ಕಳೆದ ಏಳು ದಶಕಗಳಿಂದ ‘ಕಲ್ಯಾಣ ಕರ್ನಾಟಕ’ಕ್ಕೆ ಸಿಕ್ಕಿದ್ದೇನು?

ಈಗಿನ ಸರಕಾರದಲ್ಲಿ ರಾಜ್ಯಪಾಲರು 250 ಕೋಟಿ ರೂ. ಅನುದಾನವನ್ನು ತಮ್ಮ ವಿವೇಚನೆಗೆ ಪಡೆದುಕೊಂಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ. ಈ ಭಾಗದಲ್ಲಿ ಇರುವುದೇ 5 ವಿಶ್ವವಿದ್ಯಾನಿಲಯಗಳು. ಅವುಗಳನ್ನು ಅಭಿವೃದ್ಧಿಪಡಿಸಲು ಅಷ್ಟೊಂದು ಅನುದಾನ ಅವಶ್ಯಕತೆಯಿಲ್ಲ, ಆದರೂ ವಿವಿಗಳ ಅಭಿವೃದ್ಧಿ ಎಂದು ಅನುದಾನ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಪ್ರದೇಶಕ್ಕೆ ಸಂಬಂಧವೇ ಇಲ್ಲದ ಯೋಜನಾ ಇಲಾಖೆಯ ಸಚಿವರಿಗೆ 150 ಕೋಟಿ ರೂ. ವಿವೇಚನಾ ಅನುದಾನ ನೀಡಲಾಗಿದೆ. ಅವರು ಆ ಅನುದಾನವನ್ನು ಈ ಪ್ರದೇಶದ ಅಭಿವೃದ್ಧಿಗೆ ಬಳಸಬೇಕು. ಒಮ್ಮೆಯೂ ಈ ಭಾಗಕ್ಕೆ ಭೇಟಿ ನೀಡದ ಯೋಜನಾ ಸಚಿವರು ತಮ್ಮ ವಿವೇಚನಾ ಅನುದಾನವನ್ನು ಯಾವ ಪುರುಷಾರ್ಥಕ್ಕೆ ಬಳಸುತ್ತಾರೆ ಎನ್ನುವುದೇ ಪ್ರಶ್ನಾರ್ಹವಾಗಿದೆ.

Update: 2024-09-17 05:48 GMT

ಕಲ್ಯಾಣ ಕರ್ನಾಟಕ ಪ್ರದೇಶ ಮೂಲತಃ ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟ ಪ್ರದೇಶ. ಈ ಪ್ರದೇಶವು 1947 ಆಗಸ್ಟ್ 15ರಂದು ಸ್ವಾತಂತ್ರ್ಯಗೊಳ್ಳಲಿಲ್ಲ, ಬದಲಾಗಿ 1948 ಸೆಪ್ಟಂಬರ್ 17ರಂದು ಭಾರತ ಒಕ್ಕೂಟದಲ್ಲಿ ವಿಲೀನಗೊಂಡಿದೆ. ರಾಜಶಾಹಿಯಿಂದ ಪ್ರಜಾಶಾಹಿಯ ಕಡೆಗೆ ಬದಲಾವಣೆಯಾದ ದಿನ. ಪ್ರತೀ ವರ್ಷ ಈ ಪ್ರದೇಶದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಎಂದು ರಾಷ್ಟ್ರೀಯ ಧ್ವಜಾರೋಹಣದ ಮೂಲಕ ಭಾರತ ಒಕ್ಕೂಟದೊಳಗೆ ವಿಲೀನಗೊಂಡ ಹೋರಾಟವನ್ನು ನೆನಪಿಸುವುದು ಕಳೆದ ಮೂರು ದಶಕಗಳಿಂದ ನಡೆದುಕೊಂಡು ಬಂದಿದೆ. ಹಿಂದೆ ಸೆಪ್ಟಂಬರ್ 17ರಂದು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವೆಂದು ಆಚರಿಸಲಾಗುತ್ತಿತ್ತು, 2019ರಿಂದ ಸೆಪ್ಟಂಬರ್ 17ರಂದು ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವವೆಂದು ಆಚರಿಸಲಾಗುತ್ತಿದೆ. ಆಚರಣೆಯ ಹೆಸರಿನಲ್ಲಿ ಬದಲಾವಣೆಯಾಗಿದೆ ವಿನಃ, ವಾಸ್ತವದಲ್ಲಿ ಜನರ ಬದುಕಿನಲ್ಲಿ ಬದಲಾವಣೆಯಾಗಿಲ್ಲ.

