ವೃತ್ತಿ ಶಿಕ್ಷಣದ ಆಯ್ಕೆ ಹೀಗಿರಲಿ

Update: 2024-07-08 08:17 GMT

ಇಂದಿನ ಪಿಯುಸಿ ಮಕ್ಕಳೊಂದಿಗೆ ಮುಂದೆ ಏನು ಓದಬೇಕೆಂದು ಕೇಳಿದರೆ ಯಾವುದೇ ಪದವಿ ಆದರೂ ಪರವಾಗಿಲ್ಲ. ಕಡಿಮೆ ಖರ್ಚು, ಕನಿಷ್ಠ ಅವಧಿಯಲ್ಲಿ ಪದವಿ ಮುಗಿದು ಆದಷ್ಟು ಬೇಗನೆ ಕೈತುಂಬಾ ಸಂಬಳ ಪಡೆಯುವಂತಿರಬೇಕು ಎನ್ನುವವರೇ ಜಾಸ್ತಿ!! ಅದಕ್ಕೆ ಪೂರಕವಾಗಿಯೇ ಇಂದು ವೃತ್ತಿ ಶಿಕ್ಷಣ ಎಂಬ ಸಂತೆಯಲ್ಲಿ ತರಾವರಿ ಕೋರ್ಸ್‌ಗಳೂ ಬಂದಿವೆ. ಆಸಕ್ತಿಕರ ವಿಷಯವೆಂದರೆ ಪ್ರತಿವರ್ಷ ಕೇವಲ 25 ಪ್ರತಿಶತ ವಿದ್ಯಾರ್ಥಿಗಳು ಮಾತ್ರ ತಮ್ಮ ಆಸಕ್ತಿಯ ಕೋರ್ಸ್‌ಗಳನ್ನು ತೆಗೆದುಕೊಳ್ಳುತ್ತಾರಷ್ಟೇ ಹೊರತು ಉಳಿದ 75 ಪ್ರತಿಶತ ವಿದ್ಯಾರ್ಥಿಗಳು ಬೇರೆಯವರು ಸೂಚಿಸಿದ ಕೋರ್ಸ್, ಕಡಿಮೆ ಮಾರ್ಕ್ ನಿಂದಾಗಿ ದೊರಕಿದ ಕೋರ್ಸ್ ಅಥವಾ ಎಲ್ಲೋ ಕೇಳಿದ ಯಾರೋ ಹೇಳಿದ ಕೋರ್ಸ್ ಗಳನ್ನು ಆರಿಸಿಕೊಳ್ಳುವವರೇ ಆಗಿರುತ್ತಾರೆ. ಅದರಲ್ಲೂ ಬೇರೆ ಯಾರೋ ಒಂದು ವೃತ್ತಿಶಿಕ್ಷಣ ಮಾಡಿ ಅಧಿಕ ಸಂಬಳ ಪಡೆಯುತ್ತಿರುವುದನ್ನು ನೋಡಿ ತಾನೂ ಅಷ್ಟು ಸಂಬಳ ಪಡೆಯಬೇಕೆಂದು ಅದೇ ಕೋರ್ಸ್/ವೃತ್ತಿ ಶಿಕ್ಷಣವನ್ನು ಆರಿಸುವವರದ್ದೇ ಅಧಿಕ ಪಾಲು!!! ಅಂಥವರಲ್ಲಿ ಪದವಿ ಮುಗಿಸಲು ಸಾಲ ಮಾಡಿ, ಸಾಕಷ್ಟು ಹಣ ಖರ್ಚು ಮಾಡಿ ಕೊನೆಯಲ್ಲಿ ಸರಿಯಾದ ಉದ್ಯೋಗ ಸಿಗದೆ ಕಷ್ಟಪಡುತ್ತಿರುವವರೂ ಸಾಕಷ್ಟಿದ್ದಾರೆ!!

