ಸನಾತನ ಧರ್ಮದ ರಕ್ಷಣೆಗೆ ಪ್ರಧಾನಿ ಮೋದಿ ಪಣ ತೊಟ್ಟಿದ್ದೇಕೆ?

Update: 2024-04-19 07:18 GMT

ಜನವರಿ 26, 1950ರಂದು ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಜಾರಿಯಾದಾಗಿನಿಂದ ಈ ಮನುಸ್ಮತಿಗೆ ನಮ್ಮ ದೇಶದಲ್ಲಿ ಯಾವುದೇ ಅಧಿಕೃತ ಮನ್ನಣೆಯಿಲ್ಲ. ಆದರೆ, ಇಂದಿಗೂ ಹಿಂದೂ ಸಮಾಜದ ಕಟ್ಟು-ಕಟ್ಟಳೆಗಳೆಲ್ಲ ಆಚರಣೆಯಲ್ಲಿರುವುದು ಮಾತ್ರ ಈ ಮನುಸ್ಮತಿ ಹೇರಿರುವ ಕಟ್ಟುಪಾಡುಗಳನ್ನು ಆಧರಿಸಿಯೇ. ಅವುಗಳಲ್ಲಿ ಅತ್ಯಂತ ಪುರಾತನ ಕಟ್ಟುಪಾಡು ಅಸ್ಪಶ್ಯತೆ.

ತಮ್ಮ ಜೀವಿತಾವಧಿಯುದ್ದಕ್ಕೂ ಈ ಅಮಾನವೀಯ ಅಸ್ಪಶ್ಯತೆಯ ವಿರುದ್ಧ ಹೋರಾಡಿದ್ದ ಡಾ. ಬಿ.ಆರ್.ಅಂಬೇಡ್ಕರ್, ವಿವಿಧ ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ನಡೆಸಿ, ಸಮಾನತೆ, ಸೌಹಾರ್ದತೆ ಹಾಗೂ ಭ್ರಾತೃತ್ವದ ತಳಹದಿಯಲ್ಲಿ ವಿಶ್ವದ ಅತ್ಯುತ್ಕೃಷ್ಟ ಸಂವಿಧಾನವನ್ನು ರಚಿಸಿದರು. ಆದರೆ, ಈ ಸಂವಿಧಾನವನ್ನು ಬಲವಾಗಿ ವಿರೋಧಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು, ಈ ಸಂವಿಧಾನದಲ್ಲಿ ಭಾರತೀಯತೆ ಎಂಬುದು ಏನೂ ಇಲ್ಲ. ಮನುಸ್ಮತಿಯೇ ನಮ್ಮ ನೈಜ ಸಂವಿಧಾನ ಎಂದು ಘೋಷಿಸಿತ್ತು.

