ್ಟೋ ಮಂದಿ ಗಾಯಕರು ದಿನಸಿ ಖರೀದಿಸಲು ಬರುತ್ತಿದ್ದರು. ಎಂದಿನಂತೆ ಕಿರಾಣಿ ಅಂಗಡಿಗೆ ಬಂದಿದ್ದ ಗಾಯಕರೊಬ್ಬರು, ಮೂಲೆಯಲ್ಲಿ ಕುಳಿತು ಪಂಜಾಬಿ ಹಾಡನ್ನು ಮೆಲು ಧ್ವನಿಯಲ್ಲಿ ಹಾಡುತ್ತಿದ್ದ ರಫಿಯವರ ಧ್ವನಿಯನ್ನು ಕೇಳಿ ತನ್ನನ್ನೇ ಮರೆತರು. ಕ್ಷಣ ಕಾಲ ರಫಿಯ ಹಾಡನ್ನು ಕಿವಿ ಕೊಟ್ಟು ಕೇಳಿ ಅಣ್ಣ ಹಮೀದ್‌ಗೆ ಹೇಳಿದರಂತೆ, ‘‘ಅರೆ, ಈತನಿಗೆ ಅದ್ಭುತ ಧ್ವನಿ ಇದೆ. ಈ ಚಿಕ್ಕ ವಯಸ್ಸಿನಲ್ಲೇ ಎಷ್ಟು ಆಗಾಧವಾದ ಸುಮಧುರ ಕಂಠ! ಇದು ಭಗವಂತನ ಕಟಾಕ್ಷ. ಹಮೀದ್ ನಿಜ ಹೇಳುತ್ತೇನೆ ಈತ ದೊಡ್ಡವನಾಗಿ ಮಹತ್ ಸಾಧನೆಯನ್ನೇ ಮಾಡುತ್ತಾನೆ.’’

ಅಂಗಡಿಗೆ ಬರುತ್ತಿದ್ದ ಗಾಯಕರೆಲ್ಲರನ್ನೂ ಒಂದುಗೂಡಿಸಿ ಮನೆಯಲ್ಲಿ ಹಾಗೂ ಅವಕಾಶ ಸಿಕ್ಕಿದ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಹಮೀದ್‌ಗೆ ಬಹಳ ಆಸಕ್ತಿ ಇತ್ತು. ಈ ಕಾರ್ಯಕ್ರಮದಲ್ಲಿ ಬಾಲಕ ರಫಿ ಭಾಗವಹಿಸಿ ತನ್ನ ಎಳೆಯ ಧ್ವನಿಯಲ್ಲಿ ಹಾಡುತ್ತಿದ್ದರು.

ಜಲಂಧರ್‌ನಲ್ಲಿ ಹರಿವಲ್ಲಭರ ಹೆಸರಿನಲ್ಲಿ ‘ದೇವಿ ತಾಲಾಬ್’ ಉತ್ಸವ ನಡೆಯುತ್ತಿದ್ದ ಸಮಯ, ಘಟಾನುಘಟಿ ಗಾಯಕರ ಸಂಗಮವಾಗಿತ್ತು. ಅವರೆಲ್ಲಾ ಹಾಡಲೆಂದೇ ಬಂದವರು. ಪ್ರಸಿದ್ಧ ಗಾಯಕ ಶ್ರೀ ವಿಷ್ಣುದಿಗಂಬರ ಕಾರ್ಯಕ್ರಮ ನಿರ್ವಹಿಸುತ್ತಿದ್ದರು. ಅವರ ಕಣ್ಣಿಗೆ ಬಿದ್ದ ರಫಿಯವರಿಗೆ ಅವಕಾಶ ನೀಡಿದರು. ರಫಿಯವರ ಹಾಡನ್ನು ಆಸ್ವಾಧಿಸಿದ ದಿಗಂಬರರು ರಫಿಯನ್ನು ಆಲಂಗಿಸಿ ಆಶೀರ್ವಾದಿಸಿದರು. ರಫಿಯವರಿಗೆ ಎಲ್ಲೆ ಮೀರಿದ ಸಂತೋಷವಾಯಿತು.

ಪ್ಯಾರೆಲಾಲ್ ಸೂದ್ ಎನ್ನುವ ವ್ಯಕ್ತಿ ಲಾಹೋರಿನಲ್ಲಿ ಒಂದು ಸಂಗೀತ ಸಮಾರಂಭವನ್ನು ಆಯೋಜಿಸಿದ್ದರು. ಆಗ ಸಂಗೀತ ಲೋಕದಲ್ಲಿ ಪ್ರಚಂಡ ಜನಪ್ರಿಯತೆಯನ್ನು ಪಡೆದಿದ್ದ ಕುಂದನ್ ಲಾಲ್ ಸೈಗಲ್ ಬರುವುದಿತ್ತು. ಆಗ ಅವರ ಆಗಮನವು ವಿಳಂಬವಾದುದರಿಂದ ಆ ವೇದಿಕೆಗೆ ರಫಿಯವರ ಆಗಮನವಾಯಿತು.

ಮೊದಲೇ ತಡವಾದುದರಿಂದ ಪ್ರೇಕ್ಷಕರ ಗೌಜಿ-ಗಲಾಟೆಯನ್ನು ಭೇದಿಸಿ ರಫಿಯವರ ಹಾಡಿನ ಧ್ವನಿ ಪ್ರತಿಧ್ವನಿಸಿದವು. ಪ್ರೇಕ್ಷಕರನ್ನು ತನ್ನ ಹಾಡಿನಿಂದ ಮಂತ್ರ ಮುಗ್ಧರನ್ನಾಗಿ ಮಾಡಲು, ಆಗ ತಾನೇ ವೇದಿಕೆ ಏರಿದ ಸೈಗಲ್, ರಫಿಯನ್ನು ತಬ್ಬಿಗೊಂಡು ಆಶೀರ್ವಾದ ಗೈದರು.

