ನಿಲ್ಲದ ಗಲಭೆಗೆ ಪ್ರಚೋದನೆ ಎಲ್ಲಿಂದ?

Update: 2024-10-19 07:03 GMT

‘‘ನಾವು ಹಿಂಸೆಯ ಹಾದಿಯನ್ನು ತ್ಯಜಿಸಿ ಸಹೋದರತೆಯ ಹಾದಿಯಲ್ಲಿ ಮುಂದುವರಿಯಬೇಕಾದ್ದು ಈ ಕಾಲದ ಅಗತ್ಯವಾಗಿದೆ.’’

ಹೀಗೆಂದು ಹೇಳಿದ್ದು ದೇಶದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ಅವರೂ ಅಲ್ಲ, ವಿಪಕ್ಷ ನಾಯಕ ರಾಹುಲ್ ಗಾಂಧಿಯವರೂ ಅಲ್ಲ. 2014ರಲ್ಲಿ ದೇಶದ ಪ್ರಧಾನಿಯಾಗಿ ಮೊದಲ ಬಾರಿ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಭಾಷಣ ಮಾಡುವಾಗ ನರೇಂದ್ರ ಮೋದಿಯವರು ಹೇಳಿದ ಮಾತಿದು.

‘‘ಹಿಂಸೆಯ ದಾರಿ ನಮಗೇನೂ ಕೊಟ್ಟಿಲ್ಲ. ನೀವೆಲ್ಲರೂ ಹತ್ತು ವರ್ಷ ಧರ್ಮ, ಜಾತಿ, ವರ್ಗಗಳ ಆಧಾರದಲ್ಲಿ ನಡೆಯುವ ಸಂಘರ್ಷ ಹಾಗೂ ಹಿಂಸೆಯನ್ನು ತ್ಯಜಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಇದರಿಂದ ಧನಾತ್ಮಕ ಫಲಿತಾಂಶ ಸಿಗಲಿದೆ. ಕಾನೂನು ತನ್ನ ಕೆಲಸ ಮಾಡುತ್ತದೆ. ಆದರೆ ದಾರಿ ತಪ್ಪಿರುವ ನಮ್ಮ ಮಕ್ಕಳನ್ನು ವಾಪಸ್ ಕರೆತರುವ ಕೆಲಸವನ್ನು ಪ್ರತಿಯೊಬ್ಬ ಪೋಷಕನೂ ಮಾಡಬೇಕಾಗಿದೆ. ನಾವೆಲ್ಲರೂ ಸಹೋದರತೆಯಲ್ಲಿ ಭರವಸೆ ಇಟ್ಟು ದೇಶವನ್ನು ಮುನ್ನಡೆಸಬೇಕಾಗಿದೆ. ’’

ಹೀಗೆ 2014ರಲ್ಲಿ ಪ್ರಧಾನಿ ಮೋದಿ ಹೇಳಿದರು.

ಎಷ್ಟೊಳ್ಳೆಯ ಮಾತುಗಳಲ್ಲವೇ? ಎಂತಹ ಧನಾತ್ಮಕ ಸಂದೇಶ ಅಲ್ಲವೇ?

ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಅವರಿಗೆ ತಾವು ಹೇಳಿದ್ದ ಮಾತುಗಳನ್ನು ಜಾರಿ ಮಾಡಲು ಅಧಿಕಾರ, ಪ್ರಭಾವ, ಶಕ್ತಿ, ಜನಪ್ರಿಯತೆ ಎಲ್ಲವೂ ಇತ್ತು. ಅವರು ಹೇಳಿದಾಗ ಜನ ಕ್ಯಾಂಡಲ್ ಹಚ್ಚಿದರು, ತಟ್ಟೆ ಬಾರಿಸಿದರು, ಚಪ್ಪಾಳೆ ತಟ್ಟಿದ್ದರು. ಮೋದಿ ಏನೇನು ಹೇಳಿದರೋ ಅದೆಲ್ಲವನ್ನೂ ಈ ದೇಶದ ಜನ ಚಾಚೂತಪ್ಪದೆ ಮಾಡಿದರು.

ಆದರೆ ಕಳೆದ ಹತ್ತು ವರ್ಷಗಳಲ್ಲಿ ಸ್ವತಃ ಮೋದಿ ಮಾಡಿದ್ದೇನು?