ಕರ್ನಾಟಕ ರಾಜ್ಯ ಏಕೀಕರಣವಾಗಿ 68 ವರ್ಷಗಳು ಗತಿಸಿವೆ, ಈ ಅವಧಿಯಲ್ಲಿ ಸಾಕಷ್ಟು ನೀರು ನದಿಗಳಲ್ಲಿ ಹರಿದು ಹೋಗಿದೆ, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಕನಸು ಇನ್ನೂ ನನಸಾಗದಿರುವುದು ಆಶ್ಚರ್ಯಕರ ಮತ್ತು ವಾಸ್ತವ. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ರಾಜ್ಯದಲ್ಲಿ ವಿಲೀನವಾದ ಪ್ರದೇಶವೇ ಕಲ್ಯಾಣ ಕರ್ನಾಟಕ (ಬೀದರ್, ಗುಲ್ಬರ್ಗಾ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಹೈದರಾಬಾದ್ ಕರ್ನಾಟಕ) ಪ್ರದೇಶ, ಈ ಪ್ರದೇಶವು ರಾಜ್ಯದ ಏಕೀಕರಣಕ್ಕಿಂತ ಮುಂಚೆ ಹೈದರಾಬಾದ್ ರಾಜ್ಯದ ಭಾಗವಾಗಿತ್ತು, ಆದರೆ, ಕಳೆದ ಏಳು ದಶಕಗಳಿಂದ ರಾಜ್ಯದಲ್ಲಿ ತಾರತಮ್ಯವಲ್ಲದೆ ಮತ್ತೇನು ಸಿಕ್ಕಿಲ್ಲ ಎನ್ನುವ ಸತ್ಯ ತಿಳಿಯದ ಅಮಾಯಕ ಜನ ನರಕದಂತಹ ಜೀವನ ನಡೆಸುತ್ತಿರುವುದು ಎಲ್ಲೆಲ್ಲೂ ಕಂಡು ಬಂದಿದೆ. ಪ್ರತೀ ವರ್ಷ ಸರಕಾರ ಈ ಪ್ರದೇಶಕ್ಕೆ ಏನಾದರೊಂದು ಹೊಸ ಯೋಜನೆ ಘೋಷಿಸುವುದು, ನಂತರ ಮರೆತು ಬಿಡುವುದು ನಡೆದೇ ಇದೆ, ಆದರೆ ಬದಲಾವಣೆ ಮರೀಚಿಕೆಯಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿದೆ. ಈ ಪ್ರದೇಶದ ಜನಸಂಖ್ಯೆ ರಾಜ್ಯದ ಜನಸಂಖ್ಯೆಯಲ್ಲಿ ಶೇ. 19.26ರಷ್ಟಿದೆ. ಸರಕಾರಗಳ ತಾರತಮ್ಯ ನೀತಿಗಳ ಹಿನ್ನೆಲೆಯಲ್ಲಿ ಈ ಪ್ರದೇಶವು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ, ರಾಜ್ಯದಲ್ಲಿರುವ ಒಟ್ಟು 430 ಸರಕಾರಿ ಪದವಿ ಕಾಲೇಜುಗಳ ಪೈಕಿ ಕೇವಲ 77 (ಶೇ. 17.9) ಸರಕಾರಿ ಪದವಿ ಕಾಲೇಜುಗಳು ಮಾತ್ರ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಇದುವರೆಗೂ ಒಂದೇ ಒಂದು ಸರಕಾರಿ ಪದವಿ ಕಾಲೇಜು ಇಲ್ಲ. ಇಡೀ ಪ್ರದೇಶದಲ್ಲಿ ಒಂದೇ ಒಂದು ಸರಕಾರಿ ಕಾನೂನು ಕಾಲೇಜು ಇಲ್ಲ. ಕೇವಲ ಒಂದೇ ಒಂದು ಸರಕಾರಿ ಬಿ.ಎಡ್. ಕಾಲೇಜು ಈ ಭಾಗದಲ್ಲಿ ಇದೆ ಎನ್ನುವುದು ಸಾಕಷ್ಟು ವಿಚಾರ ಮಾಡುವ ವಿಷಯವಾಗಿದೆ. ರಾಜ್ಯದಲ್ಲಿ ಖಾಲಿ ಇರುವ ಸುಮಾರು 48 ಸಾವಿರ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆಗಳ ಪೈಕಿ ಸುಮಾರು 22 ಸಾವಿರ ಶಿಕ್ಷಕರ ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇವೆ, ಇಲ್ಲಿ ಯಾಕೆ ಪ್ರತೀ ವರ್ಷ ಎಸೆಸೆಲ್ಸಿ, ಪಿಯುಸಿ ಪಲಿತಾಂಶ ಕೊನೆಯಲ್ಲಿರುತ್ತದೆ ಎನ್ನುವುದು