ಕಂಠ ಮಾದುರ್ಯದ ಜೊತೆ ವಿವಿಧ ಕಲಾವಿದರ ಅಭಿನಯ ಶೈಲಿಗೆ ಹೊಂದುವಂತೆ, ಅವರ ಧ್ವನಿಗೆ ತಕ್ಕಂತೆ ಹಾಡುವ ವಿಶಿಷ್ಟ ಕಲೆ ಮುಹಮ್ಮದ್ ರಫಿಯವರಿಗೆ ಮಾತ್ರ ಇತ್ತು. ಶಮ್ಮಿ ಕಪೂರ್‌ಗಾಗಿ ‘ಯಾ ಹೂ.... ಚಾಯೆ’, ಭರತ್ ಭೂಷಣ್‌ಗಾಗಿ ‘ಓ ದುನಿಯಾಕೆ’, ದಿಲೀಪ್ ಕುಮಾರ್‌ಗಾಗಿ ‘ಮಧುಬನ್’, ದೇವಾನಂದ್‌ಗಾಗಿ ‘ಖೋಯಾ ಖೋಯಾ ಚಾಂದ್’ ಹಾಡಿದರು. ಹೀಗೆ ನಾಯಕ-ನಟರುಗಳ, ವಿಲನ್ ನಟರ, ಹಾಸ್ಯ ನಟರ ನಟನೆಗೆ ತಕ್ಕಂತೆ ಹಾಡಿದ ರಫಿಯವರು ನಟರುಗಳ ಧ್ವನಿಯಂತೆ ತನ್ನ ಅದ್ಭುತ ಧ್ವನಿಯನ್ನು ಉಪಯೋಗಿಸುತ್ತಿದ್ದರು.

ಸರಿ ಸುಮಾರು ಮೂವತ್ತ ನಾಲ್ಕು ಬಾರಿ ವಿಶ್ವ ಪರ್ಯಟನೆ ಮಾಡಿದ ರಫಿಯವರು ಮೂವತ್ತೆರಡು ಭಾಷೆಗಳಲ್ಲಿ ಲೀಲಾಜಾಲವಾದ ಹಾಡನ್ನು ಹಾಡಿದ್ದಾರೆ. ಸಿನೆಮಾ ಹಾಡುಗಳಲ್ಲದೆ ಭಕ್ತಿ ಗೀತೆ, ಗಝಲ್‌ಗಳನ್ನೂ ಹಾಡಿದ ರಫಿಯವರು ಕನ್ನಡದಲ್ಲೂ ‘ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೇ, ಈ ಲೋಕವೆಲ್ಲ ಘೋರ ಎಲ್ಲೆಲ್ಲೂ ಶೋಕವೇ’ ಎಂದು ‘ಒಂದೇ ಬಳ್ಳಿಯ ಹೂಗಳು’ ಚಿತ್ರಕ್ಕೆ ಹಾಡಿದ್ದಾರೆ.

ಯಾವುದೇ ಪ್ರಶಸ್ತಿಯಲ್ಲೂ ಆಸಕ್ತಿ ತೋರದ ರಫಿಯವರು ದೀನರಿಗೆ ಸಹಾಯ ಮಾಡುವುದರಲ್ಲಿ ‘ಬಲ ಕೈಯಲ್ಲಿ ನೀಡಿದ ದಾನ ಎಡ ಕೈಗೆ ಅರಿಯದಿರಲಿ’ ಎಂಬ ಮಾತಿನಂತೆ ನಡೆದುಕೊಂಡರು. ಆದರೂ ರಫಿಯವರ ಮರಣದ ನಂತರದಲ್ಲಿ ದಾನ ಪಡೆದವರ ಮಾತುಗಳು ಪ್ರತಿಧ್ವನಿಸಿದವು.

ಇಂದು ರಫಿಯವರು ಈ ಭೂಮಿಯ ಮೇಲೆ ಇಲ್ಲದಿದ್ದರೂ ಅವರ ದೇವದತ್ತವಾದ ಕಂಠಶ್ರೀ ಯು ಮೂಲೆ-ಮೂಲೆಗಳಲ್ಲಿ ಪ್ರತಿಧ್ವನಿಸುತ್ತಿವೆ. ಆ ಧ್ವನಿಯನ್ನು ಕೇಳಿದವರ ಮನದಲ್ಲಿ ಒಂದು ನಿಮಿಷವಾದರೂ ರಫಿಯ ಭಾವಚಿತ್ರ ಬಾರದೆ ಇರದು.

ಮಾಂತ್ರಿಕ ಧ್ವನಿಯ ಸರದಾರ ರಫಿಯವರ ಸ್ವರ ಸ್ತಬ್ದವಾಗಿ 31-07-2024ಕ್ಕೆ 44 ವರ್ಷಗಳು ಉರುಳಿದವು. ಸುಮಾರು 36,000ಕ್ಕಿಂತಲೂ ಅಧಿಕ ಹಾಡನ್ನು ಹಾಡಿದ ರಫಿಯೆಂಬ ಗಾಯನ ಲೋಕದ ತಾರೆ ದಿನಾಂಕ 31-07-1980ರಂದು ಮರೆಯಾಯಿತು.

► ಚಿತ್ರ: ಎಂ.ಪಿ. ಶಭಾ ಮರಿಯಮ್, ಬಂಟ್ವಾಳ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಂ.ಪಿ. ಬಷೀರ್ ಅಹ್ಮದ್

contributor

Similar News