ರಾಹುಲ್ ಧ್ವನಿಯೇ ಇಡೀ ಕಾಂಗ್ರೆಸ್ ಪಕ್ಷದ ಧ್ವನಿ ಯಾಕಾಗುತ್ತಿಲ್ಲ?

ಕಾಂಗ್ರೆಸ್ ಅಧಿಕಾರಕ್ಕೆ ಬರದೇ ಇದ್ದರೂ, ಅಲ್ಪಸಂಖ್ಯಾತರ ದನಿಯಾಗಬಲ್ಲ ಬಲವನ್ನಂತೂ ಈ ಫಲಿತಾಂಶ ತಂದುಕೊಟ್ಟಿದೆ. ಇದೊಂದು ದೊಡ್ಡ ಅವಕಾಶ. ಹೀಗಿರುವಾಗ, ದೇಶದ ಮುಸ್ಲಿಮರು ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕಿದೆ ಮತ್ತು ಕೋಟ್ಯಂತರ ಮುಸ್ಲಿಮರ ವಿಶ್ವಾಸ ಸುಳ್ಳಾಗದಂತೆ ಕಾಂಗ್ರೆಸ್ ನಡೆದುಕೊಳ್ಳಬೇಕಾಗಿದೆ. ಇದು ಕಾಂಗ್ರೆಸ್ ಮಾಡುವ ಉಪಕಾರ ಅಲ್ಲ, ದೇಶದ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಅದರ ಕರ್ತವ್ಯವಾಗಿದೆ.

Update: 2024-07-16 06:01 GMT

ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿ ಧ್ವನಿ ಎತ್ತಬೇಕಿದೆ ಮತ್ತು ಪ್ರಾಮಾಣಿಕವಾಗಿ ಹೋರಾಡಬೇಕಿದೆ ಎಂದು ರಾಹುಲ್ ಗಾಂಧಿಯವರೇನೋ ಹೇಳುತ್ತಿದ್ದಾರೆ. ಆದರೆ ಪಕ್ಷದ ಇತರರು ಅದನ್ನು ಅರ್ಥ ಮಾಡಿಕೊಂಡಂತಿಲ್ಲ. ಈ ದೇಶದ ಮುಸ್ಲಿಮರು ಕಾಂಗ್ರೆಸ್ ಪಕ್ಷದಲ್ಲಿ ನಂಬಿಕೆ ಇಟ್ಟಿದ್ದಾರೆ, ಅವರನ್ನು ನಿರಾಸೆಗೊಳಿಸಬಾರದು ಎಂಬುದು ಕಾಂಗ್ರೆಸ್ ನಾಯಕರಿಗೆ ಏಕೆ ಹೊಳೆಯುತ್ತಿಲ್ಲ?

ಶ್ರೀನಗರ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಆಗಾ ಸೈಯದ್ ರೂಹುಲ್ಲಾ ಮೆಹದಿ ಈ ವಿಚಾರವನ್ನು ಎತ್ತಿದ್ದಾರೆ.

‘ಇಂಡಿಯಾ’ ವಿಪಕ್ಷ ಒಕ್ಕೂಟದ ನಾಯಕರು ಇತರ ಅಲ್ಪಸಂಖ್ಯಾತರ ಬಗ್ಗೆ ಮಾತಾಡಿದರೂ, ಮುಸ್ಲಿಮರ ವಿಚಾರದಲ್ಲಿ ಮೌನವಾಗಿರುವುದರ ಬಗ್ಗೆ ಅವರು ತಕರಾರು ತೆಗೆದಿದ್ದಾರೆ.

ಈ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ಬಹಳ ದೊಡ್ಡ ಪ್ರಮಾಣದಲ್ಲಿ ‘ಇಂಡಿಯಾ’ ಒಕ್ಕೂಟದ ಪರವಾಗಿ ನಿಂತಿದ್ದಾರೆ ಮತ್ತು ಮತ ಹಾಕಿದ್ದಾರೆ ಎಂಬುದನ್ನು ಅವರು ನೆನಪಿಸಿದ್ದಾರೆ.

