ಒಟ್ಟು ಜೀವಮಾನದಲ್ಲಿ ಲೀಲಮ್ಮ ಪಡೆದುಕೊಂಡದ್ದೆಷ್ಟು, ಕಳೆದು ಕೊಂಡದ್ದೆಷ್ಟು?
ಹಿರಿಯ ನಟಿ ಲೀಲಾವತಿಯವರದ್ದು ಮೂರಾಬಟ್ಟೆಯ ಬದುಕಲ್ಲ. ಈಕೆ ಜಾಣೆ. ದಕ್ಷಿಣ ಕನ್ನಡದ ಈ ಹೆಣ್ಣು ಮಗಳು ಮಾಡಿಟ್ಟಿರುವ ಎಕರೆಗಟ್ಟಲೆ ಜಮೀನು ಇದಕ್ಕೆ ಸಾಕ್ಷಿ. ಮದರಾಸಿನಲ್ಲಿ, ಬೆಂಗಳೂರಿನಲ್ಲಿ, ನೆಲಮಂಗಲದಲ್ಲಿ, ಸೋಲದೇವನಹಳ್ಳಿಯಲ್ಲಿ ಮತ್ತು ಮೈಸೂರಿನಲ್ಲಿ... ಹೀಗೆ ಜಮೀನು, ಬಂಗಲೆಗಳ ಒಡೆತನವಿರುವ ಲೀಲಾವತಿಯವರು ತಮ್ಮ ಮಗನ ಭವಿಷ್ಯಕ್ಕಾಗಿ ಇಷ್ಟೆಲ್ಲವನ್ನೂ ಮಾಡಿಟ್ಟಿದ್ದಾರೆ. ಆದರೂ ಅವರದ್ದೊಂದೇ ಕೊರಗು. ಅದೆಂದರೆ : ತಮ್ಮ ಈ ಮಟ್ಟದ ಕಲಾಸೇವೆಯನ್ನು ಗುರುತಿಸಿ ಸರ್ಕಾರ ತಾವಾಗಿಯೇ ಅಂಗೈಯಗಲದ ಜಾಗವನ್ನು ಕೊಡಲಿಲ್ಲವಲ್ಲಾ ಎನ್ನುವ ಕೊರಗದು.
ಲೀಲಾವತಿಯವರಿಗೆ ಮೊದಲಿನಿಂದಲೂ ಸೀತಾಫಲ ಅಂದರೆ ತುಂಬಾ ಇಷ್ಟ. ಒಮ್ಮೆ ಮಗ ವಿನೋದರಾಜ್ ಜತೆ ಸೊಂಡೆಕೊಪ್ಪದ ಕಡೆ ಕಾರಿನಲ್ಲಿ ಹೋಗುತ್ತಿರುವಾಗ ನೂರಾರು ಸೀತಾಫಲದ ಗಿಡವಿರುವ ಒಂದು ಜಮೀನನ್ನು ಕಂಡರು. ಕಾರು ನಿಲ್ಲಿಸಿ ಮಗನಲ್ಲಿ ತಮ್ಮ ಬೇಡಿಕೆಯನ್ನು ಮುಂದಿಟ್ಟರು : 'ನನ್ ಗೆ ಈ ಜಾಗ ಬೇಕು. ನಾಳೆ ಬಂದು ಉಳಿದ ವಿವರಗಳನ್ನು ಕಲೆ ಹಾಕು. ರೇಟ್ ಫಿಕ್ಸ್ ಮಾಡಿಕೋ...' - ಅಂತ ಆರ್ಡರ್ ಮಾಡಿ ಬಿಟ್ಟರು. ವಿನೋದ್'ಗೆ ಆಶ್ಚರ್ಯ. ಈಗಾಗಲೇ ಎಕರೆಗಟ್ಟಲೆ ಜಮೀನಿದೆ. ಈಗ ಇದನ್ನು ಖರೀದಿಸಿ ಇಲ್ಲೂ ದುಡಿಮೆ ಮಾಡಿ ಶರೀರದ ಸ್ವಾಸ್ತ್ಯವನ್ನು ಯಾಕೆ ಹಾಳುಮಾಡಿಕೊಳ್ಳಬೇಕೆನ್ನುವುದು ವಿನೋದ್ ಲೆಕ್ಕಾಚಾರ. ಆದರೆ ಇದಕ್ಕೆ ಒಪ್ಪದ ಲೀಲಮ್ಮ ಹಠ ಹಿಡಿದು ಆ ಜಾಗವನ್ನು ಖರೀದಿಸಿದರು. ಅದುವೇ ಸೋಲದೇವನಹಳ್ಳಿಯ ಜಮೀನು! ಆಗ ಅದು ಏಳು ಪುಟ್ಟ ಪುಟ್ಟ ಗುಡ್ಡಗಳ ಜಮೀನಾಗಿತ್ತು. ಈಗ ಅದು ನಂದನವನ! ಎಂಥಾ ಪುಣ್ಯವಂತೆ ಈ ಲೀಲಮ್ಮ ಅಂದ್ರೆ ಅದೇ ಜಮೀನಿನಲ್ಲಿ ಚಿರನಿದ್ರೆಗೆ ಜಾರಿದ್ದಾರೆ. ಮಣ್ಣಲ್ಲಿ ಮಣ್ಣಾಗಿ ಮಣ್ಣಿನ ಮಗಳಾಗಿ ಬಿಟ್ಟಿದ್ದಾರೆ!