ಸೆಪ್ಟಂಬರ್ 27, 1925ರಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದ್ದು ಬ್ರಾಹ್ಮಣರಲ್ಲೇ ಉನ್ನತರೆಂದು ಕರೆದುಕೊಳ್ಳುವ ಚಿತ್ಪಾವನ ಬ್ರಾಹ್ಮಣರು. ಗಾಂಧಿಯನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ಕೂಡಾ ಇದೇ ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು. ಈ ಸಂಘಟನೆ ಮೂಲತಃ ಸ್ಫೂರ್ತಿಗೊಂಡಿರುವುದು ಜರ್ಮನಿಯ ಅಡಾಲ್ಫ್ ಹಿಟ್ಲರ್‌ನ ನಾಝಿವಾದದಿಂದ. ಬ್ರಾಹ್ಮಣ ಜನಾಂಗೀಯ ಶ್ರೇಷ್ಠತೆಯನ್ನು ತನ್ನ ನರನರದಲ್ಲೂ ತುಂಬಿಕೊಂಡಿರುವ ಈ ಸಂಘಟನೆ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಒಪ್ಪಿಕೊಂಡಿದ್ದೇ ಇಲ್ಲ. ಅಷ್ಟೇ ಏಕೆ, ಭಾರತದ ತ್ರಿವರ್ಣ ಧ್ವಜವನ್ನೂ ರಾಷ್ಟ್ರ ಧ್ವಜ ಎಂದು ಇತ್ತೀಚಿನವರೆಗೂ ಒಪ್ಪಿಕೊಂಡಿರಲಿಲ್ಲ ಹಾಗೂ ನಾಗಪುರದಲ್ಲಿನ ತನ್ನ ಮುಖ್ಯ ಕಚೇರಿಯ ಮೇಲೆ ರಾಷ್ಟ್ರ ಧ್ವಜದ ಬದಲು ಭಗವಾಧ್ವಜವನ್ನೇ ಹಾರಿಸುತ್ತಾ ಬರುತ್ತಿತ್ತು. ಸಮಯ ಸಿಕ್ಕಾಗಲೆಲ್ಲ ಭಗವಾಧ್ವಜವೇ ನಮ್ಮ ರಾಷ್ಟ್ರ ಧ್ವಜ ಎಂದೂ ಹೇಳುತ್ತಾ ಬಂದಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಪ್ರಧಾನಿಯಾದಾಗ ನರೇಂದ್ರ ಮೋದಿ ಮೊದಲು ಮಾಡಿದ್ದು ಸಂವಿಧಾನಕ್ಕೆ ನಮಸ್ಕರಿಸುವ ಕೆಲಸವನ್ನು. ಆದರೆ, ಪರೋಕ್ಷ ಕುಮ್ಮಕ್ಕು ನೀಡಿದ್ದು ಮಾತ್ರ ಸಂವಿಧಾನದ ಆಶಯವಾದ ಸಮಾನತೆ, ಸಹೋದರತೆ ಹಾಗೂ ಸೌಹಾರ್ದತೆಗೆ ವಿರುದ್ಧವಾದ ಕೆಲಸಗಳಿಗೆ. ಗೋರಕ್ಷಣೆಯ ಹೆಸರಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ನಡೆದ ನಿರಂತರ ಹಲ್ಲೆಗಳು, ದೇಶಾದ್ಯಂತ ಹೆಚ್ಚುತ್ತಿರುವ ದಲಿತರ ಮೇಲಿನ ಜಾತಿ ದೌರ್ಜನ್ಯ ಪ್ರಕರಣಗಳು ಈ ಮಾತಿಗೆ ನಿದರ್ಶನ. ಪ್ರಧಾನಿ ಹುದ್ದೆಯಂತಹ ಪರಮಾಧಿಕಾರ ತಮ್ಮ ಬಳಿ ಇರುವಾಗಲೂ, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿದಾಗ ನರೇಂದ್ರ ಮೋದಿ ಪ್ರದರ್ಶಿಸಿದ್ದು ಹುಸಿ ಕಾಳಜಿ ಮಾತ್ರ. ಈಗಲೂ ಉತ್ತರ ಭಾರತದಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಜಾತಿ ದೌರ್ಜನ್ಯಕ್ಕೆ ದಲಿತರು ಒಳಗಾಗುತ್ತಲೇ ಇದ್ದಾರೆ.

ಇನ್ನು ಸಂವಿಧಾನದ ಪೀಠಿಕೆಯಲ್ಲಿರುವ ‘ಜಾತ್ಯತೀತ’ ಪದದ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾತ್ರವಲ್ಲದೆ ಸ್ವತಃ ಪ್ರಧಾನಿ ನರೇಂದ್ರ ಮೋದಿಗೂ ಅಸಹನೆ ಇರುವುದು ನಿಚ್ಚಳ ಸತ್ಯ. ಹೀಗಾಗಿಯೇ ಇತ್ತೀಚೆಗೆ ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತ ಪದವಿಲ್ಲದ ಮೂಲ ಸಂವಿಧಾನ ಪ್ರತಿಯನ್ನು ಸಂಸತ್ತಿನ ಸದಸ್ಯರೆಲ್ಲರಿಗೂ ಹಂಚುವ ಮೂಲಕ ಸಂವಿಧಾನ ಹಾಗೂ ಜಾತ್ಯತೀತ ಪದದ ಬಗೆಗಿನ ತಮ್ಮ ಅಸಹನೆಯನ್ನು ಸಾರ್ವಜನಿಕವಾಗಿಯೇ ಹೊರ ಹಾಕಿದ್ದರು.