ಗಲಭೆ ಮಾಡಬೇಡಿ, ಹಿಂಸೆ ಬೇಡ, ಸಹೋದರತೆ ಬೇಕು ಅಂತ 2014ರಲ್ಲಿ ಭಾಷಣ ಮಾಡಿದ ಮೋದಿ ಕಳೆದ ಹತ್ತು ವರ್ಷ ಅದೆಷ್ಟು ಕೋಮುವಾದಿ ಭಾಷಣ ಮಾಡಿದರು, ಅದೆಷ್ಟು ಕೋಮುವಾದಿ ಕ್ರಮ ಕೈಗೊಂಡರು, ಅದೆಷ್ಟು ಕೋಮುವಾದಿಗಳನ್ನು ಪೋಷಿಸಿ ಬೆಳೆಸಿದರು, ಅದೆಷ್ಟು ಕೋಮುವಾದಿಗಳನ್ನು ಹುಡುಕಿ ತಂದು ಅವರಿಗೆ ಅಧಿಕಾರ ಕೊಟ್ಟರು, ಅದೆಷ್ಟು ಕೋಮುವಾದವನ್ನು ಸ್ವತಃ ನೀರೆರೆದು ಪೋಷಿಸಿದರು?

ನೂರು ವರ್ಷಗಳ ಹಿಂದಿನ ಗಲಭೆಗಳ ಮಾದರಿಯೇ ಈಗಲೂ ಪ್ರತೀ ರಾಜ್ಯದಲ್ಲೂ ಕಾಣುತ್ತಿದೆ.

ಉತ್ತರ ಪ್ರದೇಶದ ಬಹರಾಯಿಚ್‌ನಲ್ಲಿ ನಡೆದಿರುವ ಹಿಂಸಾಚಾರದ ಕಾರಣವೇನೆಂದು ನೋಡಿದರೆ, ಮತ್ತದೇ 70 ವರ್ಷಗಳಷ್ಟು ಹಳೆಯ, 80-90 ವರ್ಷಗಳಷ್ಟು ಹಳೆಯ, ನೂರು ವರ್ಷಗಳಷ್ಟೇ ಹಳೆಯ ಲೌಡ್ ಸ್ಪೀಕರ್ ನೆಪ. ಲೌಡ್‌ಸ್ಪೀಕರ್ ಜೊತೆಗೇ ಈಗ ಡಿಜೆ ಎಂಬ ಮತ್ತೊಂದು ಗದ್ದಲ.

ಉತ್ತರಪ್ರದೇಶದ ಬಹರಾಯಿಚ್‌ನಲ್ಲಿ ಮನ್ಸೂರ್ ಗ್ರಾಮದ ಮಹರಾಜ್‌ಗಂಜ್ ಪ್ರದೇಶದಲ್ಲಿ ದುರ್ಗಾದೇವಿ ವಿಗ್ರಹ ಮೆರವಣಿಗೆ ವೇಳೆ ಹಿಂಸಾಚಾರ ಸಂಭವಿಸಿತ್ತು. ವಿಸರ್ಜನಾ ಮೆರವಣಿಗೆಯಲ್ಲಿ ಧ್ವನಿವರ್ಧಕ ಬಳಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತು. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಬಳಿಕ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಗಲಭೆಗೆ ಸಂಬಂಧಿಸಿದಂತೆ 30 ಜನರನ್ನು ವಶಕ್ಕೆ ಪಡೆಯಲಾಗಿತ್ತು.

ಇದಾವುದೂ ಧಾರ್ಮಿಕ ಕಾರಣಕ್ಕೆ ಮಾತ್ರ ನಡೆಯುತ್ತಿರುವುದಲ್ಲ. ಹೊಸ ಹೊಸ ನೆಪಗಳ ಶೋಭಾ ಯಾತ್ರೆಗಳೂ ಈಗ ಹಿಂಸೆಗೆ ಕಾರಣವಾಗುತ್ತಿವೆ.

ನೂರು ವರ್ಷಗಳಿಂದ ನಾವು ಇಂಥದೇ ಕಾದಾಟದಲ್ಲಿ ಹೈರಾಣಾಗುತ್ತಿದ್ದೇವೆ. ಹಿಂದೂ-ಮುಸ್ಲಿಮ್ ಗಲಭೆಯನ್ನು ಜೀವಂತವಾಗಿಡುವ ರಾಜಕೀಯವೊಂದು ನಿರಂತರವಾಗಿ, ನಿರ್ಲಜ್ಜವಾಗಿ ಸಾಗಿಯೇ ಬಂದಿದೆ.