ಅರ್ಥವಾಗುತ್ತದೆ. ಸರಕಾರ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಭಾವಿಸಿರುವುದು ಅತ್ಯಂತ ಮೂರ್ಖತನವಾದದ್ದು, ಪ್ರತೀ ವರ್ಷ ಶಾಲೆಗಳ ಶೈಕ್ಷಣಿಕ ಅವಧಿ ಪ್ರಾರಂಭವಾಗುವುದು ಮೇ ಕೊನೆಯ ವಾರದಲ್ಲಿ. ಆದರೆ ಸರಕಾರ ಅತಿಥಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು ಆಗಸ್ಟ್ ಕೊನೆಯ ವಾರದಲ್ಲಿ. ಈ ಮೂರು ತಿಂಗಳ ಅವಧಿಯಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯ ಅಧೋಗತಿ. ಕಲ್ಯಾಣ ಕರ್ನಾಟಕ ಪ್ರದೇಶದ ಸುಮಾರು 2,500 ಶಾಲೆಗಳಲ್ಲಿ ಒಬ್ಬರೇ ಒಬ್ಬರೂ ಶಿಕ್ಷಕರಿಲ್ಲ ಎನ್ನುವ ವರದಿ ಇದೆ. ಈ ಶಾಲೆಗಳು ಸಂಪೂರ್ಣವಾಗಿ ಅತಿಥಿ ಶಿಕ್ಷಕರ ಮೇಲೆಯೇ ಅವಲಂಬಿತವಾಗಿವೆ. ಇಂತಹ ಶಾಲೆಗಳಲ್ಲಿ ಓದಿರುವ ಮಕ್ಕಳು ಯಾವ ರೀತಿ ಫಲಿತಾಂಶ ಪಡೆಯಬಹುದು ಎಂದು ಅಂದಾಜಿಸಬಹುದು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆರೋಗ್ಯ ಸೌಲಭ್ಯ ಅತ್ಯಂತ ವಿರಳ ಎನ್ನಬಹುದು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ 2,093. ಅದರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 30,274 ಜನರಿಗೆ ಒಂದರಂತೆ ಒಟ್ಟು 333 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ಮೈಸೂರು ಭಾಗದಲ್ಲಿ 14,409 ಜನಸಂಖ್ಯೆಗೆ ಒಂದರಂತೆ 659 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಬೆಂಗಳೂರು ಭಾಗದಲ್ಲಿ 17,512 ಜನಸಂಖ್ಯೆಗೆ ಒಂದರಂತೆ 646 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ ಹಾಗೂ ಬೆಳಗಾವಿ ವಿಭಾಗದಲ್ಲಿ 26,021 ಜಸಂಖ್ಯೆಗೆ ಒಂದರಂತೆ 455 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಇಲ್ಲಿ ಖಾಲಿ ಇರುವ ಸಿಬ್ಬಂದಿಯ ವಿವರ ಪಡೆದರೆ ಅತ್ಯಂತ ವಿಷಾದನೀಯ ಸ್ಥಿತಿಯಲ್ಲಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಮೂಲಭೂತ ಸೌಕರ್ಯಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ. ಇದನ್ನು ಕೇಂದ್ರ ಸರಕಾರದ ನೀತಿ ಆಯೋಗ ಪ್ರಕಟಿಸಿದ ವರದಿಗಳಲ್ಲಿ ವಿವರ ಒದಗಿಸಲಾಗಿದೆ. ದೇಶದ ಅತ್ಯಂತ ಹಿಂದುಳಿದ 115 ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಎರಡು ಜಿಲ್ಲೆಗಳಾದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಇವೆ ಎನ್ನುವುದು ವಿಶೇಷ, ಅವುಗಳನ್ನು ಕೇಂದ್ರ ಸರಕಾರ ಹಿಂದುಳಿದ ಜಿಲ್ಲೆಗಳು ಎಂದರೆ ಮರ್ಯಾದೆ ಕಡಿಮೆ ಎಂದು ಮಹತ್ವಾಕಾಂಕ್ಷಿ ಜಿಲ್ಲೆಗಳು ಎಂದು ಹೆಸರು ನೀಡಿದೆ. ನೀತಿ ಆಯೋಗದ ವರದಿಯಂತೆ ಬಹು ಆಯಾಮದ ಬಡತನ ಸೂಚ್ಯಂಕಗಳಲ್ಲಿ ಈ ಜಿಲ್ಲೆಗಳು ರಾಜ್ಯದಲ್ಲಿ ಕೊನೆಯ ಆರು ಸ್ಥಾನಗಳಲ್ಲಿ ಇವೆ. ಇದನ್ನು 10 ವಿವಿಧ ಸೂಚ್ಯಂಕಗಳ ಆಧಾರದಲ್ಲಿ ಅಧ್ಯಯನ ಮಾಡಲಾಗಿದೆ. ಇವುಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಯಾದಗಿರಿ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳು ಕ್ರಮವಾಗಿ 0.495, 0.539 ಹಾಗೂ 0.534(ರಾಜ್ಯದ ಸರಾಸರಿ 0.611) ಇದೆ. 2022-23ನೇ ಸಾಲಿಗಾಗಿ ರಾಜ್ಯದ ತಲಾ ಆದಾಯ ರೂ. 3,01,673 ಇದೆ. ಬೆಂಗಳೂರು ನಗರದ ತಲಾ ಆದಾಯ ರೂ. 6,21,131. ಆದರೆ ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ ಜಿಲ್ಲೆಯ ತಲಾ ಆದಾಯ ರೂ. 1,24,998 ಇರುವುದು ಅತ್ಯಂತ ಕಡಿಮೆ ಎನ್ನಬಹುದು.

ಇಂತಹ ಪ್ರದೇಶಕ್ಕೆ 2013ರಲ್ಲಿ ಯುಪಿಎ ಸರಕಾರ ಭಾರತ ಸಂವಿಧಾನದ ಅನುಚ್ಛೇದ 371ಜೆ ತಿದ್ದುಪಡಿ ಮಾಡಿ ವಿಶೇಷ ಸವಲತ್ತು ನೀಡಲಾಗಿದೆ, ಸರಕಾರದ ಮಟ್ಟದಲ್ಲಿ ಅಂದಿನ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆಯವರ ಪಾತ್ರ ಬಹುಮುಖ್ಯವಾದದ್ದು. ಅವರ ಪ್ರಯತ್ನವಿಲ್ಲದಿದ್ದರೆ ತಿದ್ದುಪಡಿ ಸಾಧ್ಯವಿದ್ದಿಲ್ಲವೇನೋ ಎನ್ನುವ ಸ್ಥಿತಿ ಇತ್ತು. ಸಂವಿಧಾನ ತಿದ್ದುಪಡಿಯಾಗಿ ಒಂದು ದಶಕ ಕಳೆದರೂ ಇಲ್ಲಿಯವರೆಗೆ 371ಜೆ ಸೌಲಭ್ಯ ಸಮರ್ಪಕವಾಗಿ ಜನರಿಗೆ ತಲುಪಿಸಲು ಸರಕಾರಗಳಿಗೆ ಸಾಧ್ಯವಾಗಿಲ್ಲ. ಒಂದು ದಶಕದಲ್ಲಿಯೇ 371ಜೆ ಮೀಸಲಾತಿ ಕುರಿತು ರಾಜ್ಯದ ಇತರ ಪ್ರದೇಶದ ಜನರಲ್ಲಿ ಅಸಮಾಧಾನ ಎದ್ದಿರುವುದು ರಾಜ್ಯದ ಅಖಂಡತೆಗೆ ಧಕ್ಕೆಯಾಗುತ್ತದೆ ಎನ್ನುವ ಕನಿಷ್ಠ ತಿಳುವಳಿಕೆ ಇಲ್ಲದೇ ಇರುವುದು ಶೋಚನೀಯ. 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಮಂಡಳಿ ರಚನೆ ಮಾಡಬೇಕು ಎನ್ನುವ ವಿಷಯ ಒಳಗೊಂಡಿದೆ. 371ಜೆ ಅಡಿಯಲ್ಲಿ ಉದ್ಯೋಗ ಮೀಸಲಾತಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಂಜೂರಾಗಿರುವ ಒಟ್ಟು ಹುದ್ದೆಗಳಲ್ಲಿ ಶೇ. 