ಒಂದು ಸಾರಿ ನನ್ನ ಹತ್ತಿರ ಮಾತಾಡುತ್ತಾ ಲೀಲಮ್ಮ ಹೇಳಿದ್ದರು : 'ಚಿತ್ರೋದ್ಯಮ ಯಾವತ್ತು ನನ್ನ ಮಗನನ್ನು ಕಡೆಗಣಿಸುತ್ತದೋ ಆವತ್ತಿನಿಂದ ಆತ ಮಣ್ಣಿನಮಗನಾಗುತ್ತಾನೆ. ನಿಜವಾದ ಅರ್ಥದಲ್ಲಿ ರೈತನಾಗುತ್ತಾನೆ...' - ಯಾವ ಘಳಿಗೆಯಲ್ಲಿ ಈ ಮಾತನ್ನು ಹೇಳಿದರೋ ವಿನೋದರಾಜ್ ಸಾಕ್ಷಾತ್ ಮಣ್ಣಿನ ಮಗನೇ ಆಗಿಬಿಟ್ಟಿದ್ದಾನೆ! ಟ್ರಾಕ್ಟರ್ ತಗೊಂಡು ಜಮೀನಿನಲ್ಲಿ ಉತ್ತು ಬಿತ್ತು ಬಂದ ಫಸಲನ್ನು ಹಾಪ್ ಕಾಮ್ಸ್'ಗೆ ಸ್ವತಃ ಮಾರಾಟ ಮಾಡುವ ರೈತನೇ ಆಗಿಬಿಟ್ಟಿದ್ದಾನೆ!
ಎಲ್ಲರೂ ತಿಳಿದಿರುವ ಹಾಗೆ ಲೀಲಮ್ಮ ಬರೀ ಆಸ್ಪತ್ರೆ ಕಟ್ಟಿದ್ದು ಮಾತ್ರವಲ್ಲ, ಆ ಊರಿಗಾಗಿ ಬಸ್ಸಿನ ವ್ಯವಸ್ಥೆ ಮಾಡಿದ ಗಟ್ಟಿಗಿತ್ತಿ ಈಕೆ! ಸೊಂಡೇಕೊಪ್ಪ ದಾಟಿದ ಮೇಲೆ ಸಿಗುವುದೇ ಸೋಲದೇವನಹಳ್ಳಿ. ಅಲ್ಲಿಂದ ಮುಂದೆ ಶ್ರೀನಿವಾಸಪುರ. ಆ ಕಾಲದಲ್ಲಿ ಬಸ್ಸಿದ್ದದ್ದು ಸೊಂಡೇಕೊಪ್ಪದವರೆಗೆ ಮಾತ್ರ. ರೈತಾಪಿ ಜನ ತಮ್ಮ ಬೆಳೆಯನ್ನು ತಲೆ ಮೇಲೆ ಹೊತ್ತುಕೊಂಡು ನೆಲಮಂಗಲದ ತನಕ ನಡೆದೇ ಕ್ರಮಿಸಬೇಕಾಗಿತ್ತು. ಲೀಲಮ್ಮ ಸೋಲದೇವನಹಳ್ಳಿಯಲ್ಲಿ ಸೆಟ್ಲ್ ಆದದ್ದೇ ತಡ ಮೊದಲು ಮಾಡಿದ ಕೆಲಸವೆಂದರೆ BMTC ಕಚೇರಿಗೆ ಹೋಗಿ ಒಂದು ಅರ್ಜಿ ಹಾಕಿ ಧರಣಿ ಕೂತು ಬಿಟ್ಟಿದ್ದು! ಹಿರಿಯ ನಟಿಯೊಬ್ಬರ ಈ ಅವತಾರವನ್ನು ಕಂಡು ಬೆಚ್ಚಿ ಬಿದ್ದ ಅಧಿಕಾರಿಗಳು ವಾರವೊಂದರಲ್ಲೇ 'ಪರಿಸರ ವಾಹಿನಿ'ಯೊಂದನ್ನು ಸ್ಯಾಂಕ್ಷನ್ ಮಾಡಿ ನಿಟ್ಟುಸಿರು ಬಿಟ್ಟರು! ಅಲ್ಲಿನ ರೈತರು ಲೀಲಮ್ಮನ ಕೊನೆಗಾಲದ ತನಕ ಅವರಿಗೆ ಗೌರವ ಕೊಡುತ್ತಿದ್ದುದು ಅವರೊಬ್ಬ ಮಹಾನ್ ನಟಿ ಎನ್ನುವ ಕಾರಣಕ್ಕಲ್ಲ, ಬದಲಿಗೆ ತನಗೆ ಬಸ್ ಸರ್ವೀಸ್ ಕೊಡಿಸಿದ್ದಕ್ಕೆ!
