ಮೊದಲು ಸುಧಾರಣೆ ಆಗಬೇಕಿರುವುದು ಯಾವುದು?

ಮತಾಂತರವನ್ನು ತಾವೇಕೆೆ ವಿರೋಧಿಸುತ್ತಿದ್ದೇವೆ ಎನ್ನುವ ಸ್ಪಷ್ಟವಾದ ಅರಿವು ಮನುವಾದಿಗಳಿಗಿದೆ. ಆದರೆ ಅವರ ಕುತಂತ್ರಕ್ಕೆ ಬಲಿಯಾಗಿ ನಮ್ಮಲ್ಲಿರುವ ಅನಿಷ್ಟ ಪದ್ಧತಿಗಳನ್ನು, ಜಾತಿ ಕಾರಣಕ್ಕಾಗುತ್ತಿರುವ ಕೊಲೆ, ಅತ್ಯಾಚಾರ, ದೌರ್ಜನ್ಯ ಇವುಗಳನ್ನು ಅರಿಯದೆ ಮತಾಂತರವಾಗಿರುವ ದಲಿತರಿಗೆ ಮೀಸಲಾತಿ ನೀಡಕೂಡದು ಎಂದು ಅರ್ಜಿ ಅಹವಾಲುಗಳನ್ನು ನೀಡುತ್ತಿರುವ ನಮ್ಮದೇ ಪರಿಶಿಷ್ಟ ಜಾತಿಯ ರಾಜಕಾರಣಿಗಳು, ಯುವಕ/ಯುವತಿಯರು ಸಂಘಪರಿವಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದನ್ನು ನೋಡಿ ಬೇಸರವಾಗುತ್ತದೆ.

Update: 2024-09-10 04:38 GMT

ಹಿಂದೂ ಧರ್ಮದಿಂದ ಅನ್ಯಧರ್ಮಕ್ಕೆ ಮತಾಂತರಗೊಂಡಿರುವ ದಲಿತರಿಗೆ ಪರಿಶಿಷ್ಟ ಜಾತಿಗೆ ಸಿಗುವ ಮೀಸಲಾತಿ ಮತ್ತು ಇತರ ಸಾಂವಿಧಾನಿಕ ಸವಲತ್ತುಗಳನ್ನು ನೀಡಕೂಡದು ಎನ್ನುವ ಅನೇಕ ಸಾರ್ವಜನಿಕ ಹಕ್ಕೊತ್ತಾಯಗಳು ಬಂದಿರುವ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಕೇಂದ್ರ ಸರಕಾರದ ವತಿಯಿಂದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರ ನೇತೃತ್ವದಲ್ಲಿ 2022ರಲ್ಲಿ ಆಯೋಗವನ್ನು ರಚಿಸಲಾಗಿದೆ. ಬೌದ್ಧ ಮತ್ತು ಸಿಖ್ ಧರ್ಮವನ್ನು ಹೊರತುಪಡಿಸಿ ಇಸ್ಲಾಮ್, ಕ್ರೈಸ್ತ ಮತ್ತು ಇತರ ಧರ್ಮಗಳಿಗೆ ಮತಾಂತರಗೊಂಡಿರುವ ದಲಿತರಿಗೆ ಪರಿಶಿಷ್ಟ ಜಾತಿಗೆ ಸಿಗುವ ಮೀಸಲಾತಿ ಮತ್ತು ಇತರ ಸೌಲಭ್ಯಗಳು ಕೊಡಬೇಕೇ ಬೇಡವೇ ಎನ್ನುವುದರ ಬಗ್ಗೆ ಈ ಆಯೋಗವು ಅಧ್ಯಯನ ನಡೆಸಿ ಈಗ ಸಾರ್ವಜನಿಕ ಅಹವಾಲು ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದೆ. ಇದೇ ಸೆಪ್ಟಂಬರ್ 3ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿಯೂ ಜಸ್ಟಿಸ್ ಬಾಲಕೃಷ್ಣನ್ ಆಯೋಗವು ಸಾರ್ವಜನಿಕ ಅಹವಾಲು ಮತ್ತು ಅಭಿಪ್ರಾಯವನ್ನು ಆಲಿಸಿದೆ.