75, 80 ಮತ್ತು 85ರಷ್ಟು ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಕ್ರಮವಾಗಿ ಗ್ರೂಪ್-ಎ, ಬಿ, ಗ್ರೂಪ್-ಸಿ ಹಾಗೂ ಗ್ರೂಪ್-ಡಿ ಹುದ್ದೆಗಳಿಗೆ ಮೀಸಲಾಗಿದೆ. ಅಲ್ಲದೆ ಬೆಂಗಳೂರು ನಗರ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳು, ರಾಜ್ಯದ ಇತರ ಪ್ರದೇಶದಲ್ಲಿ ಇರುವ ವಿಶ್ವವಿದ್ಯಾನಿಲಯಗಳಲ್ಲಿ ಎಲ್ಲಾ ವೃಂದದ ಹುದ್ದೆಗಳಿಗೆ ಶೇ. 8 ರಷ್ಟು ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿದೆ. ಅಲ್ಲದೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಲಭ್ಯವಿರುವ ಒಟ್ಟು ಸೀಟುಗಳಲ್ಲಿ ಶೇ. 70ರಷ್ಟು ಸೀಟುಗಳು ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯದ ಇತರ ಪ್ರದೇಶಗಳಲ್ಲಿ ಲಭ್ಯವಿರುವ ಒಟ್ಟು ಸೀಟುಗಳಲ್ಲಿ ಶೇ. 8ರಷ್ಟು ಸೀಟುಗಳು ಕಲ್ಯಾಣ ಕರ್ನಾಟಕ ಪ್ರದೇಶ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಅನುಚ್ಛೇದ 371ಜೆ ತಿದ್ದುಪಡಿಯಿಂದ ಕಳೆದ ಒಂದು ದಶಕದ ಅವಧಿಯಲ್ಲಿ ಒಂದಿಷ್ಟು ಒಳ್ಳೆಯ ಬೆಳವಣಿಗೆಗಳು ಆಗಿವೆ ಎನ್ನಬಹುದು. ಮೆಡಿಕಲ್, ಇಂಜಿನಿಯರಿಂಗ್ ಸೀಟುಗಳು ಗಣನೀಯವಾಗಿ ಈ ಭಾಗದ ವಿದ್ಯಾರ್ಥಿಗಳು ಪಡೆದಿದ್ದಾರೆ, ಅಲ್ಲದೆ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಒಂದಿಷ್ಟು ಪ್ರಮಾಣದ ಮೀಸಲಾತಿಯಿಂದ ಅವಕಾಶ ಸಿಕ್ಕಿದೆ ಎನ್ನಬಹುದು. ಆದರೆ, ಸರಕಾರಗಳ ನಿರ್ಲಕ್ಷ್ಯದಿಂದ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ 371ಜೆ ನಿಯಮಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಇದರಲ್ಲಿ ರಾಜ್ಯದ ಸರಕಾರದ ಎಷ್ಟು ಪಾತ್ರವಿದೆಯೋ ಅಷ್ಟೇ ಪ್ರಮಾಣದ ಪಾತ್ರ ಸ್ಥಳೀಯ ಜನಪ್ರತಿನಿಧಿಗಳದ್ದೂ ಇದೆ.

ಆದರೆ, ಹಿಂದಿನ ಬಿಜೆಪಿ ಸರಕಾರ 371ಜೆ ಮೀಸಲಾತಿ ಅನುಷ್ಠಾನಕ್ಕಾಗಿ ಮೂರು ವರ್ಷದಲ್ಲಿ ಮೂರು ವಿಭಿನ್ನ ಸುತ್ತೋಲೆಗಳನ್ನು ಹೊರಡಿಸಿ ಚಾಲ್ತಿಯಲ್ಲಿರುವ ಎಲ್ಲಾ ನೇಮಕಾತಿ ಪ್ರಕ್ರಿಯೆಗಳು ಗೊಂದಲದಲ್ಲಿ ಮೂಡುವಂತೆ ಮಾಡಿತ್ತು. ವಿವಿಧ ನ್ಯಾಯಾಲಯಗಳಲ್ಲಿ ಪ್ರಕ್ರಣಗಳು ದಾಖಲಾಗಿ ಇಲ್ಲಿಯವರೆಗೆ ಅಂತಿಮ ಹಂತಕ್ಕೆ ತಲುಪದ ಸ್ಥಿತಿಗೆ ಬಂದಿದೆ. ಎಲ್ಲಾ ನೇಮಕಾತಿಗಳು ನ್ಯಾಯಾಲಯದ ಆಕ್ಷೇಪಣೆಯಲ್ಲಿವೆ, ಬಿಜೆಪಿ ಸರಕಾರ ಮೂಡಿಸಿದ ಗೊಂದಲಗಳಿಂದ ಈ ಭಾಗದ ಯುವಕರು ಭ್ರಮನಿರಸನ ಹೊಂದುವಂತೆ ಮಾಡಿದೆ.