ನಮ್ಮ ಸಂವಿಧಾನದ ಶ್ರೇಷ್ಠತೆ ಇರುವುದು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಂಥ ದೇಶಕ್ಕೆ ಸಮಾನತೆ, ಸಹೋದರತೆ ಹಾಗೂ ಸೌಹಾರ್ದತೆಯ ತಳಹದಿಯನ್ನು ನಿರ್ಮಿಸಿರುವುದರಲ್ಲಿ ಮಾತ್ರವಲ್ಲ; ಬದಲಿಗೆ ಕಾಲದ ಅಗತ್ಯಕ್ಕೆ ಅನುಗುಣವಾಗಿ ಸಂವಿಧಾನದ ತಿದ್ದುಪಡಿಗೆ ಅವಕಾಶ ನೀಡಿರುವುದರಲ್ಲಿ ಕೂಡಾ. ವಿವಿಧ ಪಾಶ್ಚಿಮಾತ್ಯ ದೇಶಗಳಲ್ಲಿ ತಿದ್ದುಪಡಿ ಅಥವಾ ಬದಲಾವಣೆಗೆ ಅವಕಾಶವಿಲ್ಲದಂಥ ಸಂವಿಧಾನದಡಿ ಅಲ್ಲಿನ ಸರಕಾರಗಳು ತಮ್ಮ ಕಾರ್ಯನಿರ್ವಹಣೆ ಮಾಡುತ್ತಿವೆ. ಆದರೆ, ಕಾಲವನ್ನು ಹರಿಯುವ ನೀರು ಎಂಬುದನ್ನು ಸಮರ್ಥವಾಗಿ ಗ್ರಹಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾಲದ ಕರೆಗೆ ಅನುಗುಣವಾಗಿ ಸಂವಿಧಾನ ತಿದ್ದುಪಡಿಗೂ ಅವಕಾಶ ಕಲ್ಪಿಸಿದ್ದಾರೆ. ಇಂತಹ ಸಂವಿಧಾನ ತಿದ್ದುಪಡಿ ಅವಕಾಶದಿಂದಾಗಿಯೇ ದಲಿತರಿಗೆ ಕೇವಲ 10 ವರ್ಷಗಳಿಗೆ ಮೀಸಲಾಗಿದ್ದ ರಾಜಕೀಯ ಮೀಸಲಾತಿಯು ಕಾಲಕಾಲದ ತಿದ್ದುಪಡಿಯಿಂದ ಇಂದಿಗೂ ಮುಂದುವರಿದಿರುವುದು ಹಾಗೂ ರಾಜಕೀಯ ಪ್ರಾತಿನಿಧ್ಯ ಪಡೆಯಲು ಈ ರಾಜಕೀಯ ಮೀಸಲಾತಿ ಎಷ್ಟು ಅಗತ್ಯ ಎಂಬ ಅರಿವು ದಲಿತರಲ್ಲಿ ತಡವಾಗಿಯಾದರೂ ಮೂಡತೊಡಗಿರುವುದು. ದಲಿತರಲ್ಲಿನ ಈ ಜಾಗೃತಿ ಸಹಜವಾಗಿಯೇ ಜಾತಿವಾದಿಗಳ ಪಾಲಿಗೆ ಅಸಹನೀಯವಾಗಿ ಪರಿಣಮಿಸಿದೆ.

ಹೀಗಾಗಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅದರ ರಾಜಕೀಯ ಘಟಕವಾದ ಭಾರತೀಯ ಜನತಾ ಪಕ್ಷ ಮೊದಲಿನಿಂದಲೂ ದಲಿತರಿಗೆ ಒದಗಿಸಿರುವ ಮೀಸಲಾತಿಯ ಕುರಿತು ಅಪಸ್ವರ ಎತ್ತುತ್ತಲೇ ಬರುತ್ತಿರುವುದು. ಅದರ ಬದಲು ಶಾಶ್ವತ ಪರಿಕಲ್ಪನೆಯ ಸನಾತನ ಧರ್ಮದ ವಕಾಲತ್ತು ವಹಿಸುತ್ತಿರುವುದು. ಒಮ್ಮೆ ಸನಾತನ ಧರ್ಮದ ಸಂವಿಧಾನವಾದ ಮನುಸ್ಮತಿಯನ್ನು ಜಾರಿಗೊಳಿಸಿದರೆ, ಅದನ್ನು ಸಹಸ್ರಾರು ವರ್ಷಗಳ ಕಾಲ ಕಡ್ಡಾಯವಾಗಿ ಅಸ್ತಿತ್ವದಲ್ಲಿಡುವುದು ಸುಲಭವಾಗುತ್ತದೆ ಎಂಬುದೇ ಸನಾತನವಾದಿಗಳ ಬಹು ಮುಖ್ಯ ಸಂಚು.