ದೇಶಾದ್ಯಂತ ಮುಸ್ಲಿಮರು ಒಗ್ಗಟ್ಟಾಗಿ ಬೆಂಬಲಿಸಿದ್ದರಿಂದಲೇ ಎಲ್ಲ ಸಮೀಕ್ಷೆಗಳು ಸುಳ್ಳಾಗುವ ಹಾಗೆ ಫಲಿತಾಂಶ ಬಂತೆಂಬುದನ್ನು ಆಗಾ ಸೈಯದ್ ಹೇಳುತ್ತಿದ್ದಾರೆ.

ಹೀಗಿರುವಾಗಲೂ ಕಾಂಗ್ರೆಸ್ ಏಕೆ ದೇಶಾದ್ಯಂತ ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಮಾತನಾಡಲು ಹಿಂಜರಿಯುತ್ತಿದೆ? ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮುಸ್ಲಿಮರು ಸತತವಾಗಿ ಮೂಲೆಗುಂಪಾಗುತ್ತಿದ್ದರೂ ಏಕೆ ಮೌನ ವಹಿಸಿದೆ?

ಇವು ಆಗಾ ಸೈಯದ್ ಎತ್ತಿರುವ ಪ್ರಶ್ನೆಗಳು.

ಹಿಂದೂ ವಿರೋಧಿ ಎಂದಾಗಲೀ ಮುಸ್ಲಿಮ್ ಪರ ಎಂದಾಗಲೀ ಬ್ರಾಂಡ್ ಆಗಲು ಬಯಸದ ಕಾಂಗ್ರೆಸ್‌ನ ಈ ಕಸರತ್ತನ್ನು ಅವರು ಗಮನಿಸಿದ್ದಾರೆ. ಕಾಂಗ್ರೆಸ್ ಧೋರಣೆ ಬದಲಾಗಬೇಕಿದೆ ಎಂದಿದ್ದಾರೆ.

ಆದರೆ ರಾಹುಲ್ ಗಾಂಧಿ ಅವರ ಬಗ್ಗೆ ಮಾತ್ರ ಮೆಹದಿ ಮೆಚ್ಚುಗೆಯಿದೆ. ಕಳೆದ ವಾರ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದನ್ನು ಅವರು ಗಮನಿಸಿದ್ದಾರೆ.

‘‘ಅಲ್ಪಸಂಖ್ಯಾತರನ್ನು ಹೆದರಿಸುತ್ತೀರಿ. ಮುಸ್ಲಿಮರ ವಿರುದ್ಧ, ಸಿಖ್ಖರ ವಿರುದ್ಧ, ಕ್ರಿಶ್ಚಿಯನ್ನರ ವಿರುದ್ಧ ಹಿಂಸೆ, ದ್ವೇಷ ಹರಡುತ್ತೀರಿ. ಅವರೇನು ಮಾಡಿದ್ದಾರೆ? ಅವರು ಪರ್ವತಗಳಂತೆ ಭಾರತದೊಂದಿಗೆ ದೃಢವಾಗಿ ನಿಂತಿದ್ಧಾರೆ. ಅವರು ದೇಶಭಕ್ತರು. ಆದರೆ ನೀವು ಎಲ್ಲಾ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಿದ್ದೀರಿ, ಅವರ ವಿರುದ್ಧ ಹಿಂಸೆ ಮತ್ತು ದ್ವೇಷವನ್ನು ಹರಡಿದ್ದೀರಿ’’ ಎಂದು ರಾಹುಲ್ ಬಿಜೆಪಿ ವಿರುದ್ಧ ಗುಡುಗಿದ್ದನ್ನು ಮೆಹದಿ ಬಲ್ಲರು.

ಆದರೆ, ನಿಜವಾಗಿಯೂ ಧಾರ್ಮಿಕ ಸಮುದಾಯಗಳ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಧೋರಣೆಯ ಸಮಸ್ಯೆ ಇರುವುದು ಎಲ್ಲಿ?

ಸ್ಪಷ್ಟವಾಗಿ ಗಮನಕ್ಕೆ ಬರುವ ಒಂದು ವಿಚಾರವೆಂದರೆ, ತಾನು ಮುಸ್ಲಿಮರ ಹಕ್ಕುಗಳ ಬಗ್ಗೆ ಮಾತಾಡುವ ಪಕ್ಷ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಹಿಂಜರಿಯುತ್ತಿದೆ ಎಂಬುದು.

