ಬಿಜೆಪಿ ಓಟಕ್ಕೆ ‘ಇಂಡಿಯಾ’ ಹಾಕುವುದೇ ಬ್ರೇಕ್?
‘ಕಾಂ’ ಭಾಗವಾಗಿದ್ದ ಕ್ಷತ್ರಿಯ ಸಮುದಾಯ (ರಜಪೂತ್) ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ರಾಜಕೋಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪುರುಷೋತ್ತಮ ರೂಪಾಲ ಇತ್ತೀಚೆಗೆ ಕ್ಷತ್ರಿಯ ಸಮಾಜದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಎಡವಟ್ಟು ಮಾಡಿದ್ದಾರೆ. ಈ ಕಾರಣಕ್ಕೆ ಸಚಿವ ಸ್ಥಾನದಿಂದ ಕೈಬಿಡುವಂತೆ ಒತ್ತಡ ಹೇರಿದೆ. ‘ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ’ ಎಂದೂ ಬೆದರಿಕೆ ಒಡ್ಡಿದೆ. ಈ ಅವಕಾಶವನ್ನು ಕಾಂಗ್ರೆಸ್ ಸಮರ್ಪಕವಾಗಿ ಬಳಸಿಕೊಳ್ಳುವುದೇ ಎಂದು ನೋಡಬೇಕಿದೆ.
ಅದು 2014ರ ಲೋಕಸಭೆ ಚುನಾವಣೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಮೊದಲ ಲೋಕಸಭೆ ಚುನಾವಣೆ ಎದುರಿಸಿತ್ತು. ಗುಜರಾತ್ ‘ಆಡಳಿತ’ವೇ ಅವರಿಗೆ ದಿಲ್ಲಿಯ ದಾರಿ ತೋರಿತು. ಇದರಿಂದ ಕಮಲ ಪಡೆ ಉತ್ಸಾಹವೂ ಹೆಚ್ಚಿತು. ಮತ್ತೊಂದೆಡೆ, ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಚುನಾವಣೆ ಎದುರಿಸಲು ಪರದಾಡಿತು. ಅನೇಕ ಹಿರಿಯ ನಾಯಕರು ‘ಅಖಾಡ’ಕ್ಕೆ ಇಳಿಯಲು ಹಿಂದೇಟು ಹಾಕಿದರು. ಚುನಾವಣೆಗೆ ಮೊದಲೇ ಈ ಪಕ್ಷ ನೈತಿಕವಾಗಿ ಕುಸಿಯಿತು.
ಇದು ದಶಕದ ಹಿಂದಿನ ಮಾತು. ಆನಂತರ ಎರಡು ಸಾರ್ವತ್ರಿಕ ಚುನಾವಣೆಗಳು ಮುಗಿದು, ಮೂರನೇ ಚುನಾವಣೆ ನಡೆಯುತ್ತಿದ್ದರೂ ಕಾಂಗ್ರೆಸ್ ಚೇತರಿಸಿ ಕೊಂಡಿಲ್ಲ. ಈ ಸಲವೂ ಅಭ್ಯರ್ಥಿಗಳನ್ನು ಹುಡುಕಲು ಪರದಾಡಿದೆ. ಕೆಲವು ಕ್ಷೇತ್ರಗಳ ಹಿರಿಯ ನಾಯಕರು ಸ್ಪರ್ಧೆಗೆ ಹಿಂಜರಿದಿದ್ದರಿಂದ, ಅಷ್ಟೇನು ಪ್ರಬಲರಲ್ಲದವರನ್ನು ಕಣಕ್ಕೆ ಇಳಿಸಲಾಗಿದೆ.
ಈ ಮಾತಿಗೆ ಪುಷ್ಟಿ ಕೊಡುವಂತೆ ಗುಜರಾತಿನ ಸೂರತ್ ಹಾಗೂ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರಗಳಲ್ಲಿ ‘ಹೈ ಡ್ರಾಮ’ವೇ’ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ. ಇದರಿಂದ ಬಿಜೆಪಿ ವಿರೋಧವಿಲ್ಲದೆ ಎರಡು ಸ್ಥಾನ ಗೆದ್ದಿದೆ. ಇದೊಂದು ಪೂರ್ವಯೋಜಿತ ಸಂಚಿನಂತೆ ಕಾಣುತ್ತಿದೆ. ಒಟ್ಟಾರೆ, ಎರಡೂ ರಾಜ್ಯಗಳಲ್ಲಿ ನಡೆದಿರುವುದು ‘ಮೈಂಡ್ ಗೇಮ್’. ಕಾಂಗ್ರೆಸ್ ಪಕ್ಷವನ್ನು ಮಾನಸಿಕವಾಗಿ ಕುಗ್ಗಿಸುವ ಹುನ್ನಾರ.
