ಪ.ಜಾತಿ/ಪ.ಪಂಗಡಗಳ ಬಗ್ಗೆ ಏಕೆ ಈ ನಿರ್ಲಕ್ಷ್ಯ?

ಪ.ಜಾತಿ/ಪ.ಪಂಗಡಗಳ ಹಿತರಕ್ಷಣೆಯಲ್ಲಿ ಪ್ರಾಮಾಣಿಕವಾಗಿ ಆಸಕ್ತಿ ಇರುವವರು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಯವರ ಆಡಳಿತದಲ್ಲೇ ಈ ಜಾತಿ/ವರ್ಗಗಳ ಬಗ್ಗೆ ಏಕೆ ಹೀಗೆ ನಿರ್ಲಕ್ಷ್ಯ ತೋರಲಾಗುತ್ತಿದೆ?

Update: 2024-08-04 07:06 GMT

ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮೊದಲು ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಕಾಯ್ದೆ -1955 (ಪಿಸಿಆರ್ ಆ್ಯಕ್ಟ್-1955)ಎಂಬುದು ಇತ್ತು. ಇದರ ಅಡಿಯಲ್ಲಿ ದೇಶದಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಇನ್ನೂ ವಿಶೇಷ ಕಾಯ್ದೆ ಮಾಡುವ ಅವಶ್ಯಕತೆ ಇದೆ ಎಂದು ಕೇಂದ್ರ ಸರಕಾರ 1989ರಲ್ಲಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಮೇಲಿನ) ದೌರ್ಜನ್ಯ ತಡೆ ಕಾಯ್ದೆ (ಎಸ್‌ಸಿ ಆ್ಯಂಡ್ ಎಸ್‌ಟಿ (ಪ್ರಿವೆನ್‌ಷನ್ ಆಫ್ ಅಟ್ರಾಸಿಟೀಸ್) ಆ್ಯಕ್ಟ್) ಮಾಡಿತು. ಇದಕ್ಕೆ ಕರ್ನಾಟಕ ಸರಕಾರವು 1989ರಲ್ಲಿ ನಿಯಮಗಳನ್ನು ರಚಿಸಿ, ರಾಜ್ಯದಲ್ಲಿ ಜಾರಿ ಮಾಡಿತು.

ಈ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ರಾಜ್ಯ ಸರಕಾರವು ರಾಜ್ಯಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯನ್ನು ರಚಿಸುತ್ತದೆ. ಮುಖ್ಯಮಂತ್ರಿಯವರು ಈ ಸಮಿತಿ ಅಧ್ಯಕ್ಷರು. ರಾಜ್ಯ ವಿಧಾನಸಭೆಗೆ ಮತ್ತು ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಪ.ಜಾತಿ/ಪ.ಪಂಗಡಕ್ಕೆ ಸೇರಿದ ಎಲ್ಲಾ ಶಾಸಕರು ಮತ್ತು ರಾಜ್ಯವನ್ನು ಪ್ರತಿನಿಧಿಸುವ ಪ.ಜಾತಿ/ಪ.ಪಂಗಡಕ್ಕೆ ಸೇರಿದ ಸಂಸತ್ ಸದಸ್ಯರು ಈ ಸಮಿತಿಗೆ ಸದಸ್ಯರು. ಇದು ಪ್ರತೀವರ್ಷದ ಜನವರಿ ಮತ್ತು ಜುಲೈ ತಿಂಗಳಲ್ಲಿ ಕಡ್ಡಾಯವಾಗಿ ಸಭೆಯನ್ನು ನಡೆಸಬೇಕು.