ಹಿಂದೂ ಧರ್ಮದಿಂದ ಇತರ ಧರ್ಮಕ್ಕೆ ಮತಾಂತರಗೊಂಡ ವರಿಗೆ ಮೀಸಲಾತಿ ಕೊಡಬಾರದು ಎನ್ನುವ ಉದ್ದೇಶಕ್ಕಿಂತ ಹೆಚ್ಚಾಗಿ ಮತಾಂತರವನ್ನು ತಡೆಯುವುದು ಕೇಂದ್ರ ಸರಕಾರದ ಮೂಲ ಉದ್ದೇಶವಾಗಿದೆ. ಏಕೆಂದರೆ ಕೇಂದ್ರ ಸರಕಾರ ಸಂಘಪರಿವಾರದ ಹಿಡಿತದಲ್ಲಿದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ ಮತ್ತು ಮತಾಂತರ ತಡೆಯುವುದು ಸಂಘಪರಿವಾರಕ್ಕೆ ಅನಿವಾರ್ಯ ಕೂಡ. ಏಕೆಂದರೆ, ಹಿಂದೂ ಧರ್ಮ ನಿಂತಿರುವುದೇ ಚಾತುರ್ವರ್ಣ ವ್ಯವಸ್ಥೆಯ ತಳಹದಿಯ ಮೇಲೆ. ಅದರಲ್ಲೂ ಅಸ್ಪಶ್ಯತೆ ಎನ್ನುವುದು ಇಡೀ ಚಾತುರ್ವರ್ಣವನ್ನು ಹೊತ್ತುನಿಂತ ಅಡಿಪಾಯವಾಗಿದೆ. ವರ್ಣಾಶ್ರಮದ ಉಳಿವಿಗಾಗಿ ಅಸ್ಪಶ್ಯತೆಯನ್ನು ಜೀವಂತವಾಗಿಡುವುದು ಅವರಿಗೆ ಅನಿವಾರ್ಯವಾಗಿದೆ.

ಹಿಂದೂ, ಸಿಖ್, ಬೌದ್ಧ ಧರ್ಮಗಳಲ್ಲಿರುವ ಹಾಗೆಯೇ ಇಸ್ಲಾಮ್ ಮತ್ತು ಕ್ರೈಸ್ತರಲ್ಲಿರುವ ದಲಿತರಿಗೂ ಪರಿಶಿಷ್ಟ ಜಾತಿಗೆ ಸಿಗುವ ಸೌಲಭ್ಯಗಳು ನೀಡಬೇಕೆಂದು 1990ರಲ್ಲಿ Private member Bill ಅನ್ನು ಪಾರ್ಲಿಮೆಂಟ್‌ನಲ್ಲಿ ಸಲ್ಲಿಸಲಾಗಿತ್ತು. 1996ರಲ್ಲಿ ಇದು ಸರಕಾರಿ ಮಸೂದೆಯಾಗಿ ಪಾರ್ಲಿಮೆಂಟ್‌ನಲ್ಲಿ ಚರ್ಚೆಗೆ ಒಳಪಟ್ಟಿತ್ತು. ಆದರೆ ಅನೇಕ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿ, ಬಹುಮತ ಸಿಗದೆ ಅದನ್ನು ನಿರಾಕರಿಸಲಾಯಿತು.