ಕಾಂಗ್ರೆಸ್ ಬಗ್ಗೆ ಹಿಂದೂ ವಿರೋಧಿ ಎಂಬ ಭಾವನೆ ಹೆಚ್ಚುತ್ತಿದ್ದು, ಇದನ್ನು ನಿವಾರಿಸಬೇಕಾಗಿದೆ ಎಂದು ಹಿರಿಯ ನಾಯಕ ಎ.ಕೆ. ಆ್ಯಂಟನಿ ಈ ಹಿಂದೆ ಹೇಳಿದ್ದನ್ನು ಕಾಂಗ್ರೆಸ್ ಬಹಳ ಗಂಭೀರವಾಗಿ ತೆಗೆದುಕೊಂಡ ಹಾಗಿದೆ.

2014ರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದಾಗ ಇಂತಹದೊಂದು ಸಲಹೆ ಆ್ಯಂಟನಿ ಕಡೆಯಿಂದ ಬಂದಿತ್ತು.

ಪಕ್ಷದ ಸೋಲಿನ ಕಾರಣ ಹುಡುಕುವ ಸಮಿತಿಗೆ ಅವರು ಮುಖ್ಯಸ್ಥರಾಗಿದ್ದರು. ಎಲ್ಲ ಸಮಾಲೋಚನೆಗಳು, ಮುಖಂಡರು, ಕಾರ್ಯಕರ್ತರ ಜೊತೆ ಚರ್ಚೆ ಬಗ್ಗೆ ಆ್ಯಂಟನಿ ಕೊಟ್ಟ ಕಾರಣಗಳಲ್ಲಿ ಪ್ರಮುಖವಾದುದು - ಕಾಂಗ್ರೆಸ್‌ಗೆ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ. ಅದನ್ನು ನಿವಾರಿಸಲು ಪ್ರಯತ್ನಿಸಬೇಕು ಎಂಬುದು.

ಆ ಬಳಿಕ ಕಾಂಗ್ರೆಸ್ ಮತ ಬ್ಯಾಂಕ್ ಉದ್ದೇಶಕ್ಕಾಗಿ ಮುಸ್ಲಿಮರನ್ನು ಓಲೈಸುತ್ತಿದೆ ಎಂಬ ಭಾವನೆ ಹೋಗಲಾಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿತ್ತು.

2017ರ ಗುಜರಾತ್ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿ, ಆ್ಯಂಟನಿ ಸಲಹೆಯನ್ನು ಅದು ಅಕ್ಷರಶಃ ಪಾಲಿಸುತ್ತಿದೆ ಎಂಬುದಕ್ಕೆ ನಿದರ್ಶನವಾಗಿತ್ತು.

ಆಗ ರಾಹುಲ್ ಗಾಂಧಿ ಕೂಡ ಅದನ್ನೇ ಮಾಡಿದ್ದರು.

ಗುಜರಾತ್ ಚುನಾವಣೆ ಪ್ರಚಾರದ ವೇಳೆ ಅವರು ಹಿಂದೂಗಳ ಒಲವು ಸಂಪಾದಿಸುವ ಕೆಲಸವನ್ನೇ ಮಾಡಿದ್ದರು.

ಹಿಂದೂಗಳ ಬಳಿ ಮಾತ್ರ ಮತ ಯಾಚಿಸಿದ್ದರು.

ದೇವಾಲಯಗಳಿಗೆ, ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಲೇ ಇದ್ದ ಅವರು, ಅಪ್ಪಿತಪ್ಪಿಯೂ ಮಸೀದಿ ಅಥವಾ ದರ್ಗಾಕ್ಕೆ ಭೇಟಿ ನೀಡಿರಲಿಲ್ಲ.

ಹೀಗೆ ಮೃದು ಹಿಂದುತ್ವದ ಧೋರಣೆಯನ್ನು ಕಾಂಗ್ರೆಸ್ ತೋರಿಸಿಕೊಂಡಿತ್ತು.

ಬಿಜೆಪಿ ಸಾಮಾಜಿಕವಾಗಿ, ರಾಜಕೀಯವಾಗಿ ಮಾಡಿದ್ದೇನು ಎಂಬುದು ಇನ್ನೊಂದು ಚರ್ಚೆಯ ವಿಷಯ.