ಆದರೆ, ಈ ಸಮಿತಿಯು ಕಳೆದ ಹತ್ತು ವರ್ಷಗಳಲ್ಲಿ (ಅಂದರೆ ಮುಖ್ಯಮಂತ್ರಿ ಯಾವುದೇ ಪಕ್ಷದವರು ಇರಲಿ) ಒಂದು ವರ್ಷವೂ ಕಾಯ್ದೆಯಲ್ಲಿ ಹೇಳಿದ ತಿಂಗಳುಗಳಲ್ಲಿ ಸಭೆ ನಡೆಸಿಲ್ಲ. ಈಗಿನ ಮುಖ್ಯಮಂತ್ರಿಯವರು ಅಧಿಕಾರ ಸ್ವೀಕರಿಸಿದ್ದು 2023ರ ಮೇ ತಿಂಗಳಲ್ಲಿ. ಅವರು ಈ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಆ ವರ್ಷದ ಜುಲೈ ತಿಂಗಳಲ್ಲಿ ಸಭೆ ನಡೆಸಬೇಕಿತ್ತು, ನಡೆಸಲಿಲ್ಲ. ಅವರು 2024ರ ಜನವರಿ ತಿಂಗಳಲ್ಲಿ ಸಭೆ ನಡೆಸಬೇಕಿತ್ತು. ನಡೆಸಲಿಲ್ಲ. ಕಳೆದ ತಿಂಗಳು ಸಭೆ ನಡೆಸಬೇಕಿತ್ತು ನಡೆಸಿಲ್ಲ. ಪ.ಜಾತಿ/ಪ.ಪಂಗಡಗಳ ಹಿತರಕ್ಷಣೆಯಲ್ಲಿ ಪ್ರಾಮಾಣಿಕವಾಗಿ ಆಸಕ್ತಿ ಇರುವವರು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಯವರ ಆಡಳಿತದಲ್ಲೇ ಈ ಜಾತಿ/ವರ್ಗಗಳ ಬಗ್ಗೆ ಏಕೆ ಹೀಗೆ ನಿರ್ಲಕ್ಷ್ಯ ತೋರಲಾಗುತ್ತಿದೆ?

ಈಗಿನ ಮುಖ್ಯಮಂತ್ರಿಯವರು ಜುಲೈ 2023, ಜನವರಿ 2024 ಮತ್ತು ಜುಲೈ 2024 ಹೀಗೆ ಮೂರು ಸಭೆಗಳನ್ನು ನಡೆಸುವಲ್ಲಿ ವಿಫಲರಾಗಿದ್ದಾರೆ. ಇವರು ಈ ಅವಧಿಯಲ್ಲಿ ಕೇವಲ ಒಂದು ಸಭೆಯನ್ನು ನಡೆಸಿದ್ದಾರೆ, ಅದು 7 ಜುಲೈ 2023ರಂದು. ಅಲ್ಲಿ ಚರ್ಚಿಸಲಾದ ಮತ್ತು ಮುಖ್ಯಮಂತ್ರಿಯವರು ನಿರ್ದೇಶನ ನೀಡಲಾದ ಕೆಲವೊಂದು ಅಂಶಗಳು ಏನು ಎಂಬುದನ್ನು ಈಗ ನೋಡೋಣ.

ಆರೋಪ ಪಟ್ಟಿ ಸಲ್ಲಿಸುವಿಕೆ

ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ 60ದಿನಗಳ ಒಳಗಾಗಿ ಆರೋಪ ಪಟ್ಟಿಯನ್ನು ದಾಖಲಿಸುವುದು ಕಡ್ಡಾಯ ಎಂದಿದ್ದರೂ, 60 ದಿನಗಳ ಬಳಿಕ 2,363 ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ದಾಖಲಿಸಲಾಗಿದೆ. 120 ದಿನಗಳಾದ ಬಳಿಕ 1,100 ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಕೋರ್ಟು ತಡೆಯಾಜ್ಞೆ ನೀಡಿರುವ ಅಥವಾ ಆರೋಪಿ ತಲೆಮರೆಸಿಕೊಂಡಿರುವ ಪ್ರಕರಣಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ದೌರ್ಜನ್ಯ ಪ್ರಕರಣ ಗಳಲ್ಲಿ ನಿಗದಿತ ಕಾಲಮಿತಿ ಒಳಗೆ ಆರೋಪ ಪಟ್ಟಿಯನ್ನು ಪೊಲೀಸರು ದಾಖಲಿಸಬೇಕಿತ್ತು. ಇದು ಆಗಿಲ್ಲ. ಇದು ಪೊಲೀಸ್ ಇಲಾಖೆಯ ವೈಫಲ್ಯ. ಇಂಥ ಪರಿಸ್ಥಿತಿಯನ್ನು ಪೊಲೀಸ್ ಇಲಾಖೆ ನಿರ್ಮಾಣ ಮಾಡಿದಾಗ ಆರೋಪಿಗೆ ಸುಲಭವಾಗಿ ಜಾಮೀನು ಸಿಗುವ ಸಾಧ್ಯತೆ ಇರುತ್ತದೆ ಹಾಗೂ ದೌರ್ಜನ್ಯಕ್ಕೆ ಗುರಿಯಾದವರಿಗೆ ನ್ಯಾಯ ಒದಗಿಸು ವುದು ಕಠಿಣವಾಗುತ್ತದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.