ಹಾಗಾಗಿ ಗಮನಿಸಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೂಕ್ತ ಕೋರ್ಸ್‌ನ ಆಯ್ಕೆಯಲ್ಲೂ ಅಷ್ಟೇ ಜಾಗರೂಕರಾಗಿರಬೇಕು. ವೃತ್ತಿ ಶಿಕ್ಷಣದ ಆಯ್ಕೆ ಮತ್ತು ಸಂಬಳ/ಗಳಿಕೆ ಎಂದರೆ ಇನ್ವೆಸ್ಟ್‌ಮೆಂಟ್ (ಹೂಡಿಕೆ) ಮತ್ತು ರಿಟರ್ನ್ಸ್ (ಆದಾಯ) ಇದ್ದಂತೆ. ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದ ಹಣ ಕನಿಷ್ಠ ಐದು ವರ್ಷಗಳಲ್ಲಿ ದ್ವಿಗುಣವಾದಾಗ ಮಾತ್ರ ಉತ್ತಮ ಲಾಭ ಎನ್ನಬಹುದು. (ಹಿಂದಿನ ಎನ್‌ಎಸ್‌ಸಿ ಪಾಲಿಸಿಯಂತೆ) ಇದೇ ಸೂತ್ರವನ್ನು ನಾವು ವೃತ್ತಿ ಶಿಕ್ಷಣದ ಆಯ್ಕೆಯಲ್ಲೂ ಅನುಸರಿಸಬೇಕು. ಹೇಗೆಂದರೆ .. ಕೋರ್ಸ್ ಮುಗಿಸಲು ಮಾಡಿದ ಖರ್ಚು ಮತ್ತು ಗಳಿಸಬೇಕಾದ ಆದಾಯ ಇವೆರಡನ್ನು ಗಮನದಲ್ಲಿಟ್ಟುಕೊಂಡು ಇಎಂಐ (ಸಮಾನ ಮಾಸಿಕ ಕಂತು) ರೀತಿಯಲ್ಲಿ ಗಮನಿಸಿಕೊಳ್ಳೋಣ.

ಆರಿಸಿಕೊಂಡ ಕೋರ್ಸ್‌ನ ಅವಧಿ ಸುಮಾರು 4, 5 ಅಥವಾ 5.5 ವರ್ಷಗಳಾಗಿರಬಹುದು ಹಾಗೂ ಶಿಕ್ಷಣಕ್ಕಾಗಿ ಮಾಡಿದ ಒಟ್ಟು ಖರ್ಚು ಅಂದರೆ ಶಿಕ್ಷಣ ಶುಲ್ಕ, ಕಾಲೇಜು ಫೀ, ಪರೀಕ್ಷೆ ಫೀ ಇತರ ಖರ್ಚು ಮತ್ತು ಅವುಗಳ ಮೇಲಿನ ಬಡ್ಡಿ ಸಹಿತವಾಗಿ ಸುಮಾರು ರೂ.15,00,000/- (ಇದನ್ನು ಇನ್ವೆಸ್ಟ್‌ಮೆಂಟ್ ಎನ್ನಬಹುದು) ಎಂದುಕೊಳ್ಳಿ. ಇನ್ನು ಇನ್ವೆಸ್ಟ್‌ಮೆಂಟ್ ಮಾಡಿದ ಅಷ್ಟೂ ಹಣವನ್ನು ಮುಂದಿನ 5 ವರ್ಷಗಳಲ್ಲಿ ಹಿಂಪಡೆಯಬೇಕೆಂದು ಕನಿಷ್ಠ ಶೇ. 12 ಬಡ್ಡಿದರದಂತೆ ಲೆಕ್ಕಹಾಕಿದಾಗ ಪಡೆಯಬೇಕಾದ ತಿಂಗಳ ಆದಾಯ/ಸಂಬಳದ ಮೊತ್ತ ರೂ. 33,367. ಅಂದರೆ ಮುಂದಿನ ಐದು ವರ್ಷಗಳಲ್ಲಿ ತಿಂಗಳಿಗೆ ಸರಾಸರಿ ಮೇಲೆ ಹೇಳಿದಷ್ಟು ಗಳಿಸಿದಾಗ/ಸಂಬಳ ಪಡೆದಾಗ ಮಾಡಿದ ಅಷ್ಟೂ ಖರ್ಚು ವಾಪಸ್ ಬರುತ್ತದೆ ಅಷ್ಟೇ!!