ಆದರೆ ಬಹುಸಂಖ್ಯಾತ ಸಮುದಾಯವನ್ನು ಓಲೈಸಲು ಕಾಂಗ್ರೆಸ್ ಯತ್ನಿಸಿತಲ್ಲ, ಅದರ ಪಾಲು ಕೂಡ ಈ ದೇಶದ ಕೇಸರೀಕರಣದಲ್ಲಿ ಇದ್ದೇ ಇದೆ.

ಹಾಗೆ ನೋಡಿದರೆ, ಜಾತ್ಯತೀತತೆಯ ಸಾಂವಿಧಾನಿಕ ಮೌಲ್ಯಗಳು ಇವತ್ತಿಗೂ ಉಳಿದಿರುವುದೆಂದರೆ, ದಕ್ಷಿಣದ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ತೆಲಂಗಾಣಗಳಲ್ಲಿ.

ಆದರೆ, ದೇಶದ ವಿವಿಧ ಭಾಗಗಳಲ್ಲಿ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಬಿಜೆಪಿಯನ್ನೇ ಮೀರಿಸುವ ಹಾಗೆ ಹಿಂದುತ್ವದ ಪ್ರತಿಪಾದಕರಾಗಿ ಕಾಣಿಸಿಕೊಂಡರು.

ಉದಾಹರಣೆಗೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ತಾನು ಹೆಚ್ಚು ಹಿಂದೂ ಪರವೆಂದು ತೋರಿಸಿಕೊಳ್ಳಲು ಯತ್ನಿಸಿತು.

ಕಾಂಗ್ರೆಸ್ ನಾಯಕ ಕಮಲ್ ನಾಥ್ ಯಾವುದೇ ಮುಲಾಜಿಲ್ಲದೆ ಹಿಂದುತ್ವ ಪ್ರತಿಪಾದನೆಗೆ ಜೋತು ಬಿದ್ದಿದ್ದರು. ಹಿಂದೂ ಧಾರ್ಮಿಕ ಮುಖಂಡರು ಮಾತ್ರವಲ್ಲ ವಂಚಕ, ದ್ವೇಷ ಕಾರುವ ಬಾಬಾಗಳ ಕಾಲಿನ ಬುಡಕ್ಕೂ ಹೋದರು.

ಆದರೆ ಚುನಾವಣೆಯಲ್ಲೇನೂ ಅದು ಅವರ ಕೈಹಿಡಿಯಲಿಲ್ಲ. ಅಲ್ಲಿ ಕಾಂಗ್ರೆಸ್ ಅತ್ಯಂತ ಹೀನಾಯವಾಗಿ ಸೋತು ಹೋಯಿತು.

ಕರ್ನಾಟಕದಲ್ಲೂ ಹಿಜಾಬ್ ವಿರುದ್ಧ ಬಿಜೆಪಿ, ಸಂಘ ಪರಿವಾರ ವಿವಾದ ಸೃಷ್ಟಿಸಿದಾಗ ಇಲ್ಲಿನ ಕಾಂಗ್ರೆಸ್ ಮುಖಂಡರಿಗೆ ಆ ಬಗ್ಗೆ ಹೇಳಿಕೆ ಕೊಡಬೇಡಿ ಎಂದು ಕೆಪಿಸಿಸಿಯಿಂದಲೇ ಫರ್ಮಾನು ಹೋಗಿತ್ತು.

ಹಲವು ಕಾಂಗ್ರೆಸ್ ಸ್ಪರ್ಧಿಗಳು ತಮ್ಮ ಪಕ್ಷದ ಮುಸ್ಲಿಮ್ ಮುಖಂಡರಲ್ಲಿ ‘‘ನೀವು ನಿಮ್ಮವರಲ್ಲಿ ವೋಟು ಹಾಕಲು ಹೇಳಿ, ನಮ್ಮ ಜೊತೆ ಪ್ರಚಾರಕ್ಕೆ ಬರುವುದು ಬೇಡ’’ ಎಂದು ಹೇಳಿ ಅವಮಾನ ಮಾಡಿದರು.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ಬೇರೆಲ್ಲ ಸಮುದಾಯಗಳಿಗಿಂತ ಹೆಚ್ಚು ಒಗ್ಗಟ್ಟಾಗಿ ಕಾಂಗ್ರೆಸ್ ಪರ ನಿಂತು, ಮತ ವಿಭಜನೆ ಆಗದಂತೆ ನೋಡಿಕೊಂಡರು, ಕಾಂಗ್ರೆಸ್‌ನ ಭರ್ಜರಿ ಗೆಲುವಲ್ಲಿ ನಿರ್ಣಾಯಕ ಕೊಡುಗೆ ನೀಡಿದರು.