ಮುಸ್ಲಿಮ್ ವಿರೋಧಿ ಗಲಭೆಯಾಗಿ ಈಗಿನ ದಿನಗಳಲ್ಲಿ ಅದು ಹಬ್ಬಿಕೊಳ್ಳುತ್ತಿದೆ. ಒಂದು ಸಮುದಾಯವನ್ನು ನಿಕೃಷ್ಟ ಎನ್ನುವುದು, ತಮ್ಮ ಸಮುದಾಯವನ್ನು ಶ್ರೇಷ್ಠರು, ಶಕ್ತಿಯುಳ್ಳವರು ಎಂದು ಬಿಂಬಿಸುವುದು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತದೆ.

ನೂರು, ನೂರೈವತ್ತು ವರ್ಷಗಳಿಂದಲೂ ದ್ವೇಷ ರಾಜಕೀಯದಲ್ಲಿ ನಾವೆಂದೂ ತಗ್ಗಿದ್ದೇ ಇಲ್ಲ. ಗಲಭೆಗೆ ಏನು ನೆಪ ಎಂಬುದು ಗೊತ್ತಿರುವಾಗಲೂ ಅದನ್ನು ದೂರ ಮಾಡುವುದು ಸಾಧ್ಯವಾಗಿಯೇ ಇಲ್ಲ.

1871ರಲ್ಲಿ ರಾಮನವಮಿ ಮತ್ತು ಮುಹರ‌್ರಂ ಒಂದೇ ಸಮಯದಲ್ಲಿ ಬಂದಿದ್ದವು. ಬರೇಲಿ ಮತ್ತು ಪಿಲಿಭೀತ್‌ನಲ್ಲಿ ಅದು ಗಲಭೆಗೆ ಕಾರಣವಾಗಿತ್ತು.

1922ರಲ್ಲಿ ಮಾಲೇಗಾಂವ್‌ನಲ್ಲಿ ಗಲಭೆ ನಡೆದಿತ್ತು.

ಇವುಗಳಲ್ಲೆಲ್ಲ ಇರುವುದು ಒಂದೇ ಕಾರಣ.

ಮಸೀದಿ ಎದುರು ಸಂಗೀತದ ಹೆಸರಲ್ಲಿ ಎಬ್ಬಿಸುವ ಗದ್ದಲದಿಂದ ಉಂಟಾಗುವ ವಿವಾದದ ಕಿಡಿ ಕಡೆಗೆ ಊರನ್ನೇ ಸುಡುವಷ್ಟು ವ್ಯಾಪಿಸುತ್ತದೆ.

ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಸರಕಾರ ಇಂತಹ ಧಾರ್ಮಿಕ ಮೆರವಣಿಗೆಗಳನ್ನು ರದ್ದುಪಡಿಸುವುದಕ್ಕೆ ಹಠ ತೊಟ್ಟು, ಕಡೆಗೆ ಉರುಳಿಬಿದ್ದಿತ್ತು.

ಈಗ 2024ರಲ್ಲಿಯೂ ಪ್ರತೀ ಬಾರಿಯೂ ಅದೇ ಹಳೇ ನೆಪವೇ, ಹಳೇ ಸ್ವರೂಪವೇ ಇಂಥ ಗಲಭೆಗಳಲ್ಲಿ ಇರುವುದನ್ನು ಕಾಣಬಹುದು.

ನೋಡುವುದಕ್ಕೆ ಸಂಗೀತದ ನೆಪದಲ್ಲಿ ಗಲಭೆಯಾಗುತ್ತದಾದರೂ, ಅದರ ಕಾರಣ ಬೇರೆಯೇ ಇರುತ್ತದೆ ಎನ್ನುತ್ತಾರೆ ವಿಶ್ಲೇಷಕರು.

ಡಝನ್‌ಗಟ್ಟಲೆ ಲೌಡ್ ಸ್ಪೀಕರ್ ಇಟ್ಟು ಗಂಟೆಗಟ್ಟಲೆ ಬೀದಿ ಬೀದಿಯಲ್ಲಿ ಸಂಗೀತದ ಅಬ್ಬರ ಎಬ್ಬಿಸುವುದು. ಅದರಲ್ಲೂ ಮಸೀದಿಗಳ ಮುಂದೆ ಬೇಕೆಂದೇ ಗಂಟೆಗಟ್ಟಲೆ ನಿಂತು ಅಬ್ಬರದ ಸಂಗೀತ. ಅದರಲ್ಲಿ ತೀರಾ ಪ್ರಚೋದನಕಾರಿ ಹಾಗೂ ಕೆಲವೊಮ್ಮೆ ಅವಹೇಳನಕಾರಿ ಸಾಲುಗಳು. ಧಾರ್ಮಿಕ ಮೆರವಣಿಗೆಯಲ್ಲಿ ಇಂಥ ಅಬ್ಬರದ ಅಗತ್ಯವೇನಿದೆ?