ಪ.ಜಾತಿ/ಪ.ಪಂಗಡಗಳಿಗೆ ಸೇರಿದವರು ಕೊಲೆಯಾದ ಪ್ರಕರಣಗಳ ಪೈಕಿ 32 ಪ್ರಕರಣಗಳಲ್ಲೂ ಕೊಲೆಯಾಗಿ 120 ದಿನಗಳಾದರೂ ಆರೋಪ ಪಟ್ಟಿ ದಾಖಲಿಸಿಲ್ಲ ಎಂಬುದನ್ನು ಎತ್ತಿ ಹೇಳಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ತರು ಪ್ರಕರಣ ದಾಖಲಿಸಲು ಹಿಂಜರಿಯುತ್ತಾರೆ. ಅಂತಹುದರಲ್ಲಿ ಆರೋಪ ಪಟ್ಟಿಯನ್ನು ದಾಖಲಿಸಲು ವಿಳಂಬವಾದರೆ ಆರೋಪಿಗಳಿಗೆ ಕಾನೂನಿನ ಭಯ ಇರುವುದಿಲ್ಲ ಹಾಗೂ ಇದರಿಂದಾಗಿ ಪ.ಜಾತಿ/ಪ.ಪಂಗಡದವರಿಗೆ ಸೂಕ್ತ ರಕ್ಷಣೆ ಒದಗಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ 120 ದಿನಗಳ ನಂತರ ಆರೋಪ ಪಟ್ಟಿ ದಾಖಲಿಸಿರುವ 1,100 ಪ್ರಕರಣಗಳಿಗೆ ಸಂಬಂಧಿಸಿದ ತನಿಖಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

ಆರೋಪ ಸಾಬೀತಾಗುವ ಪ್ರಮಾಣ ಕಡಿಮೆ

ಪ.ಜಾತಿ/ಪ.ಪಂಗಡಗಳವರ ಮೇಲೆ ದೌರ್ಜನ್ಯ ನಡೆದಿದೆ ಎಂದು ದಾಖಲಿಸಲ್ಪಡುವ ಪ್ರಕರಣಗಳಲ್ಲಿ ಕೇವಲ ಶೇ. 3.44 ಪ್ರಕರಣಗಳಲ್ಲಿನ ಆರೋಪಿಗಳಿಗೆ ಶಿಕ್ಷೆ ಆಗುತ್ತಿದೆ. ಅಂದರೆ 100 ಪ್ರಕರಣಗಳ ಬಗ್ಗೆ ಕೋರ್ಟಿನಲ್ಲಿ ವಿಚಾರಣೆ ನಡೆದ ಬಳಿಕ 96.56 ಪ್ರಕರಣಗಳಲ್ಲಿನ ಆರೋಪಿಗಳ ಮೇಲಿನ ಆರೋಪವು ಸಾಬೀತಾಗುತ್ತಿಲ್ಲ. ಇದಕ್ಕೆ ಪೊಲೀಸ್ ಇಲಾಖೆ ಮತ್ತು ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ಕಾರಣಗಳನ್ನು ನೀಡಬೇಕಿದೆ.