ಆದರೆ ಕಾಂಗ್ರೆಸ್ ಮುಸ್ಲಿಮ್ ಶಾಸಕರಿಗೆ ಸಚಿವ ಸ್ಥಾನ ಕೊಡುವಾಗ ಹಿಂದೆ ಮುಂದೆ ನೋಡಿತು. ಲೆಕ್ಕಕ್ಕೆ ಮಾತ್ರ ಕೊಟ್ಟಿತು. ಯಾವುದೇ ಪ್ರಮುಖ ಖಾತೆಯನ್ನು ಮುಸ್ಲಿಮರಿಗೆ ಕೊಡಲೇ ಇಲ್ಲ.

ಇಲ್ಲಿ ಕಾಂಗ್ರೆಸ್ ಸರಕಾರ ಬಂದು ವರ್ಷದ ಅವಧಿಯಲ್ಲಿ ಇನ್ನೂ ಹಲವು ನೇಮಕಾತಿಗಳಲ್ಲೂ ಮುಸ್ಲಿಮರಿಗೆ ಅನ್ಯಾಯ ಮಾಡಲಾಯಿತು.

ಇದೆಲ್ಲ ಅಹಿಂದ ನಾಯಕ, ಮುತ್ಸದ್ದಿ, ಜಾತ್ಯತೀತ ಜನನಾಯಕ ಎಂಬ ಹೆಗ್ಗಳಿಕೆಯ ಸಿದ್ದರಾಮಯ್ಯ ಅವರ ಸರಕಾರ ಇರುವಾಗಲೇ ಆಗುತ್ತಿದೆ.

ಕಾಂಗ್ರೆಸ್ ಮೃದು ಹಿಂದುತ್ವ ಪಾಲಿಸಿದಾಗಲೆಲ್ಲ ಅದು ಮುಗ್ಗರಿಸಿದೆ, ಬಿಜೆಪಿಗೆ ಲಾಭ ಮಾಡಿ ಕೊಟ್ಟಿದೆ.

ಇದೆಲ್ಲ ಗೊತ್ತಿದ್ದರೂ, ಅಲ್ಪಸಂಖ್ಯಾತರ ಪರ ನಿಲ್ಲಲು, ಸಂವಿಧಾನದ ಜಾತ್ಯತೀತ ಮೌಲ್ಯಗಳಿಗೆ ಬದ್ಧತೆ ತೋರಿಸಲು ಕಾಂಗ್ರೆಸ್ ನಾಯಕತ್ವ ಅಷ್ಟಾಗಿ ಪ್ರಯತ್ನಿಸಿಯೇ ಇಲ್ಲ.

ಮಧ್ಯಪ್ರದೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ ಮತ್ತು ತಾರತಮ್ಯ ನಡೆದಾಗಲೂ ಕಾಂಗ್ರೆಸ್ ಪ್ರತಿಭಟಿಸದೆ ಹೋಯಿತು.

ಇತರ ರಾಜ್ಯಗಳಲ್ಲೂ ಅದರ ಧೋರಣೆ ತೀರಾ ಬೇರೆಯಾಗಿಲ್ಲ.

ಮೋದಿ ಸರಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ದೇಶಾದ್ಯಂತ ಮುಸ್ಲಿಮರ ವಿರುದ್ಧ ಗುಂಪು ಹಲ್ಲೆ, ಗುಂಪು ಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ಆ ಬಗ್ಗೆ ಕಾಂಗ್ರೆಸ್ ಎಲ್ಲಾದರೂ ಸ್ಪಷ್ಟವಾಗಿ ಮಾತಾಡಿದ್ದು ಕಾಣುತ್ತಿಲ್ಲ.

ಅಲ್ಪಸಂಖ್ಯಾತರೂ ಸೇರಿದಂತೆ ಅಂಚಿನಲ್ಲಿರುವವರು ಮತ್ತು ತುಳಿತಕ್ಕೊಳಗಾದವರನ್ನು ರಕ್ಷಿಸುವ ಕೆಲಸ ಆಗದೇ ಇದ್ದಾಗ, ಅದನ್ನು ಸರಕಾರದ ಗಮನಕ್ಕೆ ತರಲು ಆಗ ಏಕೆ ಸಂವಿಧಾನದ ಪ್ರತಿಯನ್ನು ಎತ್ತಿ ಹಿಡಿಯಲಿಲ್ಲ ಎಂದೂ ಕೇಳಬೇಕಾಗುತ್ತದೆ.