* 2004ರಲ್ಲಿ ಮನಮೋಹನ್ ಸಿಂಗ್‌ರವರು ಪ್ರಧಾನಿಯಾಗಿದ್ದಾಗ ರಂಗನಾಥ್ ಮಿಶ್ರಾರವರ ನೇತೃತ್ವದಲ್ಲಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವನ್ನು ರಚಿಸಿತ್ತು. ಈ ಆಯೋಗವು ಅನುಸೂಚಿತ ಜಾತಿ(ಎಸ್‌ಸಿ)ಯನ್ನು ಹಿಂದೂ ಧರ್ಮದಿಂದ ಸಂಪೂರ್ಣವಾಗಿ De-Link ಮಾಡಬೇಕೆಂದೂ ಅದು ಯಾವುದೇ ಧರ್ಮಕ್ಕೂ ಸೇರದ ಅನುಸೂಚಿತ ಬುಡಕಟ್ಟು(ಎಸ್‌ಟಿ) ಸಮೂಹದಂತೆ ಒಂದು ತಟಸ್ಥ ಸಮೂಹವೆಂದು ಪರಿಗಣಿಸಬೇಕೆಂದೂ 2007ರಲ್ಲಿ ವರದಿ ನೀಡಿತ್ತು.

*ಮಾರ್ಚ್ 2005ರಲ್ಲಿ ಭಾರತದಲ್ಲಿರುವ ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ದಿಲ್ಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ರಾಜಿಂದರ್ ಸಾಚಾರ್ ಅವರ ನೇತೃತ್ವದ ಏಳು ಜನರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. 2006 ನವೆಂಬರ್ 17ರಂದು ಸಾಚಾರ್ ಸಮಿತಿಯು ತಮ್ಮ ಅಧ್ಯಯನದ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು. 2006 ನವೆಂಬರ್ 30 ರಂದು ಅದು ಪಾರ್ಲಿಮೆಂಟ್‌ನಲ್ಲಿಯೂ ಚರ್ಚೆಯಾಗಿ ಆ ಅಧ್ಯಯನದ ವರದಿಯನ್ನು ಸರಕಾರ ಅಂಗೀಕರಿಸಿತ್ತು. ಇದರಲ್ಲಿ ಗಮನಿಸಬೇಕಾದ ಬಹುಮುಖ್ಯ ವಿಷಯವೆಂದರೆ, ಪರಿಶಿಷ್ಟ ಜಾತಿಯಿಂದ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲ ಎಂದು ವರದಿಯಲ್ಲಿ ತಿಳಿಸಿರುತ್ತಾರೆ.

ಸಾಚಾರ್ ವರದಿಯ ಅಧ್ಯಯನವನ್ನು ಗಮನಿಸಿ ದಲಿತರು ಅಸ್ಪಶ್ಯತೆಯ ಕಾರಣಕ್ಕೆ, ಜಾತಿ ದೌರ್ಜನ್ಯದ ಕಾರಣಕ್ಕೆ ಅಥವಾ ಹಿಂದೂ ಧರ್ಮದಲ್ಲಿರುವ ದಲಿತರನ್ನು ಶೋಷಿಸುವ ಕೆಲವು ಅನಿಷ್ಟ ಆಚರಣೆಗಳ ಕಾರಣಕ್ಕೆ ಬೇಸತ್ತು ಇತರ ಧರ್ಮಗಳಿಗೆ ಮತಾಂತರವಾಗುತ್ತಾರೆ. ಆದರೆ ಮತಾಂತರವಾದ ಮೇಲೂ ಅವರು ದಲಿತರಾಗಿಯೇ ಉಳಿಯುತ್ತಾರೆ ಅನ್ನುವುದು ಐತಿಹಾಸಿಕ ಸತ್ಯ. ಹಾಗಾಗಿ ಅವರು ಯಾವುದೇ ಧರ್ಮದಲ್ಲಿದ್ದರೂ ಆ ಧರ್ಮದ ಆಧಾರದ ಮೇಲೆ ಪರಿಗಣಿಸದೆ ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಅವರಿಗೆ ಪರಿಶಿಷ್ಟ ಜಾತಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು 2011ರಲ್ಲಿ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು.