ಇನ್ನು ಮಾಡಿದ ಖರ್ಚು+ ಲಾಭಾಂಶದ ಕುರಿತು ಯೋಚಿಸೋಣ. ಯಾವುದೇ ಮೊತ್ತದ ಹಣದ ಮೌಲ್ಯ ಸರಾಸರಿ ಐದು ವರ್ಷಗಳಲ್ಲಿ ದ್ವಿಗುಣವಾಗುತ್ತದೆ. ಅಂದರೆ ನಮಗೆ ದೊರಕಬೇಕಾದ ಒಟ್ಟು ಮೊತ್ತದ ಖರ್ಚು ಮತ್ತು ಲಾಭಾಂಶ ಸಹಿತವಾಗಿ ಬರಬೇಕಾದ ಮೊತ್ತ ರೂ.30,00,000 (ಇದನ್ನು ರಿಟರ್ನ್ಸ್ ಎನ್ನಬಹುದು). ಹಾಗಿದ್ದಾಗ ಪದವಿ ಮುಗಿಸಿ ಮುಂದಿನ ಐದು ವರ್ಷಗಳಲ್ಲಿ 12 ಪ್ರತಿಶತ ಬಡ್ಡಿದರದಂತೆ ಪಡೆಯಬೇಕಾದ ತಿಂಗಳ ಕನಿಷ್ಠ ಆದಾಯ ರೂ. 66,733.

ಇಲ್ಲಿ ಉದಾಹರಿಸಿರುವುದು ಒಂದು ಕನಿಷ್ಠ ಶುಲ್ಕದ ವೃತ್ತಿಶಿಕ್ಷಣ ಅಷ್ಟೇ. ಇದನ್ನು ಮೇಲಿನ ಉದಾಹರಣೆಗೆ ಸಮೀಕರಿಸಿ ಇನ್ನಷ್ಟು ವಿಶ್ಲೇಷಿಸಿ ನೋಡಿದಾಗ ನೀವು ಕೋರ್ಸ್ ಮುಗಿಸಿ ತಿಂಗಳಿಗೆ ರೂ. 35,000 ವೇತನ ಪಡೆಯುವವರಾದರೆ ನಿಮ್ಮ 15 ಲಕ್ಷ ಹೂಡಿಕೆಗೆ ತಿಂಗಳಿಗೆ ಪಡೆಯುತ್ತಿರುವ ಲಾಭ ಕೇವಲ ರೂ.1,633. ಇದನ್ನೇ ಮನೆ ಬಾಡಿಗೆ, ಊಟ, ತಿಂಡಿ, ಪೆಟ್ರೋಲ್, ಮೊಬೈಲ್ ರೀಚಾರ್ಜ್, ಬಟ್ಟೆ ಬರೆ ಇತ್ಯಾದಿಗಳಿಗೆ ಸರಿದೂಗಿಸಬೇಕು. (ಉಳಿದ ರೂ. ರೂ.33,367 ಕೋರ್ಸ್ ಓದಿದ ಖರ್ಚಿಗೇ ಕಳೆದು ಹೋಯಿತು ನೋಡಿ. ಹಾಗಾಗಿ ಅದನ್ನು ವಾಪಸ್ ಕೇಳುವ ಹಾಗಿಲ್ಲ!!) ಹೀಗಿರುವಾಗ ಒಟ್ಟಾರೆ ಈ ಲಾಭಾಂಶದಲ್ಲಿ ಜೀವನ ಸಾಗಿಸಲು ಸಾಧ್ಯವೇ? ಯೋಚಿಸಿ!!