ಅಲ್ಪಸಂಖ್ಯಾತರು 20 ಕೋಟಿಯಷ್ಟಿರುವಾಗ, ಅವರನ್ನು ನಿರ್ಲಕ್ಷಿಸಿದರೆ, ದಲಿತರ ಜೊತೆಗೆ ದೇಶದ ದೊಡ್ಡ ಭಾಗವನ್ನೇ ಕತ್ತಲಲ್ಲಿ ಇಟ್ಟಂತಾಗುತ್ತದೆ ಎಂಬುದನ್ನು ಕಾಂಗ್ರೆಸ್ ಏಕೆ ಯೋಚಿಸುತ್ತಿಲ್ಲ?

ಈಗಂತೂ, ಇದು ಕಾಂಗ್ರೆಸ್ ಪಾಲಿಗೆ ನಿಜವಾಗಿಯೂ ಅಲ್ಪಸಂಖ್ಯಾತರ ಪರವಾಗಿ ನಿಲ್ಲಬೇಕಿರುವ ಸಮಯವಾಗಿದೆ.

ರಾಹುಲ್ ಗಾಂಧಿಯವರ ‘ಭಾರತ ಜೋಡೊ ಯಾತ್ರೆ’ ಮತ್ತು ‘ಭಾರತ ಜೋಡೋ ನ್ಯಾಯ ಯಾತ್ರೆ’ಯ ನಂತರ ಬಹಳಷ್ಟು ಬದಲಾಗಿದೆ ಎಂಬುದೇನೊ ನಿಜ.

ಆದರೆ ಆಗಲೂ, ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಪ್ರತಿಪಾದನೆಯ ಹೊತ್ತಿನಲ್ಲಿಯೂ, ರಾಹುಲ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸದಂತೆ ಅದರ ಸಂಘಟಕರು ಎಚ್ಚರ ವಹಿಸಿದ್ದರು ಎಂದೇ ವಿಶ್ಲೇಷಿಸಲಾಗುತ್ತದೆ.

ಇದೇ ವೇಳೆ, ಜಾತಿ ಗಣತಿ ನಡೆಸುವ ವಿಚಾರವಾಗಿ ಹೇಳಿರುವ ಕಾಂಗ್ರೆಸ್, ಸಿಎಎ ಮತ್ತು 370ನೇ ವಿಧಿ ರದ್ದತಿಯಂಥ ವಿಷಯಗಳ ಬಗ್ಗೆ ದ್ವಂದ್ವ ನಿಲುವನ್ನೇ ಹೊಂದಿದೆ ಎಂದೂ ಪರಿಣಿತರು ಅಭಿಪ್ರಾಯ ಪಡುತ್ತಾರೆ.

ಮೊನ್ನೆಯ ಲೋಕಸಭಾ ಚುನಾವಣೆ ಪ್ರಚಾರದಲ್ಲಿಯೂ, ಸಿಎಎ ವಿರುದ್ಧ ಕಾಂಗ್ರೆಸ್ ಬಹಿರಂಗವಾಗಿ ಮಾತನಾಡಲಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಆದರೆ ಅದನ್ನು ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ. ಚಿದಂಬರಂ ತಕ್ಷಣ ನಿರಾಕರಿಸಿದ್ದರು ಮತ್ತು ಅಧಿಕಾರಕ್ಕೆ ಬಂದಲ್ಲಿ ಸಿಎಎ ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದರು ಎಂಬ ಮಾತು ಬೇರೆ.

2024ರ ಚುನಾವಣಾ ಪ್ರಚಾರದ ವೇಳೆ ಅಲ್ಪಸಂಖ್ಯಾತರ ರಕ್ಷಣೆಗೆ ಕಾಂಗ್ರೆಸ್ ಹೇಳಿಕೊಳ್ಳುವಂಥ ಭರವಸೆ ನೀಡದೇ ಇದ್ದರೂ, ಅಲ್ಪಸಂಖ್ಯಾತರ ಬೆಂಬಲ ಮಾತ್ರ ದೇಶಾದ್ಯಂತ ಕಾಂಗ್ರೆಸ್‌ಗೆ ಭರ್ಜರಿಯಾಗೇ ಸಿಕ್ಕಿದೆ.