ಈ ವಿಷಯದ ಮೇಲೆ ಮಾತನಾಡಿದ ಮುಖ್ಯಮಂತ್ರಿಯವರು ಈ ಅಂಶದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿಯವರು ಬಹಳಷ್ಟು ಕಡೆಗಳಲ್ಲಿ ಅಪರಾಧ ಮಾಡಿದ ವ್ಯಕ್ತಿಯೇ(ಗಳೇ) ಮತ್ತೆ ಮತ್ತೆ ಅಪರಾಧ ಮಾಡುತ್ತಿದ್ದಾರೆ ಎಂಬ ಅಂಶವನ್ನು ಸಭೆಯ ಗಮನಕ್ಕೆ ತಂದರು.

ಈ ವಿಷಯ ಕುರಿತು ಮಾತನಾಡಿದ ಮುಖ್ಯಮಂತ್ರಿಯವರು ಪೊಲೀಸ್ ಇಲಾಖೆಯವರು ದೌರ್ಜನ್ಯ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಮರ್ಪಕವಾಗಿ ಮಹಜರ್ ಮಾಡದೆ ಇರುವುದರಿಂದ, ಶೇ. 50ರಷ್ಟು ಪ್ರಕರಣಗಳಲ್ಲಿ, ದೋಷಾರೋಪ ಪಟ್ಟಿಯನ್ನು ಸಕಾಲದಲ್ಲಿ ದಾಖಲಿಸದೆ ಇರುವುದರಿಂದ, ಶೇ. 25ರಷ್ಟು ಪ್ರಕರಣಗಳಲ್ಲಿ ಮತ್ತು ಸರಕಾರಿ ಅಭಿಯೋಗ ಮತ್ತು ವ್ಯಾಜ್ಯಗಳ ಇಲಾಖೆಯ ಅದಕ್ಷತೆಯ ಕಾರಣದಿಂದ ಶೇ. 25ರಷ್ಟು ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕುತ್ತಿಲ್ಲ ಎಂದು ಕಂಡುಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಬಹಿಷ್ಕಾರ

ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 14 ಸಾಮಾಜಿಕ ಬಹಿಷ್ಕಾರ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 7 ಪ್ರಕರಣಗಳು ಉಡುಪಿ ಜಿಲ್ಲೆ ಒಂದರಲ್ಲೇ ದಾಖಲಾಗಿವೆ. ಒಟ್ಟು 14 ಪ್ರಕರಣಗಳಲ್ಲಿ 8 ಪ್ರಕರಣಗಳಿಗೆ ಸಂಬಂಧಿಸಿ ಬಿ ರಿಪೋರ್ಟ್ ಹಾಕಲಾಗಿದ್ದು, ಈ ಬಗ್ಗೆ ವಿವರಗಳನ್ನು ಒದಗಿಸಿ ಎಂದು ಮುಖ್ಯಮಂತ್ರಿಯವರು ಸೂಚನೆ ನೀಡಿದರು.

ಐದು ವರ್ಷಗಳಲ್ಲಿ ನಡೆದ ದೌರ್ಜನ್ಯಗಳು

ಗೃಹಮಂತ್ರಿಯವರು ಹೇಳಿದಂತೆ, 2018ರಿಂದ ಜೂನ್ 2023ರವರೆಗೆ ರಾಜ್ಯದಲ್ಲಿ 10,893 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿರುವುದು 8,626 ಪ್ರಕರಣಗಳಲ್ಲಿ.

ಪೊಲೀಸ್ ಅಧಿಕಾರಿ ಅಮಾನತು

ಬೆಂಗಳೂರು ನಗರ ಜಿಲ್ಲೆಯ ಡಿಸಿಪಿ ಲಕ್ಷ್ಮಣ ನಿಂಬರಗಿ ಇವರು ತಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿರುವ ಪ.ಜಾತಿ/ಪ.ಪಂಗಡ ನೌಕರ/ಅಧಿಕಾರಿಗಳಿಗೆ ಜಾತಿನಿಂದನೆ ಮಾಡಿರುವ ಪ್ರಕರಣದ ಬಗ್ಗೆ ಮುಖ್ಯ ಮಂತ್ರಿಯವರು ಇವರನ್ನು ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ವಿಜಯ್ ಕುಮಾರ್ ಅವರನ್ನು ಅಮಾನತು ಮಾಡಿ, ಇಲಾಖಾ ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ.