ಗುಜರಾತ್, ನರೇಂದ್ರ ಮೋದಿ ಅವರ ಸ್ವಂತ ರಾಜ್ಯ. ಇಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳಿದ್ದು 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳನ್ನು ಗೆದ್ದಿದೆ. 2024ರ ಚುನಾವಣೆಯಲ್ಲೂ 26 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದೆ. ಮತದಾನಕ್ಕೆ ಮುನ್ನವೇ ಒಂದು ಕ್ಷೇತ್ರ ಗೆದ್ದಿರುವುದರಿಂದ ಬಿಜೆಪಿ ನೈತಿಕ ಬಲ ಹೆಚ್ಚಿದೆ.
ಗುಜರಾತಿನಲ್ಲಿ ‘ಇಂಡಿಯಾ’ ಮೈತ್ರಿಕೂಟದ ಭಾಗವಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಸೀಟು ಹೊಂದಾಣಿಕೆ ಮಾಡಿಕೊಂಡಿವೆ. ಭರೂಚ್ ಹಾಗೂ ಭಾವನಗರ ಕ್ಷೇತ್ರಗಳಲ್ಲಿ ಎಎಪಿ ಕಣದಲ್ಲಿದೆ. 2022ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಇದರಿಂದ ನೇರ ಹಣಾಹಣಿ ಸಾಧ್ಯವಾಗಿರಲಿಲ್ಲ. ಸದ್ಯ ಒಟ್ಟಿಗಿರುವುದರಿಂದ ಬಿಜೆಪಿಗೆ ಕೆಲವು ಕ್ಷೇತ್ರಗಳಲ್ಲಾದರೂ ಪ್ರಬಲ ಪೈಪೋಟಿ ಎದುರಾಗಬಹುದು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶೇ 52.5ರಷ್ಟು ಮತಗಳನ್ನು ಪಡೆದಿತ್ತು. ಕಾಂಗ್ರೆಸ್ ಮತ್ತು ಎಎಪಿಗೆ ಬಂದಿದ್ದು ಶೇ 40.2ರಷ್ಟು. (ಶೇ 12.3ರಷ್ಟು ಕಡಿಮೆ). ಬಿಜೆಪಿ 156, ಕಾಂಗ್ರೆಸ್ 17, ಎಎಪಿ 5 ಸ್ಥಾನ ಪಡೆದವು.. ಇದಕ್ಕೂ ಹಿಂದಿನ ಚುನಾವಣೆಯಲ್ಲಿ (2017) ಕ್ರಮವಾಗಿ 99 ಮತ್ತು 77 ಸ್ಥಾನಗಳನ್ನು ಪ್ರಮುಖ ಪಕ್ಷಗಳು ಗೆದ್ದಿದ್ದವು. ಮೀಸಲಾತಿ ಹೋರಾಟದಿಂದಾಗಿ ಪಟೇಲ್ (ಪಾಟಿದಾರ) ಸಮುದಾಯ ಆಗ ಬಿಜೆಪಿಯಿಂದ ದೂರವಾಗಿತ್ತು. ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿ ಇದ್ದ ಹಾರ್ದಿಕ್ ಪಟೇಲ್ ವಿಧಾನಸಭೆ ಚುನಾವಣೆಗೆ ಮೊದಲೇ ಬಿಜೆಪಿಗೆ ಮರಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಬುಡಕಟ್ಟು ಪ್ರದೇಶಗಳ ಮೇಲೆ ಕಣ್ಣಿಟ್ಟು ಸೀಟು ಹೊಂದಾಣಿಕೆ ಮಾಡಿಕೊಂಡಿವೆ. ಹಿಂದೆ ಬುಡಕಟ್ಟು ಪ್ರದೇಶದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿತ್ತು. ಈಗ ಕಳೆದು ಹೋಗಿರುವ ನೆಲೆಯನ್ನು ಮರಳಿ ಹುಡುಕುತ್ತಿದೆ. ಭರೂಚ್ ಭಾಗದಲ್ಲಿ ಎಎಪಿ ಹೆಜ್ಜೆಗಳನ್ನು ಇಡಲು ಆರಂಭಿಸಿದೆ. ರಾಹುಲ್ ಗಾಂಧಿ ‘ಭಾರತ್ ಜೋಡೊ ನ್ಯಾಯಯಾತ್ರೆ’ ಈ ಪ್ರದೇಶಗಳಲ್ಲೇ ಹಾದು ಹೋಗಿದೆ.