ಶ್ವಾನವೆಂದರೆ ಲೀಲಮ್ಮನಿಗೆ ಪರಮ ಪ್ರೀತಿ. ಅದು ಸಾಕ್ಷಾತ್ ಶ್ರೀಕೃಷ್ಣನ ಅವತಾರವೆಂದೇ ನಂಬಿದ್ದರು ಅವರು! ಮದರಾಸಿನಲ್ಲಿರುವಾಗ ಇವರ ಬಳಿ ಒಂದು ಕರಿಯ ನಾಯಿಯಿತ್ತು. ಇದನ್ನು 'ಬ್ಲಾಕಿ' ಎಂದೇ ಕರೆಯುತ್ತಿದ್ದರು ಲೀಲಮ್ಮ. ಆದರೆ ಆ ನಾಯಿ ಕಾಣೆಯಾಯಿತು. ಗಾಬರಿ ಬಿದ್ದ ಲೀಲಮ್ಮ ಅಲ್ಲಿನ ಪತ್ರಿಕೆಗಳಲ್ಲಿ ಜಾಹೀರಾತು ಕೊಡಿಸಿ ಪ್ರಕಟಣೆ ಕೊಟ್ಟು ಬಿಟ್ಟರು. ಮಾರನೇ ದಿನವೇ ನಾಯಿ ಹಾಜರ್! ಅದನ್ನು ಮನೆಗೆ ತಂದು ಬಿಟ್ಟ ವ್ಯಕ್ತಿಗೆ ಎಷ್ಟು ಬಹುಮಾನ ಕೊಟ್ಟಿರಬಹುದು ಹೇಳಿ? ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಭರ್ತಿ ಒಂದು ಲಕ್ಷ ರೂಪಾಯಿ!
ಕೊನೆಯದಾಗಿ ಪ್ರಜ್ಞೆ ಕಳೆದು ಕೊಳ್ಳುವ ಮೊದಲೊಮ್ಮೆ ಲೀಲಮ್ಮ ನನ್ನ ಬಳಿ ಹೇಳಿದ ಮಾತನ್ನು ಮರೆಯುವಂತಿಲ್ಲ : 'ಕೆಲಸವಿಲ್ಲದೇ ನನ್ನ ಹಿಂದೆ ಮುಂದೆ ಸುತ್ತಿತ್ತಿರುವ ವಿನೋದನನ್ನು ಕರೆದು ನಾನು ಹೇಳಿದೆ : ಎಲ್ಲಾದ್ರೂ ಹೋಗಿ ಬದುಕಿಕೋ ಮಾರಾಯ. ಆದ್ರೆ ಎಲ್ಲಿಗೆ ಹೋಗ್ತಾನೆ? ಅವ್ನಿಗೆ ನನ್ನ ಚಿಂತೆ. ನನ್ನ ಎದೆ ನೋವಿನ ಚಿಂತೆ. ಟಿವಿ ಧಾರಾವಾಹಿಯೋ, ಸಿನಿಮಾನೋ ಏನಾದರೂ ಮಾಡು ಅಂತೇನೆ. ಆದ್ರೆ ವಿನೋದ್ ನನ್ನನ್ನು ಬಿಟ್ಟು ಹೋಗಲ್ಲ ಅಂತಾನೆ. ಇಲ್ಲೇ ಸ್ವರ್ಗ ಅಂತಾನೆ. ನೀನು ಮಾಡಿಟ್ಟದ್ದು ಇದೆಯಲ್ಲಾ ಸಾಕು ಬಿಡಮ್ಮಾ ಅಂತಾನೆ! ನಾನು ಏನು ಹೇಳಲಿ? ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳುವುದೆಂದರೆ ಅದು ಅವನ ಪಾಲಿಗೆ ಗಾದೆ ಮಾತು. ಆದರೆ ನಾನು ಅಕ್ಷರಶಃ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡೇ ಬೆಳೆದವಳು! ಇದು ಆತನಿಗೆ ಗೊತ್ತಿಲ್ಲ. ಆತನಿಗೂ ಈ ಪಾಡು ಬಾರದಿರಲಿ ಅಂತ ಇಷ್ಟೆಲ್ಲಾ ಕಷ್ಟ ಬಿದ್ದಿದ್ದೇನೆ. ಎಲ್ಲವೂ ಇದೆ, ಆದ್ರೆ ನಾನು ಹೋಗಿ ಬಿಟ್ರೆ ಆತನಿಗೆ ಎಲ್ಲವೂ ಇದ್ದೂ ಇಲ್ಲದಂತೆ...' - ಎಂದು ಹೇಳಿಕೊಂಡಿದ್ದರು ನನ್ನಲ್ಲಿ ಲೀಲಮ್ಮ. ಈಗ ಆ ಕಾಲ ಬಂದಿದೆ. ವಿನೋದರಾಜ್ ತನ್ನ ಮುಂದಿನ ಬದುಕನ್ನು ಹೇಗೆ ಕಟ್ಟಿ ಕೊಳ್ಳುತ್ತಾನೋ ಕಾದು ನೋಡಬೇಕಷ್ಟೇ...