ದೊಡ್ಡ ರಾಜಕೀಯ ನಾಯಕರ ಮಕ್ಕಳೇನಾದರೂ ಇಲ್ಲಿ ಕುಣಿಯುತ್ತಾರೆಯೇ? ಖಂಡಿತ ಇಲ್ಲ. ಅವರನ್ನು ಉತ್ತಮ ಶಿಕ್ಷಣ ಪಡೆಯಲು ವಿದೇಶಕ್ಕೆ ಕಳಿಸಲಾಗುತ್ತದೆ. ಇಲ್ಲಿ ಕುಣಿಯುವವರು ಬಡವರ ಮನೆಯ ಅಮಾಯಕ ಹುಡುಗರು.

ಡಿಜೆ ಹಾಕಿ ಆಗುವ ಗಲಭೆಯಿಂದ ಲಾಭ ಪಡೆಯುವ ಬಿಜೆಪಿ ನಾಯಕರು ಅಧಿಕಾರಕ್ಕೆ ಏರುತ್ತಾರೆ. ಅವರ ಮಕ್ಕಳು ವಿದೇಶಗಳಿಗೆ ಹೋಗಿ ಪ್ರತಿಷ್ಠಿತ ವಿವಿಗಳಲ್ಲಿ ಕಲಿಯುತ್ತಾರೆ. ಅಲ್ಲೇ ಉದ್ಯೋಗ ಗಳಿಸುತ್ತಾರೆ. ಮತ್ತೆ ಅವರು ಭಾರತಕ್ಕೆ ಬರುವುದು ಅಪ್ಪ ಅಥವಾ ಅಮ್ಮ ಚುನಾವಣೆಯಿಂದ ನಿವೃತ್ತರಾಗುವಾಗ ತಾವು ಚುನಾವಣೆಗೆ ಸ್ಪರ್ಧಿಸಲು.

ಹೀಗೆ ಧಾರ್ಮಿಕ ಹಬ್ಬಹರಿದಿನಗಳ ಹೆಸರಲ್ಲಿ ಹೋಗುವ ಮೆರವಣಿಗೆಯಲ್ಲಿ ಹಾಕುವ ಕೆಲವು ಹಾಡುಗಳಂತೂ ಅಸಭ್ಯ ಭಾಷೆ ಮತ್ತು ಧಾಟಿಯಲ್ಲಿರುತ್ತವೆ.

ರಾಮನವಮಿಯಾಗಲಿ, ದಸರಾ ಆಗಲಿ, ಅಷ್ಟಮಿಯಾಗಲಿ, ಗಣೇಶ ಚತುರ್ಥಿಯಾಗಲಿ ಇಂತಹ ಅಬ್ಬರದ, ಆರ್ಭಟದ, ಪ್ರಚೋದನಕಾರಿ ಹಾಡುಗಳ ಉಪಯೋಗವೇನು? ಅದರ ಪರಿಣಾಮವಾದರೂ ಎಂಥದು?

ಆ ಹಾಡುಗಳಿಗೆ ಅಬ್ಬರದಿಂದ ಕುಣಿಸಿ, ಕೆಣಕಿ ದ್ವೇಷ ಹರಡುವುದು ನಡೆಯುತ್ತದೆ. ಉದ್ಯೋಗವಿಲ್ಲದ, ಕೊಡುವವರೂ ಇಲ್ಲದ, ನಿರುದ್ಯೋಗಿ ಅಮಾಯಕ ಹುಡುಗರು ದ್ವೇಷ ರಾಜಕಾರಣದ ಅಸ್ತ್ರವಾಗುತ್ತಾರೆ.

ಇಂಥ ಹಾಡುಗಳ ಬದಲಿಗೆ ಒಳ್ಳೆಯ ಕೀರ್ತನಗಳನ್ನು, ಒಳ್ಳೆಯ ಆಧ್ಯಾತ್ಮಿಕ ಸಾಹಿತ್ಯವುಳ್ಳ ಬೇರೆ ಹಾಡುಗಳನ್ನು ಯಾಕೆ ಹಾಕುವುದಿಲ್ಲ?