ಜಾತ್ಯತೀತ ಸಂವಿಧಾನವನ್ನು ಒಪ್ಪಿಕೊಂಡಿರುವ ಭಾರತದಂಥ ದೇಶದ ಪ್ರಧಾನಿಯೊಬ್ಬರು ಬಹಿರಂಗವಾಗಿಯೇ ಸನಾತನ ಧರ್ಮದ ರಕ್ಷಣೆಯ ಪಣ ತೊಡುವುದರ ಹಿಂದೆಯೂ ಒಂದು ಸಂಚಿದೆ. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ನರೇಂದ್ರ ಮೋದಿ, 2002ರಲ್ಲಿ ಗೋಧ್ರಾ ಗಲಭೆಯಾದ ನಂತರ, ಹಿಂದಿರುಗಿ ನೋಡಿದ್ದೇ ಇಲ್ಲ. 2001ರಿಂದ 2014ರವರೆಗೆ ಸತತ 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, 2014ರಿಂದ ಇಲ್ಲಿಯವರೆಗೆ ಸತತ 10 ವರ್ಷಗಳ ಕಾಲ ಪ್ರಧಾನಿಯಾಗಿದ್ದಾರೆ. ಅರ್ಥಾತ್ ನಿರಂತರವಾಗಿ 23 ವರ್ಷಗಳ ಕಾಲ ಅತ್ಯುನ್ನತ ಹುದ್ದೆಗಳನ್ನು ಅನುಭವಿಸುತ್ತಾ, ಅಜೇಯರಾಗಿಯೇ ಉಳಿದು ಬಂದಿದ್ದಾರೆ. ತನ್ನ ಅಧಿಕಾರವು ಶಾಶ್ವತವೂ, ಅಜೇಯವೂ ಆಗಿ ಉಳಿಯಬೇಕು ಎಂಬ ಹಪಾಹಪಿಗೆ ಬಿದ್ದಿರುವ ನರೇಂದ್ರ ಮೋದಿ, ತಾನು ಪ್ರಧಾನಿ ಹುದ್ದೆಯಂಥ ಅತ್ಯುನ್ನತ ಹುದ್ದೆಗೇರಲು ಮೂಲ ಕಾರಣವಾದ ‘ಹಿಂದೂ ಹೃದಯ ಸಾಮ್ರಾಟ’ ಬಿರುದಿಗೆ ಮತ್ತೆ ಹೊಳಪು ನೀಡಲು ಮುಂದಾಗಿದ್ದಾರೆ. ಆದರೆ, ಸನಾತನ ಧರ್ಮದ ರಕ್ಷಣೆಯ ಪಣ ತೊಡಲು ಪ್ರಧಾನಿ ನರೇಂದ್ರ ಮೋದಿಗೆ ಇದಷ್ಟೇ ಕಾರಣವಾದಂತಿಲ್ಲ.

ಒಂದು ಕಾಲದ ಭಾರತದ ಮಿತ್ರರಾಷ್ಟ್ರವಾಗಿದ್ದ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರಂತೆಯೇ ತಾವೂ ಜೀವನ ಪೂರ್ತಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸಬೇಕು ಎಂಬ ಕನಸೂ ನರೇಂದ್ರ ಮೋದಿಯವರಲ್ಲಿ ಹುಟ್ಟಿರುವಂತಿದೆ. ಪ್ರಜಾತಾಂತ್ರಿಕ ಮಾರ್ಗದ ಮೂಲಕವೇ ರಶ್ಯದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ವ್ಲಾದಿಮಿರ್ ಪುಟಿನ್, ನಂತರ ಅದೇ ಪ್ರಜಾತಾಂತ್ರಿಕ ಮಾರ್ಗದ ಮೂಲಕ ತಮ್ಮ ದೇಶದ ಸಂವಿಧಾನಕ್ಕೆ ಬದಲಾವಣೆ ತಂದು ಆಜೀವ ಸರ್ವಾಧಿಕಾರಿಯಾಗಿ ಬದಲಾಗಿದ್ದಾರೆ. ಇದು ಸಹಜವಾಗಿಯೇ ಸುದೀರ್ಘ ಕಾಲದ ಅಧಿಕಾರ ಅನುಭವಿಸಿರುವ ಭಾರತದ ಪ್ರಧಾನಿಯಲ್ಲೂ ಅಂತಹ ಕನಸನ್ನು ಬಿತ್ತಿರಲೂ ಸಾಕು. ಹೀಗಾಗಿಯೇ ಈ ಬಾರಿ ‘ಅಬ್ ಕಿ ಬಾರ್ ಚಾರ್ ಸೌ ಪಾರ್’ (ಈ ಬಾರಿ ನಾನೂರರಾಚೆ) ಎಂಬ ಘೋಷ ವಾಕ್ಯವನ್ನು ಮೊಳಗಿಸಿರುವುದು.