ಕಾಂಗ್ರೆಸ್ ಹಿರಿಯ ಮುಖಂಡರಾಗಿದ್ದ ಮಾಧವ ಸಿನ್ಹ ಸೋಳಂಕಿ 80ರ ದಶಕದಲ್ಲಿ ಕ್ಷತ್ರಿಯ, ಹರಿಜನ, ಆದಿವಾಸಿ ಮತ್ತು ಮುಸ್ಲಿಮ್ ಸಮಾಜವನ್ನು ಒಗ್ಗೂಡಿಸುವ ಪ್ರಯೋಗ ನಡೆಸಿದರು. ಗುಜರಾತಿನಲ್ಲಿ ‘ಕಾಂ’ (ಕೆಎಚ್‌ಎಎಂ) ಎಂದೇ ಹೆಸರಾದ ಅದು ಯಶಸ್ವಿಯಾಯಿತು. ಇದರಿಂದ 85ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 182ರಲ್ಲಿ 149 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.
ಸಾಮಾಜಿಕ ಮತ್ತು ಆರ್ಥಿಕವಾಗಿ ಬಲಿಷ್ಠವಾಗಿದ್ದ ಪಟೇಲ್ ಸಮುದಾಯ ಏಕಾಂಗಿಯಾಯಿತು. ಈ ಸಮಾಜವನ್ನು ಅಧಿಕಾರದಿಂದ ದೂರ ಇಡಲು ಸೋಳಂಕಿ ಹೊಸ ಪ್ರಯೋಗ ಮಾಡಿದ್ದರು.
ಪಟೇಲ್ ಸಮಾಜ ಬೇರೆ ಆಯ್ಕೆಗಳಿಲ್ಲದೆ ಬಿಜೆಪಿ ಕಡೆ ಹೊರಳಿತು. ಬಳಿಕ ಸೋಳಂಕಿ ಒಬಿಸಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿ, ಬಲಿಷ್ಠ ಸಮಾಜದ ಆಕ್ರೋಶಕ್ಕೂ ಗುರಿಯಾದರು. ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಇದು ದಾರಿ ಮಾಡಿತು. ಪುನಃ ಇಂಥದೊಂದು ಪ್ರಯೋಗ ನಡೆಸಲು ಗುಜರಾತಿನಲ್ಲಿ ಸೋಳಂಕಿ ಅವರಂಥ ನಾಯಕರಿಲ್ಲ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಇನ್ನೊಂದು ಪ್ರಯೋಗಕ್ಕೆ ಅಲ್ಲಿನ ನೆಲ ಹಸನಾಗಿರುವಂತಿದೆ.
‘ಕಾಂ’ ಭಾಗವಾಗಿದ್ದ ಕ್ಷತ್ರಿಯ ಸಮುದಾಯ (ರಜಪೂತ್) ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ರಾಜಕೋಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪುರುಷೋತ್ತಮ ರೂಪಾಲ ಇತ್ತೀಚೆಗೆ ಕ್ಷತ್ರಿಯ ಸಮಾಜದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಎಡವಟ್ಟು ಮಾಡಿದ್ದಾರೆ. ಈ ಕಾರಣಕ್ಕೆ ಸಚಿವ ಸ್ಥಾನದಿಂದ ಕೈಬಿಡುವಂತೆ ಒತ್ತಡ ಹೇರಿದೆ. ‘ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ’ ಎಂದೂ ಬೆದರಿಕೆ ಒಡ್ಡಿದೆ. ಈ ಅವಕಾಶವನ್ನು ಕಾಂಗ್ರೆಸ್ ಸಮರ್ಪಕವಾಗಿ ಬಳಸಿಕೊಳ್ಳುವುದೇ ಎಂದು ನೋಡಬೇಕಿದೆ.
ಕ್ಷತ್ರಿಯ ಮತ್ತು ಪಟೇಲ್ ಸಮಾಜಕ್ಕೆ ಮೊದಲಿಂದ ಆಗಿಬರುವುದಿಲ್ಲ. ಸಚಿವರಾದ ರೂಪಾಲ, ಕಡವ ಪಟೇಲ ಸಮುದಾಯಕ್ಕೆ ಸೇರಿದವರು. ‘ಅಧರ್ಮೀಯರಾಗಿದ್ದ ಬ್ರಿಟಿಷರ ಜತೆ ಉತ್ತಮ ಸಂಬಂಧ ಹೊಂದಿದ್ದ ಕ್ಷತ್ರಿಯರು ತಮ್ಮ ಹೆಣ್ಣು ಮಕ್ಕಳನ್ನು ಅವರಿಗೆ ಕೊಟ್ಟು ಮದುವೆ ಮಾಡುತ್ತಿದ್ದರು’ ಎಂದು ಸಮಾರಂಭವೊಂದರಲ್ಲಿ ಸಚಿವರು ನೀಡಿದ್ದ ಹೇಳಿಕೆಗೆ ಪ್ರತಿಭಟನೆ ಎದುರಿಸುತ್ತಿದ್ದಾರೆ. ಪ್ರತಿಭಟನೆ ಬಿಸಿ ಬಿಜೆಪಿಗೆ ತಟ್ಟಿದರೆ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಆಗಲಿದೆ.