ಉತ್ತರಪ್ರದೇಶದಂಥ ರಾಜ್ಯದಲ್ಲಿಯೇ ಬಿಜೆಪಿ ಸೋಲುವ ಹಾಗೆ ದಲಿತರು, ಮುಸ್ಲಿಮರು ಮತ್ತು ಅಸಮಾಧಾನಗೊಂಡ ಯುವಕರು ‘ಇಂಡಿಯಾ’ ಮೈತ್ರಿಕೂಟದ ಪರವಾಗಿದ್ದರು.

‘ಮಂಗಲ್ ಸೂತ್ರ’ ಎಂದೆಲ್ಲ ಪ್ರತಿಪಾದಿಸುತ್ತ, ಮುಸ್ಲಿಮರಿಗೆ ಹಿಂದೂಗಳ ಆಸ್ತಿ ಕಸಿದು ಹಂಚಲಾಗುತ್ತದೆ ಎಂದು ಅಪಪ್ರಚಾರ ಮಾಡಿದ್ದೂ ಬಿಜೆಪಿಗೆ ಫಲ ಕೊಡದೆ ಹೋಯಿತು.

ಈಗ ರಾಹುಲ್ ನಾಯಕತ್ವದಲ್ಲಿ ಕಾಂಗ್ರೆಸ್ ಒಂದಷ್ಟು ಮುಸ್ಲಿಮರ ಪರ ಮಾತಾಡುತ್ತಿದೆ ಎಂಬುದು ನಿಜ.

ಸಾಮಾಜಿಕ ನ್ಯಾಯವನ್ನು ಪಕ್ಷದ ಪ್ರತಿಪಾದನೆಯ ಮುಖ್ಯ ವಿಷಯವಾಗಿಸುವ ಮೂಲಕ ರಾಹುಲ್ ಗಾಂಧಿಯವರು ಕಾಂಗ್ರೆಸ್‌ಗೆ ಹೊಸ ಚೈತನ್ಯ ತುಂಬಲು ಯತ್ನಿಸುತ್ತಿರುವುದೂ ನಿಜ.

ಆದರೆ ರಾಹುಲ್ ದನಿ ಇಡೀ ಪಕ್ಷದ ದನಿಯಾಗುತ್ತಿದೆಯೇ?

ಹಲವು ಒಡಕು ದನಿಗಳು ಪಕ್ಷದೊಳಗೇ ಇದ್ದಾಗ ಅದೆಲ್ಲವನ್ನೂ ಮೀರಿ ಪಕ್ಷ ಈ ವಿಚಾರದಲ್ಲಿ ದಿಟ್ಟತನ ಮತ್ತು ದೃಢತೆ ತೋರುವುದು ಹೇಗೆ ಮತ್ತು ಯಾವಾಗ?

ಕಾಂಗ್ರೆಸ್ ಅಧಿಕಾರಕ್ಕೆ ಬರದೇ ಇದ್ದರೂ, ಅಲ್ಪಸಂಖ್ಯಾತರ ದನಿಯಾಗಬಲ್ಲ ಬಲವನ್ನಂತೂ ಈ ಫಲಿತಾಂಶ ತಂದುಕೊಟ್ಟಿದೆ.

ಇದೊಂದು ದೊಡ್ಡ ಅವಕಾಶ.

ಹೀಗಿರುವಾಗ, ದೇಶದ ಮುಸ್ಲಿಮರು ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕಿದೆ ಮತ್ತು ಕೋಟ್ಯಂತರ ಮುಸ್ಲಿಮರ ವಿಶ್ವಾಸ ಸುಳ್ಳಾಗದಂತೆ ಕಾಂಗ್ರೆಸ್ ನಡೆದುಕೊಳ್ಳಬೇಕಾಗಿದೆ.

ಇದು ಕಾಂಗ್ರೆಸ್ ಮಾಡುವ ಉಪಕಾರ ಅಲ್ಲ, ದೇಶದ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಅದರ ಕರ್ತವ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎ.ಎನ್. ಯಾದವ್

contributor

Similar News