ಭಾರತದ ಸಂವಿಧಾನದ ಪ್ರಕಾರ, ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಮಾನ್ಯ ಬಹುಮತ ಸಾಕಾಗುತ್ತದೆ. ಅರ್ಥಾತ್ 543 ಸದಸ್ಯ ಬಲದ ಲೋಕಸಭೆ ಹಾಗೂ 245 ಸದಸ್ಯ ಬಲದ ರಾಜ್ಯಸಭೆಯ ಅರ್ಧಕ್ಕೂ ಹೆಚ್ಚು ಸದಸ್ಯರ ಸಮ್ಮತಿಯೊಂದಿಗೆ ಸಂವಿಧಾನಕ್ಕೆ ಯಾವುದೇ ತಿದ್ದುಪಡಿಯನ್ನು ತರಬಹುದಾಗಿದೆ. ಆದರೆ, ಸಂವಿಧಾನ ಬದಲಾವಣೆಯನ್ನೇ ಮಾಡಬೇಕಿದ್ದರೆ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯ ಬೀಳುತ್ತದೆ. ಇದಲ್ಲದೆ ನಮ್ಮ ಭಾರತವು ಒಕ್ಕೂಟ ದೇಶವಾಗಿರುವುದರಿಂದ ಶೇ. 75ರಷ್ಟು ರಾಜ್ಯಗಳು ಸಂವಿಧಾನ ಬದಲಾವಣೆಗೆ ಸಮ್ಮತಿ ಸೂಚಿಸಬೇಕಾಗುತ್ತದೆ.

ವಿರೋಧ ಪಕ್ಷಗಳು ಶಿಥಿಲಾವಸ್ಥೆ ತಲುಪಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿಯೇ ಬಿಜೆಪಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿರುವುದು ಕಾಂಗ್ರೆಸ್ ಮಾತ್ರ. ಬಿಜೆಪಿ ಹೊರತುಪಡಿಸಿದರೆ, ದೇಶದ ಎಲ್ಲ ರಾಜ್ಯಗಳಲ್ಲೂ ಸಂಘಟನಾ ಜಾಲ ಮತ್ತು ತಳಹದಿ ಹೊಂದಿರುವುದು ಕಾಂಗ್ರೆಸ್ ಮಾತ್ರ. ಹೀಗಾಗಿಯೇ ಕಳೆದ ಬಾರಿಯ ಚುನಾವಣೆಯಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ ಘೋಷ ವಾಕ್ಯವನ್ನು ಹರಿಬಿಡಲಾಯಿತು. ಅದರ ಹಿಂದೆ ಇದ್ದ ಸಂಚು ದೊಡ್ಡ ಪ್ರಮಾಣದಲ್ಲಿ ರಾಜ್ಯಗಳ ಆಡಳಿತ ಚುಕ್ಕಾಣಿಯನ್ನು ಹಿಡಿಯುವುದಾಗಿತ್ತು. ಅದು ಅಸಾಧ್ಯವಾದಾಗ, ಆಪರೇಷನ್ ಕಮಲ ನಡೆಸಿ, ಕಾಂಗ್ರೆಸ್ ಪಕ್ಷದ ಅರ್ಧದಷ್ಟು ನಾಯಕರನ್ನು ಬಿಜೆಪಿ ತನ್ನತ್ತ ಸೆಳೆಯಿತು.