ಸಂವಿಧಾನದ ಅನುಚ್ಛೇದ 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 2014ರಲ್ಲಿ ರಚನೆ ಮಾಡಲಾಗಿದೆ, ಅಲ್ಲಿಂದ ಇಲ್ಲಿಯವರೆಗೆ ಸುಮಾರು 16,300 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ 5,000 ಕೋಟಿ ರೂ. ಅನುದಾನದ ಕ್ರಿಯಾಯೋಜನೆ ರೂಪಿಸಲಾಗಿದೆ. ಮಂಡಳಿಯ ಅನುದಾನದಲ್ಲಿ ಎಲ್ಲರೂ ಪಾಲು ಕೇಳಲು ಪ್ರಾರಂಭಿಸಿ, ಮಂಡಳಿಯ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಲಾಗುತ್ತಿದೆ ಎನ್ನುವ ಭಾವನೆ ಜನರಲ್ಲಿ ಬರತೊಡಗಿದೆ. ಹಿಂದಿನ ಬಿಜೆಪಿ ಸರಕಾರ ತಮ್ಮ ಪಕ್ಷದ ಶಾಸಕರನ್ನು ತೃಪ್ತಿಪಡಿಸಲು ಮಂಡಳಿ ಅಧ್ಯಕ್ಷರ ಸ್ಥಾನವನ್ನು ಸಚಿವರ ಬದಲಾಗಿ ಶಾಸಕರನ್ನು ಮಾಡಲು ನಿಯಮಗಳನ್ನು ತಿದ್ದುಪಡಿ ಮಾಡಿ ಮಂಡಳಿಯನ್ನು ದುರ್ಬಲಗೊಳಿಸಿದೆ. ಈಗಿನ ಸರಕಾರದಲ್ಲಿ ರಾಜ್ಯಪಾಲರು 250 ಕೋಟಿ ರೂ. ಅನುದಾನವನ್ನು ತಮ್ಮ ವಿವೇಚನೆಗೆ ಪಡೆದುಕೊಂಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ. ಈ ಭಾಗದಲ್ಲಿ ಇರುವುದೇ 5 ವಿಶ್ವವಿದ್ಯಾನಿಲಯಗಳು. ಅವುಗಳನ್ನು ಅಭಿವೃದ್ಧಿಪಡಿಸಲು ಅಷ್ಟೊಂದು ಅನುದಾನ ಅವಶ್ಯಕತೆಯಿಲ್ಲ, ಆದರೂ ವಿವಿಗಳ ಅಭಿವೃದ್ಧಿ ಎಂದು ಅನುದಾನ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಪ್ರದೇಶಕ್ಕೆ ಸಂಬಂಧವೇ ಇಲ್ಲದ ಯೋಜನಾ ಇಲಾಖೆಯ ಸಚಿವರಿಗೆ 150 ಕೋಟಿ ರೂ. ವಿವೇಚನಾ ಅನುದಾನ ನೀಡಲಾಗಿದೆ. ಅವರು ಆ ಅನುದಾನವನ್ನು ಈ ಪ್ರದೇಶದ ಅಭಿವೃದ್ಧಿಗೆ ಬಳಸಬೇಕು. ಒಮ್ಮೆಯೂ ಈ ಭಾಗಕ್ಕೆ ಭೇಟಿ ನೀಡದ ಯೋಜನಾ ಸಚಿವರು ತಮ್ಮ ವಿವೇಚನಾ ಅನುದಾನವನ್ನು ಯಾವ ಪುರುಷಾರ್ಥಕ್ಕೆ ಬಳಸುತ್ತಾರೆ ಎನ್ನುವುದೇ ಪ್ರಶ್ನಾರ್ಹವಾಗಿದೆ. ಇನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷತೆ ಕಳೆದ ಒಂದು ದಶಕದಿಂದ ಕಲಬುರಗಿ ಜಿಲ್ಲೆಯ ಹಿಡಿತದಲ್ಲಿದೆ. ಮೊದಲು