ಇಲ್ಲಿ ಹೇಳಿರುವುದು ಐದು ವರ್ಷಗಳ ಅವಧಿಯ ಕಾಲಮಾನ ಮಾತ್ರ. ನನಗೆ ಕೋರ್ಸ್ ಮುಗಿಯುವಾಗ 25 ವರ್ಷವಾದರೆ ಮಾಡಿದ ಖರ್ಚು ಹಿಂಪಡೆಯುವಾಗ 30 ವರ್ಷಗಳಾಗುತ್ತದೆ. ಅಲ್ಲಿಂದ ಕನಿಷ್ಠ 20 ವರ್ಷಗಳವರೆಗೆ ಲಾಭಾಂಶ ಪಡೆಯುತ್ತಿರಬಹುದು ಅಲ್ಲವೇ? ಎಂದು ಕೆಲವರು ಅಂದುಕೊಳ್ಳಬಹುದು. ಸೂಕ್ಷ್ಮವಾಗಿ ಯೋಚಿಸಿ 30ರ ನಂತರ ಮದುವೆ, ಮನೆ, ಮಕ್ಕಳು, ಅವರ ಖರ್ಚು, ಕಾಡುವ ಅನಾರೋಗ್ಯಕ್ಕಾಗಿ ಔಷಧಿ ಖರ್ಚು ಇವುಗಳನ್ನೆಲ್ಲ ಇಂದಿನ ಬೆಲೆಯೇರಿಕೆಯ ನಡುವೆ ಸರಿದೂಗಿಸಬೇಕಾಗಿದೆ. ಅದಕ್ಕಾಗಿಯೇ ನಾವು ಇಲ್ಲಿ ತೆಗೆದುಕೊಂಡ, ಮಾಡಿದ ಖರ್ಚು ತೀರಿಸುವ ಗರಿಷ್ಠ ಸಮಯ 5 ವರ್ಷಗಳು. ಬೇಗನೇ ಮುಗಿಸಿದಷ್ಟೂ ಒಳ್ಳೆಯದು. ಅಲ್ಲಿಂದ ಮೇಲೆ ಬಿಲ್ಕುಲ್ ಬೇಡ!!

ಇವಿಷ್ಟನ್ನು ಓದಿದಾಗ ನೀವು ಅಂದುಕೊಳ್ಳುತ್ತಿರಬಹುದು.. ಅತೀ ಹೆಚ್ಚು ಸಂಬಳ ಪಡೆದಾಗ ಮಾತ್ರ ಉತ್ತಮ ಭವಿಷ್ಯವೇ?? ಹಾಗಿದ್ದರೆ ಮಾತ್ರ ಖರ್ಚಿಗೆ ಸರಿಯಾಗಿ ಲಾಭಾಂಶ ಪಡೆಯಬಹುದೆ ಎಂದು!! ಹಾಗೆಂದುಕೊಳ್ಳಬೇಡಿ. ವೃತ್ತಿಶಿಕ್ಷಣದ ಮುಖ್ಯ ಧ್ಯೇಯ ಸಶಕ್ತ ವ್ಯಕ್ತಿ. ಯಾರದೇ ಹಂಗಿಲ್ಲದೆ ಸ್ವಂತ ಪರಿಶ್ರಮದಿಂದ ಜೀವನ ರೂಪಿಸಿಕೊಳ್ಳುವುದು. ಹಾಗಾಗಿ ಕಡಿಮೆ ಸಂಬಳದ ವ್ಯಕ್ತಿಯದ್ದು ನಷ್ಟದ ಜೀವನ ಎಂದುಕೊಳ್ಳಬಾರದು. ಈ ಮೊದಲಿನ ಉದಾರಣೆಯನ್ನು ಗಮನದಲ್ಲಿಟ್ಟುಕೊಂಡು ಸಂಬಳ ಕೇವಲ ರೂ. 35,000ವಾದರೂ ಇತರ ಸಮಯವನ್ನು ಬಳಸಿಕೊಂಡು ಒಟ್ಟಾರೆ ಆದಾಯವನ್ನು ರೂ. 70,000ಕ್ಕೂ ಹೆಚ್ಚಿಸಲು ಅವಕಾಶವಿದೆ. ವೈದ್ಯಕೀಯ ಕಾಲೇಜಿನ ವೈದ್ಯ ಶಿಕ್ಷಕರು ಪ್ರೈವೇಟ್ ಪ್ರಾಕ್ಟೀಸ್ ಮಾಡಿಕೊಂಡಂತೆ, ಇಂಜಿನಿಯರಿಂಗ್ ಪದವೀಧರರು ಕಂಪೆನಿ ಹೊರತುಪಡಿಸಿ ಕನ್ಸಲ್ಟನ್ಸಿ ಸರ್ವಿಸಸ್ ಕೊಡುವಂತೆ ಏನಾದರೊಂದು ಉಪಉದ್ಯೋಗ ಮಾಡಿಕೊಂಡಾಗ ವೃತ್ತಿಶಿಕ್ಷಣದಲ್ಲಿ ಅತೀ ಹೆಚ್ಚು ಲಾಭಾಂಶ ಸಾಧ್ಯ. (ಅದರಲ್ಲೂ ಇಂದಿನ ಸಂಪನ್ಮೂಲಪೂರ್ಣ ಸಮಾಜದಲ್ಲಿ ಆನ್‌ಲೈನ್ ಮೂಲಕವೂ ಗಳಿಕೆ ಸಾಧ್ಯ.) ಈ ರೀತಿಗಾಗಿ ನೀವು ಆರಿಸುವ ವೃತ್ತಿ ಶಿಕ್ಷಣ ಉಪಉದ್ಯೋಗದ ಮೂಲಕ ಗಳಿಕೆ ಮಾಡುವಂತಿರಲಿ. ಇದರಿಂದ ಮಾಡಿದ ಖರ್ಚನ್ನು ಸರಿದೂಗಿಸಬಹುದು. ಬಹುಶಃ ನಿಮಗೀಗ ತಿಳಿದಿರಬಹುದು ತಜ್ಞ ವೈದ್ಯರ/ ಹಿರಿಯ ಕನ್ಸಲ್ಟೆಂಟ್‌ಗಳ ಶುಲ್ಕ ಯಾಕೆ ಜಾಸ್ತಿಯಿರುತ್ತದೆಂದು!!