ಇದೀಗ ಮುಂಬರುವ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ನಾನೂರರ ಗಡಿಯನ್ನು ತಮಗೆ ತಾವೇ ವಿಧಿಸಿಕೊಂಡಿದ್ದಾರೆ. ಇದು ಮೇಲ್ನೋಟಕ್ಕೆ ಅವರ ಆತ್ಮವಿಶ್ವಾಸದಂತೆ ಕಂಡರೂ, ಆಳದಲ್ಲಿರುವುದು ಮಾತ್ರ ಸಂವಿಧಾನದ ಬದಲಾವಣೆಗೆ ಬೇಕಾದ ಸಂಖ್ಯಾಬಲದ ಲೆಕ್ಕಾಚಾರ. ಪ್ರಧಾನಿ ನರೇಂದ್ರ ಮೋದಿ ಅಜೇಯರಾಗಿಯೇ ತಮ್ಮ ಜೀವನವನ್ನು ಮುಗಿಸಬೇಕಿದ್ದರೆ, ವ್ಲಾದಿಮಿರ್ ಪುಟಿನ್ ರಶ್ಯ ಸಂವಿಧಾನವನ್ನು ಬದಲಿಸಿದಂತೆಯೇ, ನರೇಂದ್ರ ಮೋದಿ ಕೂಡಾ ಭಾರತದ ಸಂವಿಧಾನವನ್ನು ಬದಲಿಸಲೇಬೇಕಿದೆ. ಅದಕ್ಕೆ ನಿಗದಿಪಡಿಸಿರುವ ನಿಚ್ಚಳ ಗುರಿಯೇ ನಾನೂರು.

ಭಾರತದ ಚುನಾವಣಾ ಇತಿಹಾಸದಲ್ಲಿ ಅತ್ಯಧಿಕ ಬಹುಮತ ಹೊಂದಿದ್ದ ಇಬ್ಬರು ಪ್ರಧಾನಿಗಳು ಪಂಡಿತ್ ಜವಾಹರಲಾಲ್ ನೆಹರೂ ಹಾಗೂ ರಾಜೀವ್ ಗಾಂಧಿ ಮಾತ್ರ. ಈ ಪೈಕಿ ಜವಾಹರಲಾಲ್ ತಮಗಿದ್ದ ಭಾರೀ ಬಹುಮತವನ್ನು ಪ್ರಜಾತಂತ್ರವನ್ನು ಬಲಿಷ್ಠಗೊಳಿಸಲು ಬಳಸಿದರೆ, ರಾಜೀವ್ ಗಾಂಧಿ ದೇಶವನ್ನು ತಾಂತ್ರಿಕ ಕ್ರಾಂತಿಯತ್ತ ಮುನ್ನಡೆಸಲು ಬಯಸಿದರು. ಇವರಿಬ್ಬರೂ ಬಯಸಿದ್ದರೆ, ಸರ್ವಾಧಿಕಾರಿಗಳಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿರಲಿಲ್ಲ. ಆದರೆ, ಶಾಶ್ವತದ ಭ್ರಮೆಗೆ ಬೀಳದ ಈ ಇಬ್ಬರು ಪ್ರಧಾನಿಗಳು ತಮ್ಮ ಅಧಿಕಾರವನ್ನು ವೈಚಾರಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ತಳಹದಿಯ ಮೇಲೆ ದೇಶವನ್ನು ಕಟ್ಟಲು ಬಳಸಿದರು. ಹೀಗಾಗಿಯೇ ಅವರಿಬ್ಬರೂ ಇಂದಿಗೂ ತಮ್ಮದೇ ಆದ ವಿಶಿಷ್ಟ ಕಾರಣಗಳಿಗೆ ಚಿರಸ್ಮರಣೀಯರಾಗಿದ್ದಾರೆ. ಆದರೆ, ಈ ದೇಶದ ಬಹುತ್ವಕ್ಕೆ ಸದಾ ಕಾಲ ಬೆದರಿಕೆ ಒಡ್ಡುತ್ತಾ ಬರುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅದರ ರಾಜಕೀಯ ಘಟಕವಾದ ಬಿಜೆಪಿಯ ಪ್ರಧಾನಿಯಾದ ನರೇಂದ್ರ ಮೋದಿ ಸನಾತನ ಧರ್ಮದ ರಕ್ಷಣೆಯ ಪಣ ತೊಟ್ಟಿದ್ದಾರೆ. ಅಂದರೆ, ಈ ನೆಲದಲ್ಲಿ ಅಸಮಾನತೆಯನ್ನು ಶಾಶ್ವತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸನಾತನ ಧರ್ಮದ ರಕ್ಷಣೆಯ ಪಣ ತೊಟ್ಟಿದ್ದಾರೆಂದೇ ಅರ್ಥ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸದಾನಂದ ಗಂಗನಬೀಡು

contributor

Similar News