ಸರಕಾರದ ನಡೆಯ ಮೇಲೆ ನಿಗಾ

ರಾಜ್ಯಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸಭೆಯಲ್ಲಿ ಇನ್ನೂ ಹತ್ತಾರು ವಿಷಯಗಳು ಚರ್ಚೆಗೆ ಬಂದಿವೆ; ಅನೇಕ ವಿಷಯ ಗಳಲ್ಲಿ ಮುಖ್ಯಮಂತ್ರಿಯವರು ಆದೇಶ ನೀಡಿದ್ದಾರೆ.

ಇವುಗಳನ್ನು ಅಧ್ಯಯನ ಮಾಡಲು ಪ.ಜಾತಿ/ ಪ.ಪಂಗಡ ಸಂಘ-ಸಂಸ್ಥೆಗಳು ಮುಂದಾಗಬೇಕು. ಸರಕಾರವನ್ನು ಸರಕಾರಿ ನಡಾವಳಿಗಳ ಆಧಾರದಲ್ಲೇ ಹಿಡಿದು ಹಾಕಬೇಕು. ಅಲ್ಲಿನ ಅಕ್ರಮ ನಡೆಯನ್ನು ಗುರುತಿಸಿ, ಎತ್ತಿ ಮತ್ತೆ ಸರಕಾರಕ್ಕೆ ತೋರಿಸಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು.

ಇದು ವಾಸ್ತವದಲ್ಲಿ ವಿರೋಧ ಪಕ್ಷದ ಮುಖ್ಯ ಕೆಲಸ. ಆದರೆ, ರಾಜಕಾರಣವು ಅನುಕೂಲಸಿಂಧು ರೀತಿಯಲ್ಲಿ ನಡೆಯುವುದು ರೂಢಿ ಆಗಿರುವ ಈ ದಿನಗಳಲ್ಲಿ ಬೀದಿಯ ಲ್ಲಿರುವ ವಿರೋಧ ಪಕ್ಷ ಎನಿಸಿರುವ ಪ.ಜಾತಿ/ ಪ.ಪಂಗಡ ಸಂಘ-ಸಂಸ್ಥೆಗಳು ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕು. ಮೊದಲು ಪ.ಜಾತಿ/ಪ.ಪಂಗಡ ಶಾಸಕರನ್ನು ಈ ಕುರಿತು ಪ್ರಶ್ನೆ ಮಾಡುವ ಕೆಲಸ ನಡೆಯಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಪಾತ್ರ ಏನು ಎಂಬುದನ್ನು ಸಮರ್ಪಕವಾಗಿ ಅರಿತುಕೊಂಡಿರುವ ಪ.ಜಾತಿ/ ಪ.ಪಂಗಡ ಸಂಘ-ಸಂಸ್ಥೆಗಳು ಮತ್ತು ಸಂವಿಧಾನದ ಆಶಯಪರ ಇರುವ ಯಾವುದೇ ಜಾತಿ/ಧರ್ಮ/ಭಾಷೆಯ ಸಂಘ-ಸಂಸ್ಥೆಗಳು ಈ ಕಾರ್ಯದಲ್ಲಿ ತಮ್ಮನ್ನು ಪ್ರಾಮಾಣಿಕ ವಾಗಿ ತೊಡಗಿಸಿಕೊಳ್ಳಬೇಕು.

*ಲೇಖಕರು ಕರ್ನಾಟಕ ದಲಿತ ಚಳವಳಿ ಯೊಂದಿಗೆ ಅರ್ಧ ಶತಮಾನ ಕಾಲ ಸಂಪರ್ಕ ಹೊಂದಿರುವವರು

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮಂಗ್ಳೂರ ವಿಜಯ

contributor

Similar News