ಕೊನೆಯದಾಗಿ. ಯಾವುದೇ ವೃತ್ತಿಶಿಕ್ಷಣ ಕೀಳಲ್ಲ. ಅವುಗಳ ಬಲ - ದೌರ್ಬಲ್ಯಗಳನ್ನು ಅರಿತು ನಾವು ಕೆಲಸ ಮಾಡಬೇಕು. ನನ್ನ ಗುರುಗಳಾದ ಡಾ. ಮುರಳೀಕೃಷ್ಣ ಇರ್ವತ್ರಾಯರು ಒಂದು ಬಾರಿ ಹೇಳಿದ್ದರು. ಹೊಸದಾಗಿ ಚಪ್ಪಲಿ ಉದ್ಯಮ ಆರಂಭಿಸಿದ ಕಂಪೆನಿಯ ಮ್ಯಾನೇಜರ್ ಒಬ್ಬ ಚಪ್ಪಲಿ ಮಾರಾಟ ಮಾಡಲು ಒಂದು ಹಳ್ಳಿಗೆ ಹೋಗಿ ಬಂದು ಹೇಳಿದನಂತೆ ‘‘ನಮ್ಮ ಒಂದು ಚಪ್ಪಲಿಯೂ ಮಾರಾಟ ಮಾಡಲು ಆ ಹಳ್ಳಿಯಲ್ಲಿ ಸಾಧ್ಯವಿಲ್ಲ. ಯಾಕಂದ್ರೆ ಅಲ್ಲಿ ಯಾರೂ ಚಪ್ಪಲಿಯೇ ಧರಿಸಲ್ಲ!’’. ಆದರೆ ಇನ್ನೊಬ್ಬ ಮ್ಯಾನೇಜರ್ ಬಂದು ಹೇಳಿದನಂತೆ ‘‘ನಮ್ಮ ಎಲ್ಲಾ ಚಪ್ಪಲಿ ಅಲ್ಲಿ ಮಾರಾಟ ಮಾಡಬಹುದು. ಯಾಕಂದ್ರೆ ಅಲ್ಲಿ ಯಾರೂ ಚಪ್ಪಲಿಯೇ ಧರಿಸಲ್ಲ!!’’ ಅಷ್ಟೇ ಅದಕ್ಕೆ ಮುಖ್ಯವಾಗಿ ಬೇಕಾದದ್ದು ಸಾಧಿಸುವ ಛಲ ಹಾಗೂ ಆಸಕ್ತಿ ಯಾವಾಗಲೂ ಒಂದು ವಿಷಯ ಗಮನದಲ್ಲಿ ಇರಲಿ... Sky is the limit!!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ.ಪುನೀತ್ ರಾಘವೇಂದ್ರ ಕುಂಟುಕಾಡು

ಪ್ರಾಂಶುಪಾಲರು (ಪ್ರಭಾರ)

ಯೆನೆಪೊಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರು

Similar News