ಗುಜರಾತಿನಲ್ಲಿ ಚುನಾವಣಾ ಪ್ರಚಾರ ಮಾಡಿರುವ ಪ್ರಧಾನಿ ಮೋದಿ, ಜನರ ಧಾರ್ಮಿಕ ಭಾವನೆಗಳನ್ನು ಕೆದಕುತ್ತಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಮಾತನಾಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿದ್ದ ಸಂವಿಧಾನದ 370ನೇ ಕಲಂ ರದ್ದತಿ, ಸಿಎಎ ಕುರಿತು ಪ್ರಸ್ತಾಪಿಸಿದ್ದಾರೆ. ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 370ನೇ ಕಲಂ ಮರು ಜಾರಿ ಮಾಡುವ ವಾಗ್ದಾನ ಮಾಡುತ್ತಿದೆ. ಸಿಎಎ ಕೈಬಿಡುವುದಾಗಿ ಹೇಳುತ್ತಿದೆ. ಅದ್ಹೇಗೆ ಮಾಡುತ್ತದೆ ನೋಡುತ್ತೇನೆ’ ಎಂದು ಸವಾಲು ಹಾಕಿದ್ದಾರೆ.
‘ಕರ್ನಾಟಕದ ಕಾಂಗ್ರೆಸ್ ಸರಕಾರ ದಲಿತರು ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಕಸಿದು ಮುಸ್ಲಿಮ್ ಸಮಾಜಕ್ಕೆ ಕೊಡುತ್ತಿದೆ. ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಅದಾಗಲು ನಾನು ಬಿಡುವುದಿಲ್ಲ’ ಎಂದು ಘೋಷಿಸುವ ಮೂಲಕ ಹಿಂದೂ ಮತಗಳನ್ನು ಒಗ್ಗೂಡಿಸುವ ತಂತ್ರಕ್ಕೆ ಮೋದಿ ಮುಂದಾಗಿದ್ದಾರೆ. ತಲಾಖ್ ರದ್ದುಪಡಿಸಿ ಅಲ್ಪಸಂಖ್ಯಾತ ಧರ್ಮದ ಮಹಿಳೆಯರಿಗೆ ನ್ಯಾಯ ಕೊಡಿಸಿರುವುದಾಗಿ ಹೇಳುತ್ತಿದ್ದಾರೆ.
ಮೋದಿ ಅವರು ಅಷ್ಟಕ್ಕೇ ಸುಮ್ಮನಾಗಿಲ್ಲ. ‘ಕಾಂಗ್ರೆಸ್, ಮೋದಿ ಸಮಾಜಕ್ಕೆ ಹಿಂದುಳಿದ ವರ್ಗಗಳಿಗೆ, ನನ್ನ ತಂದೆ- ತಾಯಿಗೆ ಮತ್ತು ನನಗೆ ಅಪಮಾನ ಮಾಡುತ್ತಿದೆ’ ಎಂದು ಹೇಳುವ ಮೂಲಕ ಗುಜರಾತಿನ ಜನರ ‘ಸೆಂಟಿಮೆಂಟ್’ ಕೆರಳಿಸುವ ಕೆಲಸ ಮಾಡಿದ್ದಾರೆ. ಪ್ರಧಾನಿ ಅವರ ಮೋಡಿಗೆ ಮತದಾರ ಮರಳಾಗುವರೇ ಎಂಬುದನ್ನು ಚುನಾವಣೆ ಫಲಿತಾಂಶ ನಿರ್ಧರಿಸಲಿದೆ.
ಗುಜರಾತಿನಲ್ಲಿ ಬಿಜೆಪಿಯನ್ನು ವಿರೋಧಿಸುವ ವರ್ಗವಿದೆ. ಆ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಪ್ರಧಾನಿ ಮಾತನಾಡಿದ್ದಾರೆ. ಆದರೆ, ಎಷ್ಟರ ಮಟ್ಟಿಗೆ ಅವು ಮತಗಳಾಗಿ ಪರಿವರ್ತನೆ ಆಗಲಿದೆ ಎಂದು ಹೇಳುವುದು ಕಷ್ಟ.