ಡಾ. ಖಮರುಲ್ ಇಸ್ಲಾಂ, ಎರಡನೆಯ ಅವಧಿಗೆ ಡಾ. ಶರಣಪ್ರಕಾಶ ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ, ಈಗ ಡಾ. ಅಜಯ್ ಸಿಂಗ್ ಸತತವಾಗಿ 9 ವರ್ಷ ಮಂಡಳಿ ಅಧ್ಯಕ್ಷರಾಗಿ ಕಲಬುರಗಿ ಜಿಲ್ಲೆಯವರೇ ಸ್ಥಾನ ಪಡೆದಿರುವುದು ಕಲ್ಯಾಣ ಕರ್ನಾಟಕದಲ್ಲಿಯೇ ಜಿಲ್ಲಾವಾರು ತಾರತಮ್ಯ ಸೃಷ್ಟಿಸುತ್ತಿದೆ ಎನ್ನಬಹುದು. ಮಂಡಳಿ ಕಳೆದ ಒಂದು ದಶಕದಲ್ಲಿ ಕ್ರಿಯಾತ್ಮಕವಾಗಿ ಒಂದು ಪರಿಪೂರ್ಣ ಕ್ರಿಯಾ ಯೋಜನೆ ರೂಪಿಸಲು ಪ್ರಯತ್ನಿಸಿಲ್ಲ. ಈ ಭಾಗದ ಹಿಂದುಳಿವಿಕೆಗೆ ಕಾರಣವಾದ ಅಂಶಗಳನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿಲ್ಲ. ಮಂಡಳಿ ಅನುದಾನವನ್ನು ಶಾಸಕರಿಗೆ ಹಂಚಲು ಬಳಸಲಾಗುತ್ತಿದೆ. ಇದರಿಂದ ಜನರಿಗೆ ಅವಶ್ಯಕತೆಯಿರುವ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಯಾವ ಉದ್ದೇಶಕ್ಕೆ ಸಂವಿಧಾನ ತಿದ್ದುಪಡಿಯಲ್ಲಿ ಮಂಡಳಿ ರಚನೆ ಮಾಡಲಾಗಿದೆಯೋ ಅದನ್ನು ಮರೆತು ಇನ್ನೆಲ್ಲವೂ ಮಂಡಳಿಯ ಮೂಲಕ ಮಾಡಲಾಗುತ್ತದೆ ಎನ್ನುವುದೇ ಸೋಜಿಗದ ವಿಷಯ.

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಸರಕಾರ ಒಂದು ಸ್ಪಷ್ಟ ದಿಕ್ಸೂಚಿ ರೂಪಿಸುವ ಅವಶ್ಯತಕೆಯಿದೆ. ಮುಂದಿನ ಒಂದು ದಶಕದ ಅವಧಿಯ ಅಭಿವೃದ್ಧಿಗೆ ಬದ್ಧತೆಯ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನ ಮಾಡಲು ಕಾರ್ಯಕ್ರಮ ಜಾರಿ ಮಾಡಲಿ. 371ಜೆ ಮೀಸಲಾತಿ ಅನುಷ್ಠಾನ ಮಾಡಲು ಒಂದು ಪ್ರಾಧಿಕಾರ ರಚನೆ ಮಾಡುವ ಮೂಲಕ 371ಜೆ ಸಮರ್ಪಕ ಜಾರಿಗೆ ಸರಕಾರ ಬದ್ಧತೆ ತೋರಿಸಲಿ ಎನ್ನುವುದೇ ಜನರ ಭಾವನೆಯಾಗಿದೆ. ಕಲ್ಯಾಣ ಕರ್ನಾಟಕ ಎಂದು ಹೆಸರೇನೊ ಬದಲಾವಣೆ ಮಾಡಲಾಗಿದೆ. ಆದರೆ ಕಲ್ಯಾಣವಾಗುವುದು ಎಂದೋ ಎನ್ನುವ ಯೋಚನೆಯಲ್ಲಿ ಜನತೆ ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಝಾಕ್ ಉಸ್ತಾದ

contributor

Similar News