ಮೈ ಕೊರೆವ ಚಳಿಗೆ ತರಕಾರಿ ಇಳುವರಿ ಕುಸಿತ
ಹೊಸಕೋಟೆ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಮಂಜಿನಿಂದ ಮೈಕೊರೆವ ಚಳಿಗೆ ಜನ ತತ್ತರಿಸುತ್ತಿರುವುದೂ ಒಂದೆಡೆಯಾದರೆ, ಬೆವರು ಸುರಿಸಿ ಬೆಳೆದ ಬೆಳೆಗಳ ಇಳುವರಿ ಕುಸಿತದಿಂದ ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ. ತಾಲೂಕಿನಾದ್ಯಂತ ತುಂತುರು ಮಳೆ ಸುರಿಯುವಂತೆ ಭಾಸವಾಗುವ ಹಿಮದಿಂದಾಗಿ ಮೈ ನಡುಗಿಸುವ ಚಳಿ ಆವರಿಸಿದೆ. ಆಗಸದಿಂದ ಭೂಮಿಯವರಿಗೂ ದಟ್ಟ ಮೋಡಗಳಂತೆ ಗೋಚರಿಸುತ್ತದೆ. ಸೂರ್ಯನ ದರ್ಶನವಾದರೂ ಚಳಿ ಪ್ರಮಾಣ ಕಡಿಮೆಯಾಗುತ್ತಿಲ್ಲ. ಬೆಳಗ್ಗೆ ಮನೆಯಿಂದ ಹೊರ ಹೋಗಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಕನಿಷ್ಟ ಉಷ್ಣಾಂಶವು ಇಲ್ಲದೇ ರೈತರು ಬೆಳೆದ ಬೆಳೆಗಳ ಇಳುವರಿ ಕಡಿಮೆಯಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ. ಎಲೆ ಮಾತ್ರವಲ್ಲ, ಗಿಡ ಸಮೇತ ಚಳಿಗೆ ಮುದುರಿಹೋಗುತ್ತಿವೆ. ರೇಷ್ಮೆ ಬೆಳೆಗೆ ಉಷ್ಣಾಂಶ ಕೊರತೆಯಿಂದ ರೋಗಕ್ಕೆ ತುತ್ತಾಗಿ ಗುಣಮಟ್ಟದ
ಗೂಡು ಪಡೆಯಲಾಗದೇ ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಈ ಬಾರಿ ಜಿಲ್ಲೆಯ ಬಹುತೇಕ ಪ್ರದೇಶಗಳು ಮಳೆಯಿಲ್ಲದೆ ಬರಗಾಲಕ್ಕೆ ತುತ್ತಾಗಿ, ಮಳೆಯಾಶ್ರಿತ ಬೆಳೆಗಳು ಸುರಿಯುತ್ತಿರುವ ಮಂಜಿನಿಂದ ಫಸಲು ಬರುವ ಮುನ್ನವೇ ಸೋರಗುತ್ತಿವೆ. ತರಕಾರಿ ಬೆಳೆಗಳು ಹಿಮದ ಚಳಿಗೆ ತಾಳಲಾರದೇ ಮುದುಡಿ ಹೋಗಿ ರೋಗ ಸೇರಿದಂತೆ ಕೀಟ ಬಾಧೆ ಆವರಿಸಿದೆ. ಎಷ್ಟೇ ಔಷಧಿಗಳನ್ನು ಸಿಂಪಡಿಸಿದರೂ ರೋಗ ಹತೋಟಿಗೆ ಬಾರದಂತಾಗಿದೆ.
ಟೋಮೆಟೊ, ಆಲೂಗಡ್ಡೆ, ಬದನೆಕಾಯಿ, ಹುರುಳಿಕಾಯಿ, ಕ್ಯಾರೆಟ್ ಮುಂತಾದ ತರಕಾರಿ, ಸೊಪ್ಪುಗಳನ್ನು ಬೆಳೆದ ರೈತರು ಸಕಾಲಕ್ಕೆ ಬೆಳವಣಿಗೆಯಾಗದೆ ತಬ್ಬಿಬ್ಬಾಗಿದ್ದಾರೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿಗಳು ರವಾನೆಯಾಗದ ಕಾರಣ ಬೆಲೆ ಉತ್ತಮವಾಗಿದ್ದರೂ, ಇಲ್ಲಿನ ರೈತರಿಗೆ ಇಳುವರಿ ಇಲ್ಲದಂತಾಗಿದೆ. ಇದೇ ವಾತಾವರಣ ಮುಂದುವರಿದರೆ ರೇಷ್ಮೆ ಹುಳು ಸರಿಯಾಗಿ ಗೂಡು ಕಟ್ಟುವುದಿಲ್ಲ ಎಂಬ ಅಭಿಪ್ರಾಯ ರೈತರಿಂದ ವ್ಯಕ್ತವಾಗುತ್ತಿದೆ.
ರೈತರು ಯಾವುದೇ ತರಕಾರಿ ಬೆಳೆಗಳನ್ನು ಬೆಳೆದರೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುವುದಿಲ್ಲ. ಉತ್ತಮ ಬೆಲೆಯಿದ್ದಾಗ ಫಸಲು ಚೆನ್ನಾಗಿ ಬರುವುದಿಲ್ಲ. ಚಳಿ ಪ್ರಮಾಣ ಹೆಚ್ಚಿರುವುದರಿಂದ ಇಳುವರಿ ಕುಸಿದಿದ್ದು,
ರೈತರು ಶ್ರಮ ವಹಿಸಿ ದುಡಿದರೂ ತಕ್ಕ ಪ್ರತಿಫಲ ಸಿಗದೇ ಸಂಕಷ್ಟ ಎದುರಿಸುವಂತಾಗಿದೆ. <ರಾಜಣ್ಣ, ಪ್ರಗತಿಪರ ರೈತ, ನೆಲವಾಗಿಲು
ಚಳಿಗಾಲದಲ್ಲಿ ಉಷ್ಣಾಂಶದ ಕೊರತೆಯಿಂದ ಎಲೆ ಮುದುರುರೋಗ, ಕೀಟ ಬಾಧೆ ಹೆಚ್ಚಾಗಿ ಕಂಡು ಬಂದು ಬೆಳವಣಿಗೆ ಕುಂಠಿತವಾಗುತ್ತದೆ. ಕೋಳಿ ಗೊಬ್ಬರ ಹಾಕುವ ಮೂಲಕ ಉಷ್ಣಾಂಶವನ್ನು ಹೆಚ್ಚಿಸಬಹುದು. ಸಕಾಲಕ್ಕೆ ಔಷಧ ಸಿಂಪಡಿಸಿದರೆ ರೋಗವನ್ನು ನಿಯಂತ್ರಿಸಬಹುದು.
► ರೇಖಾ,
ಸಹಾಯಕ ನಿರ್ದೇಶಕಿ
ತೋಟಗಾರಿಕೆ ಇಲಾಖೆ