ರಂಗನಾಥ್ ಮಿಶ್ರಾ ಆಯೋಗದ ವರದಿಯನ್ನು, ರಾಜಿಂದರ್ ಸಾಚಾರ್ ಆಯೋಗದ ವರದಿಯನ್ನು, 2011ರಲ್ಲಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್ ಇವುಗಳ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ, 2022ರಲ್ಲಿ ಬಾಲಕೃಷ್ಣನ್ ಆಯೋಗವನ್ನು ರಚಿಸಿದ್ದರ ಹಿನ್ನೆಲೆಯನ್ನು ಮತ್ತು ಉದ್ದೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು.

‘ಹಿಂದೂ ನಾವೆಲ್ಲ ಒಂದು’ ಎನ್ನುವ ಶಬ್ದ ಕೇಳುವುದಕ್ಕೆ ಎಷ್ಟೊಂದು ಹಿತವಾಗಿದೆ. ಆದರೆ ವಾಸ್ತವದಲ್ಲಿ ‘ನಾವೆಲ್ಲ ಒಂದು’ ಅನ್ನುವ ಶಬ್ದಕ್ಕೆ ತಾತ್ಕಾಲಿಕ ನ್ಯಾಯ ದೊರಕುವುದು ಕೇವಲ ಚುನಾವಣೆ ಸಮಯದಲ್ಲಿ ಮಾತ್ರ. ‘‘ಈ ಜಾತಿವ್ಯವಸ್ಥೆ ಅನ್ನುವುದೇ ಒಂದು ಸುಳ್ಳು ಪ್ರೊಪೋಗಂಡ, ವರ್ಣವ್ಯವಸ್ಥೆ ಹಿಂದೆ ಇತ್ತು, ಆದರೆ ಈಗಿಲ್ಲ, ಸಂವಿಧಾನ ಬಂದಮೇಲೆ ಇಲ್ಲಿ ಎಲ್ಲರೂ ಒಂದೇ’’ ಎನ್ನುವ ಮಾತನ್ನು ಸ್ವತಃ ಸಂಘಪರಿವಾರದ ಮುಖ್ಯಸ್ಥರೇ ಮಾತನಾಡುವುದಕ್ಕೆ ಶುರುಮಾಡಿದ್ದಾರೆ. ಆದರೂ ಅವರು ಸಂವಿಧಾನಕ್ಕಿಂತ ಹೆಚ್ಚು ಪ್ರಚಾರ ಕೊಡುವುದು ಭಗವದ್ಗೀತೆಗೆ, ರಾಮಾಯಣಕ್ಕೆ. ಪ್ರಜಾಪ್ರಭುತ್ವದಲ್ಲಿ ವರ್ಣವ್ಯವಸ್ಥೆಯೇ ಇಲ್ಲ, ಅದು ನಾಶವಾಗಿ ಹೋಗಿದೆ ಎಂದಮೇಲೆ ಪುರಾಣಗಳ ಆಧಾರದ ಮೇಲೆಯೇ ಕಟ್ಟಲಾಗಿರುವ ಮತ್ತು ವರ್ಣವ್ಯವಸ್ಥೆಯನ್ನು ಸಾರುವ ಭಗವದ್ಗೀತೆ, ರಾಮಾಯಣ 21ನೇ ಶತಮಾನದ ಪ್ರಜಾಪ್ರಭುತ್ವ ಚಾಲ್ತಿಯಲ್ಲಿರುವ 2024ರಲ್ಲಿ ಹೇಗೆ ಅನ್ವಯವಾಗುತ್ತದೆ ಅನ್ನುವುದನ್ನು ನಾವು ಪ್ರಶ್ನೆ ಮಾಡಬೇಕಿದೆ.

