ಸುರಂಗ ಕಾರ್ಯಾಚರಣೆಗೆ 'ರ‍್ಯಾಟ್ ಹೋಲ್' ಪರಿಣತರ ನೆರವು
ಡೆಹ್ರಾಡೂನ್: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ 41 ಕಾರ್ಮಿಕರನ್ನು ರಕ್ಷಿಸುವ ಭಾರತೀಯ ಸೇನಾ ಕಾರ್ಯಾಚರಣೆಗೆ ಉತ್ತರ ಪ್ರದೇಶದ ಝಾನ್ಸಿಯ ಆರು ಮಂದಿ 'ರ‍್ಯಾಟ್ ಹೋಲ್' ಗಣಿ ಕುಶಲಕಾರ್ಮಿಕರ ತಂಡ ಕೈಜೋಡಿಸಿದೆ.
ಇಕ್ಕಟ್ಟಿನ ಸ್ಥಳಗಳ ಪಥದರ್ಶನ ಮತ್ತು ಅಗೆಯುವಿಕೆಯಲ್ಲಿ ಅತ್ಯಧಿಕ ನೈಪುಣ್ಯ ಹೊಂದಿದ ಈ ತಂಡಕ್ಕೆ ಉಳಿದ 10-12 ಮೀಟರ್ ರಂಧ್ರವನ್ನು ಕೊರೆದು ಸುರಕ್ಷಿತವಾಗಿ ಕಾರ್ಮಿಕರನ್ನು ಹೊರಕ್ಕೆ ಕರೆತರುವ ಹೊಣೆ ವಹಿಸಲಾಗಿದೆ.
ಕಾರ್ಯಾಚರಣೆಯ 16ನೇ ದಿನವಾದ ಸೋಮವಾರದ ವೇಳೆಗೆ ಈ ಗಣಿಕಾರ್ಮಿಕರು ಈಗಾಗಲೇ ಎರಡು ಗಂಟೆಗಳಲ್ಲಿ ಒಂದು ಮೀಟರ್ ರಂಧ್ರವನ್ನು ಕೊರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೊಂದೆಡೆ ಬಿ ಯೋಜನೆಯಡಿ, 86 ಮೀಟರ್ ಆಳದ ಲಂಬಾಕಾರದ ರಂಧ್ರವನ್ನು ಕೊರೆದು ಒಬ್ಬೊಬ್ಬರನ್ನು ಬಕೆಟ್ ನಲ್ಲಿ ಮೇಲಕ್ಕೆತ್ತುವ ಪ್ರಯತ್ನ ಮುಂದುವರಿದಿದೆ. ಕುಸಿದ ಅವಶೇಷಗಳಡಿ ಸಿಲುಕಿಕೊಂಡ ಕೊರೆಯುವ ಯಂತ್ರದ ಬ್ಲೇಡ್ ಗಳನ್ನು ಯಶಸ್ವಿಯಾಗಿ ಹೊರತೆಗೆದ ಬಳಿಕ 800 ಮಿಲಿಮೀಟರ್ ವ್ಯಾಸದ ಕಿಂಡಿಯನ್ನು ಮುಂದುವರಿಸುವ ಕೆಲಸವನ್ನು ರ‍್ಯಾಟ್ ಹೋಲ್ ಗಣಿಗಾರರು ಆರಂಭಿಸಿದ್ದಾರೆ.