ಆದಿತ್ಯನಾಥ್ ಸರಕಾರ ಲೌಡ್ ಸ್ಪೀಕರ್ ತೆಗೆಯಲು ಸೂಚನೆ ಹೊರಡಿಸಿತು. ಆದರೆ ಇದರ ಜಾರಿ ಯಾವ ರೀತಿಯಲ್ಲಿರುತ್ತದೆ, ಇಲ್ಲಿ ಹೇಗೆಲ್ಲಾ ಸರಕಾರ ಸೆಲೆಕ್ಟಿವ್ ಆಗಿರುತ್ತದೆ?

ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಹೇಳಿರುವ ಹಾಗೆ, ಬಿಜೆಪಿಗೆ ಸಮಾಜದಲ್ಲಿ ದ್ವೇಷ ಹರಡುವುದೇ ಕೆಲಸ.

ಸಾಮಾನ್ಯವಾಗಿ ಡಿಜೆಯಿಂದ ಹೆಚ್ಚಿನವರಿಗೆ ತೊಂದರೆಯಿಲ್ಲ. ಆದರೆ ಅದು ಹಿಂದುತ್ವದ ಅಸ್ತ್ರವಾಗುವಲ್ಲಿಯೇ ಆಪಾಯ ಇರುವುದು.

1970ರಲ್ಲಿ ಮಹಾರಾಷ್ಟ್ರದ ಭಿವಂಡಿಯಲ್ಲಿ ದೊಡ್ಡ ಗಲಭೆಯಾಗಿ 59 ಮುಸ್ಲಿಮರು, 17 ಹಿಂದೂಗಳು ಸಾವನ್ನಪ್ಪಿದ್ದರು.

ಭಾರತದಲ್ಲಿನ ಹೆಚ್ಚು ಇಂಥ ಘಟನೆಗಳನ್ನು ಗಮನಿಸಿದರೆ, ಎದ್ದು ಕಾಣುವುದು ಒಂದೇ ಸಾಮಾನ್ಯ ಕಾರಣ. ಏನೆಂದರೆ, ಮಸೀದಿಯ ಎದುರು ಮೆರವಣಿಗೆಯಲ್ಲಿ ಬಂದು ನಿಂತು ಅನಗತ್ಯ ಅಬ್ಬರ ಏರಿಸುವುದು.

ಹಾಡಿನಲ್ಲಿ ಮುಸ್ಲಿಮರ ವಿರುದ್ಧ ಹೇಳಲಾಗುತ್ತದೆ, ಕೆರಳಿಸುವ ಹಾಗೆ ಇರುತ್ತದೆ. ಭಾರತದಲ್ಲಿ ಇರಬೇಕೆಂದರೆ ವಂದೇ ಮಾತರಂ ಎನ್ನಬೇಕು, ಜೈಶ್ರೀರಾಂ ಎನ್ನಬೇಕು ಎನ್ನಲಾಗುತ್ತದೆ. ಮುಸ್ಲಿಮರ ನಂಬಿಕೆಗಳು, ಮಹಾನ್ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಲಾಗುತ್ತದೆ. ಒಂದು ಸಮುದಾಯವನ್ನು ಶ್ರೇಷ್ಠವೆನ್ನುವ ಭರದಲ್ಲಿ, ಇನ್ನೊಂದು ಸಮುದಾಯವನ್ನು ವೈರಿ ಎಂಬಂತೆ ಬಿಂಬಿಸಲಾಗುತ್ತದೆ.

ಬಹರಾಯಿಚ್ ಗಲಭೆ ಕಡೆಯದೇನೂ ಅಲ್ಲ.

ಒಂದಾದ ಮೇಲೊಂದು ದ್ವೇಷದ ಹಾಡು, ಅದಕ್ಕೆ ತಕ್ಕ ಪ್ರಚೋದನಕಾರಿ ಘೋಷಣೆಗಳು, ಅಬ್ಬರದ ಸಂಗೀತ, ಅಣಕಿಸುವ ರೀತಿಯ ಆರ್ಭಟದ ಕುಣಿತ.

ಆಮೇಲೇನು?

ಬಡ ಜನರು ಸಾಯುತ್ತಾರೆ, ಬಡವರ ಅಂಗಡಿಗಳು, ಮನೆಗಳು ಬೆಂಕಿಯಲ್ಲಿ ಉರಿದುಹೋಗುತ್ತವೆ.

ಸಂಕಟವೊಂದು ಶಾಶ್ವತವಾಗಿ ಉಳಿದೇಹೋಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಿ.ಎನ್. ಉಮೇಶ್

contributor

Similar News