ಈ ಲೇಖನವನ್ನು ಓದುವ ನನ್ನದೇ ಸಮುದಾಯದ ಸಹೋದರರು ಇವರು ಮತಾಂತರವನ್ನು ಸಮರ್ಥಿಸುತ್ತಿದ್ದಾರೆ ಅಥವಾ ಬೆಂಬಲಿಸುತ್ತಿದ್ದಾರೆ ಎಂದು ಅಪಾರ್ಥ ಮಾಡಿಕೊಳ್ಳಲೂ ಬಹುದು ಎನ್ನುವ ಅರಿವು ನನಗಿದೆ. ಆದರೆ ಸಂವಿಧಾನದ ಮಹತ್ವವನ್ನು ಅರಿತವನಾಗಿ ಈ ದೇಶದ ಮತ್ತು ಶೋಷಿತರ ಇತಿಹಾಸವನ್ನು ಬಲ್ಲವನಾಗಿ, ಒಬ್ಬ ಸಂಶೋಧಕನಾಗಿ, ಬಾಬಾ ಸಾಹೇಬರು ಯಾಕೆ ಸಂವಿಧಾನದ ಆರ್ಟಿಕಲ್ 25,26,27 ಮತ್ತು 28ರಲ್ಲಿ ನಮಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದರು, ಯಾವುದೇ ಧರ್ಮವನ್ನು ಆಚರಿಸುವ, ಪಾಲಿಸುವ ಮತ್ತು ಮತಾಂತರವಾಗುವ ಹಕ್ಕನ್ನು ನೀಡಿದರು ಎನ್ನುವುದರ ತಿಳುವಳಿಕೆ ನನಗೊಬ್ಬನಿಗೆ ಅಲ್ಲ ನಮಗೆಲ್ಲರಿಗೂ ಇರಬೇಕು. ಯಾರು ಮತಾಂತರಕ್ಕೆ ಒಳಗಾಗುತ್ತಿದ್ದಾರೆ, ಯಾವ ಕಾರಣಕ್ಕೆ ಮತಾಂತರವಾಗುತ್ತಿದ್ದಾರೆ ಎನ್ನುವ ಮೂಲಭೂತ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು ಮತ್ತು ಅದಕ್ಕೆ ಉತ್ತರ ಹುಡುಕಬೇಕು. ಕ್ರೈಸ್ತ, ಮುಸಲ್ಮಾನ, ಸಿಖ್ ಮತ್ತು ಇನ್ನಿತರ ಧರ್ಮಗಳಿಗೆ ಮತಾಂತರವಾದ ದಲಿತರ ಸ್ಥಿತಿಗತಿಗಳು ಯಾವುದೇ ಬದಲಾವಣೆಯನ್ನು ಕಂಡಿಲ್ಲ. ಬದಲಾಗಿ ಅವರು ಅಲ್ಲಿಯೂ ಅಸ್ಪಶ್ಯರಾಗಿಯೇ ಉಳಿದಿದ್ದಾರೆ. ಕ್ರೈಸ್ತರಲ್ಲಿ ಮತಾಂತರವಾದರು ಅನ್ನುವ ಕಾರಣಕ್ಕೆ ಅವರಿಗೆ ರೋಮನ್ ಕೆಥೊಲಿಕರು, ಪ್ರೊಟೆಸ್ಟೆಂಟರು ದಲಿತರ ಕ್ರೈಸ್ತರ ಜೊತೆಗೆ ವೈವಾಹಿಕ ಸಂಬಂಧ ಬೆಳೆಸುತ್ತಿಲ್ಲ ಅಥವಾ ಮುಸ್ಲಿಮ್ ದಲಿತರ ಜೊತೆಗೆ ಹುಸೇನರು, ಪಠಾಣರು ಸಂಬಂಧ ಬೆಳೆಸುತ್ತಿಲ್ಲ. ಹೀಗಿರುವಾಗ ಮತಾಂತರವಾಗಿ ಪ್ರಯೋಜನವಾದರೂ ಏನು ಎನ್ನುವ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇಲ್ಲವೇ ಅವರ ಮೇಲೆ ಜಾತಿಯ ಕಾರಣಕ್ಕೆ ಆಗುತ್ತಿರುವ ದೌರ್ಜನ್ಯ, ಅಸ್ಪಶ್ಯತೆ ಆಚರಣೆ, ಅತ್ಯಾಚಾರ, ಅವಮಾನ ಇವುಗಳನ್ನು ತೊಡೆದುಹಾಕುವ ಕೆಲಸವನ್ನು ಸ್ವತಃ ಸಂಘಪರಿವಾರವೇ ಮುಂದೆ ನಿಂತು ಮಾಡಲು ಸಂಘಪರಿವಾರದಲ್ಲಿರುವ ನಮ್ಮ ಸಹೋದರರು ಒತ್ತಾಯಿಸಬೇಕು. ಅದ್ಯಾವುದೂ ಮಾಡದೆ, ಅಸ್ಪಶ್ಯತೆ ನಿವಾರಣೆಯ ಬಗ್ಗೆ ಸೊಲ್ಲೆತ್ತದೆ, ಜಾತಿ ನಿರ್ಮೂಲನೆ ಬಗ್ಗೆ ತುಟಿ ಬಿಚ್ಚದೆ, ಅಂತರ್ಜಾತಿ ಮದುವೆಯನ್ನು ಸಮರ್ಥಿಸದೆ, ತಮ್ಮದೇ ಧರ್ಮದಲ್ಲಿರುವ ಅನಿಷ್ಠ ಪದ್ಧತಿಗಳನ್ನು ವಿರೋಧಿಸದೆ ಮತಾಂತರವಾಗಬೇಡಿ ಎನ್ನುವುದು ಚಾತುರ್ವರ್ಣ ವ್ಯವಸ್ಥೆಯನ್ನು ಜೀವಂತವಾಗಿಡುವ ಮತ್ತೊಂದು ಆಯಾಮವಷ್ಟೇ.