ಗುಜರಾತ್ ಕುರಿತು ಬಿಜೆಪಿ ನಾಯಕರು ಹೇಳುವುದೇ ಬೇರೆ. ಅಲ್ಲಿರುವ ವಾಸ್ತವವೇ ಬೇರೆ. ಮೋದಿ ಅವರ ‘ಗುಜರಾತ್ ಅಭಿವೃದ್ಧಿ ಮಾಡೆಲ್’ ಕುರಿತು ದೇಶದೆಲ್ಲೆಡೆ ಭ್ರಮೆ ಹುಟ್ಟಿಸಲಾಗಿದೆ. ದೂರದ ಗುಜರಾತ್ ನೋಡದವರು ಅಲ್ಲಿ ಸ್ವರ್ಗವೇ ಇಳಿದಿದೆ ಎಂದು ಭಾವಿಸಿದ್ದಾರೆ. ಆದರೆ, ಆ ರಾಜ್ಯದ ಗ್ರಾಮೀಣ ಭಾಗದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಶಾಲಾ- ಕಾಲೇಜು, ಆಸ್ಪತ್ರೆ, ವೈದ್ಯರ ಸಮಸ್ಯೆಯಿದೆ. ಒಳ್ಳೆಯ ರಸ್ತೆಗಳಿಲ್ಲ. ಇದರಿಂದ ಗ್ರಾಮೀಣರಲ್ಲಿ ಅಸಹನೆ ಇದೆ. ನಗರಗಳು ಅಭಿವೃದ್ಧಿ ಕಂಡಿವೆ. ಒಳ್ಳೆ ರಸ್ತೆಗಳಿವೆ. ಉತ್ತಮ ಸಂಪರ್ಕ ವ್ಯವಸ್ಥೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ.
ಗುಜರಾತಿನಲ್ಲಿ ನಿಜವಾಗಿಯೂ ಸಮಸ್ಯೆಗಳಿವೆ. ಇದ್ಯಾವುದೂ ಚುನಾವಣೆಯಲ್ಲಿ ಮುಖ್ಯ ವಿಷಯವಾಗುವುದಿಲ್ಲ. 2012ರ ವಿಧಾನಸಭೆ ಚುನಾವಣೆ ಸಮೀಕ್ಷೆಗೆ ಗುಜರಾತ್‌ನಲ್ಲಿ ಪ್ರವಾಸ ಮಾಡಿದೆ. ಆಗ ಅಲ್ಲಿ ಅಷ್ಟೇನೂ ಪ್ರಗತಿ ಆಗಿರಲಿಲ್ಲ. 12 ವರ್ಷದಲ್ಲಿ ಬದಲಾವಣೆಗಳು ಆಗಿರಬಹುದು.
ಗುಜರಾತ್ ಗಲಭೆಯನ್ನು ನಾನು ಪ್ರತ್ಯಕ್ಷವಾಗಿ ನೋಡಿದವನಲ್ಲ. ಆದರೆ, ಗೋಧ್ರಾ ರೈಲು ನಿಲ್ದಾಣದಲ್ಲಿ ದುಷ್ಕರ್ಮಿಗಳ ಉಪಟಳಕ್ಕೆ ಸಿಕ್ಕಿ ಭಸ್ಮವಾದ ರೈಲು ಡಬ್ಬಿ ನಿಂತಿದ್ದವು. ಪ್ರತಿಯಾಗಿ ನರೋಡ ಪಟಿಯಾದಲ್ಲಿ ನಡೆದ ಹಿಂಸಾಚಾರದ ನೆರಳು ಇನ್ನೂ ಸರಿದಿರಲಿಲ್ಲ. ಇವು ಹಿಂಸೆಯ ತೀವ್ರತೆಗೆ ಸಾಕ್ಷಿಯಾಗಿದ್ದವು. ಈಗ ಹಳೆಯ ಕಹಿ ಅನುಭವಗಳನ್ನು ಜನ ಮರೆತಿದ್ದಾರೆ. ವರ್ತಕರೇ ತುಂಬಿರುವ ಗುಜರಾತಿನಲ್ಲಿ ಶಾಂತಿ ಭಂಗವಾದರೆ ಬದುಕು ಬೀದಿ ಪಾಲಾಗುತ್ತದೆ. ಹೀಗಾಗಿ, ಹೊಂದಿಕೊಂಡು ಹೋಗುವುದನ್ನು ಕಲಿತಿದ್ದಾರೆ.