ಮತಾಂತರವನ್ನು ತಾವೇಕೆೆ ವಿರೋಧಿಸುತ್ತಿದ್ದೇವೆ ಎನ್ನುವ ಸ್ಪಷ್ಟವಾದ ಅರಿವು ಮನುವಾದಿಗಳಿಗಿದೆ. ಆದರೆ ಅವರ ಕುತಂತ್ರಕ್ಕೆ ಬಲಿಯಾಗಿ ನಮ್ಮಲ್ಲಿರುವ ಅನಿಷ್ಟ ಪದ್ಧತಿಗಳನ್ನು, ಜಾತಿ ಕಾರಣಕ್ಕಾಗುತ್ತಿರುವ ಕೊಲೆ, ಅತ್ಯಾಚಾರ, ದೌರ್ಜನ್ಯ ಇವುಗಳನ್ನು ಅರಿಯದೆ ಮತಾಂತರವಾಗಿರುವ ದಲಿತರಿಗೆ ಮೀಸಲಾತಿ ನೀಡಕೂಡದು ಎಂದು ಅರ್ಜಿ ಅಹವಾಲುಗಳನ್ನು ನೀಡುತ್ತಿರುವ ನಮ್ಮದೇ ಪರಿಶಿಷ್ಟ ಜಾತಿಯ ರಾಜಕಾರಣಿಗಳು, ಯುವಕ/ಯುವತಿಯರು ಸಂಘಪರಿವಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದನ್ನು ನೋಡಿ ಬೇಸರವಾಗುತ್ತದೆ.

ಎನ್‌ಸಿಆರ್‌ಬಿ ದಾಖಲೆಗಳ ಪ್ರಕಾರ ಈ ದೇಶದಲ್ಲಿ ಹೆಚ್ಚು ಅತ್ಯಾಚಾರವಾಗುವುದು ದಲಿತ ಮಹಿಳೆಯರ ಮೇಲೆ. ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳ ಮೇಲಾಗುವ ಅತ್ಯಾಚಾರದಲ್ಲಿ ದಲಿತ ಹೆಣ್ಣುಮಕ್ಕಳೇ ಬಹುಪಾಲು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ದಲಿತರೇ ಹೆಚ್ಚು. ಅಲ್ಲದೆ ಜಾತಿ ದೌರ್ಜನ್ಯ, ಮರ್ಯಾದಾ ಹತ್ಯೆ ಇವೆಲ್ಲಕ್ಕೂ ಒಳಗಾಗುತ್ತಿರುವುದು ದಲಿತರೇ ಎನ್ನುವ ಅರಿವು ನಮಗಿರಬೇಕು.

ಜುಡಿಶಿಯರಿಯಲ್ಲಿ ನಮಗೆ ಮೀಸಲಾತಿ ಬೇಕು, ಖಾಸಗಿಯಲ್ಲಿ ಮೀಸಲಾತಿ ಬೇಕು, ಹೊರಗುತ್ತಿಗೆಯಲ್ಲಿ ನಮಗೆ ಮೀಸಲಾತಿ ಬೇಕು, ಮೂವತ್ತು ಲಕ್ಷಕ್ಕೂ ಹೆಚ್ಚಿರುವ ಬ್ಯಾಕ್‌ಲಾಗ್ ಪೋಸ್ಟ್‌ಗಳನ್ನು ಭರ್ತಿ ಮಾಡಬೇಕು, ಸಮಾನವಾಗಿ ಭೂಮಿ ಹಂಚಿಕೆಯಾಗಬೇಕು, ಜಾತಿಜನಗಣತಿಯಾಗಿ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮಗೆ ಸಿಗಬೇಕಾದ ಎಲ್ಲಾ ಸೌಲಭ್ಯ, ಅಧಿಕಾರ ಬೇಕೆಂದು ಕೇಳಬೇಕಾದ ನಮ್ಮ ಗಮನವನ್ನು ಬೇರೆಡೆ ಸೆಳೆಯುವ ತಂತ್ರಗಾರಿಕೆಯನ್ನು ಮನುವಾದಿಗಳು ಬಹಳ ಪ್ರಜ್ಞಾಪೂರ್ವಕವಾಗಿ ಹೆಣೆದಿದ್ದಾರೆ.

ಇತರ ಮೇಲ್ಜಾತಿಗಳನ್ನು ಬಿಟ್ಟು ಪರಿಶಿಷ್ಟ ಜಾತಿಯಲ್ಲಾಗುತ್ತಿರುವ ಮತಾಂತರದ ಬಗ್ಗೆಯಷ್ಟೆ ಯಾಕೆ ಆಯೋಗಗಳು ರಚನೆಯಾಗುತ್ತಿವೆ ಅನ್ನುವುದರ ಬಗ್ಗೆಯೂ ಅರಿಯಬೇಕು..

ವಿಪರ್ಯಾಸವೇನೆಂದರೆ; ದಲಿತೆ ಕರಿಯಮ್ಮ ಮತಾಂತರವಾದರದು ಹಿಂದೂ ಧರ್ಮದ ವಿನಾಶ.

ಬ್ರಾಹ್ಮಣೆ ಕಮಲಾ ಹ್ಯಾರೀಸ್ ಮತಾಂತರವಾದರದು ಭಾರತದ ಹೆಮ್ಮೆ.

ಜಾತಿ ತಾರತಮ್ಯವನ್ನು, ಬಡತನವನ್ನು, ಹಸಿವನ್ನು, ಗುಲಾಮಗಿರಿಯನ್ನು, ಮುಖ್ಯವಾಗಿ ಹಿಂದೂ ಧರ್ಮದಲ್ಲಿರುವ ಅನಿಷ್ಟ, ಪದ್ಧತಿಗಳನ್ನು, ಮೌಢ್ಯವನ್ನು ತೊಡೆದು ಹಾಕಿದರೆ ಮತಾಂತರ ತಾನಾಗಿಯೇ ನಿಲ್ಲುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರುದ್ರು ಪುನೀತ್

contributor

Similar News